ಚರಂಡಿ ಸ್ವಚ್ಛಗೊಳಿಸಲು ಜನತೆ ಒತ್ತಾಯ

7

ಚರಂಡಿ ಸ್ವಚ್ಛಗೊಳಿಸಲು ಜನತೆ ಒತ್ತಾಯ

Published:
Updated:

ಹಟ್ಟಿ ಚಿನ್ನದ ಗಣಿ: ಸದಸ್ಯರ ಬೇಜವಾಬ್ದಾರಿಯಿಂದಾಗಿ ಹಟ್ಟಿ ಗ್ರಾಮ ಪಂಚಾಯಿತಿಯ ಬಹುತೇಕ  ವಾರ್ಡ್‌ಗಳಲ್ಲಿ ಮೂಲಸೌಕರ್ಯ ಇಲ್ಲದೆ ನಿವಾಸಿಗಳು ಪರದಾಡುವಂತಾಗಿದೆ.ಗ್ರಾಮ ಪಂಚಾಯಿತಿಯ 6ನೇ ವಾರ್ಡ್ ಅಭಿವೃದ್ಧಿ ಕಾಣದೆ ಗಬ್ಬುನಾರುತ್ತಿದೆ.  ಈ ವಾರ್ಡ್‌ನಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ ಎಂಬುದಕ್ಕು ಪಂಚಾಯತಿ ಸದಸ್ಯೆಯ ಮನೆ ಮುಂದೆಯೇ ನಿಂತಿರುವ ಚರಂಡಿ ನೀರೆ ಇದಕ್ಕೆ ಸಾಕ್ಷಿಯಾಗಿದೆ. ಕಳೆದ ಒಂದು ವರ್ಷದಿಂದ ಇಲ್ಲಿ ಚರಂಡಿ ನೀರು ನಿಲ್ಲುತ್ತದೆ. ವಾರ್ಡ್‌ನಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ. ವಾರ್ಡ್‌ನಲ್ಲಿ ಮಲೇರಿಯಾ, ಡೆಂಗೆ ಜ್ವರ ಕಾಣಿಸಿಕೊಳ್ಳುತ್ತಿವೆ. ಈಗಾಗಲೇ ಹಲವು ಸಲ ಸದಸ್ಯ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಜನತೆ ದೂರಿದ್ದಾರೆ.ಚುನಾವಣೆ ಇದ್ದಾಗ ಆಶ್ವಾಸನೆಗಳು ನೀಡಿ ಮತ ಪಡೆದು ಕೊಂಡು ನಂತರ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ನಿವಾಸಿಗಳಾದ ದೇವಮ್ಮ, ವಿಜಯಲಕ್ಷ್ಮೀ, ರೇಣುಕಾ, ಪರಶುರಾಮ, ಹನುಮಂತ ಆರೋಪಿಸುತ್ತಾರೆ.ಸರಿಯಾದ ರಸ್ತೆ ವ್ಯವಸ್ಥೆ ಸಹ ಇಲ್ಲ. ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಸುತ್ತಿಬಳಸಿ ಮನೆಗಳಿಗೆ ಹೋಗಬೇಕು. ನೀರು ಪೂರೈಸುವ ಪೈಲ್ ಒಡೆದು ಒಂದು ತಿಂಗಳಾಗಿದೆ. ದುರಸ್ತಿ ಮಾಡುವಂತೆ ಕೇಳಿಕೊಂಡರೂ ಯಾವ ಕ್ರಮ ಜರುಗಿಸಿಲ್ಲ.ಒಟ್ಟಾರೆ ವಾರ್ಡ್ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ದೂರುತ್ತಾರೆ. ತಕ್ಷಣ ಚರಂಡಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡುವಂತೆ ನಿವಾಸಿಗಳ ಒತ್ತಾಯವಾಗಿದೆ.  ಆದರೂ ನಿರ್ಲಕ್ಷ್ಯತನವನ್ನು ತೋರಿದರೆ ಅನಿವಾರ‌್ಯವಾಗಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾಬೇಕಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಇದೇ ವಾರ್ಡ್‌ನ ಸದಸ್ಯೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಇನ್ನೂ ಮುಂದೆಯಾದರೂ ಸಮಸ್ಯೆಗಳು ಪರಿಹರಿಸಬಹುದು ಎಂಬ ಆಶೇ ನಿವಾಸಿಗಳು ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry