ಗುರುವಾರ , ಮೇ 19, 2022
23 °C

ಚರ್ಚ್ ದಾಳಿ: ಸಿಬಿಐ ತನಿಖೆ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ಚರ್ಚ್‌ಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿ ಸಿಬಿಐ ತನಿಖೆ ಆಗಲೇಬೇಕು ಎಂದು ಕರ್ನಾಟಕ ಸಂಯುಕ್ತ ಕ್ರೈಸ್ತ ಸಂಘಟನೆಗಳ ಅಧ್ಯಕ್ಷ ಹಾಗೂ ಬಿಷಪ್ ರೆ. ಪ್ರಭಾಕರ ರಾವ್ ಆಗ್ರಹಿಸಿದರು. ಚರ್ಚ್ ದಾಳಿಗೆ ಸಂಬಂಧಿಸಿ ನ್ಯಾಯಮೂರ್ತಿ ಸೋಮಶೇಖರ ಆಯೋಗದ ವರದಿಯನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ ನಡೆದ ಮೌನ ಮೆರವಣಿಗೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯೋಗದ ವರದಿ ಏಕಪಕ್ಷೀಯವಾಗಿದ್ದು ಸಿಬಿಐ ತನಿಖೆಯಿಂದ ಮಾತ್ರ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯ ಎಂದರು.‘2008ರ ವಿಧಾನಸಭೆ ಚುನಾವಣೆ ನಡೆದ ಮೇಲೆ ನಿರಂತರವಾಗಿ ಚರ್ಚ್‌ಗಳ ಮೇಲೆ ದಾಳಿ ನಡೆದಿದೆ. ದಾಳಿ ಸಂಘಟಿತ ಎಂಬುದು ಇದರಿಂದ ತಿಳಿಯುತ್ತದೆ. ದಾಳಿ ನಡೆದ ನಂತರ ಮುಗ್ದ ಕ್ರೈಸ್ತ ಯುವಕರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಆದರೂ ಅವರ ಬಿಡುಗಡೆಗೆ ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದರು.ದಾಳಿಗೆ ಸಂಬಂಧಿಸಿದ ಸೋಮಶೇಖರ ಆಯೋಗದ ವರದಿಯಲ್ಲಿ ಮಾಡಿರುವ ಶಿಫಾರಸುಗಳು ಅಪಾಯಕಾರಿಯಾಗಿವೆ ಎಂದು ಹೇಳಿದ ಅವರು, ಚರ್ಚ್ ದಾಳಿ ಪ್ರಕರಣವನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಂಘಟನೆಗಳ ವರೆಗೆ ತಲುಪಿಸಲಾಗಿದೆ. ಆದರೆ ಸ್ಥಳೀಯವಾಗಿ ಯಾವುದೇ ಪೂರಕ ಬೆಳವಣಿಗೆ ನಡೆಯಲಿಲ್ಲ. ಇದಕ್ಕೆ ಸಂಬಂಧಪಟ್ಟವರ ನಿರಾಸಕ್ತಿಯೇ ಕಾರಣ ಎಂದು ದೂರಿದರು.ಚರ್ಚ್ ದಾಳಿ ಹಾಗೂ ನಂತರದ ಬೆಳವಣಿಗೆಯಲ್ಲಿ ರಾಜಕೀಯವನ್ನು ಬೆರೆಸಲು ಇಷ್ಟಪಡುವುದಿಲ್ಲ. ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಯಾವ ರಾಜಕೀಯ ವ್ಯಕ್ತಿಗಳ ಸಹಾಯವನ್ನು ಕೂಡ ತೆಗೆದುಕೊಂಡಿಲ್ಲ ಎಂದ ಅವರು ಈ ಬಾರಿ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕ್ಷೇಮಕ್ಕಾಗಿ ಸರ್ಕಾರ ಹಣವನ್ನು ತೆಗೆದಿರಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು. ಬಿಷಪ್ ಡಾ. ಪೀಟರ್ ಮಚಾಡೋ ಹಾಗೂ ಕ್ರೈಸ್ತ ಸಂಘಟನೆಗಳ ಸಂಯುಕ್ತ ವೇದಿಕೆಯ ಜಂಟಿ ಕಾರ್ಯದರ್ಶಿ ರೆ. ಆರ್.ಜೆ. ನಿರಂಜನ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.