ಚರಂಡಿ ನೀರು ವಿಲೇವಾರಿಗೆ ಸೂಚನೆ

7

ಚರಂಡಿ ನೀರು ವಿಲೇವಾರಿಗೆ ಸೂಚನೆ

Published:
Updated:

ಬಾಗಲಕೋಟೆ: ಜಿಲ್ಲೆಯ ಎಲ್ಲ ನಗರ -ಪಟ್ಟಣಗಳಲ್ಲಿ ಅತ್ಯಾಧುನಿಕ ರೀತಿಯಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಆರ್. ಶ್ರಿನಿವಾಸ್, ಚರಂಡಿ ನೀರು ವಿಲೇವಾರಿಗೆ ಹಸಿ ಬಾವಿಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು, ಇಲ್ಲದಿದ್ದರೆ ಸಮಸ್ಯೆ ತಲೆದೋರಲಿದೆ ಎಂದು ತಿಳಿಸಿದರು.ನವನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಗರ ಹಾಗೂ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಯೋಜನೆ, ಉದ್ಯೋಗ ಖಾತರಿ ಯೋಜನೆ, ಕೃಷಿ, ತೋಟಗಾರಿಕೆ, ಜಲಾನಯನ ಅಭಿವೃದ್ಧಿ, ಸಾಮಾಜಿಕ ಅರಣ್ಯ ಇಲಾಖೆಯ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಿ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸರ್ಕಾರವು ನೂತನವಾಗಿ ಆರಂಭಿಸಿರುವ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿ ಅದರ ಫಲಶ್ರುತಿ ಹಾಗೂ ಪರಿಣಾಮ ಬಗ್ಗೆಯೂ ವಿವರ ನೀಡುವಂತೆ ತಿಳಿಸಿದರು.ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ ಒಟ್ಟು ರೂ.337 ಕೋಟಿಯ ಕ್ರಿಯಾ ಯೋಜನೆ ಅನುಮೋದನೆಗೊಂಡಿದ್ದು, 1090 ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಈ ವರ್ಷ ಮಂಜೂರಾದ ರೂ. 58 ಕೋಟಿಗಳಲ್ಲಿ ರೂ. 9 ಕೋಟಿ  ಖರ್ಚಾಗಿದ್ದು, ಮಾರ್ಚ್ ಒಳಗಾಗಿ ಉಳಿದ ರೂ. 50 ಕೋಟಿ ಖರ್ಚು ಮಾಡುವಂತೆ ಸೂಚಿಸಿದರು.ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಮಾತನಾಡಿ, ನಗರ ಪಟ್ಟಣಗಳ ಕುಡಿಯುವ ನೀರಿನ ಯೋಜನೆಯಡಿ ರೂ.164 ಕೋಟಿ ಅನುದಾನವನ್ನು ನೀರು ವಿತರಣಾ ವ್ಯವಸ್ಥೆ ಬದಲಾವಣೆ ಕಾಮಗಾರಿಗೆ ಬಳಸಲಾಗುತ್ತಿದ್ದು, ಇಳಕಲ್, ಹುನಗುಂದ, ಗುಳೇದಗುಡ್ಡ, ಕಮತಗಿಯ ಕಾಮಗಾರಿಗಳನ್ನು ಮಾರ್ಚ್ ಒಳಗಾಗಿ ಪೂರ್ಣಗೊಳಿಸಲಾಗುವುದು, ಬಾಗಲಕೋಟೆ ನಗರದ ಟೆಂಡರ್ ಪ್ರಕ್ರಿಯೆಯಲ್ಲಿದೆ. ಕೆರೂರ, ಜಮಖಂಡಿ, ಮಹಾಲಿಂಗಪುರ, ಬನಹಟ್ಟಿ ನಗರಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಭೆಗೆ ತಿಳಿಸಿದರು.ಬಾಗಲಕೋಟೆ ನಗರಕ್ಕೆ ಕುಡಿಯುವ ನೀರು ಯೋಜನೆಗೆ  ರೂ. 72 ಕೋಟಿ ಪ್ರಸ್ತಾವ ಕಳುಹಿಸಲಾಗಿದ್ದು, ಮಂಜೂರು ಹಂತದಲ್ಲಿದೆ ಎಂದು ತಿಳಿಸಿದರು.ಜಿ.ಪಂ ಸಿ.ಇ.ಒ ಎಸ್.ಜಿ. ಪಾಟೀಲ ಮಾತನಾಡಿ, ಬರ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ರೂ. 21 ಕೋಟಿ  ನೀಡಿದ್ದು, ಈ ಪೈಕಿ ರೂ.18 ಕೋಟಿ ಖರ್ಚಾಗಿದೆ. ರೂ. 547 ಕೋಟಿ ಬೆಳೆ ಹಾನಿ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ರೂ. 120.16 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಗಿ ಈಗಾಗಲೇ ರೂ. 47 ಕೋಟಿ ಖರ್ಚಾಗಿದೆಯೆಂದು ತಿಳಿಸಿದರು.ಜಲಾನಯನ ಅಭಿವೃದ್ಧಿಯಡಿ ಮೂರು ತಾಲ್ಲೂಕುಗಳಿಗೆ ಕೇಂದ್ರ ಸರ್ಕಾರದ ರೂ. 11.15 ಕೋಟಿ  ಅನುದಾನ ಬಂದಿದ್ದು, ರೈತರ ಹೊಲಗಳಲ್ಲಿ ಪ್ರತಿ ಎಕರೆಗೆ ರೂ. 15 ಸಾವಿರಗಳಂತೆ ಖರ್ಚು ಮಾಡಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಗೋವಿಂದರೆಡ್ಡಿ, ಆರ್. ಅಶೋಕ್ ಉಪಸ್ಥಿತರಿದ್ದರು.

ಪರಿಶೀಲನೆ: ವಾಜಪೇಯಿನಗರ ವಸತಿ ಯೋಜನೆಯಡಿ ನವನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ 654 ಮನೆಗಳ ಕಾಮಗಾರಿಯ ಪ್ರಗತಿ ಹಾಗೂ ಗುಣಮಟ್ಟವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಆರ್. ಶ್ರಿನಿವಾಸ್ ಸೋಮವಾರ ಪರಿಶೀಲಿಸಿದರು.ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ನಗರಸಭೆ ಆಯುಕ್ತ ಬಿ.ಎ.ಶಿಂಧೆ, ನಿರ್ಮಿತಿಕೇಂದ್ರ ಯೋಜನಾ ನಿರ್ದೇಶಕ ಡಾ.ಶಂಕರಲಿಂಗ ಗೋಗಿ ಅವರೊಡಗೂಡಿ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ಗುಣಮಟ್ಟದ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲು ಸೂಚಿಸಿದರು.

ವಸತಿ ಪ್ರದೇಶಕ್ಕೆ ಅಗತ್ಯವಿರುವ ಮೂಲ ಸೌಕರ್ಯವನ್ನು ತಕ್ಷಣ ಕೈಗೆತ್ತಿಕೊಳ್ಳಲು ನಗರಸಭೆ ಆಯುಕ್ತರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಕಳೆದ ಮೂರುವರೆ ತಿಂಗಳ ಹಿಂದೆ ಕಾಮಗಾರಿ ಕೈಗೊಳ್ಳಲಾಗಿದ್ದು, 654 ಮನೆಗಳಲ್ಲಿ 500 ಮನೆಗಳು ಪೂರ್ಣಗುಳ್ಳುವ ಹಂತದಲ್ಲಿದ್ದು, 154 ಮನೆಗಳು ವಿವಿಧ ಹಂತದಲ್ಲಿದೆ. ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ನಿರ್ಮಿತಿ ಕೇಂದ್ರದವರಿಗೆ ತಿಳಿಸಿರುವುದಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry