ಚರಿತ್ರೆ ಮೇಷ್ಟ್ರ ಕಾಲಡಿಯಲ್ಲಿ ಸಿಕ್ಕ ಇತಿಹಾಸ!

7

ಚರಿತ್ರೆ ಮೇಷ್ಟ್ರ ಕಾಲಡಿಯಲ್ಲಿ ಸಿಕ್ಕ ಇತಿಹಾಸ!

Published:
Updated:
ಚರಿತ್ರೆ ಮೇಷ್ಟ್ರ ಕಾಲಡಿಯಲ್ಲಿ ಸಿಕ್ಕ ಇತಿಹಾಸ!

`ನನ್ನ ಎಡಗಾಲು ಸ್ವಲ್ಪ ಅದುವು ಅದರಿ. ಅದಕ್ಕ ಎಳದ ಹಾಕ್ಕೊಂತ ನಡಿಬೇಕಾಗ್ತೈತಿ. ಹಿಂಗಾಗಿ ನಡಿಯುವಾಗ ನೆಲಾನೇ ನೋಡ್ತಿರ‌್ತಿನಿ. ನೆಲಾ ನೋಡಿ ನಡಿಯೋ ಚಾಳಿಯಿಂದ ನನಗಾದ ಲಾಭ ಅಂದರೆ ಯಾರ ಕಣ್ಣಿಗೂ ಬೀಳದ ನಾಣ್ಯ , ಅಪರೂಪದ ವಸ್ತು ನನಗ ಕಾಣಸ್ತಾವ.~ ಎನ್ನುವ ರಮೇಶ್ ವೈದ್ಯ ಎಂಬ ಈ ಇತಿಹಾಸದ ಶಿಕ್ಷಕರಿಗೆ ಕಾಲಡಿಯಲ್ಲಿ ಬಿದ್ದು ಸಿಕ್ಕ ಇತಿಹಾಸದ ಕಥೆ ಇಲ್ಲಿದೆ.

______________________________________________________`ಇತಿಹಾಸ ಮತ್ತು ಸಂಸ್ಕೃತಿಯ ಸಂಬಂಧಿತ ಸಂಗತಿಗಳಲ್ಲಿ ಆಸಕ್ತಿ ಇರುವ ಜರ್ಮನಿಯ ವಿದ್ವಾಂಸ, ಲೇಖಕ ಡಾ. ಆಲ್ಬರ್ಟ್ ಫ್ರಾಂಜ್ ಐತಿಹಾಸಿಕ ಮಹತ್ವ ಇರುವ ಬೀದರ್ ನಗರಕ್ಕೆ ಬಂದಿದ್ದರು. ಬರುವ ಮುನ್ನವೇ ಬಹಮನಿ, ಮಹಮೂದ್ ಗಾವಾನ್ ಮತ್ತು ಬಿದರಿಗಳ ಬಗ್ಗೆ ಓದಿ ತಿಳಿದುಕೊಂಡಿದ್ದರು.ವ್ಯಾಪಾರಿಯಾಗಿ ಉತ್ತರ ಇರಾನ್‌ನ ಗಿಲಾನ್‌ನ ಮನೆಯಿಂದ ಹೊರಟ ಮಹಮೂದ್ ಗಾವಾನ್ ಭಾರತದ ದಖ್ಖನ್ ಪ್ರಸ್ಥಭೂಮಿಯಲ್ಲಿ ಮೂರು ದಶಕಗಳ ಕಾಲ ಪ್ರಧಾನಿಯಾಗಿ, ಲೇಖಕನಾಗಿ, ಆಡಳಿತಗಾರನಾಗಿ ಮಾಡಿದ ಸಾಧನೆ, ಗಳಿಸಿದ ಯಶಸ್ಸು ಫ್ರಾಂಜ್ ಅವರನ್ನು ಬೆರಗುಗೊಳಿಸುತ್ತವೆ.ಫ್ರಾಂಜ್ ಮತ್ತು ಅವರ ಪತ್ನಿಗೆ ಬೀದರ್ ತೋರಿಸುವ ಜವಾಬ್ದಾರಿ ನನ್ನ ಪಾಲಿಗೆ ಬಂದಿತ್ತು. ನನಗೋ ಗೋಚರವಾಗುವ ಸ್ಮಾರಕಗಳನ್ನು ತೋರಿಸುವಲ್ಲಿ ಆಸಕ್ತಿ. ಆದರೆ, ಫ್ರಾಂಜ್ ಅವರಿಗೆ ಸಾಂಸ್ಕೃತಿಕ ಹುಡುಕಾಟ ಮುಖ್ಯವಾಗಿತ್ತು. ಬೃಹತ್ ಕೋಟೆಯ ಆವರಣದಲ್ಲಿ ಇದ್ದಾಗಲೇ ಗಾವಾನ್ ಬಗ್ಗೆ ಆಸಕ್ತಿ ತೋರಿಸಿ ಅವನ ಸಮಾಧಿ ಇರುವ ಕಡೆಗೆ ಕರೆದುಕೊಂಡು ಹೋಗುವಂತೆ ಕೇಳಿದರು.ಬೀದರಿನವನೇ ಆಗಿದ್ದರೂ ಗಾವಾನ್ ಕುಣಿ ಎಲ್ಯಾದ ಅಂತ ಗೊತ್ತಿರಲಿಲ್ಲ.  ಸ್ಮಾರಕಗಳ ಬಗ್ಗೆ ಗೊತ್ತಿದ್ದ ಸ್ನೇಹಿತರೊಬ್ಬರಿಗೆ ಫೋನ್ ಮಾಡಿ ಕೇಳಿದಾಗ ~ಗೋರನಹಳ್ಳಿ~ಯ ~ಖ್ವಾಜಾ ಜಹಾನ್ ತಲಾಬ್~ ಪಕ್ಕದಲ್ಲಿ ಇರುವ ಮಾವಿನ ತೋಪಿನಲ್ಲಿ ಗಾವಾನ್ ಸಮಾಧಿ ಇರುವ ಸಂಗತಿ ತಿಳಿಸಿದರು. ಫ್ರಾಂಜ್ ಮತ್ತು ಅವರ ಪತ್ನಿಯನ್ನು ಗೋರನಹಳ್ಳಿಯಲ್ಲಿನ ಸಮಾಧಿ ಬಳಿ ಕರಕೊಂಡು ಹ್ವಾದೆ. ನನ್ನ ಎಡಗಾಲು ಸ್ವಲ್ಪ ಅದುವು ಅದರಿ.

 

ಅದಕ್ಕ ಎಳದ ಹಾಕ್ಕೊಂತ ನಡಿಬೇಕಾಗ್ತೈತಿ. ಹಿಂಗಾಗಿ ನಡಿಯುವಾಗ ನೆಲಾನೇ ನೋಡ್ತಿರ‌್ತಿನಿ. ನೆಲಾ ನೋಡಿ ನಡಿಯೋ ಚಾಳಿಯಿಂದ ನನಗಾದ ಲಾಭ ಅಂದರೆ ಯಾರ ಕಣ್ಣಿಗೂ ಬೀಳದ ನಾಣ್ಯ , ಅಪರೂಪದ ವಸ್ತು ನನಗ ಕಾಣಸ್ತಾವ. ಅವತ್ತೂ ಹಂಗೇ ಆಯಿತು.

 

ಗಾವಾನ್ ಸಮಾಧಿಯ ಆವರಣದಲ್ಲಿ ಫ್ರಾಂಜ್‌ರ ಕಾಲ ಬಳಿಯೇ ಬಿದ್ದಿದ್ದ ಒಂದು ಹಳೆಯ ನಾಣ್ಯ ಸಿಕ್ಕಿತು. ಅದನ್ನವರಿಗೆ ತೋರಿಸಿದೆ. ಅಪಾರ ಆನಂದಪಟ್ಟ ಅವರು ತಮಗೆ ಕೊಡುವಂತೆ ದುಂಬಾಲು ಬಿದ್ದರು. ನನಗ ಸಿಕ್ಕಾದ ಖರೆ, ಆದರ ಅದು ನಂದೂ ಅಲ್ಲ. ಇದು ನ್ಯಾಷನಲ್ ಪ್ರಾಪರ್ಟಿ ಇದನ್ನು ನಿಮಗ ಕೊಂಡಂಗಿಲ್ಲ ಅಂತ ಹೇಳಿದೆ~

ಹೀಗೆ ತಮ್ಮ ಅನುಭವ ವಿವರಿಸುವ ಇತಿಹಾಸದ ಯುವ ಮೇಷ್ಟು ರಮೇಶ್ ವೈದ್ಯ.

