ಶನಿವಾರ, ಜೂನ್ 19, 2021
29 °C

ಚರ್ಚೆಯಿಂದ ಬಿಕ್ಕಟ್ಟಿಗೆ ತೆರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ `ರೆಸಾರ್ಟ್ ರಾಜಕಾರಣ~ವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಇಂಥ ಬ್ಲಾಕ್‌ಮೇಲ್ ತಂತ್ರಗಳಿಗೆ ಮಣಿಯದೆ ಇರಲು ನಿರ್ಧರಿಸಿದೆ.ಯಡಿಯೂರಪ್ಪನವರ ಬೇಡಿಕೆಗಳಿಗೆ ಈ ಹಂತದಲ್ಲಿ ಮಣಿಯಲು ಸಾಧ್ಯವಿಲ್ಲ. ಬೇಡಿಕೆಗಳಿಗೆ ಮನ್ನಣೆ ಕೊಟ್ಟರೆ ಕೆಟ್ಟ ಸಂದೇಶ ರವಾನಿಸಿದಂತಾಗಲಿದೆ. ಸದ್ಯ ಉದ್ಭವಿಸಿರುವ ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸುವ ವಿಶ್ವಾಸವಿದೆ. ಈ ಉದ್ದೇಶಕ್ಕಾಗಿ ಹಿರಿಯ ಮುಖಂಡರೊಬ್ಬರನ್ನು ಹೈಕಮಾಂಡ್ ಬೆಂಗಳೂರಿಗೆ ಕಳುಹಿಸಲಿದೆ ಇಲ್ಲವೆ ಮಾಜಿ ಮುಖ್ಯಮಂತ್ರಿಯನ್ನೇ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದ ಮೊಕದ್ದಮೆಗಳು ಇತ್ಯರ್ಥವಾಗುವವರೆಗೆ ಕಾಯುವಂತೆ ಯುಡಿಯೂರಪ್ಪಅವರ ಮನವೊಲಿಸಲಾಗುವುದು. ವರಿಷ್ಠರ ಮಾತಿಗೆ ಕಿವಿಗೊಡದಿದ್ದರೆ ಸರ್ಕಾರ ಬಿದ್ದರೂ ಚಿಂತೆಯಿಲ್ಲ. ಪುನಃ ಚುನಾವಣೆಗೆ ಹೋಗಲಾಗುವುದು ಎಂದು ಮೂಲಗಳು ಸ್ಪಷ್ಟಪಡಿಸಿವೆ.ಯಡಿಯೂರಪ್ಪ ತಮ್ಮ ನಿಷ್ಠಾವಂತ ಶಾಸಕರು ಮತ್ತು ಸಂಸದರನ್ನು ರೆಸಾರ್ಟ್‌ಗೆ ಕರೆದೊಯ್ದ ಬಳಿಕ ಬಿಜೆಪಿ ಹೈಕಮಾಂಡ್‌ನಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ರಾಜ್ಯದ ಉಸ್ತುವಾರಿ ಹೊತ್ತಿರುವ ಬಿಜೆಪಿ ಹಿರಿಯ ಮುಖಂಡರಾದ ಅರುಣ್ ಜೇಟ್ಲಿ ಮತ್ತು ಧರ್ಮೇಂದ್ರ ಪ್ರಧಾನ್ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುಜರಾತ್ ಮತ್ತು ಪಟ್ನಾಕ್ಕೆ ತೆರಳಿದ್ದಾರೆ.`ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ನಾನು ಪಟ್ನಾಗೆ ಬಂದಿದ್ದೇನೆ. ಬಿಜೆಪಿ ಬೆಳವಣಿಗೆ ಕುರಿತು ಏನು ಗೊತ್ತಿಲ್ಲ~ ಎಂದು ಪ್ರಧಾನ್ ರಾತ್ರಿ `ಪ್ರಜಾವಾಣಿ~ಗೆ ತಿಳಿಸಿದರು. ರಾಜ್ಯದ ಬೆಳವಣಿಗೆ ಕುರಿತು ಚರ್ಚಿಸಲು ಬಿಜೆಪಿ ವರಿಷ್ಠರು ಸೋಮವಾರ ಸಭೆ ಸೇರುವ ನಿರೀಕ್ಷೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.