ಚರ್ಚ್ ದಾಳಿಯಿಂದ ನೊಂದಿದ್ದೇವೆ, ಹೆದರಿಲ್ಲ

7

ಚರ್ಚ್ ದಾಳಿಯಿಂದ ನೊಂದಿದ್ದೇವೆ, ಹೆದರಿಲ್ಲ

Published:
Updated:

ಮಂಗಳೂರು: ‘ಚರ್ಚ್ ದಾಳಿಯಿಂದ ಕ್ರೈಸ್ತ ಸಮುದಾಯ ನೊಂದಿದೆಯೇ ಹೊರತು ಹೆದರಿಲ್ಲ. ದಾಳಿಯಿಂದ ಅಲ್ಪಸಂಖ್ಯಾತರಾದ ನಮ್ಮನ್ನು ಹೆದರಿಸಬಹುದು, ಧ್ವನಿಯನ್ನು ದಮನಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದರೆ, ಅದನ್ನು ಸರಿಪಡಿಸಿಕೊಳ್ಳಿ’ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಫಾ.ಅಲೋಷಿಯಸ್ ಪಾವ್ಲ್ ಡಿಸೋಜ ಎಚ್ಚರಿಸಿದ್ದಾರೆ.ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಆಶ್ರಯದಲ್ಲಿ ಇಲ್ಲಿನ ನೆಹರೂ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಾರಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.‘ಕ್ರೈಸ್ತರ ಶಕ್ತಿ ಇರುವುದು ಸಂಖ್ಯೆಯಲ್ಲಲ್ಲ, ಏಸುಸ್ವಾಮಿಯ ಸತ್ಯಮಾರ್ಗದಲ್ಲಿ. ದೀನದಲಿತರ ಸೇವೆಗಾಗಿ ಜೀವನವನ್ನೇ ಮುಡಿಪಾಗಿಟ್ಟವರು ನಾವು. ಮತಾಂಧ ದುಷ್ಕರ್ಮಿಗಳು ಶಿಲುಬೆ ಪುಡಿಗಟ್ಟಿ, ಪರಮ ಪ್ರಸಾದಕ್ಕೆ ಅವಮಾನ ಮಾಡಿದ ಮಾತ್ರಕ್ಕೆ ನಮ್ಮ ನಂಬಿಕೆ ಕುಗ್ಗಿಹೋಗದು, ವಿಶ್ವಾಸ ಕರಗದು. ಯಾವ ವರದಿಗಳೂ ಅಚಲ ನಂಬಿಕೆಯನ್ನು ಹಿಮ್ಮೆಟ್ಟಿಸಲಾರವು’ ಎಂದು ಅವರು ತಿಳಿಸಿದರು.‘ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಶಿಕ್ಷೆಗೆ ಶಿಫಾರಸು ಮಾಡಬೇಕಾದ ಆಯೋಗ ಅನ್ಯಾಯಕ್ಕೆ ಒಳಗಾದವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸಿದೆ. ಮತಾಂತರ ನೆಪದಲ್ಲಿ ಧಾರ್ಮಿಕ ಚಟುವಟಿಕೆಗಳ ವಿಧಿಬದ್ಧತೆಗೆ ಒಳಪಡಿಸಬೇಕು ಎನ್ನುವ ಮೂಲಕ ಧಾರ್ಮಿಕ ಸ್ವಾಂತಂತ್ರ್ಯವನ್ನೇ ಕಸಿದುಕೊಳ್ಳಲು ಮುಂದಾಗಿದೆ. ಆಯೋಗ ರಚನೆಯ ವೇಳೆ ನಮಗಿದ್ದ ಸಂಶಯ ನಿಜವಾಗಿದೆ. ಹಾಗಾಗಿ ಈ ವರದಿಯನ್ನು ತಿರಸ್ಕರಿಸುತ್ತೇವೆ. ನಿಜಾಂಶ ತಿಳಿಯಲು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಎಂದು ಆಗ್ರಹಿಸುತ್ತೇವೆ’ ಎಂದು ಅವರು ತಿಳಿಸಿದರು.ನೆರೆದ ಸಾವಿರಾರು ಮಂದಿ ಚಪ್ಪಾಳೆ ಮೂಲಕ ಈ ಆಗ್ರಹಕ್ಕೆ ಬೆಂಬಲ ಸೂಚಿಸಿದರು.ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಮರಿಯಮ್ಮ ಥಾಮಸ್, ಕರ್ನಾಟಕ ಮಿಷನ್ಸ್ ನೆಟ್‌ವರ್ಕ್ ಅಧ್ಯಕ್ಷ ವಾಲ್ಟರ್ ಮಾಬೆನ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.ಸಿಎಸ್‌ಐ ಚರ್ಚ್‌ಗಳ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯ ಬಿಷಪ್ ಡಾ.ಜಾನ್ ಸದಾನಂದ, ಬೆಳ್ತಂಗಡಿ ಬಿಷಪ್ ಡಾ.ಲಾರೆನ್ಸ್ ಮುಕ್ಕುಝಿ, ಪುತ್ತೂರು ಬಿಷಪ್ ಡಾ. ಗೀವರ್ಗೀಸ್ ಎಂ.ಡಿ., ಸಿಎಸ್‌ಐನ ನಿವೃತ್ತ ಬಿಷಪ್ ಸಿ.ಎಲ್.ಫುರ್ಟಾಡೊ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ಐವನ್ ಡಿಸೋಜ ಮತ್ತಿತರರಿದ್ದರು.  ಡಿಸಿಪಿ ರಮೇಶ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry