ಚಲನಚಿತ್ರ ಸಮಾಜ: ತೆರೆದ ಬಾಗಿಲು

7

ಚಲನಚಿತ್ರ ಸಮಾಜ: ತೆರೆದ ಬಾಗಿಲು

Published:
Updated:
ಚಲನಚಿತ್ರ ಸಮಾಜ: ತೆರೆದ ಬಾಗಿಲು

ಡಿವಿಡಿಗಳ ಜೊತೆ ಕಡಿಮೆ ಬೆಲೆಯ, ಉತ್ತಮ ಗುಣಮಟ್ಟದ ಡಿಜಿಟಲ್ ಪ್ರದರ್ಶಕ ಉಪಕರಣಗಳ ಲಭ್ಯತೆ `ಚಿತ್ರಸಮಾಜ'ಗಳ ಬಲವನ್ನು ಹೆಚ್ಚಿಸಿವೆ. ಅಡೆತಡೆಯಿಲ್ಲದ ವಿದ್ಯುತ್ ಸರಬರಾಜು ಹಾಗೂ ಹಗಲಿನಲ್ಲಿಯೂ ಕತ್ತಲಾಗಿಸಬಲ್ಲ ಸೂಕ್ತ ಆವರಣ ಸಿಕ್ಕರೆ ಸಾಕು ಇಂದು ಚಿತ್ರಸಮಾಜಒಂದನ್ನು ಪ್ರಾರಂಭಿಸಬಹುದು.

ಜಗತ್ತಿನ ಅತ್ಯುತ್ತಮ ಚಿತ್ರಗಳು, ಹಿಂದಿನ ಕಪ್ಪು ಬಿಳುಪು ಮತ್ತು ಕ್ಲಾಸಿಕ್ ಚಿತ್ರಗಳು ಡಿಜಿಟಲೈಸ್ ಆಗಿ (ಕೆಲವೊಮ್ಮೆ ವರ್ಣರೂಪಾಂತರಗೊಂಡು) ಸಬ್ ಟೈಟಲ್ ಫೈಲ್‌ಗಳೊಂದಿಗೆ ಎಲ್ಲರಿಗೂ ಕೈಗೆಟುಕುವ ಬೆಲೆಗಳಲ್ಲಿ ದೊರಕುತ್ತಿವೆ.ಇಡೀ ಕನ್ನಡ ಚಿತ್ರರಂಗ `ಡಬ್ಬಿಂಗ್' ಬೇಕೇ ಬೇಡವೇ ಎಂಬ ಚರ್ಚೆಯಲ್ಲಿ ಮುಳುಗಿರುವಾಗ, ಭಾಷೆಗಳ ಗೋಳು-ಗೋಜಿಲ್ಲದೆ ಚಿತ್ರಸಮಾಜಿಗರು ಕಳೆದ 5 ದಶಕಗಳಿಂದ ಕೇವಲ `ಚಲನಚಿತ್ರದ ಸಿನಿಮಾ ಭಾಷೆ'ಯನ್ನಷ್ಟೇ ನಂಬಿಕೊಂಡು ದೇಶವಿದೇಶಗಳ ಚಿತ್ರ ವೀಕ್ಷಣೆ- ಚರ್ಚೆ-ಸಂವಾದ ಚಿತ್ರೋತ್ಸವ ರಸಗ್ರಹಣಶಿಬಿರ, ಕಿರುಚಿತ್ರ ತಯಾರಿಕೆಗಳ ಕಾರ್ಯಾಗಾರಗಳನ್ನು ಸದ್ದಿಲ್ಲದೆ ನಡೆಸಿಕೊಂಡು ಬರುತ್ತಿದ್ದಾರೆ.ಎಡಪಂಥೀಯರು ಭಾರತದ ಎಲ್ಲಾ ರಾಜ್ಯಗಳಲ್ಲಿ ಅಧಿಕಾರದಲ್ಲಿರದಿದ್ದರೂ ತಾವು ಆಳುತ್ತಿದ್ದ ಪಶ್ಚಿಮ ಬಂಗಾಳ, ಕೇರಳದಲ್ಲಿ ಮುಖ್ಯವಾಗಿ, ಉಳಿದ ರಾಜ್ಯಗಳಲ್ಲಿ ಸಾಮಾನ್ಯವಾಗಿ ತಮ್ಮ ಸಂಘಟಿತ ಕಾರ್ಮಿಕ ವಲಯದ ಮೂಲಕ ಪ್ರಬಲ ಸಾಂಸ್ಕೃತಿಕ ಚಳವಳಿಗಳನ್ನು `ಪ್ರತಿಭಟನೆ'ಯ ಧೋರಣೆಯಾಗಿ ಹುಟ್ಟು ಹಾಕಿದರು.

