ಚಲದೊಳ್ ದುರ್ಯೋಧನಂ - ಮತ್ತೊಂದು ವಿಶ್ಲೇಷಣೆ

7

ಚಲದೊಳ್ ದುರ್ಯೋಧನಂ - ಮತ್ತೊಂದು ವಿಶ್ಲೇಷಣೆ

Published:
Updated:

ಸಂವಾದ

ಇಡೀ  `ವಿಕ್ರಮಾರ್ಜುನ ವಿಜಯ~ವು ಪ್ರಜ್ಞಾಪೂರ್ವಕ ನೆಲೆಯಲ್ಲಿ ರಾಜತ್ವದ ವೈಭವೀಕರಣಕ್ಕೆ ಮತ್ತು `ವೀರ ಭೋಜ್ಯಾ ವಸುಂಧರಾ~ ಎಂಬ ರಾಜರ ಆದರ್ಶನಿರೂಪಣೆಗೆ  ಮೀಸಲಾಗಿದೆ. ಆ ಕಾಲವು `ವೀರಯುಗ~ ಎನ್ನಿಸಿಕೊಳ್ಳಲು ಆಗಿನ ಸಾಮ್ರೋಜ್ಯಶಾಹಿ ಆಕಾಂಕ್ಷೆಗೆ ಸಾಧನವಾದ ಯುದ್ಧದ ಬಗೆಗಿನ ಮನೋಭಾವ.

ಈ ಕಾರಣದಿಂದ ರಾಜತ್ವಪೂರಕ ಮೌಲ್ಯಗಳಿಗೆ ಬಹು ಬೆಲೆ ಬಂತು. `ಜಿತೇನ ಲಭ್ಯತೇ ಲಕ್ಷ್ಮೀ ಮೃತೇನಾಪಿ ಸುರಾಂಗನಾ ಕ್ಷಣವಿಧ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೇ~ ಎಂಬ ಮನೋಭಾವವನ್ನು ಈ ಕಾರಣದಿಂದಲೇ ಜನರಲ್ಲಿ ಬಿತ್ತಲಾಯಿತು. ಕವಿಗಳೂ ತಮ್ಮ ಕಾವ್ಯಗಳಲ್ಲಿ ಇದನ್ನು ವೈಭವೀಕರಿಸಿದರು.ಪಂಪ ಇದಕ್ಕೆ ಹೊರತಲ್ಲ. ತನ್ನ `ವಿಕ್ರಮಾರ್ಜುನವಿಜಯ~ದಲ್ಲಿ ಅವನು ಉದ್ದಕ್ಕೂ ಮಾಡಿಕೊಂಡು ಬಂದಿರುವುದು ಇದನ್ನೇ. ಕಾವ್ಯದ ಹೆಸರೇ ಇದನ್ನು ಸೂಚಿಸುತ್ತದೆ; ಅದು ಭಾರತವಲ್ಲ, ವಿಕ್ರಮಾರ್ಜುನವಿಜಯ. ಅಲ್ಲಿನ ಮೊದಲ ಪದ್ಯದಿಂದ ಕೊನೆಯದರವರೆಗೆ ಕವಿ ಇದನ್ನು ಮಾಡಿದ್ದಾನೆ. ಕಾವ್ಯಗಾತ್ರದಲ್ಲಿ ಸುಮಾರು ಶೇಕಡ ನಲವತ್ತೈದರಷ್ಟು ಯುದ್ಧವರ್ಣನೆಗೆ ಮೀಸಲಾಗಿದೆ.

