ಭಾನುವಾರ, ಮೇ 9, 2021
27 °C

ಚನ್ನಪಟ್ಟಣ: ಪೊಲೀಸ್ ಧ್ವಜ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ಪೊಲೀಸರು ಎಷ್ಟೇ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೂ ಅವರ ಮೇಲೆ ಆರೋಪಗಳು ಬರುವುದು ಸಾಮಾನ್ಯವಾಗಿದೆ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎನ್.ರುದ್ರಮುನಿ ವಿಷಾದಿಸಿದರು.ಪಟ್ಟಣದ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಅವರು ಮಾತನಾಡಿದರು.ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಆರೋಪ, ನಿಂದನೆಗಳು ಬರುವುದು ಸಹಜ. ಆದರೆ ಪೊಲೀಸರು ಇದನ್ನು ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿ, ಸಮಾಜದ ರಕ್ಷಣೆಯಲ್ಲಿ ತೊಡಗಬೇಕು. ನಿವೃತ್ತ ಪೊಲೀಸರಿಗಾಗಿ ಪೊಲೀಸ್ ಇಲಾಖೆಯು ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲ್ ಮಾತನಾಡಿ, ನಿವೃತ್ತ ಪೊಲೀಸರ ಕಲ್ಯಾಣಕ್ಕಾಗಿ ಪ್ರತಿವರ್ಷ ಏ.2ರಂದು ಧ್ವಜ ದಿನಾಚರಣೆ ಆಯೋಜಿಸಲಾಗುತ್ತಿದ್ದು, ಧ್ವಜ ಮಾರಾಟದಿಂದ ಸಂಗ್ರಹವಾಗುವ ಹಣವನ್ನು ನಿವೃತ್ತ ಪೊಲೀಸರು ಮತ್ತು ಅವರ ಕುಟುಂಬದವರ ಅಭಿವೃದ್ಧಿಗಾಗಿ ವಿನಿಯೋಗಿಸಲಾಗುತ್ತಿದೆ. ಕಳೆದ ವರ್ಷ 1.16 ಲಕ್ಷ ಹಣ ಸಂಗ್ರಹವಾಗಿತ್ತು. ಈ ವರ್ಷ ಸಾರ್ವಜನಿಕರಿಂದಲೂ ಹಣ ಸಂಗ್ರಹಿಸಲು ಯೋಜಿಸಲಾಗಿದೆ ಎಂದರು.ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಎ.ಎಸೈ ಕೃಷ್ಣಪ್ಪ, `ಯಾವುದೇ ದೂರು ಬಂದರೂ ಅದರ ಹಿಂದೆಯೇ ರಾಜಕೀಯ ವ್ಯಕ್ತಿಗಳಿಂದ ಶಿಫಾರಸು ಬರುತ್ತದೆ. ಪೊಲೀಸರು ಇಂತಹ ಯಾವುದೇ ಶಿಫಾರಸುಗಳಿಗೂ ಮನ್ನಣೆ ನೀಡದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು~ ಎಂದರು.ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆಸಲ್ಲಿಸಿ ನಿವೃತ್ತರಾದ ಚನ್ನಪಟ್ಟಣ ಠಾಣೆಯ ರಂಗಸ್ವಾಮಿ, ಈಶ್ವರ್‌ರಾವ್, ಕೃಷ್ಣಪ್ಪ, ಸಾತನೂರಿನ ಶಿವನಂಜಯ್ಯ, ಮಾಗಡಿಯ ಆಂಜನಪ್ಪ, ರಾಮಯ್ಯ, ರಾಮನಗರದ ಗೋವಿಂದಪ್ಪ, ನಾಗರಾಜ್, ತಾವರೆಕೆರೆ ಠಾಣೆಯ ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಪೊಲೀಸರಿಂದ ಆಕರ್ಷಕ ಪಥಸಂಚಲನ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.