ಜೊತೆಗೆ 60-70 ರ ದಶಕಗಳಲ್ಲಿ ಶಾಲಾ-ಕಾಲೇಜು ಶಿಕ್ಷಕರು, ಬ್ಯಾಂಕು, ಎಲ್‌ಐಸಿಗಳ ಕಾಮ್ರೇಡರು, ಸಾಹಿತಿ-ಕಲಾವಿದ-ಚಿಂತಕರು `ಎಡಪಂಥೀಯ ಧೋರಣೆ' ಯುಳ್ಳವರಾಗಿರಲೇಬೇಕೆಂಬ ಅಲಿಖಿತ ನಿಯಮವೊಂದು ಅದು ಹೇಗೋ ಸೃಷ್ಟಿಯಾಗಿಬಿಟ್ಟಿತ್ತು! ಇದರಿಂದ ಆದ ಅರ್ಥಪೂರ್ಣ ಪ್ರಯೋಜನವೇ ಕರ್ನಾಟಕ ರಾಜ್ಯ ಕಂಡ ರೈತ- ಕಾರ್ಮಿಕ -ದಲಿತ - ಬಂಡಾಯ - ಸಮುದಾಯ -ಸಾಹಿತ್ಯ - ರಂಗಭೂಮಿ - ಚಲನಚಿತ್ರ ಹಾಗೂ ಭಾಷಾ ಚಳವಳಿಗಳ ಉಗಮ.50ರ ದಶಕದಲ್ಲಿ ತಯಾರಾದ ಸತ್ಯಜಿತ್ ರಾಯ್‌ರವರ `ಪಥೇರ್ ಪಾಂಚಾಲಿ' ಭಾರತದ ಚಲನಚಿತ್ರ ಇತಿಹಾಸದಲ್ಲಿ `ಅವಂಟ್ ಗಾರ್ಡ್' ಅಥವಾ `ಆಧುನಿಕ' ಎಂಬ ಸಿನಿಮಾ ಪ್ರಭೇದವನ್ನು ಹುಟ್ಟುಹಾಕಿದ ಜೊತೆಜೊತೆಗೆ, ಇಂಥ ಚಿತ್ರಗಳನ್ನು ವೀಕ್ಷಿಸುವ, ಚರ್ಚಿಸುವ, ವಿಮರ್ಶಿಸುವ ಸಲುವಾಗಿ `ಚಿತ್ರಸಮಾಜ'ಗಳು ಪ್ರಾರಂಭವಾದವು. ಬೆಂಗಳೂರಿನ `ವಿಮೋಚನಾ', `ಸುಚಿತ್ರ', `ಅಸೀಮ'ದಂಥ ಚಿತ್ರಸಮಾಜಗಳು ಮೈಸೂರಿನಲ್ಲಿ `ವಿವೇಚನಾ', `ಮೈಸೂರು ಫಿಲ್ಮ್ ಸೊಸೈಟಿ' (ಸಿ.ಎಫ್.ಟಿ.ಆರ್.ಐ) ಗಳು ಉಳಿದ ಜಿಲ್ಲೆಗಳಲ್ಲಿ ವಿವಿಧ ಚಿತ್ರಸಮಾಜಗಳು ಪ್ರಾರಂಭಗೊಂಡವು.(ಸಮುದಾಯ ಸಂಘಟನೆ, ರಂಗಸಮುದಾಯ-ಗ್ರಂಥಸಮುದಾಯ-ಚಿತ್ರಸಮುದಾಯ ಎಂಬ ವಿಭಿನ್ನ ಚಳವಳಿಗಳಲ್ಲಿ ತೊಡಗಿ ಮಂಗಳೂರು ಮತ್ತು ಉಡುಪಿಯಲ್ಲಿ ಚಿತ್ರಸಮುದಾಯವನ್ನು ಯಶಸ್ವಿಯಾಗಿ ನಡೆಸಿತು). ಇವುಗಳಿಗೆ ಒತ್ತಾಸೆಯಾಗಿ ಸಭಾಂಗಣಕ್ಕಾಗಿ ಒಂದು ವಿದ್ಯಾಸಂಸ್ಥೆ ಇದ್ದರೆ, ಪ್ರೊಜೆಕ್ಟರ್, ಚಿತ್ರಗಳನ್ನು ಕಡ ತರುವುದು, ಪ್ರದರ್ಶನ ನೈಪುಣ್ಯ, ಚಿತ್ರಗಳ ವಿವರ ಕೈಪಿಡಿ, ಪತ್ರ ವ್ಯವಹಾರ, ಪ್ರಚಾರ ಮುಂತಾದವುಗಳ ಹೊಣೆ-ನಿರ್ವಹಣೆ ಹೊತ್ತವರು ಶಿಕ್ಷಕರು ಮತ್ತು ಸಂಘಟಿತ ವಲಯದ ಬುದ್ಧಿಜೀವಿಗಳು.ಚಿತ್ರಗಳು ಸಾಧಾರಣವಾಗಿ 35ಮಿಮಿ. ಫಾರ್ಮ್ಯೋಟ್‌ನಲ್ಲಿ ತಯಾರಾಗುತ್ತಿದ್ದರೂ ಚಿತ್ರಮಂದಿರಗಳ ಹೊರಗೂ ಪ್ರದರ್ಶನದ ಸೌಲಭ್ಯಕ್ಕಾಗಿ 16ಮಿಮಿ. ಫಾರ್ಮ್ಯೋಟ್‌ನಲ್ಲಿ ಲಭ್ಯವಿದ್ದವು. ಈ ಸಿನಿಮಾ ರೀಲುಗಳ ಡಬ್ಬಿಗಳನ್ನು ದೇಶವಿದೇಶಗಳ ಎಂಬೆಸಿಗಳು, ಪೂನಾದ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಆರ್ಕೈವ್ ಹಾಗೂ ಮದ್ರಾಸಿನ ಚಿತ್ರಸಮಾಜಗಳ ಒಕ್ಕೂಟದಿಂದ ರೈಲು/ಬಸ್ಸುಗಳ ಮೂಲಕ ತರಿಸಿಕೊಂಡು, ರೀಲುಗಳನ್ನು ಪರೀಕ್ಷಿಸಿ, ಪ್ರೊಜೆಕ್ಟರ್ ಗೆ ಹೊಂದಿಸಿ, ಪರದೆ ಕಟ್ಟಿ, ಪ್ರದರ್ಶನ ಏರ್ಪಡಿಸಿ ಮತ್ತದೇ ಡಬ್ಬಿಗಳನ್ನು ಬಸ್ಸು/ರೈಲಿಗೆ ಹಾಕಲು ವಿಪರೀತ ಶ್ರಮವಾದರೂ ಆಗಿನ ಸಾಂಸ್ಕೃತಿಕ ವಾತಾವರಣ ಹಾಗೂ ಉತ್ಸಾಹದಲ್ಲಿ ಈ ಶ್ರಮವೆಲ್ಲಾ ನಗಣ್ಯವಾಗಿತ್ತು. 35 ಮಿಮಿ.

ಚಿತ್ರಗಳಿಗಾಗಿ ಸಿನಿಮಾ ಹಾಲ್‌ಗಳನ್ನು ಮಾಲೀಕರು ವಾಣಿಜ್ಯ ಚಿತ್ರಗಳಿಗಾಗಿ ನಿಗದಿಪಡಿಸದ ವೇಳೆಯಲ್ಲಿ ಮಾತ್ರ (ಅಂದರೆ ಬೆಳಗ್ಗೆ 8-30/ಮಧ್ಯಾನ್ಹ 12ಕ್ಕೆ) ಪ್ರದರ್ಶನ ಏರ್ಪಡಿಸಿದರೂ ಆಸಕ್ತರು ಸೇರುತ್ತಿದ್ದುದು ವಿಶೇಷವಾಗಿತ್ತು. ಇಷ್ಟೆಲ್ಲ ಹೇಳಿದರೂ ಅಂದು ಮತ್ತು ಇಂದೂ ಈ ಬಗೆಯ ಪ್ರೇಕ್ಷಕರು ಸೀಮಿತ ಸಂಖ್ಯಾತರೇ ಸರಿ!ಇದೇ ಸಂದರ್ಭದಲ್ಲಿ ಪೂನಾದ ಫಿಲ್ಮ್ ಇನ್‌ಸ್ಟಿಟ್ಯೂಟ್ ನ ಸಂವೇದನಾಶೀಲ ಚಿತ್ರತಜ್ಞರಾದ ಪಿ.ಕೆ.ನಾಯರ್ ಮತ್ತು ಪ್ರೊ. ಸತೀಶ್ ಬಹಾದುರ್, ಚಲನಚಿತ್ರ ರಸಗ್ರಹಣ ಶಿಬಿರಗಳನ್ನು ನಡೆಸುವುದರ ಮೂಲಕ ದೇಶದ ಮೂಲೆ ಮೂಲೆಗಳಿಂದ ಚಿತ್ರಾಸಕ್ತರನ್ನು ಆಕರ್ಷಿಸಿ ಚಿತ್ರಸಮಾಜ ಚಳವಳಿಗಳಿಗೆ ಗ್ರಾಮಾಂತರ ಪ್ರದೇಶಗಳಲ್ಲೂ ಜೀವತುಂಬಿದರು. ಕೇರಳದ ಹಳ್ಳಿ ಹಳ್ಳಿಗಳಲ್ಲಿ ಹಾಗೂ ಕರ್ನಾಟಕದ ಹೆಗ್ಗೋಡಿನಂಥ ಕುಗ್ರಾಮದಲ್ಲಿ ಚಿತ್ರಸಮಾಜಗಳು ಪ್ರಾರಂಭಗೊಂಡವು.

