ಸೋಮವಾರ, ನವೆಂಬರ್ 18, 2019
26 °C

ಚರಿತ್ರಾರ್ಹ ತೀರ್ಪು

Published:
Updated:

ರಕ್ತ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ `ಗ್ಲಿವೆಕ್' ಎಂಬ ಔಷಧದ ತಯಾರಿಕೆ ಮೇಲೆ ಹಕ್ಕುಸ್ವಾಮ್ಯ (ಪೇಟೆಂಟ್) ಸಾಧಿಸಲು ಸ್ವಿಸ್ ಮೂಲದ ನೋವಾರ್ಟಿಸ್ ಕಂಪೆನಿ ನಡೆಸಿದ್ದ ಪ್ರಯತ್ನವನ್ನು ವಿಫಲಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಹೊಸದೊಂದು ಮೈಲಿಗಲ್ಲು.ಕ್ಯಾನ್ಸರ್ ಚಿಕಿತ್ಸೆಗೆ ಕಡಿಮೆ ದರದಲ್ಲಿ ಪರಿಣಾಮಕಾರಿ ಔಷಧವನ್ನು ತಯಾರಿಸುವ ಭಾರತೀಯ ಕಂಪೆನಿಗಳಿಗೆ ಇದು ವರದಾನ. ಮಧ್ಯಮ ಮತ್ತು ಬಡ ವರ್ಗದ ರೋಗಿಗಳು ಈ ತೀರ್ಪಿನಿಂದ ನಿಟ್ಟುಸಿರು ಬಿಡುವಂತಾಗಿದೆ. ಗ್ಲಿವೆಕ್ ಔಷಧದಲ್ಲಿನ ಬೆಟಾ ಕ್ರಿಸ್ಟಲೈನ್ ರೂಪದ  `ಇಮ್ಯಾಟಿನಿಬ್ ಮೆಸಿಲೇಟ್' ಅಂಶ ರಕ್ತ ಕ್ಯಾನ್ಸರ್ ಗುಣಪಡಿಸುವಲ್ಲಿ ಇತರ ಔಷಧಗಳಿಗಿಂತ ಭಿನ್ನ ಮತ್ತು ಪರಿಣಾಮಕಾರಿ, ಇದು ತನ್ನ ಸಂಶೋಧನೆಯ ಫಲ; ಆದ್ದರಿಂದ ಇದರ ಸಂಪೂರ್ಣ ಬೌದ್ಧಿಕ ಹಕ್ಕು ಸ್ವಾಮ್ಯ ತನ್ನದು ಎಂಬುದು ನೋವಾರ್ಟಿಸ್ ವಾದವಾಗಿತ್ತು.ಚೆನ್ನೈನ ಪೇಟೆಂಟ್ ಕಚೇರಿ 1998ರಷ್ಟು ಹಿಂದೆಯೇ ಈ ವಾದವನ್ನು ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ನೋವಾರ್ಟಿಸ್ ಸಲ್ಲಿಸಿದ್ದ ಮೇಲ್ಮನವಿಗೆ ಈಗ ಸೋಲುಂಟಾಗಿದೆ. ಕಂಪೆನಿಯೇನಾದರೂ ಕೋರ್ಟ್‌ನಲ್ಲಿ ಗ್ದ್ದೆದಿದ್ದರೆ ಭಾರತೀಯ ಔಷಧ ಸಂಸ್ಥೆಗಳು ರಕ್ತ ಕ್ಯಾನ್ಸರ್ ಚಿಕಿತ್ಸಾ ಔಷಧ ತಯಾರಿಕೆಯನ್ನೇ ಕೈಬಿಡಬೇಕಾಗುತ್ತಿತ್ತು. ನೋವಾರ್ಟಿಸ್ ತಯಾರಿಸುವ `ಗ್ಲಿವೆಕ್' ಔಷಧವನ್ನು ಒಂದು ತಿಂಗಳು ತೆಗೆದುಕೊಳ್ಳಲು ರೋಗಿಯೊಬ್ಬನಿಗೆ ತಗಲುವ ವೆಚ್ಚ 1.2 ಲಕ್ಷ ರೂಪಾಯಿಗಳು. ಇದನ್ನೇ, ಭಾರತೀಯ ಕಂಪೆನಿಗಳು ತಯಾರಿಸಿದರೆ ಆಗುವ ಖರ್ಚು ಕೇವಲ 8 ಸಾವಿರ ರೂಪಾಯಿ. ವಿದೇಶಿ ಮೂಲದ ಔಷಧ ಕಂಪೆನಿಗಳು ದುಬಾರಿ ದರಗಳ ಮೂಲಕ ಭಾರತೀಯರನ್ನು ಸುಲಿಯುತ್ತಿವೆ ಎಂಬ ಸುದೀರ್ಘ ಕಾಲದ ಆರೋಪಗಳ ಸಮರ್ಥನೆಗೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ.ಯಾವುದೇ ಔಷಧದ ತಯಾರಿಕೆ ವಿಧಾನ ಮತ್ತು ಮೂಲ ವಸ್ತುಗಳನ್ನು ಕೊಂಚ ಬದಲಾಯಿಸಿ ಅದರ ಮೇಲೆ ತಮ್ಮ ಪರಮಾಧಿಕಾರ ಸ್ಥಾಪಿಸುವ ವಿದೇಶಿ ಔಷಧ ಕಂಪನಿಗಳ ಪಾಲಿಗಂತೂ ಸುಪ್ರೀಂ ಕೋರ್ಟ್ ತೀರ್ಪು ಎಚ್ಚರಿಕೆಯ ಗಂಟೆ. ಇದರಲ್ಲಿ ಯಾವುದೇ ಏಕಸ್ವಾಮ್ಯಕ್ಕೆ ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ಅಫ್ತಾಬ್ ಅಹ್ಮದ್ ಮತ್ತು ರಂಜನಾ ದೇಸಾಯಿ ಅವರಿದ್ದ ನ್ಯಾಯಪೀಠ ಸ್ಪಷ್ಟಪಡಿಸಿದೆ. ಹೀಗಾಗಿ ಭಾರತೀಯ ಕಂಪೆನಿಗಳು ಯಾವುದೇ ನಿರ್ಬಂಧ ಇಲ್ಲದೆ ರಕ್ತ ಕ್ಯಾನ್ಸರ್‌ನ ಜೆನೆರಿಕ್ ಔಷಧಗಳನ್ನು ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾಗಿದೆ.ಇನ್ನು ಮುಂದೆ ಭಾರತದ ಔಷಧ ಕ್ಷೇತ್ರದಲ್ಲಿ ಹೊಸ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಂಡವಾಳ ಹೂಡುವುದಿಲ್ಲ ಎಂದು ನೋವಾರ್ಟಿಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಸರ್ಕಾರ ಮತ್ತು ಭಾರತೀಯ ಔಷಧ ಉದ್ಯಮ ಇದರಿಂದ ಎದೆಗುಂದದೆ ಸವಾಲಾಗಿ ತೆಗೆದುಕೊಳ್ಳಬೇಕು. ಸ್ವದೇಶಿ ತಂತ್ರಜ್ಞಾನ, ಸಂಶೋಧನೆಗೆ ಒತ್ತು ಕೊಟ್ಟು ಸ್ವಾವಲಂಬನೆಯ ಹಾದಿ ತುಳಿದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೊಂದಿರಲಿಕ್ಕಿಲ್ಲ.

ಪ್ರತಿಕ್ರಿಯಿಸಿ (+)