ಮೊದಲ ಆಶ್ವಾಸದ ಮೂವತ್ತೇಳು ಪದ್ಯಗಳನ್ನು (14 ರಿಂದ 51) ಕವಿಯು ತನ್ನ ಆಶ್ರಯದಾತನ ವಂಶಜರು ನಡೆಸಿದ ವೀರಕೃತ್ಯಗಳ ವರ್ಣನೆಗೆ ಮೀಸಲಾಗಿಟ್ಟಿದ್ದಾನೆ.ಹದಿನಾಲ್ಕನೆಯ ಆಶ್ವಾಸದ ಇಪ್ಪತ್ತಾರರಿಂದ ಮೂವತ್ತನೇ ಪದ್ಯದವರೆಗಿನ ಸಂಸ್ಕೃತ ವೃತ್ತಗಳಲ್ಲಿ ವೈತಾಳಿಕನ ಮಾತುಗಳ ಮೂಲಕವೂ, ಮುಂದಿನ ಏಳು ಕನ್ನಡ ಪದ್ಯಗಳಲ್ಲಿ ಮಂಗಳಪಾಠಕರ ಮೂಲಕವೂ ಅರಿಕೇಸರಿಯ ಶೌರ್ಯವನ್ನು ವೈಭವೀಕರಿಸಿ ವರ್ಣಿಸುತ್ತಾನೆ. ಅಲ್ಲದೆ ಅರ್ಜುನ ನಡೆಸಿದ ದಾಳಿಗಳೆಲ್ಲ ಅರಿಕೇಸರಿಯವೇ ಎಂಬಂತಿದೆ ಇಡೀ ಕಾವ್ಯದ ಚಿತ್ರಣ.

 

`ವಿಕ್ರಮಾರ್ಜುನ ವಿಜಯ~ದ ಪ್ರಾರ್ಥನಾ ಪದ್ಯಗಳನ್ನು ನೋಡೋಣ. ಮೊದಲ ಆಶ್ವಾಸದ ಮೊದಲ ನಾಲ್ಕು ಪದ್ಯಗಳಲ್ಲಿ ಕವಿಯು ಕ್ರಮವಾಗಿ ನಾರಾಯಣ, ಮಹೇಶ್ವರ, ಮಾರ್ತಾಂಡ ಹಾಗೂ ಮನೋಜರನ್ನು ಸ್ತುತಿಸಿದಂತೆ ಕಾಣುತ್ತದೆ.

ಆದರೆ ಅಲ್ಲಿ ನಡೆದಿರುವುದು ಈ ದೇವತೆಗಳ ಸ್ತುತಿಯಲ್ಲ, ಬದಲಿಗೆ ಅವರಿಗಿಂತ ಮಿಗಿಲಾದ ತನ್ನ ಆಶ್ರಯದಾತ ಅರಿಕೇಸರಿಯ ಸ್ತುತಿ. (ಹೋಲಿಕೆಯಿಂದಾಗಿ ದೇವತೆಗಳ ಗೇಲಿ!) ಮೊದಲ ಪದ್ಯದಲ್ಲಿ ನಾರಾಯಣನಿಗಿಂತ ಮಿಗಿಲಾದ `ಉದಾತ್ತ ನಾರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯಕೋಟಿಯಂ~ ಎಂದೂ;

ಎರಡನೆಯದರಲ್ಲಿ `ಉದಾರ ಮಹೇಶ್ವರನೀಗೆ ಭೋಗಮಂ~ ಎಂದೂ; ಮೂರನೆಯ ಪದ್ಯದಲ್ಲಿ `ಪ್ರಚಂಡ ಮಾರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ ನಿಜ ವಾಙ್ಮರೀಚಿಯಿಂ~  ಎಂದೂ; ಹಾಗೂ ನಾಲ್ಕನೆಯದರಲ್ಲಿ `ಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳಂ~ ಎಂದೂ ಕವಿ ಪ್ರಾರ್ಥಿಸುತ್ತಾನೆ.

ವೈದಿಕ ದೇವರು ನಾರಾಯಣನಾದರೆ ತನ್ನ ಆಶ್ರಯದಾತ `ಉದಾತ್ತ ನಾರಾಯಣ~ ; ಅವನು ಮಹೇಶ್ವರನಾದರೆ, ತನ್ನ ಪ್ರಭು  `ಉದಾರ ಮಹೇಶ್ವರ~; ಆತ ಚಂಡವಿರೋಧಿಯಾದರೆ ತನ್ನ ಯಜಮಾನ  `ಪ್ರಚಂಡ ಮಾರ್ತಾಂಡ~; ಹಾಗೆಯೇ ಮೂಲದವನು ಮನೋಜನಾದರೆ, ತನ್ನೊಡೆಯ `ಸಹಜಮನೋಜನೋಜ~.

ಅರ್ಜುನನ ವರ್ಣನೆ ನಡೆಯುವುದು ಅರಿಕೇಸರಿಯ ಬಿರುದುಗಳ ಮೂಲಕವೇ. 

ಇನ್ನು ಕಾವ್ಯದ ಕೊನೆಯ ಕಡೆ ಗಮನ ಹರಿಸೋಣ. ಹದಿನಾಲ್ಕನೆಯ ಆಶ್ವಾಸದ ಅರವತ್ತನಾಲ್ಕನೆಯ ಪದ್ಯವನ್ನು (ಅಂದರೆ ಇಡೀ ಕಾವ್ಯದ ಕೊನೆಯ ಪದ್ಯದ ಹಿಂದಿನದು) ನೆನಪಿಸಿಕೊಳ್ಳೋಣ:

ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ

ಬಲದೊಳ್ ಮದ್ರೇಶನತ್ಯುನ್ನತಿಯೊಳಮರ ಸಿಂಧೂದ್ಭವಂ ಚಾಪ ವಿದ್ಯಾ

ಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿ

ರ್ಮಲಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ

ಭಾರತವನ್ನು ಲೋಕಪೂಜ್ಯವಾಗಿ ಮಾಡಿರುವ ಪಾತ್ರಗಳಿವು: ದುರ್ಯೋಧನ, ಇನತನಯ, ಭೀಮಸೇನ, ಮದ್ರೇಶ, ಅಮರಸಿಂಧೂದ್ಭವ, ಕುಂಭೋದ್ಭವ, ಫಲ್ಗುಣ ಹಾಗೂ ಧರ್ಮಪುತ್ರ. ಕವಿ ಇಲ್ಲಿ (ಪಾಂಡವ-ಕೌರವ) ಉಭಯಪಕ್ಷಗಳ ಪಾತ್ರಗಳನ್ನೂ ಒಂದೆಡೆ ಉಲ್ಲೇಖಿಸಿ ಇವರು ಭಾರತದ  `ಪೂಜ್ಯತೆ~ಗೆ ಕಾರಣ ಎನ್ನುತ್ತಿದ್ದಾನೆ.

ಅಲ್ಲದೆ, ಈ ಒಂದೊಂದು ಪಾತ್ರವೂ ಒಂದೊಂದು ಗುಣದ ಪ್ರತೀಕವೆಂದಿಲ್ಲಿ ವರ್ಣಿತವಾಗಿದೆ. ಆ ಗುಣಗಳು ಚಲ, ನನ್ನಿ, ಗಂಡು, ಬಲ, ಅತ್ಯುನ್ನತಿ, ಚಾಪವಿದ್ಯಾಬಲ, ಸಾಹಸ, ನಿರ್ಮಲಚಿತ್ತ -  ಇವುಗಳು. ಈ ಗುಣಗಳ ಸ್ವರೂಪವೆಂತಹುದು? ಪಾತ್ರಗಳೂ ಮತ್ತವು ಸಂಕೇತಿಸುವ ಗುಣಗಳು - ಇವುಗಳನ್ನು ಒಟ್ಟು ಕತೆಯ ಹಿನ್ನೆಲೆಯಲ್ಲಿ ಪರಿಕಿಸಿದರೆ ಅವುಗಳ ಸ್ವರೂಪ ಕಣ್ಮುಂದೆ ನಿಲ್ಲುತ್ತದೆ.

ಚಲವನ್ನು ತೆಗೆದುಕೊಳ್ಳಿ; ಇದು ದುರ್ಯೋಧನನ ವಿಶಿಷ್ಟ ಲಕ್ಷಣ. ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಂಡಾಗಲೂ ಅವನು ಆಡುವ ಮಾತು `ಚಲಮನೆ ಬಲ್ವಿಡಿವಿಡಿದೆಂ~ ಎಂಬುದು. ಅವನು ಚಕ್ರವರ್ತಿ; ಅವನ ಚಲ ಎಂತಹುದೆಂದರೆ ಏಕಾಂಗಿಯಾದರೂ ನಿಸ್ಸಹಾಯಕನಾದರೂ ಇರುವಂಥದು. ಅವನು ಸಾಯುವಾಗಲೂ ಅದು ತುಂಬಿತ್ತು. ರಾಜನ ಗುಣ ಇಂತಹುದಾಗಿರಬೇಕು.

ಮುಂದೆ, ಕರ್ಣನ ನನ್ನಿ. ಅವನ ನನ್ನಿ ಎಂತಹುದು? ತನ್ನ ಯಜಮಾನನಿಗಾಗಿ  `ಎನ್ನೊಡಲನಾಂ ತವಿಪೆಂ ರಣರಂಗಭೂಮಿಯೊಳ್~ ಎಂಬಂತಹುದು. ಒಡೆದ ಮನಸ್ಸಿನಿಂದ ಶತ್ರುಗಳನ್ನು ಎದುರಿಸುವಾಗ ಅವನ ಸ್ವಾಮಿನಿಷ್ಠೆ ಮಾತ್ರ ಒಡೆಯದೆ ಉಳಿದಿತ್ತು; ಇದು ಅವನ ನನ್ನಿಯ ಸ್ವರೂಪ.

ಹಾಗೆಯೇ ಪರಾಕ್ರಮ, ದೇಹಬಲ, ಅತ್ಯುನ್ನತಿ, ಚಾಪವಿದ್ಯೆ, ಸಾಹಸ ಮತ್ತು ನಿರ್ಮಲಚಿತ್ತ - ಇವುಗಳನ್ನು ಪ್ರತಿನಿಧಿಸುವ ಪಾತ್ರಗಳೂ ಕೊನೆಯವರೆಗೂ (ಆಂದರೆ ಮಹಾಭಾರತ ಯುದ್ಧದ ಕೊನೆಯವರೆಗೆ) ಆ ಮೌಲ್ಯಗಳಿಗಾಗಿ ಬದುಕಿದವು.

ಈ ಎಲ್ಲ ಪಾತ್ರಗಳೂ ತಮ್ಮ ವಿಶಿಷ್ಟ ಗುಣಗಳನ್ನು ಮೆರೆದದ್ದು ಯುದ್ಧಭೂಮಿಯಲ್ಲಿ, ತಮ್ಮ ಪ್ರಾಣಗಳನ್ನು ಒತ್ತೆಯಿಟ್ಟು (ಬೇರೊಂದು ಸಂದರ್ಭದಲ್ಲಿ ಈ ಕಾವ್ಯದಲ್ಲಿಯೇ  `ಭಾರತಂ ಕಲಹಂ~  ಎಂಬ ಮಾತಿದೆ). ಅಂದರೆ ಈ ಎಲ್ಲ ಪಾತ್ರಗಳ ಒರೆಗಲ್ಲು ಯುದ್ಧ, ಉಳಿದಂತೆ ಬದುಕಿನ ಬಗೆಯಲ್ಲ.

