ಮಂಗಳವಾರ, ಜೂನ್ 15, 2021
27 °C
ಶಿವರಾಜ್‌ಕುಮಾರ್‌ ಮನವೊಲಿಕೆ ಸಫಲ

ಚಲನಚಿತ್ರ ಕಾರ್ಮಿಕರ ಪ್ರತಿಭಟನೆ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರ್ಯಾಯ ಕಾರ್ಮಿಕ ಒಕ್ಕೂಟ  ವಿರೋಧಿಸಿ ಚಲನಚಿತ್ರ ಕಾರ್ಮಿಕರು ನಡೆಸುತ್ತಿದ್ದ ಅನಿರ್ದಿಷ್ಟಾ­ವಧಿ ಬಂದ್‌ ಮಂಗಳವಾರ ಕೊನೆ­ಗೊಂಡಿದೆ. ಬುಧವಾರದಿಂದ ಚಲನ­ಚಿತ್ರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕಾರ್ಮಿಕರು ನಿರ್ಧರಿಸಿದ್ದಾರೆ.

ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ನಟ ಶಿವರಾಜ್‌ಕುಮಾರ್‌ ಅವರು ನಡೆಸಿದ ಮನವೊಲಿಕೆ ಪ್ರಯತ್ನ ಕೊನೆಗೂ ಸಫಲವಾಗಿದೆ.ನಿರ್ಮಾಪಕರು ತಮಗೆ ಇಷ್ಟಬಂದ ಕಾರ್ಮಿಕರನ್ನು ಚಲನಚಿತ್ರ ಚಟುವ­ಟಿಕೆಗೆ ಬಳಸಿಕೊಳ್ಳಬಹುದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಸೋಮ­ವಾರ ಕೈಗೊಂಡಿದ್ದ ನಿರ್ಣಯ ವಿರೋಧಿಸಿ ಕಾರ್ಮಿಕರು ಚಲನಚಿತ್ರ ಚಟು­ವಟಿಕೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರು.ಕಾರ್ಮಿಕರು ಪ್ರತಿಭಟನೆ ನಡೆಸು­ತ್ತಿದ್ದ ಗಾಂಧಿನಗರದ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಮತ್ತು ಕಲಾವಿದರ ಒಕ್ಕೂಟಕ್ಕೆ ಭೇಟಿ ನೀಡಿದ ನಟರಾದ ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ ಕುಮಾರ್‌, ದುನಿಯಾ ವಿಜಯ್‌, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜು ಕಾರ್ಮಿಕರ ಮನವೊಲಿಕೆಗೆ ಪ್ರಯತ್ನಿಸಿದರು.ಇದಕ್ಕೆ ಸ್ಪಂದಿಸದ ಕಾರ್ಮಿಕರು, ‘ಸೋಮವಾರ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ನಿರ್ಮಾಪಕರು ಬಂಹಿರಂಗವಾಗಿ ಕ್ಷಮೆ ಕೋರಬೇಕು. ತಮಗೆ ಬೇಕೆನಿಸುವ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳ­ಬಹುದು ಎನ್ನುವ ವಾಣಿಜ್ಯ ಮಂಡಳಿ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕು. ಅಲ್ಲಿಯ­ವರೆಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳು­ವುದಿಲ್ಲ’ ಎಂದು ಪಟ್ಟುಹಿಡಿದರು.ಸಂಜೆ ಮತ್ತೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಟ ಶಿವರಾಜ್‌­ಕುಮಾರ್‌, ‘ಪ್ರತಿಭಟನೆ ಹೀಗೆಯೇ ಮುಂದುವರಿದರೆ ಚಿತ್ರೀಕರಣ ನಡೆಯದೆ ಕಾರ್ಮಿಕರ ಜೀವನೋ­ಪಾಯಕ್ಕೆ ತೊಂದರೆ ಆಗಲಿದೆ. ಆ ಕಾರಣಕ್ಕಾಗಿಯಾದರೂ ಬಂದ್‌ ಹಿಂದೆಗೆದುಕೊಂಡು ಚಿತ್ರೀಕರಣ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ’ ಎಂದು ಮನವಿ ಮಾಡಿದರು.‘ಸಮಸ್ಯೆಯ ಕುರಿತು ಎಲ್ಲರೂ ಕುಳಿತು ಚರ್ಚೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬರಬೇಕು. ಬಿಕ್ಕಟ್ಟನ್ನು ಬಗೆಹರಿಸುವ ಕುರಿತು ಗಮನ ಹರಿಸಬೇಕೇ ಹೊರತು ಮತ್ತಷ್ಟು ಗೊಂದಲಕ್ಕೆ ಅವಕಾಶ ಮಾಡಿಕೊಡ­ಬಾರದು. ವಾಣಿಜ್ಯ ಮಂಡಳಿ­ಯೊಂದಿಗೆ ಮಾತುಕತೆ ನಡೆಸಿ ಹತ್ತು ದಿನಗಳಲ್ಲಿ ಈ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸು­ತ್ತೇನೆ’ ಎಂದು ಭರವಸೆ ನೀಡಿದರು. ಕೊನೆಗೆ ಶಿವರಾಜ್‌ ಕುಮಾರ್‌ ಮನವಿಗೆ ಸ್ಪಂದಿಸಿದ ಕಾರ್ಮಿಕರು ಪ್ರತಿ-­ಭಟನೆ ಕೈಬಿಡಲು ನಿರ್ಧರಿಸಿದರು.ಒಕ್ಕೂಟ ವಿರುದ್ಧ ಹುನ್ನಾರ