70ರ ದಶಕದ ಕೊನೆಯಲ್ಲಿ ನೀನಾಸಂನ ಕೆ.ವಿ. ಸುಬ್ಬಣ್ಣ ನಡೆಸಿದ ಚಲನಚಿತ್ರ ರಸಗ್ರಹಣ ಶಿಬಿರಗಳಲ್ಲಿ ಪಾಲ್ಗೊಂಡ, ಕರ್ನಾಟಕದ ನಾನಾ ಭಾಗಗಳಿಂದ ಬಂದ ಸಾಮಾನ್ಯ ಜನ ತಮ್ಮ ತಮ್ಮ ಊರುಗಳಲ್ಲಿ ಚಿತ್ರಸಮಾಜಗಳ ಹುಟ್ಟಿಗೆ ಕಾರಣರಾದರು.

ಪಟ್ಟಾಭಿರಾಮರೆಡ್ಡಿ (ಸಂಸ್ಕಾರ), ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ, ಶಿವರಾಮ ಕಾರಂತ, ತದನಂತರ ಪಿ.ಲಂಕೇಶ್, ಚಂದ್ರಶೇಖರ ಕಂಬಾರ ಮುಂತಾದವರು ವಾಣಿಜ್ಯಚಿತ್ರಗಳಿಗಿಂತ ಭಿನ್ನವಾದ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಕೊಂಡು ಚಿತ್ರಸಮಾಜದ ಚಳವಳಿಯಲ್ಲಿ ಕರ್ನಾಟಕಕ್ಕೆ ಒಂದು ಶಾಶ್ವತ ಸ್ಥಾನವನ್ನು ನಿರ್ಮಿಸಿದರು. ಬಹುಶಃ 65-80 ರ ದಶಕದ ಈ ಅವಧಿಯನ್ನು ಚಿತ್ರಸಮಾಜಗಳ `ಸುವರ್ಣಯುಗ''ವೆಂದು ಕರೆಯಬಹುದು.ಆದರೆ ತಂತ್ರಜ್ಞಾನ ನಿಂತ ನೀರಲ್ಲ. ಸಿನಿಮಾದ ಎಲ್ಲ ಅವತಾರಗಳ ಹಿಂದೆ ಸದಾ ಆವಿಷ್ಕಾರಗೊಳ್ಳುತ್ತಲೇ ಇರುವ ತಾಂತ್ರಿಕತೆ ಕೆಲಸ ಮಾಡಿದೆ. ಹೀಗಾಗಿ ವಿಡಿಯೊ ಕ್ಯಾಸೆಟ್, ವಿಸಿಪಿ, ವಿಸಿಆರ್. ಎಂಬ ತಾಂತ್ರಿಕ ಕಲ್ಚರ್ ನಿಂದಾಗಿ ಜನರು ತಮ್ಮ ತಮ್ಮ ಮನೆಗಳಲ್ಲೇ ಟಿವಿ ಯ ಕಿರುತೆರೆಯ (ಆಗ ಎಲ್ ಸಿ ಡಿ/ಎಲ್ ಇ ಡಿ ಪರದೆ ಹಾಗೂ ಹೋಮ್ ಥಿಯೇಟರ್ ಸೌಲಭ್ಯ ಇಲ್ಲದೆ) ಸಹಾಯದಿಂದ, ಬೇಕೆಂದಾಗ ಬಾಡಿಗೆಗೆ ಲಭ್ಯವಿದ್ದ, ತಮಗೆ ಇಷ್ಟವಾದ ಚಿತ್ರಗಳನ್ನು ನೋಡಲು ಪ್ರಾರಂಭಿಸಿದರು.

ಇದರಿಂದಾಗಿ ಸಾಮೂಹಿಕ/ಸಾರ್ವಜನಿಕ ಕ್ರಿಯೆಯಾಗಿದ್ದ ಚಿತ್ರ ವೀಕ್ಷಣೆ ಖಾಸಗಿ/ವೈಯಕ್ತಿಕ ಮಟ್ಟಕ್ಕೆ ಇಳಿಯಿತು. ಈ ಘಟ್ಟದಲ್ಲಿ ಚಿತ್ರಸಮಾಜಗಳು ಸಹ ಈ ಬದಲಾವಣೆಗೆ ಒಳಪಡಬೇಕಾಯಿತು. ವಾಣಿಜ್ಯ ಚಿತ್ರಗಳ `ವೀಡಿಯೊ ಕ್ಯಾಸೆಟ್'ಗಳು ಲಭ್ಯವಿದ್ದವೇ ಹೊರತು ಅನ್ಯ ಚಿತ್ರಗಳ ವೀಡಿಯೊ ಅವತರಣಿಕೆ ಇರಲಿಲ್ಲ.

