ಬುಧವಾರ, ನವೆಂಬರ್ 20, 2019
28 °C

ಚನ್ನಮ್ಮನ ನೆಲದಲ್ಲಿ ಮಹಿಳೆಗಿಲ್ಲ ಮನ್ನಣೆ

Published:
Updated:
ಚನ್ನಮ್ಮನ ನೆಲದಲ್ಲಿ ಮಹಿಳೆಗಿಲ್ಲ ಮನ್ನಣೆ

ಬೆಳಗಾವಿ: ಬ್ರಿಟಿಷರ ವಿರುದ್ಧ ಮೊದಲು ಧ್ವನಿ ಎತ್ತಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮನ ಹೆಸರನ್ನು ಅವಕಾಶ ಸಿಕ್ಕಾಗಲೆಲ್ಲ ಬಳಸಿಕೊಳ್ಳುವ ರಾಜಕೀಯ ಪಕ್ಷಗಳು, ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಷಯ ಬಂದಾಗ ಆ ಕ್ಷೇತ್ರದಲ್ಲೇ ಮಹಿಳೆಯರನ್ನು ಕಡೆಗಣಿಸುತ್ತ ಬಂದಿವೆ.ಶೌರ್ಯಕ್ಕೆ ಹೆಸರಾಗಿರುವ ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ ಮಹಿಳೆಯರ ಸ್ವಾಭಿಮಾನದ ಸಂಕೇತವಾಗಿದ್ದಾರೆ.  ಇಂಥ ವೀರ ವನಿತೆಯರ ನಾಡಿನಲ್ಲಿ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಎಂಬುದು ಗಗನ ಕುಸುಮವಾಗಿದೆ. 18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ ಇದುವರೆಗೆ ನಡೆದಿರುವ  ಚುನಾವಣೆಗಳಲ್ಲಿ ನಾಲ್ವರು ಮಹಿಳೆಯರು ಏಳು ಬಾರಿ ಮಾತ್ರ ಗೆದ್ದಿದ್ದಾರೆ. ಕಾಂಗ್ರೆಸ್‌ನಿಂದ ಚಂಪಾಬಾಯಿ ಬೋಗಲೆ 3 ಬಾರಿ, ಲೀಲಾದೇವಿ ಆರ್.ಪ್ರಸಾದ 2 ಬಾರಿ, ಕಾಂಗ್ರೆಸ್‌ನಿಂದ ಶಾರದಾ ಪಟ್ಟಣ ಹಾಗೂ ಜನತಾ ಪಕ್ಷದಿಂದ ಶಕುಂತಲಾ ತುಕಾರಾಂ ಚೌಗಲೆ ಒಂದೊಂದು ಬಾರಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಏಕೀಕರಣದ ಬಳಿಕ 1957ರಲ್ಲಿ ಜಿಲ್ಲೆಯಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಹುಕ್ಕೇರಿಯಿಂದ ಕಾಂಗ್ರೆಸ್‌ನಿಂದ ಆಯ್ಕೆಯಾಗುವ ಮೂಲಕ ಚಂಪಾಬಾಯಿ ಬೋಗಲೆ ಜಿಲ್ಲೆಯ ಮೊದಲ ಶಾಸಕಿ ಎನಿಸಿಕೊಂಡರು. 1962ರಲ್ಲಿ ಸಂಕೇಶ್ವರದಿಂದ ಮತ್ತೆ ಕಣಕ್ಕಿಳಿದ ಚಂಪಾಬಾಯಿ  `ಆರ್‌ಪಿಐ'ನ  ಬಿ.ಶಂಕರಾನಂದ ಅವರನ್ನು ಸೋಲಿಸಿದರು.1967ರಲ್ಲಿ ಕಾಗವಾಡ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಅವರು  `ಹ್ಯಾಟ್ರಿಕ್' ಸಾಧಿಸಿದ್ದರು.

1967ರಲ್ಲಿ ರಾಮದುರ್ಗ ಕ್ಷೇತ್ರದಿಂದ ಕಾಂಗ್ರೆಸ್‌ನ ಶಾರದವ್ವ ಪಟ್ಟಣ, ಪಕ್ಷೇತರ ಅಭ್ಯರ್ಥಿ ಬಿ.ಬಿ. ಹಿರೇರೆಡ್ಡಿ ಅವರನ್ನು ಸೋಲಿಸಿದ್ದರು. ಆದರೆ, 1972ರಲ್ಲಿ ನಿಜಲಿಂಗಪ್ಪ ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧಿಸಿ ಶಾರದವ್ವ ಸೋಲುಂಡರು.1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಶಕುಂತಲಾ ಚೌಗಲೆ, ಕಾಂಗ್ರೆಸ್‌ನ ಎಲ್.ಬಿ. ಕರಾಳೆ ಅವರನ್ನು  ಸೋಲಿಸಿದ್ದರು. 1978ರಲ್ಲಿ ಅಥಣಿಯಿಂದ ಜನತಾ ಪಕ್ಷದಿಂದ ಕಣಕ್ಕಿಳಿದ ಲೀಲಾದೇವಿ ಆರ್.ಪ್ರಸಾದ ಸೋತಿದ್ದರು. 1985ರಲ್ಲಿ ಪುನಃ ಕಣಕ್ಕಿಳಿದ ಲೀಲಾದೇವಿ, ಕಾಂಗ್ರೆಸ್‌ನ ಡಿ.ಬಿ.ಪವಾರ ದೇಸಾಯಿ ಅವರನ್ನು ಸೋಲಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದರು. 1994ರಲ್ಲಿ ಜನತಾದಳದಿಂದ ಮತ್ತೆ ಸ್ಪರ್ಧಿಸಿ ಅವರು ಗೆದ್ದರು.  ಇದಾದ ನಂತರ ಜಿಲ್ಲೆಯಲ್ಲಿ ಹಲವು  ಮಹಿಳೆಯರು ವಿವಿಧಪಕ್ಷಗಳಿಂದ ಸ್ಪರ್ಧಿಸಿದ್ದರಾದರೂ ಯಾರೂ ಗೆಲ್ಲಲಿಲ್ಲ.1972ರಲ್ಲಿ ಖಾನಾಪುರ ಕ್ಷೇತ್ರದಲ್ಲಿ ಸುಲೋಚನಾ ಪರೋಳೇಕರ, 1989ರಲ್ಲಿ ಕಿತ್ತೂರು ಕ್ಷೇತ್ರದಲ್ಲಿ ಸರೋಜಾದೇವಿ ಮಾರಿಹಾಳ, 1999ರಲ್ಲಿ ಚಿಕ್ಕೋಡಿಯಲ್ಲಿ ರತ್ನಮಾಲಾ ಸವಣೂರು ಹಾಗೂ 2000ರಲ್ಲಿ ಕಾಗವಾಡ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಜಯಾ ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.1994ರಲ್ಲಿ ಅರಭಾವಿ ಕ್ಷೇತ್ರದಲ್ಲಿ ಜನತಾದಳದದಿಂದ  ಪ್ರತಿಭಾ ಪಾಟೀಲ, 2008ರಲ್ಲಿ ನಿಪ್ಪಾಣಿಯಿಂದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಬಿಜೆಪಿಯಿಂದ ಹಾಗೂ ರಾಜಶ್ರೀ ರಾವಸಾಹೇಬ ಗುಣಕೆ ಜೆಡಿಯುನಿಂದ, ಬೆಳಗಾವಿ ಉತ್ತರದಲ್ಲಿ ಪುಷ್ಪಾ ಹುಬ್ಬಳ್ಳಿ ಜೆಡಿಯುನಿಂದ ಹಾಗೂ ಬೆಳಗಾವಿ ಗ್ರಾಮೀಣದಲ್ಲಿ ರುಕ್ಮಿಣಿ ಗಂಗಪ್ಪ ಗೌಡ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಗೆಲುವು ಸಾಧಿಸಲಾಗಲಿಲ್ಲ.ಈ ಬಾರಿಯ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಖಾನಾಪುರ ಕ್ಷೇತ್ರದಲ್ಲಿ ಅಂಜಲಿ ನಿಂಬಾಳಕರ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ. ರುಕ್ಮಿಣಿ ಗಂಗಪ್ಪ ಗೌಡ ಜೆಡಿಎಸ್ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)