‘ಕಾರ್ಮಿಕರ ಒಕ್ಕೂಟವನ್ನು ಒಡೆದು ತಮ್ಮ ಹಿತಾಸಕ್ತಿ ಪೂರೈಸಿ­ಕೊಳ್ಳುವ ಹುನ್ನಾರ ನಡೆದಿದೆ. ಕಾರ್ಮಿಕರು ಆರೋಗ್ಯ ವಿಮೆ, ಭವಿಷ್ಯನಿಧಿ ಸೌಲಭ್ಯ­ಗಳನ್ನು ಪಡೆದು­­ಕೊಂಡು ಪ್ರಬಲರಾಗು­ತ್ತಿದ್ದಾರೆ. ಇದನ್ನು ತಡೆಯಲು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ನಾಯ್ಡು ನೇತೃತ್ವದಲ್ಲಿ ಬೆರಳಣಿಕೆಯಷ್ಟು ನಿರ್ಮಾಪಕರು ವ್ಯವಸ್ಥಿತವಾಗಿ ಹುನ್ನಾರ ನಡೆಸಿದ್ದಾರೆ’ ಎಂದು ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಅಶೋಕ್ ಆರೋಪಿಸಿದರು.

‘ದರ್ಶನ್‌, ಸುದೀಪ್‌, ಉಪೇಂದ್ರ, ಇತರ ನಟರು ಮತ್ತು ಚಿತ್ರ ನಿರ್ಮಾಣದಲ್ಲಿ ಸಕ್ರಿಯ­ವಾಗಿ ತೊಡಗಿರುವ ನಿರ್ಮಾ ಪಕರು ಕಾರ್ಮಿಕರ ಬೆಂಬಲಕ್ಕೆ ಬರಬೇಕು’ ಎಂದು ಅವರು ಒತ್ತಾಯಿಸಿದರು.‘ಈ ವಿಷಯ­ವಾಗಿ ಇನ್ನು ಮುಂದೆ ಪ್ರತಿಭಟನೆಗೆ ಮುಂದಾ­ಗು­ವುದಿಲ್ಲ. ಹತ್ತು ದಿನಗಳಲ್ಲಿ ಈ ಸಮಸ್ಯೆ ಬಗೆಹರಿ­ಯದಿದ್ದರೆ ನಾವು ನಿರಂತರವಾಗಿ ಕೆಲಸ ಮಾಡುತ್ತಿ­ರುವ ನಿರ್ಮಾ­ಪಕರು ಮತ್ತು ಕಲಾವಿದರ ಮೂಲಕ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇವೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.