ಯುದ್ಧ ರಾಜರ ಸುತ್ತ ತಾನೆ ಹೆಣೆದುಕೊಳ್ಳುವುದು? ಅಂದರೆ ಭಾರತವನ್ನು `ಲೋಕಪೂಜ್ಯವಾಗಿಸುವ~ ಈ ಗುಣಗಳೂ ಪೂಜ್ಯವಾದವು. ಅವೆಲ್ಲ ಯುದ್ಧಸಂಬಂಧಿ ಗುಣಗಳು, ರಾಜಪರವಾದ ಮೌಲ್ಯಗಳು. ಅಂದರೆ ಪಂಪ ಈ ಮೌಲ್ಯಗಳಿಂದಾಗಿ ಬದುಕು ಮೌಲಿಕವಾಗುತ್ತದೆ, ಅಂಥ ಬದುಕು ಲೋಕಪೂಜಿತವಾಗುತ್ತದೆ ಎಂಬ ಧ್ವನಿಯನ್ನು ಸೂಸುತ್ತಿದ್ದಾನೆ.

ಪ್ರಾಯಃ ಒಬ್ಬ ವ್ಯಕ್ತಿಯ ಲೌಕಿಕ ಬದುಕು ಸಾರ್ಥಕವಾಗುವುದು ಈ ಮೌಲ್ಯಗಳಿಂದ, ಯುದ್ಧಸಂಬಂಧೀ ಮೌಲ್ಯಗಳಿಂದ. ಅಂದರೆ ತಾನು ಬೆಳಗುತ್ತಿರುವ ಲೌಕಿಕ ಇದೇ ಆಗಿರಬಹುದು. ಇಂತಹ ಗುಣಗಳನ್ನು ಮೆರೆಯುವುದರ ಮೂಲಕವೇ ಲೌಕಿಕ ಬದುಕು  ಸಾರ್ಥಕಗೊಳ್ಳುವುದು. ಈ ಪದ್ಯದಲ್ಲಿ ಕೃಷ್ಣನ ಪ್ರಸ್ತಾಪವಿಲ್ಲದ ಬಗ್ಗೆ ಅನೇಕ ವಿದ್ವಾಂಸರು ನಾನಾ ಬಗೆಯ ಊಹೆಗಳನ್ನು ಮಾಡಿದ್ದಾರೆ:

ಕೃಷ್ಣ ದೇವರಾದುದರಿಂದ ಅವನು ಎಲ್ಲೆಡೆಯೂ ಇದ್ದಾನೆ ಎಂಬ ಭಾವನೆಯಿಂದ ಅವನ ಹೆಸರನ್ನಿಲ್ಲಿ ಹೇಳಿಲ್ಲ ಎಂಬುದರಿಂದ ಹಿಡಿದು, ಪಂಪ ಜೈನನಾದುದರಿಂದ ವೈದಿಕ ದೇವರಾದ ಕೃಷ್ಣನನ್ನು ಹೆಸರಿಸಿಲ್ಲ ಎಂಬುವವರೆಗೆ. ಆದರೆ ಈಗ ನಾವೀಗ ಮಾಡಿದ ವಿಶ್ಲೇಷಣೆಗನುಗುಣವಾಗಿ ಕೃಷ್ಣನ ಹೆಸರನ್ನನಿಲ್ಲಿ ಸೇರಿಸದಿರುವುದು ಅವನು ಇಲ್ಲಿ ಹೆಸರುಗೊಂಡವರಂತೆ ಯಾವುದೇ ಮೌಲ್ಯದ ಸಂಕೇತವಲ್ಲ ಎಂಬುದರಿಂದ.

ಅವನು, ಪಂಪನ ದೃಷ್ಟಿಯಲ್ಲಿ `ಶ್ವೇತಕೃಷ್ಣಕಾರಕ~ನಾದ ಮೆಕೈವಿಲ್ಲಿಯನ್ ತಂತ್ರಗಾರ, ಅಷ್ಟೆ. ಕಾವ್ಯದ ಒಡಲಲ್ಲಿಯೂ ಅಲ್ಲಲ್ಲಿ ಇಂತಹ ಗುಣಗಳ ಹೊಗಳಿಕೆ ಬರುತ್ತದೆ. ತನ್ನನ್ನು ಮಗನೆಂದು ಕುಂತಿ ಒಪ್ಪಿಕೊಂಡುದರಿಂದ ತನಗೆ ಕುಲ(ಕ್ಷತ್ರಿಯತ್ವ)ವೂ ಬಂತು, ಜೊತೆಗೆ ಶ್ರೇಷ್ಠ ಲೌಕಿಕ ಗುಣಗಳು ಪ್ರಾಪ್ತವಾದವು ಎಂದು ಕರ್ಣ ಹೇಳುತ್ತಾನೆ (ಆಶ್ವಾಸ 9, ಪದ್ಯ 80):ಚಲಮುಂ ಚಾಗಮುಮಳವುಂ

ಕಲಿತನಮುಂ ಕುಲಮುಮೀಗಳೆನ್ನಯ ಮೆಯ್ಯ್‌ಳ್

ನೆಲಸಿದುವು ನಿಮ್ಮ ಕರುಣಾ

ಬಲದಿಂ ನೀವೆನ್ನನಿಂದು ಮಗನೆಂದುದಱಿಂ
ಭೀಷ್ಮನಿಗೆ ಸೇನಾಧಿಪತಿಯ ಪಟ್ಟವನ್ನು ಕಟ್ಟುವ ಪ್ರಸಂಗದಲ್ಲಿಯೂ ಕರ್ಣನು  `ಚಲಂ ಗುಣಂ ಗುಣಂ ಕುಲಂ ಅಭಿಮಾನಮೊಂದೆ ಕುಲಂ ಅಣ್ಮು ಕುಲಂ~ ಎಂದು ಘೋಷಿಸುತ್ತಾನೆ. ಕರ್ಣನ ಸಾವಿನ ಸಂದರ್ಭದಲ್ಲಿ `ಚಾಗದ ನನ್ನಿಯ ಕಲಿತನದಾಗರಮೆನೆ ನೆಗೞ್ದ~ ದೇಹ ಕರ್ಣನದು ಎಂದು ಕವಿ ವರ್ಣಿಸುವುದಲ್ಲದೆ, (ಹನ್ನೆರಡನೆಯ ಆಶ್ವಾಸ, ಪದ್ಯ ಇನ್ನೂರ ಹದಿನೇಳು)

 

ನೆನೆಯದಿರಣ್ಣ ಭಾರತದೊಳಿಂ ಪೆಱರಾರುಮನೊಂದೆ ಚಿತ್ತದಿಂ

 ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇಱು ಕ

 ರ್ಣನ ಕಡು ನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕ

 ರ್ಣನ ಪಡೆಮಾತಿನೊಲ್ ಪುದಿದು ಕರ್ಣರಸಾಯನಮಲ್ತೆ ಭಾರತಂಎಂದು ಕರ್ಣನ ಗುಣಗಾನ ಮಾಡುತ್ತಾನೆ. ಕವಿಗೆ ಕರ್ಣ ಇಷ್ಟು ಆಪ್ತನಾಗಿರುವ ಕಾರಣ ಅವನ ಗುಣಗಳು; ಅವೆಂದರೆ ಹದಿನಾಲ್ಕನೆಯ ಆಶ್ವಾಸದ ಅರವತ್ತನಾಲ್ಕನೆಯ ಪದ್ಯದಲ್ಲಿ ಉಕ್ತವಾದ ಗುಣಗಳೇ; ಅಂದರೆ ಚಲ, ಚಾಗ, ಅಳವು, ಕಲಿತನ, ನನ್ನಿ  ಇವುಗಳೇ. ಹಲವಾರು ಶ್ರೇಷ್ಠ ಗುಣಗಳ ಆಗರವಾಗಿದ್ದ ಕರ್ಣ ಒಂದು ರೀತಿಯಲ್ಲಿ ಪಂಪನ ವೀರಮಾದರಿ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry