ಮಂಗಳವಾರ, ನವೆಂಬರ್ 19, 2019
29 °C

ಚನ್ನಗಿರಿಯಲ್ಲಿ ಗೆದ್ದವರೆಲ್ಲ ಲಿಂಗಾಯತರೇ...

Published:
Updated:

ದಾವಣಗೆರೆ: ಲಿಂಗಾಯತರಲ್ಲದ ವರ್ಗಗಳೇ ಈ ವಿಧಾನಸಭಾ ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿವೆ. ಆದರೆ, 1952ರಿಂದ ಇಲ್ಲಿಯವರೆಗೆ ಲಿಂಗಾಯತ ಸಮುದಾಯದ ಅಭ್ಯರ್ಥಿಗಳನ್ನು ಹೊರತು ಪಡಿಸಿ ಇತರ ಜಾತಿಯ ಒಬ್ಬರೂ ಗೆಲುವು ಸಾಧಿಸಿಲ್ಲ.ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲೇ ಇಂತಹ ಒಂದು ವಿಶೇಷ ಇತಿಹಾಸ ಹೊಂದಿರುವ ಕ್ಷೇತ್ರ ಚನ್ನಗಿರಿ. ಜಿಲ್ಲೆಯಲ್ಲಿ ಸಾಮಾನ್ಯ ವರ್ಗದ 6 ಕ್ಷೇತ್ರಗಳ್ದ್ದಿದು, ಐದು ಕ್ಷೇತ್ರಗಳಲ್ಲಿ ಲಿಂಗಾಯತರ ಹೊರತಾಗಿ ಇತರ ಸಮುದಾಯದವರು ಒಂದಲ್ಲ ಒಂದು ಸಂದರ್ಭದಲ್ಲಿ ಶಾಸಕರಾಗಿದ್ದಾರೆ. ಚನ್ನಗಿರಿ ಕ್ಷೇತ್ರದಲ್ಲಿ ಮಾತ್ರ ಲಿಂಗಾಯತರ ಹೊರತು ಇತರರಿಗೆ ಅವಕಾಶವೇ ಸಿಕ್ಕಿಲ್ಲ.1952ರಲ್ಲಿ  ಕಿಸಾನ್ ಮಜ್ದೂರ್ ಪಕ್ಷದಿಂದ ಸ್ಪರ್ಧಿಸಿದ್ದ ಸಾದು ಲಿಂಗಾಯತ ಸಮುದಾಯದ ಎಲ್. ಸಿದ್ದಪ್ಪ ತಮ್ಮದೇ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಕುಂದೂರು ರುದ್ರಪ್ಪ ಅವರನ್ನು ಸೋಲಿಸುವ ಮೂಲಕ ಕ್ಷೇತ್ರದಲ್ಲಿ ಲಿಂಗಾಯತ ಶಾಸಕರ ಆಯ್ಕೆಗೆ ಮುನ್ನುಡಿ ಬರೆದರು. 1957 ಹಾಗೂ 62ರಲ್ಲಿ ಸಾದು ಲಿಂಗಾಯತ ಸಮುದಾಯದ ಕುಂದೂರು ರುದ್ರಪ್ಪ (ಕಾಂಗ್ರೆಸ್), 67 ಹಾಗೂ 72ರಲ್ಲಿ ಅದೇ ಸಮುದಾಯದ ಎನ್.ಜಿ. ಹಾಲಪ್ಪ (ಕಾಂಗ್ರೆಸ್), 1978, 83 ಹಾಗೂ 85ರಲ್ಲಿ ಪಂಚಮಸಾಲಿ ಸಮುದಾಯದ ಜೆ.ಎಚ್. ಪಟೇಲ್ (ಜನತಾ ಪರಿವಾರ), 1989ರಲ್ಲಿ ಎನ್.ಜಿ. ಹಾಲಪ್ಪ, 94ರಲ್ಲಿ ಮತ್ತೆ ಜೆ.ಎಚ್. ಪಟೇಲ್, 1999ರಲ್ಲಿ ಸಾದು ಲಿಂಗಾಯತ ಸಮುದಾಯದ ವಡ್ನಾಳ್ ರಾಜಣ್ಣ (ಪಕ್ಷೇತರ), 2004ರಲ್ಲಿ ಜೆ.ಎಚ್. ಪಟೇಲ್ ಅವರ ಪುತ್ರ ಮಹಿಮ ಪಟೇಲ್ (ಜೆಡಿಎಸ್), 2008ರಲ್ಲಿ ಸಾದು ಲಿಂಗಾಯತ ಸಮಾಜದ ಮಾಡಾಳ್ ವಿರೂಪಾಕ್ಷಪ್ಪ (ಬಿಜೆಪಿ) ಆಯ್ಕೆಯಾಗಿದ್ದರು.1952ರಿಂದ ಇಲ್ಲಿಯವರೆಗೂ ಆಯ್ಕೆಯಾದ ಶಾಸಕರಲ್ಲಿ ಪಂಚಮಸಾಲಿ ಸಮಾಜದ ಜೆ.ಎಚ್. ಪಟೇಲ್ ಹಾಗೂ ಅವರ ಪುತ್ರ ಮಹಿಮ ಪಟೇಲ್ ಹೊರತುಪಡಿಸಿ ಉಳಿದವರು ಸಾದು ಲಿಂಗಾಯತರು.ಕ್ಷೇತ್ರದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲೂ ಬಹುತೇಕ ಪಕ್ಷಗಳು ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. 1967ರಲ್ಲಿ ನಾಯಕ ಸಮಾಜದ ದೊಡ್ಡಘಟ್ಟ ರಘುವಪ್ಪ, 1994ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಜಗದೀಶ್ ಬಾಬು, 1999ರಲ್ಲಿ ಜೆಡಿಎಸ್‌ನಿಂದ ರಾಮಚಂದ್ರಮೂರ್ತಿ, 2004ರಲ್ಲಿ ಭೋಜರಾಜ್ (ಪಕ್ಷೇತರ), 2008ರಲ್ಲಿ ಜೆಡಿಎಸ್‌ನಿಂದ ಹೊದಿಗೆರೆ ರಮೇಶ್ ಹಾಗೂ 78ರಲ್ಲಿ ಮುಸ್ಲಿಂ ಸಮಾಜದ ಎ.ಎಚ್. ಖಾನ್, 99ರಲ್ಲಿ ಮಹಿಬೂಲ್ಲಾ ಖಾನ್ (ಇಬ್ಬರೂ ಕಾಂಗ್ರೆಸ್) ಸ್ಪರ್ಧಿಸಿದ್ದರಾದರೂ ಗೆಲುವು ಸಾಧ್ಯವಾಗಿರಲಿಲ್ಲ.ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಕೆಜೆಪಿ ಸಾದು ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ಜೆಡಿಎಸ್ ನಾಯಕ ಸಮಾಜದ ಹೊದಿಗೆರೆ ರಮೇಶ್‌ಗೆ ಟಿಕೆಟ್ ನೀಡಿದೆ. ಕ್ಷೇತ್ರದ 1.75 ಲಕ್ಷ ಮತದಾರರಲ್ಲಿ ಲಿಂಗಾಯತರ ಸಂಖ್ಯೆ  68 ಸಾವಿರ. ಇನ್ನುಳಿದಂತೆ 24 ಸಾವಿರ ಮುಸ್ಲಿಮರು, 22 ಸಾವಿರ ನಾಯಕರು, 15 ಸಾವಿರ ಕುರುಬರು, 18 ಸಾವಿರ ಪರಿಶಿಷ್ಟ ಜಾತಿ ಸೇರಿದಂತೆ 1.07 ಲಕ್ಷ ಮತದಾರರು ಲಿಂಗಾಯತೇತರರು ಇದ್ದಾರೆ. ಈ ಬಾರಿಯ ಚುನಾವಣೆಯತ್ತ ಎಲ್ಲರೂ ದೃಷ್ಟಿ ಹರಿಸಿದ್ದಾರೆ.

ಪ್ರತಿಕ್ರಿಯಿಸಿ (+)