ಚರಂಡಿ ಸೇರುತ್ತಿದೆ ತುಂಗಭದ್ರೆ ನೀರು!

7

ಚರಂಡಿ ಸೇರುತ್ತಿದೆ ತುಂಗಭದ್ರೆ ನೀರು!

Published:
Updated:
ಚರಂಡಿ ಸೇರುತ್ತಿದೆ ತುಂಗಭದ್ರೆ ನೀರು!

ಲಕ್ಷ್ಮೇಶ್ವರ: ಎಲ್ಲೆಂದರಲ್ಲಿ ಕಿತ್ತು ಹೋದ ಚೇಂಬರ್‌ಗಳು, ಸೋರುತ್ತಿರುವ ವಾಲ್ವ್‌ಗಳು. ಕೆಲವೊಂದು ಕಡೆ ಇಡೀ ಚೇಂಬರ್ ತುಂಬಾ ಕಸದ ಗುಪ್ಪೆ, ಇದು ಪಟ್ಟಣಕ್ಕೆ ನೀರು ಪೂರೈಸುತ್ತಿರುವ ಮೇವುಂಡಿ ಪೈಪ್‌ಲೈನ್‌ನ ದುಃಸ್ಥಿತಿ.ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಲಕ್ಷ್ಮೇಶ್ವರಕ್ಕೆ ಕುಡಿಯುವ ನೀರಿನ ಸಮಸ್ಯೆ ಬರಬಾರದು ಎಂಬ ಉದ್ದೇಶದಿಂದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠರು ಪ್ರಯತ್ನಪಟ್ಟು ಲಕ್ಷ್ಮೇಶ್ವರದಿಂದ ಅಂದಾಜು 40 ಕಿ.ಮೀ. ದೂರದ ಮೇವುಂಡಿ ಹತ್ತಿರದ ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ನೀರು ಪೂರೈಕೆಯಾಗುವಂತೆ ಮಾಡಿದ್ದಾರೆ. ಆದರೆ ನಿರ್ವಹಣೆ ಕೊರತೆಯಿಂದಾಗಿ ವಾಲ್ವ್‌ಗಳು ಅಲ್ಲಲ್ಲಿ ಒಡೆದಿದ್ದು ಸಾಕಷ್ಟು ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಗಟಾರ ಸೇರುತ್ತಿದೆ.ಮೇವುಂಡಿಯಿಂದ ಬಾಳೇಹೊಸೂರು, ಸೂರಣಗಿ ದೊಡ್ಡೂರು ಮಾರ್ಗವಾಗಿ ತುಂಗಭದ್ರಾ ನದಿ ನೀರು ಲಕ್ಷ್ಮೇಶ್ವರಕ್ಕೆ ಬರುತ್ತದೆ. ಆದರೆ ಈ ಮಾರ್ಗ ಮಧ್ಯದಲ್ಲಿ ಬಹಳಷ್ಟು ಕಡೆ ವಾಲ್ವ್‌ಗಳು ಸೋರುತ್ತಿವೆ. ಇನ್ನು ಕೆಲವು ಕಡೆ ಅವು ಒಡೆದಿವೆ. ಆದರೂ ಸಹ ಅವುಗಳ ದುರಸ್ತಿಗೆ ಲಕ್ಷ್ಮೇಶ್ವರ ಪುರಸಭೆ ಆಡಳಿತ ಮಂಡಳಿ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ನಿತ್ಯವೂ ಸಾವಿರಾರು ಲೀಟರ್ ಜೀವಜಲ ಚರಂಡಿ ಸೇರುತ್ತಿದೆ. ಇನ್ನು ಕೆಲವು ಕಡೆ ಚೇಂಬರ್‌ಗಳು ಸಂಪೂರ್ಣ ಒಡೆದು ಬಾಯಿ ತೆರೆದು ನಿಂತಿದ್ದು, ಕೆಲವು ಕಿಡಿಗೇಡಿಗಳು ಒಡೆದ ಚೇಂಬರ್‌ನಲ್ಲಿ ಕಸಕಡ್ಡಿ ಹಾಕಿದ್ದಾರೆ. ಅದನ್ನೂ ಸಹ ತೆಗೆದು ಹಾಕುವ ಪ್ರಯತ್ನ ನಡೆದಿಲ್ಲ. ಇನ್ನಾದರೂ ಪುರಸಭೆಯವರು ಒಡೆದ ಚೇಂಬರ್ ಸರಿಪಡಿಸಿ ಸೋರುತ್ತಿರುವ ವಾಲ್ವ್‌ಗಳನ್ನು ದುರಸ್ತಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಬಂದ್ ಆದರೂ ಆಶ್ಚರ್ಯ ಇಲ್ಲ. ಕಾರಣ ಈಗಲಾದರೂ ಸಂಬಂಧ ಪಟ್ಟವರು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry