ಭಾನುವಾರ, ಆಗಸ್ಟ್ 25, 2019
21 °C

ಚರಂಡಿಯಲ್ಲಿ ತ್ಯಾಜ್ಯ: ದುರ್ನಾತ

Published:
Updated:

ಹುಮನಾಬಾದ್: ಪಟ್ಟಣದ ಹಳೆ ಆರ್.ಟಿ.ಓ. ಕಚೇರಿ ಸುತ್ತಲಿನ ಪರಿಸರದಲ್ಲಿ ದುರ್ನಾತ ಹರಡಿಕೊಂಡಿದ್ದು, ಆ ಪ್ರದೇಶದಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಕಾಲಕ್ಕೆ ಚರಂಡಿಯಲ್ಲಿನ ಕೊಳಚೆ ತೆರವುಗೊಳಿಸದಿರುವುದು ಈ ಸಮಸ್ಯೆ ಉಲ್ಭಣಕ್ಕೆ ಕಾರಣ.ತಾಲ್ಲೂಕಿನ ಕನಕಟ್ಟಾ ಮಾರ್ಗವಾಗಿ ಘೋಡವಾಡಿ ಮೊದಲಾದ ಗ್ರಾಮಗಳಿಗೆ ತೆರಳುವ ಖಾಸಗಿ ಟಂಟಂ, ಜೀಪ್‌ಗಳಿಗೆ ಇದೇ ನಿಲುಗಡೆ ತಾಣವಾಗಿದ್ದು,  ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ವಾಸನೆ ಸೇವಿಸುತ್ತಾ ವಾಹನದಲ್ಲಿ ಕುಳಿತುಕೊಳ್ಳುವಂತಾಗಿದೆ.ಕಲ್ಮಶದಿಂದ ಕೂಡಿದ ಈ ಪ್ರದೇಶವು ಮೂತ್ರ ಪ್ರೋಕ್ಷಣೆಗೆ ಆಹ್ವಾನ ನೀಡುತ್ತಿರುವುದರಿಂದ ದುರ್ನಾತ ಪ್ರತಿದಿನ ಹೆಚ್ಚುತ್ತಲೇ ಇದೆ.

ವ್ಯಾಪಾರಸ್ಥರು ಹಾಗೂ ಗ್ರಾಮೀಣ ಭಾಗದ ಜನರು ಇದರ ಕಷ್ಟ ಸಹಿಸಿಕೊಳ್ಳುವುದು ಅನಿವಾರ್ಯ ಎನ್ನುವಂತಾಗಿದೆ.ಸುತ್ತಮುತ್ತಲಿನ ಬೀದಿ ವ್ಯಾಪಾರಿಗಳು, ಗೂಡಂಗಡಿ ಹೋಟೆಲ್‌ನವರು ಆಹಾರದ ತ್ಯಾಜ್ಯವನ್ನು ಚರಂಡಿಗೆ ಸುರಿದು ಪರಿಸರ ಮಾಲೀನ್ಯಕ್ಕೆ ತಮ್ಮದೇ ಆದ ಪಾಲು ತೆಗೆದುಕೊಂಡಿದ್ದಾರೆ.`ಅದೆಷ್ಟೋ ಬಾರಿ ಸತ್ತ ಹಂದಿಗಳ ಶವ ತೆರವುಗೊಳಿಸದ ಕಾರಣ ಅಲ್ಲಿಯೇ ಕೊಳೆಯುವುದು ಸಾಮಾನ್ಯ.

ಹಾಗೆ ಬಿದ್ದ ಹಂದಿ ಒಂದರ ಶವ ಒಂದು ವಾರದಿಂದ ಬಿದ್ದು ಕೊಳೆಯುತ್ತಿರುವ ಕುರಿತು ಸಂಬಂಧಪಟ್ಟ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ' ಎಂದು ಎಂದು ಟಂಟಂ ವಾಹನ ಚಾಲಕರಾದ ಕುಮಾರಸ್ವಾಮಿ, ರವಿಕುಮಾರ ಮಾನೆ ದೂರಿದರು.`ಇಂಥ ಪ್ರದೇಶದ ಅಕ್ಕಪಕ್ಕದಲ್ಲೇ ಪಾನಿಪುರಿಯ ಅಂಗಡಿ, ಕಬ್ಬಿನ ಹಾಲಿನ ಅಂಗಡಿಗಳು ಇರುವುದರಿಂದ ರೋಗಭೀತಿ ಕಾರಣ ಯಾವುದೇ ಪದಾರ್ಥ ಸೇವಿಸಲು ಹಿಂಜರಿಯುತ್ತಿದ್ದು ಕೂಡಲೇ ಸ್ವಚ್ಚಗೊಳಿಸಲು ಕ್ರಮ ತೆಗೆದುಕೊಳ್ಳಬೇಕು' ಎಂದು ರಾಜಕುಮಾರ, ಬಸವರಾಜಪ್ಪ, ಅನೀಲಕುಮಾರ, ರಬ್ಬಾನಿ, ರಾಜು ಗುಳಶೆಟ್ಟಿ, ರಾಮದೇವ ಬಾಬಾ ಔಷಧಿ ಅಂಗಡಿಯ ಹೀರಾಲಾಲ್ ಶ್ರಾವಣ, ಆಶೀಶ್ ಮಿಶ್ರಾ ಅಳಲು ತೋಡಿಕೊಂಡರು.

Post Comments (+)