ಇದರೊಂದಿಗೆ ಪದೇ ಪದೇ ಸ್ಥಗಿತಗೊಳ್ಳುವ, ಟೇಪು ತುಂಡಾಗುವ, ಬಳಕೆಯಿಂದಾಗಿ ಚಿತ್ರ ಅಸ್ಪಷ್ಟಗೊಂಡ, ಒಟ್ಟಾರೆ ಗುಣಮಟ್ಟದ ಕುಸಿತದಿಂದ ಕಿರಿಕಿರಿಯೇ ಹೆಚ್ಚಾಗಿ ಚಿತ್ರಾಸ್ವಾದನೆಯ ಹಿತ ಹಾಗೂ ಸುಖವನ್ನು ವಿಡಿಯೊ ಸಂಸ್ಕೃತಿ ಕಬಳಿಸಿಬಿಟ್ಟಿತು. (`ವಿಡಿಯೊ ಕಿಲ್ಡ್ ದ ರೇಡಿಯೊ ಸ್ಟಾರ್' ಎಂಬ ಪ್ರಖ್ಯಾತ ಹಾಡಿನ ಹಾಗೆ!) ಇದರಿಂದಾಗಿ ನಿಜವಾದ ಹಿನ್ನಡೆ, ನಿರುತ್ಸಾಹ ಚಿತ್ರಸಮಾಜಗಳನ್ನು ಆವರಿಸಿದವು.

16ಮಿಮಿ. ಫಾರ್ಮ್ಯೋಟ್ ನಿಂತೇಹೋಯಿತೇನೊ ಎಂಬಂಥ ಸ್ಥಿತಿ ಬಂದೊದಗಿತು. ಜೊತೆಗೆ `ಅವಾರ್ಡ್ ಚಿತ್ರಗಳು' ಎಂಬ ಮೂದಲಿಕೆ, ನಿಧಾನಗತಿಯ ಚಲನೆ, ಬೋರು ಮುಂತಾದ ತಪ್ಪು ಗ್ರಹಿಕೆಯಿಂದಾಗಿ ಚಿತ್ರಸಮಾಜಗಳ ಸಾಮಾನ್ಯ ಸದಸ್ಯರು ಕಲಾತ್ಮಕ ಚಿತ್ರವೀಕ್ಷಣೆಯಿಂದ ವಿಮುಖರಾಗತೊಡಗಿದರು. ಚಿತ್ರಸಮಾಜಗಳೇ ಸ್ಥಗಿತಗೊಂಡವೇನೋ ಎಂಬ ಅನುಮಾನ ನಮ್ಮಂಥವರನ್ನು ಕಾಡತೊಡಗಿತು.(`ರಜನೀಗಂಧ' ಮತ್ತು `ಛೋಟೀಸಿ ಬಾತ್'ನಂಥ `ಬ್ರಿಜ್ ಸಿನಿಮಾ' ಸಹ ಚಿತ್ರ ಸಮಾಜಗಳ ಆಶಯಗಳಿಗೆ ವಿರುದ್ಧವಾಗಿದ್ದವು. ಋತ್ವಿಕ್ ಘಟಕ್, ರಾಯ್, ಮೃಣಾಲ್ ಸೇನ್ ಮುಂತಾದ ಬೆಂಗಾಲಿ ಧೀಮಂತರ ಚಿತ್ರಸಂಸ್ಕೃತಿಯ ಗಟ್ಟಿತನವನ್ನು ಬಾಸು ಚಟರ್ಜಿಯಂಥವರ ಚಿತ್ರಗಳ ಹುಸಿತನ ಅಲ್ಲಾಡಿಸಿದ್ದು ನಿಜ).90ರ ದಶಕದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳ ಗೋಳೀಕೃತ ಪರಿಸ್ಥಿತಿ, ಜೊತೆಗೆ ಎಲ್ಲವನ್ನೂ ವಾಣಿಜ್ಯ ಸರಕನ್ನಾಗಿಸುವ ಮೆಗಾಮಾರುಕಟ್ಟೆ ಸಂಸ್ಕೃತಿ ಹಾಗೂ ಹುಸಿ ಅಭಿವೃದ್ಧಿ ಮಂತ್ರದ ಜೊತೆಗೂಡಿರುವ ಅಗಾಧ ತಾಂತ್ರಿಕ ಆವಿಷ್ಕಾರವನ್ನು ಸಿನಿಮಾರಂಗ ತೆರೆದ ಬಾಹುಗಳಿಂದ ಸ್ವಾಗತಿಸಿದೆ. ಹಾಲಿವುಡ್ ಮತ್ತು ಬಾಲಿವುಡ್‌ಗಳ ಕೇಂದ್ರೀಕೃತ ಹಿಡಿತಕ್ಕೆ ಇಡೀ ಚಿತ್ರರಂಗ ಬಲಿಯಾಗಿದೆ.