 

ಬೀದರ್ ಜಿಲ್ಲೆಯ ಕಮಠಾಣದಲ್ಲಿನ ಪದವಿ ಪೂರ್ವ ಕಾಲೇಜಿನಲ್ಲಿ ಹಿಸ್ಟರಿ ಕಲಿಸುವ ರಮೇಶ್ ಅವರಿಗೆ ವಿಚಿತ್ರ- ವಿಶಿಷ್ಟ ಹವ್ಯಾಸ ಇದೆ. ಅಪರೂಪದ ನಾಣ್ಯ, ಐತಿಹಾಸಿಕ ವಸ್ತುಗಳನ್ನು ಹೊಂದಿರುವ ವೈದ್ಯ ಅವನ್ನೇನೂ ಮಾರುಕಟ್ಟೆಯಲ್ಲಿ ಖರೀದಿಸಿ ಸಂಗ್ರಹಿಸಿದ್ದಲ್ಲ. ಅವರ ಬಳಿ ಇರುವ ಪ್ರತಿಯೊಂದು ವಸ್ತುವೂ ಅವರದ್ದೇ ಕಾಲಿನಡಿ ಸಿಕ್ಕದ್ದು. ಹೀಗಾಗಿ ಅವರ ಸಂಗ್ರಹದಲ್ಲಿನ ವಸ್ತುಗಳು ಅಮೂಲ್ಯವೂ ಹೌದು. ಹಾಗೆಯೇ ಅನನ್ಯ ಕೂಡ.ನೋಡಲು ದಪ್ಪಗಿರುವ, ಕೆನ್ನೆ ತುಂಬಿಕೊಂಡಿರುವ, ಶ್ಯಾಮಲ ವರ್ಣದ ಈ ಉಪನ್ಯಾಸಕರು ಧರಿಸಿದ ಕನ್ನಡಕದ ಹಿಂದಿನ ಕಣ್ಣುಗಳಲ್ಲಿ ಈಗಷ್ಟೇ ಕಾಲೇಜು ಪ್ರವೇಶಿಸಿದ ವಿದ್ಯಾರ್ಥಿಯ ಉತ್ಸಾಹ. ಹದಿನೈದು ವರ್ಷಗಳಿಂದ ಇತಿಹಾಸದ ಪಾಠ ಮಾಡುತ್ತ ಬಂದಿರುವ ರಮೇಶ್ ವೀರಪ್ಪ ವೈದ್ಯ ಅವರ ಹವ್ಯಾಸ ಅದಕ್ಕೂ ಹಳೆಯದು.

 

ಅವರ ಸೂಟ್‌ಕೇಸ್ ತುಂಬ ಸಾಕಷ್ಟು ಸಣ್ಣ, ಸಣ್ಣ ಪ್ಲಾಸ್ಟಿಕ್ ಕವರ್‌ಗಳು. ಅದರಲ್ಲಿ ಭಿನ್ನ ಬಗೆಯ ತುಕ್ಕು ಹಿಡಿದಂತಿದ್ದ ಭಿನ್ನ ವಸ್ತುಗಳು. ಕೆಲವದರ ಮೇಲೆ ಅಸ್ಪಷ್ಟ ಲಿಪಿ. ಎಂದೋ ಬಳಕೆಯಾಗಿ ಇತಿಹಾಸದ ಪುಟಗಳನ್ನು ಸೇರಿದ್ದ ಚಿನ್ನ, ಸತು, ಕಬ್ಬಿಣದ ನಾಣ್ಯಗಳು, ಸಣ್ಣ ಸಣ್ಣ ಗುಂಡುಗಳು, ಯಾವುದೋ ಕಾಲದಲ್ಲಿ  ಕುದುರೆಗೆ ಲಾಳ ಹೊಡೆಯಲು ಬಳಸುತ್ತಿದ್ದ ಭಿನ್ನ ಆಕೃತಿಯ ಮೊಳೆಗಳು, ಮುತ್ತು, ಭಿನ್ನ ಲಿಪಿಯಿರುವ ನಾಣ್ಯಗಳು.. ಹೀಗೆ ತರಹೇವಾರಿ ವಸ್ತುಗಳು ಅವರ ಸಂಗ್ರಹದಲ್ಲಿವೆ.ಪುರಾತನ ವಸ್ತುಗಳ ಹಿನ್ನೆಲೆಯೊಂದಿಗೆ ಗತ ಇತಿಹಾಸದ ಬೇರು ಹುಡುಕಲು ಹೊರಟಿರುವ ಉಪನ್ಯಾಸಕ ವೈದ್ಯರ ಈ ಹವ್ಯಾಸ ಆರಂಭವಾದುದು ಅವರು 8ನೇ ತರಗತಿಯಲ್ಲಿ ಇದ್ದಾಗ. ~ನನ್ನ ಊರು ಹುಮನಾಬಾದ್ ತಾಲ್ಲೂಕಿನ ಗಡವಂತಿ ರೀ. 8ನೇ ತರಗತಿಯಿದ್ದಾಗ ಹೀಗೆ ಒಂದು ನಾಣ್ಯ ಸಿಕ್ತಿತ್ರಿ. ಭಾಳ ಚಲೋ ಅದ, ಬೇರೆ ಅದ ಎಂದು ನೋಡುತ್ತಾ ಅದನ್ನು ಜಜ್ಜಿದೆ. ಇದೇ ನೋಡ್ರಿ ಆ ನಾಣ್ಯ. ಸಣ್ಣದಾಗಿ ರಂಧ್ರವು ಮೂಡಿತು.ಛೇ ನಾನು ಬಡಿಬಾರದಿತ್ತು ಎಂದು ನೊಂದುಕೊಂಡು ಹಾಗೇ ಎತ್ತಿಟ್ಟುಕೊಂಡೆ.

ಅಂದಿನಿಂದ ಇಂಥ ಪುರಾತನ ವಸ್ತುಗಳು ಗುರುತಿಸಿದಂತೆ ಸಂಗ್ರಹ ಮಾಡುತ್ತಾ ಹೋದೆ. ಇದರಿಂದ ನನಗೆ ಅನುಕೂಲವೇ ಆಯ್ತು. ಇತಿಹಾಸದ ಬಗೆಗೆ ಕುತೂಹಲ ಮೂಡುತ್ತಾ ಹೋದರೆ, ಈ ಪಾನ ತಿನ್ನೋದು, ಸೆರಿ ಕುಡಿಯೋದು ಇನ್ನಿತರ ಹವ್ಯಾಸಗಳೇ ಮೂಡಲಿಲ್ರಿ. ಇಷ್ಟು ವರ್ಷದಲ್ಲಿ ಇಷ್ಟೆಲ್ಲಾ ಸಂಗ್ರಹಿಸಿದ್ದೇನೆ ನೋಡ್ರಿ ಎಂದರು.`ಸುಮಾರು 300 ಬಗೆಯ ಹಳೆಯ ನಾಣ್ಯಗಳು, ಬೆಳ್ಳಿ, ಬಂಗಾರ, ಸತುವಿನವು ಇವೆ. ಬಾಣದ ಮೊನೆಗಳು, ಗುಂಡು, ಅತಿ ಸಣ್ಣದಾದ ಶಿವಲಿಂಗ, ಹಳೆಯ ಕಾಲದ ಬಳೆ, ಮುತ್ತು, ಎಲುಬುಗಳು.. ಹೀಗೆ ಏನೇ ಹಳೆಯದು ಸಿಕ್ಕಿದರು ತಂದು ಇಟ್ಟೀನ್ರಿ~ ಎಂದು ವಿವರಿಸುವ ಅವರು ಬೆಂಗಳೂರು, ಹೈದರಾಬಾದ್, ಬೀದರ್‌ನ ಕೋಟಿ, ಅಷ್ಟೂರಿನ ಗೋರಿಗಳ ಬಳಿ ಹೀಗೆ ಪ್ರಾಚೀನವಾದ ಬಾವಿ, ಗುಡಿ, ಮಸೀದಿ ಹೀಗೆ ಎಲ್ಲೆಡೆ ಓಡಾಡುತ್ತೇನೆ. ನನ್ನ ಅದೃಷ್ಟವೋ ಏನೋ ಬೇರೆಯವರಿಗೆ ಕಾಣದವಸ್ತುಗಳು ನನ್ನ ಕಣ್ಣಿಗೆ ಬಿದ್ದಿವೆ ಎಂದು ಆಶ್ಚಯ ವ್ಯಕ್ತಪಡಿಸುತ್ತಾರೆ.ಸರಿ ವೈದ್ಯರೇ, ಮುಂದೇನು ಮಾಡ್ತೀರಿ ಎಂಬ ಪ್ರಶ್ನೆಗೆ, `ಬೆಂಗಳೂರ‌್ನಾಗೆ ನಮ್ ಆತ್ಮೀಯರು ಇದ್ದಾರ‌್ರಿ. ಅವ್ರ ಹೇಳ್ಯಾರ‌್ರಿ. ನಿಮ್ ಸಂಗ್ರಹ ಏನದೆ. ಎಲ್ಲ ತಗೋಂಡು ಬರ‌್ರಿ. ಲಿಪಿ ಶಾಸ್ತ್ರಜ್ಞರು ಇರ‌್ತಾರೆ. ಅವರಿಗೆ ತೋರಿಸಿ ಲಿಪಿ ಓದಿಸುವ ಮೂಲಕ ಅದರ ಹಿನ್ನೆಲೆ, ಆ ಕಾಲದ ಮಹತ್ವ ಇತ್ಯಾದಿಯನ್ನು ದಾಖಲಿಸೋಣ ಅಂತಾ. ಹೋಗ್‌ಬೇಕ್ರಿ.

 

ಇವಕ್ಕ ಭಾಳ ಬೆಲಿ ಬರ‌್ತದ ಅಂದ್ರ ಇದರಿಂದ ದುಡ್ಡು ಬರ‌್ತದ ಅಂತೇನು ಮಾಡಿಲ್ರಿ. ನಾನು ಎಂದಿಗೂ ದುಡ್ ಕೊಟ್ಟು ಖರೀದಿ ಮಾಡಿಲ್ರಿ. ಕೇವಲ ಅಡ್ಯಾಡಿ ಕಣ್ಣಿಗೆ ಕಂಡದ್ದು, ಸಿಕ್ಕಿದ್ದನ್ನು ಮಾತ್ರವೇ ತಂದು ಜೋಡಿಸೀನಿ~ ಎಂಬ ವಿವರಣೆ ಅವರದು.~ಬೀದರ್‌ನಾಗೆ ಇಂಥ ವಸ್ತುಗಳನ್ನು ಒಳಗೊಂಡ ಸಂಗ್ರಹಾಲಯ ಮಾಡಬೇಕು ಎಂದೈತ್ರಿ. ಇದನ್ನು ನೋಡಿದ ಮಕ್ಕಳು, ವಿದ್ಯಾರ್ಥಿಗಳಿಗೂ ಈ ಬಗೆಗೆ ಕುತೂಹಲ ಮೂಡಬಹುದು. ಆಸಕ್ತಿ ಬೆಳೆಸಿ ಕೊಳ್ಳಬಹುದು ಎಂದು ನನ್ನ ಆಸೆ~ ಎಂದು ತಮ್ಮ ವಸ್ತುಗಳಷ್ಟೇ ಸರಾಗವಾಗಿ ಕನಸುಗಳನ್ನು ಬಿಚ್ಚಿಡುವ ವೈದ್ಯ ಅವರಿಗೆ ಮೊದ್ಲು ಮನೆಯವರಿಂದ ಸಹಕಾರ ಇರಲಿಲ್ಲ.ಈಗ ಏನೋ ಮಾಡ್ಕಂಡು ಹೊಂಟ್ಯಾನ ಎಂದು ಸುಮ್ಮನಿರ‌್ತಾರಾ. ಆದರೆ, ನಮ್ಮ ಜೊತಿ ಕೆಲಸ ಮಾಡೋ ಟೀಚರ್‌ಗಳಿಗೆ ಸ್ವಲ್ಪಾನೂ ಕಾಳಜಿಯೇ ಇಲ್ರಿ. ಅವ ಬಿಡ್ರಿ ಏನೋ ಮಾಡ್ಕಂಡಾನ ಎಂದು ಆಡಿಕೊಳ್ಳುವುದನ್ನು ಬೇಸರ ಪಟ್ಟದ್ದಿದೆ.ಸಮುದಾಯದ ರಂಗತಂಡದ ಹಿಮ್ಮೇಳದಲ್ಲಿ ಹಲಗೆ, ಡಪ್ಪು ಹಿಡಿದು ಗುರು ಶಂಭುಲಿಂಗ ವಾಲ್ದೊಡ್ಡಿ ಅವರ ಜೊತೆ ರಾಜ್ಯದಾದ್ಯಂತ ಸುತ್ತಿ ಬಂದಿರುವ ವೈದ್ಯ ಅವರು `ನಮಗ ಅನ್ನಕ್ಕ ಹಚ್ಚಿದವರು ನೆಲಿ ಕಲ್ಪಿಸಿದವರು ಶಂಭುಲಿಂಗ ಸರ್ ಅವರನ್ನೆಂಗ ಮರೀಲಿಕ್ಕ ಆಗ್ತದರಿ~ ಎಂದು ಹೇಳುವ ಅವರ ಆಸಕ್ತಿ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಅವರ ಸೂಟ್‌ಕೇಸ್‌ನಲ್ಲಿ ಜಾಗ ಕಿರಿದಾಗುತ್ತಾ ಹೋಗುತ್ತಿದೆ.ವೈದ್ಯ ಅವರನ್ನು 9449785223 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry