ಚನ್ನಗಿರಿ: 12ಕ್ಕೆ ಜೆ.ಎಚ್. ಪಟೇಲರ ಸ್ಮರಣೋತ್ಸವ

7

ಚನ್ನಗಿರಿ: 12ಕ್ಕೆ ಜೆ.ಎಚ್. ಪಟೇಲರ ಸ್ಮರಣೋತ್ಸವ

Published:
Updated:

ದಾವಣಗೆರೆ: ಚನ್ನಗಿರಿ ಪಟ್ಟಣದಲ್ಲಿ ಡಿ. 12ರಂದು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರ 12ನೇ ವರ್ಷದ ಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ.ಚಿತ್ರದುರ್ಗದ  ಶಿವಮೂರ್ತಿ  ಮುರುಘಾ  ಶರಣರು,  ಸಾಣೇಹಳ್ಳಿ  ಪಂಡಿತಾರಾಧ್ಯ  ಶಿವಾಚಾರ್ಯ  ಸ್ವಾಮೀಜಿ , ಪಂಚಮಸಾಲಿ  ಸಿದ್ದಲಿಂಗೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಜಾತಿ, ಧರ್ಮದ ಗುರುಗಳು ಉಪಸ್ಥಿತರಿರುವರು ಎಂದು ನಿವೃತ್ತ ಪ್ರಾಂಶುಪಾಲ ಎಸ್.ಎಚ್. ಪಟೇಲ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಾರ್ಯಕ್ರವನು ಮಧ್ಯಾಹ್ನ 12ಕ್ಕೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಉದ್ಘಾಟಿಸುವರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅಂಬರೀಶ್, ಸಿ.ಎಂ. ಇಬ್ರಾಹಿಂ, ಮೋಟಮ್ಮ, ಎಸ್.ಆರ್. ಪಾಟೀಲ್, ವಾಟಾಳ್ ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು. ಅಂದು ಬೆಳಿಗ್ಗೆ 9.30ಕ್ಕೆ ಪಟೇಲರ ಭಾವಚಿತ್ರ ಮೆರವಣಿಗೆ  ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಹಾಗೂ ಮಾಜಿ ಶಾಸಕ ಮಹಿಮ ಜೆ. ಪಟೇಲ್ ಮಾತನಾಡಿ, ಸ್ಮರಣೋತ್ಸವದಲ್ಲಿ ಪ್ರಸ್ತುತ ರಾಜಕಾರಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಪರಿಸ್ಥಿತಿ ಕುರಿತು ಮರುಚಿಂತನೆ ನಡೆಸಲಾಗುವುದು. ಸಮಾಜ ಅವ್ಯವಸ್ಥೆಯಿಂದ ಸುವ್ಯವಸ್ಥೆ ಜತೆ ಸಾಗಬೇಕಿದ್ದು, ಅದಕ್ಕಾಗಿ ಒಂದೇ ಮನಸ್ಸಿನ ಸಮಾನ ಅಭಿಪ್ರಾಯದೊಂದಿಗೆ ಮುನ್ನಗ್ಗಲು ಅಂದು ಪ್ರತಿಜ್ಞಾವಿಧಿ ಸ್ವೀಕರಿಸಲಾಗುವುದು ಎಂದು ವಿವರಿಸಿದರು.ರಾಜಕೀಯದಲ್ಲಿ ಬದಲಾವಣೆ ಆಗಬೇಕಿದೆ. ಅದಕ್ಕಾಗಿ ಒಂದು ಹೆಜ್ಜೆ ಹಿಂದೆ ಇಟ್ಟು, ಮುಂದೆ ಹೋಗಲು ನಿರ್ಧರಿಸಿದೆ ಎಂದು ತಮ್ಮ ಬದಲಾದ ರಾಜಕೀಯ ನೀತಿಗೆ ಉತ್ತರ ನೀಡಿದರು.ವಕೀಲರಾದ ಎಲ್.ಎಚ್. ಅರುಣ್‌ಕುಮಾರ್, ಬಿ.ಎಂ. ಹನುಮಂತಪ್ಪ, ತಣಿಗೆರೆ ಶಿವಕುಮಾರ್, ಜಯಕುಮಾರ್ ಪಟೇಲ್ ಉಪಸ್ಥಿತರಿದ್ದರು.

ಪಟೇಲರು ಕಾಂಗ್ರೆಸ್ ಸೇರುತ್ತಿದ್ದರು...

ಸಮಾಜವಾದಿ ಹಿನ್ನೆಲೆಯಿಂದ ಬಂದ ಜೆ.ಎಚ್. ಪಟೇಲ್ ತಮ್ಮ ಜೀವಿತಾವಧಿಯಲ್ಲಿ ಕಾಂಗ್ರೆಸ್ ವಿರೋಧಿಸುತ್ತಾ ಬಂದಿದ್ದರೂ, ಇಂದು ಅವರು ಬದುಕಿದ್ದರೆ ನಿಜಕ್ಕೂ ಕಾಂಗ್ರೆಸ್ ಸೇರುತ್ತಿದ್ದರು.ಇದು ಅವರ ಪುತ್ರ ಮಹಿಮ ನುಡಿ. ಪಟೇಲರು ಕಾಂಗ್ರೆಸ್ ವಿರೋಧಿ. ಆದರೆ, ನೀವು ಇಂದು ಕಾಂಗ್ರೆಸ್ ಮುಖಂಡರನ್ನೇ ಕರೆದು ಪಟೇಲ್ ಸ್ಮರಣೋತ್ಸವ ಮಾಡುತ್ತಿರುವಿರಲ್ಲ ಎಂದು ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು. ಪಟೇಲರ ತಂದೆ ಹಾಲಪ್ಪ ಪಟೇಲರು ಕಾಂಗ್ರೆಸ್ ಅನುಯಾಯಿಯಾಗಿದ್ದರು. ಪಟೇಲರು ಆರಂಭದಲ್ಲಿ ಕಾಂಗ್ರೆಸ್‌ನಲ್ಲೇ ಇದ್ದರು. ನಂತರ ಸಮಾಜವಾದಿ ಮುಖಂಡರ ಒಡನಾಟ ಅವರನ್ನು ಕಾಂಗ್ರೆಸ್‌ನಿಂದ ವಿಮುಖವಾಗಿಸಿತು. ಇಂದು ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್ ಜನರಿಗೆ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು.ವಡ್ನಾಳ್ ಗೆಲುವಿಗೆ ಶ್ರಮಿಸುವೆ

ಮಾಜಿ ಶಾಸಕ ವಡ್ನಾಳ್ ರಾಜಣ್ಣ ಅವರಿಗೆ ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಿದರೆ, ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರುವುದಿಲ್ಲ. ಪಕ್ಷದ ಗೆಲುಗೆ ಶ್ರಮಿಸುತ್ತೇನೆ ಎಂದು ಮಹಿಮ ಭರವಸೆ ನೀಡಿದರು. ವ್ಯಕ್ತಿ, ಅಧಿಕಾರಕ್ಕಿಂತ ಪಕ್ಷ ಮುಖ್ಯ. ಪಕ್ಷವನ್ನು ರಾಜ್ಯದಲ್ಲಿ ಅಧಕಾರಕ್ಕೆ ತರವುದೇ ತಮ್ಮ ಪ್ರಥಮ ಆದ್ಯತೆ. ಸದ್ಯ ಕಾಂಗ್ರೆಸ್ ಚಿಂತನ-ಮಥನ ವಿಭಾಗದ ಸಂಚಾಲಕನಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry