ಶುಕ್ರವಾರ, ನವೆಂಬರ್ 22, 2019
23 °C

ಚನ್ನರಾಯಪಟ್ಟಣದತ್ತ `ಗಜ' ಪಯಣ

Published:
Updated:

ಅರಸೀಕೆರೆ: ಆಹಾರ ಅರಸಿ ಹೋಬಳಿಯ ಕೆಲವು ಗ್ರಾಮಗಳಿಗೆ ಆಗಮಿಸಿದ್ದ ಕಾಡಾನೆಗಳು ಸೋಮವಾರ ಮುಂಜಾನೆ ತಾಲ್ಲೂಕು ಬಿಟ್ಟು ಚನ್ನರಾಯಪಟ್ಟಣದತ್ತ ಪ್ರಯಾಣ ಬೆಳೆಸಿವೆ. ಇದರಿಂದ ರೈತರು, ಗ್ರಾಮಸ್ಥರ ಆತಂಕ ದೂರವಾಗಿದೆ.ಶನಿವಾರ ರಾತ್ರಿ ಗುಬ್ಬಿ, ಚಿಕ್ಕನಾಯಕನಹಳ್ಳಿಗೆ ಆನೆಗಳು ದಾಳಿ ಮಾಡಿದ್ದವು. ತಿಪಟೂರು ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ರೈತನನ್ನು ಬಲಿ ತೆಗೆದುಕೊಂಡಿದ್ದವು. ಭಾನುವಾರ ಬೆಳಿಗ್ಗೆ ತಾಲ್ಲೂಕಿನ ಗಡಿ ಪ್ರವೇಶಿಸಿದ್ದ ಮೂರು ಆನೆಗಳ ಹಿಂಡು ಕಸಬಾ ಹೋಬಳಿಯ ಬೆಳಗುಂಬ, ಟಿ.ಕೋಡಿಹಳ್ಳಿ ಹಾಗೂ ಜ್ಯೋತಿಮಲ್ಲಾಪುರ ಗ್ರಾಮಗಳ ಜಮೀನುಗಳಿಗೆ ನುಗ್ಗಿ ಬಾಳೆ ತೋಟ, ತರಕಾರಿ ಬೆಳೆ ನಾಶಪಡಿಸಿದ್ದವು. ತೋಟಗಳಿಗೆ ಹಾಕಲಾಗಿದ್ದ ತಂತಿಬೇಲಿ ಮತ್ತು ಕಲ್ಲುಕಂಬ ಮುರಿದು ಹಾನಿ ಮಾಡಿದ್ದವು. ಇದರಿಂದ ಗ್ರಾಮಸ್ಥರಲ್ಲಿ ಭೀತಿ ಆವರಿಸಿತ್ತು.`ಬನ್ನೇರುಘಟ್ಟ ಮೀಸಲು ಅರಣ್ಯದಿಂದ ದಾರಿ ತಪ್ಪಿ ಬಂದಿರುವ ಮೂರು ಕಾಡಾನೆಗಳು ಸೋಮವಾರ ಮುಂಜಾನೆಯೇ ತಾಲ್ಲೂಕು ತೊರೆದಿವೆ. ರೈತರು ಆತಂಕ ಪಡಬೇಕಿಲ್ಲ' ಎಂದು ವಲಯ ಅರಣ್ಯಾಧಿಕಾರಿ ಜೆ.ಜೆ ರವಿಕುಮಾರ್ ತಿಳಿಸಿದ್ದಾರೆ.ಕೆರೆಯಲ್ಲಿ ಬೀಡುಬಿಟ್ಟ ಆನೆ ಹಿಂಡು

ಚನ್ನರಾಯಪಟ್ಟಣ: ತಾಲ್ಲೂಕಿನ ಗಡಿ ಭಾಗದ ವಳಗೇರಹಳ್ಳಿ ಗ್ರಾಮದ ಕೆರೆಯಲ್ಲಿ ಮೂರು ಕಾಡಾನೆಗಳು ಸೋಮವಾರ ಮುಂಜಾನೆ ಕಾಣಿಸಿಕೊಂಡಿವೆ.

ಭಾನುವಾರ ಅರಸೀಕೆರೆ ತಾಲ್ಲೂಕಿನಲ್ಲಿ ಆನೆಗಳು ಕಾಣಿಸಿಕೊಂಡಿದ್ದವು. ಅವು ಗಂಡಸಿ ಮಾರ್ಗವಾಗಿ ವಳಗೇರಹಳ್ಳಿ ಕೆರೆಗೆ ಬಂದಿವೆ. ಬನ್ನೇರುಘಟ್ಟದಿಂದ ಈ ಆನೆಗಳು ಬಂದಿರುವ ಸಾಧ್ಯತೆ ಇದೆ'ಎಂದು ವಲಯ ಅರಣ್ಯಾಧಿಕಾರಿ ಎ.ಈ. ಧರ್ಮಪ್ಪ ತಿಳಿಸಿದ್ದಾರೆ.ಕೆರೆಯಲ್ಲಿ ಬೆಳಿಗ್ಗೆ ಆನೆಗಳು ಬೀಡು ಬಿಟ್ಟಿರುವ ವಿಷಯ ತಿಳಿದ ಸುತ್ತಲಿನ ಗ್ರಾಮದ ಗ್ರಾಮಸ್ಥರು ಜಮಾಯಿಸಿದರು. ಸ್ಥಳದಲ್ಲಿ ಅರಸೀಕೆರೆ, ತಿಪಟೂರು, ಹೊಳೆನರಸೀಪುರ, ಚನ್ನರಾಯಪಟ್ಟಣದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬೀಡು ಬಿಟ್ಟಿದ್ದು, ಸಂಜೆಯಾಗುತ್ತಿದ್ದಂತೆ ಅವುಗಳನ್ನು ಬೆದರಿಸಿ ಓಡಿಸಲಾಯಿತು.

ಪ್ರತಿಕ್ರಿಯಿಸಿ (+)