ಒಂದು ಕಾಲದಲ್ಲಿ ಭಾರತೀಯ ಚಿತ್ರಗಳೆಂದರೆ ವಿದೇಶೀಯರಿಗೆ ರಾಯ್ ಮೃಣಾಲ್ ಸೇನ್ ಚಿತ್ರಗಳು ಪ್ರಾತಿನಿಧಿಕವಾಗಿ ಕಂಡಿದ್ದರೆ, ಇಂದು ಶಾರೂಕ್ ಖಾನ್, ರಜನೀಕಾಂತ್ ಆ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. `ವರ್ಲ್ಡ್ ಪ್ರೀಮಿಯರ್' ಎಂಬ ಪದವನ್ನು ಅತ್ಯಂತ ಅಗ್ಗವಾಗಿ ಜಗತ್ತಿನ ಯಾವುದೇ ಚಿತ್ರರಂಗ ಸಲೀಸಾಗಿ ಬಳಸುವಂಥ ತಾಕತ್ತನ್ನು ಡಿಜಿಟಲ್ ತಂತ್ರಜ್ಞಾನ ನೀಡಿದೆ! ಈಗ ಎಲ್ಲವೂ ಡಿಜಿಟಲ್‌ಮಯ.

ಗ್ರಾಫಿಕ್ಸ್, ಆನಿಮೇಶನ್ ಮುಂತಾದ ತಂತ್ರಾಂಶಗಳನ್ನು ಬಳಸಿ ಚಲನಚಿತ್ರಗಳನ್ನು ನಿರ್ಮಿಸಿ, ಫೈಲ್ಸ್, ಹಾಗೂ ಸಿಗ್ನಲ್‌ಗಳ ರೂಪದಲ್ಲಿ ಸ್ಯಾಟಲೈಟ್‌ಗಳ ಮೂಲಕ ಎಲ್ಲೆಂದರಲ್ಲಿಗೆ ರವಾನಿಸಿ ವಿಶ್ವದ ಎಲ್ಲಾ ಭಾಗಗಳಲ್ಲಿಯೂ ಏಕ ಕಾಲದಲ್ಲಿ ಚಿತ್ರಪ್ರದರ್ಶನ ಏರ್ಪಡಿಸುವ ಸೌಲಭ್ಯ ಒದಗಿದೆ. ಅವಶ್ಯಕತೆ ಇರಲಿ ಬಿಡಲಿ 3ಡಿ/ಆನಿಮೇಶನ್ ಎಂಬ ತಂತ್ರಜ್ಞಾನ ಹಣ ಮಾಡುವ ಏಕೈಕ ಉದ್ದೇಶದಿಂದ ಆಧುನಿಕ ಚಿತ್ರರಂಗದ ಮುಂಚೂಣಿಯಲ್ಲಿದೆ.ಆದರೆ ಸಂಪೂರ್ಣ ವಾಣಿಜ್ಯಮಯವಾಗಿರುವ ಈ ತಂತ್ರಜ್ಞಾನದ ಇನ್ನೊಂದು ಮಗ್ಗುಲಲ್ಲೇ ಪ್ರತಿಭಟನೆ ಹಾಗೂ ಕಲಾತ್ಮಕತೆಗಳ ನಿರಂತರತೆಯೂ ಸಾಧ್ಯವಾಗಿದೆ. ಚಿತ್ರ ನಿರ್ಮಾಣದಲ್ಲಿ ಮುಖ್ಯವಾಗಿ ಇಂದು ಸಿನಿಮಾ ಭಾಷೆಯೇ ಕ್ರಾಂತಿಕಾರಕವಾಗಿ ತಾಂತ್ರೀಕರಣಗೊಂಡಿದೆ! ಸಿನಿಮಾ ನೋಡುವ ವಿಧಾನವನ್ನೇ ಬದಲಾಯಿಸಿಕೊಳ್ಳಬೇಕೆನ್ನಿಸುವಷ್ಟು ಸವಾಲೊಡ್ಡುವ ಸಿನಿಮಾ, ಅತ್ಯಂತ ಹಿಂದುಳಿದ ಚಿಕ್ಕಚಿಕ್ಕ ದೇಶಗಳಿಂದ ಬರುತ್ತಿದೆ. ವಿಯೆಟ್ನಾಂ,ದಕ್ಷಿಣ ಕೊರಿಯಾ, ಛಾಡ್, ಟರ್ಕಿ, ಪೋಲೆಂಡ್, ಸೆರ್ಬಿಯಾ ಮುಂತಾದ ದೇಶಗಳ ಯುವ ನಿರ್ದೇಶಕರು ಅತ್ಯುತ್ತಮ ಚಿತ್ರಗಳನ್ನು ಜಗತ್ತಿಗೆ ನೀಡುತ್ತಿದ್ದಾರೆ.ಇವುಗಳಲ್ಲಿ ಪ್ರಮುಖವಾಗಿ ಎರಡು ರೀತಿಯ ಸಿನಿಮಾವನ್ನು ಗುರುತಿಸಬಹುದು. ಗೋಳೀಕೃತ ಬಂಡವಾಳ ಮತ್ತು ಖಾಸಗಿ ಸಂಪತ್ತಿನ ಕ್ರೋಢೀಕರಣದ ವಿಶ್ವಕ್ಕೆ ಪರ್ಯಾಯವಾಗಿ ಸಾಮಾಜಿಕತೆ ಮತ್ತು ಸಮಾನತೆಯ ರಾಜಕೀಯದ `ಇನ್ನೊಂದು ವಿಶ್ವದ ಸಾಧ್ಯತೆ'ಯಲ್ಲಿ ನಂಬಿಕೆಯಿಟ್ಟಿರುವ ಚಿಂತಕರು, ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು ನಿರ್ಮಿಸುತ್ತಿರುವ ಸಹಸ್ರಾರು ಸಾಕ್ಷ್ಯ ಹಾಗೂ ಕಿರುಚಿತ್ರಗಳು ಪ್ರತಿ ನಿಮಿಷಕ್ಕೆ 60ರಂತೆ `ಯು ಟ್ಯೂಬ್ ತಾಣ'ದಲ್ಲಿ ಎಲ್ಲರಿಗೂ ಲಭ್ಯವಿವೆ.ಈ ಚಿತ್ರಗಳ ವಸ್ತು ಸಾಮಾನ್ಯವಾಗಿ ಪರಿಸರ ನಾಶ, ಅಣುವಿರೋಧಿ ಹೋರಾಟಗಳು, ಕುಲಾಂತರಿ ತಂತ್ರಜ್ಞಾನ, ರೈತರ ಆತ್ಮಹತ್ಯೆ ಮುಂತಾದ ಸಮಕಾಲೀನ ವಿಷಯಗಳನ್ನು ಒಳಗೊಂಡಿದೆ. ಇಂಥ ಚಿತ್ರಗಳನ್ನು ಪ್ರದರ್ಶಿಸುವ ಹೊಣೆಗಾರಿಕೆ ಚಿತ್ರಸಮಾಜಗಳ ಹೆಗಲಿಗೇರಿದೆ.ಇನ್ನೊಂದು ರೀತಿಯ ಚಿತ್ರಗಳು

ಅತ್ಯಂತ ಸಂವೇದನಾಶೀಲವಾದ, ಕ್ರಿಯಾತ್ಮಕತೆಯಿಂದ ಕೂಡಿದ ಸೃಜನಶೀಲತೆಯನ್ನು ತಮ್ಮ ಚಿತ್ರಗಳಲ್ಲಿ ಪ್ರದರ್ಶಿಸುತ್ತಿರುವ ಯುವಪ್ರತಿಭೆ ಆಯಾ ದೇಶಗಳ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಅರಿವುಳ್ಳ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಒಂದೇ ಒಂದು ಉದಾಹರಣೆಯನ್ನು ನೀಡುವುದಾದರೆ ಇರಾನ್ ದೇಶದ ಚಿತ್ರಗಳನ್ನು ಗಮನಿಸಿದರೆ ಇರಾನ್ ಇಂಥಾ ಚಿತ್ರಗಳ ಮುಂಚೂಣಿಯಲ್ಲಿರುವುದು ವೇದ್ಯವಾಗುತ್ತದೆ. 

ಆ ದೇಶದಲ್ಲಿರುವ `ನಿರ್ಮಾಣಪೂರ್ವ ಸೆನ್ಸಾರ್‌ಷಿಪ್', ಪ್ರತಿಗಾಮಿತನ, ಧಾರ್ಮಿಕ ದಬ್ಬಾಳಿಕೆ, ಮಕ್ಕಳ ಸಮಸ್ಯೆ, ಕಾನೂನಿನ ತೊಡಕುಗಳು, ಆಧುನಿಕತೆಯ ವಿರೋಧಾಭಾಸಗಳು ಇವೇ ಮುಂತಾದ ವಿಚಾರಗಳು ಎಷ್ಟು ಚೆನ್ನಾಗಿ ಚಿತ್ರದ ಒಳಗೇ `ಎಂಬೆಡೆಡ್' ಆಗಿರುತ್ತವೆಂದರೆ ಇವು `ಮಕ್ಕಳ ಚಿತ್ರಗಳು', `ವಯಸ್ಕರ ಚಿತ್ರಗಳು', `ಸಾಕ್ಷ್ಯಚಿತ್ರಗಳು', `ಕಥಾಚಿತ್ರಗಳು' ಎಂಬ ಪ್ರಭೇದವೇ ಮಸುಕಾಗುವಷ್ಟು ಪ್ರಭಾವಶಾಲಿಗಳಾಗಿವೆ.

ಸಿನಿಮಾದ `ಮಾಂತ್ರಿಕ ಭಾಷೆ' ಎಂದರೆ ಇದೇ ಎಂಬಷ್ಟು ಢಾಳಾಗಿದೆ. ಸದ್ಯದ ಕಿರೀಟಪ್ರಾಯವಾದ ಉದಾಹರಣೆಯೆಂದರೆ ಗೃಹಬಂಧನಕ್ಕೊಳಗಾಗಿರುವ ನಿರ್ದೇಶಕ ಜಾಫರ್ ಪನಾಹಿ ರಹಸ್ಯವಾಗಿ ನಿರ್ಮಿಸಿ ಹೊರಜಗತ್ತಿನಲ್ಲಿ ಪ್ರದರ್ಶಿಸಿದ `ದಿಸ್ ಈಸ್ ನಾಟ್ ಎ ಫಿಲ್ಮ್' ಎಂಬ ಚಿತ್ರ.ಚಲನಚಿತ್ರಗಳ ನಿರ್ಮಾಣ, ಪ್ರದರ್ಶನ ಮತ್ತು ದಾಖಲೀಕರಣ ಎಂಬ ಪರಿಕಲ್ಪನೆಗಳು ಹಿಂದಿನ ಸಾಂಪ್ರದಾಯಿಕ ಅರ್ಥದಲ್ಲಿ ಉಳಿದಿಲ್ಲ. ಬದಲಿಗೆ ಬೃಹತ್ ಮಾರುಕಟ್ಟೆಯ ವಿಸ್ತರಣೆಯ ಅಂಗವಾಗಿ ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿಕೊಂಡಿವೆ. ನ್ಯಾಕ್ ಮೌಲೀಕರಣ, ಐಎಸ್‌ಒ ಪ್ರಮಾಣೀಕರಣದ ಹೆಸರಿನಲ್ಲಿ ಯುಜಿಸಿ ಅತ್ಯಂತ ಧಾರಾಳವಾಗಿ ಉಪಕರಣ ಗ್ರಾಂಟ್ ಅಡಿಯಲ್ಲಿ ತಾಲೂಕು ಮಟ್ಟದ ಎಲ್ಲಾ ಶಿಕ್ಷಣಸಂಸ್ಥೆಗಳಿಗೂ ಕಂಪ್ಯೂಟರ್, ಮತ್ತು ಪ್ರದರ್ಶಕ ಉಪಕರಣಗಳಿಂದ ಸಜ್ಜಾದ `ಆಡಿಯೋ ವಿಷುಯಲ್ ಸೆಂಟರ್'ಗಳನ್ನು ನಿರ್ಮಿಸಲು ಅನುದಾನ ನೀಡಿದೆ.

ಇದೆಲ್ಲವನ್ನೂ ಬಳಸಿಕೊಂಡು ಚಲನಚಿತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಬಹಳ ಸುಲಭವಾಗಿ `ಫಿಲ್ಮ್ ಕ್ಲಬ್'ಗಳನ್ನು ಪ್ರಾರಂಭಿಸಬಹುದಾದ ಸಾಧ್ಯತೆ ಹೆಚ್ಚಾಗಿದೆ. ಡಿವಿಡಿಗಳ ಜೊತೆ ಕಡಿಮೆ ಬೆಲೆಯ, ಉತ್ತಮ ಗುಣಮಟ್ಟದ ಡಿಜಿಟಲ್ ಪ್ರದರ್ಶಕ ಉಪಕರಣಗಳ ಲಭ್ಯತೆ ಚಿತ್ರಸಮಾಜಗಳ ಬಲವನ್ನು ಹೆಚ್ಚಿಸಿವೆ.ಅಡೆತಡೆಯಿಲ್ಲದ ವಿದ್ಯುತ್ ಸರಬರಾಜು ಹಾಗೂ ಹಗಲಿನಲ್ಲಿಯೂ ಕತ್ತಲಾಗಿಸಬಲ್ಲ ಸೂಕ್ತ ಆವರಣ ಸಿಕ್ಕರೆ ಸಾಕು ಇಂದು ಚಿತ್ರಸಮಾಜವೊಂದನ್ನು ಪ್ರಾರಂಭಿಸಬಹುದು. ಜಗತ್ತಿನ ಅತ್ಯುತ್ತಮ ಚಿತ್ರಗಳು, ಹಿಂದಿನ ಕಪ್ಪು ಬಿಳುಪು ಮತ್ತು ಕ್ಲಾಸಿಕ್ ಚಿತ್ರಗಳು ಡಿಜಿಟಲೈಸ್ ಆಗಿ (ಕೆಲವೊಮ್ಮೆ ವರ್ಣರೂಪಾಂತರಗೊಂಡು) ಸಬ್ ಟೈಟಲ್ ಫೈಲ್ ಗಳೊಂದಿಗೆ ಎಲ್ಲರಿಗೂ ಕೈಗೆಟುಕುವ ಬೆಲೆಗಳಲ್ಲಿ ದೊರಕುತ್ತಿವೆ.

ಕಳೆದೆರಡು ವರ್ಷಗಳಿಂದ ದಸರಾ ಚಿತ್ರೋತ್ಸವವನ್ನು ಜಂಟಿಯಾಗಿ ಆಯೋಜಿಸುತ್ತಿರುವ ಇಂದಿನ `ಮೈಸೂರು ಫಿಲ್ಮ್ ಸೊಸೈಟಿ'ಯ ಅನುಭವದೊಂದಿಗೆ ಹೇಳುವುದಾದರೆ, `ರಾಷ್ಟ್ರೀಯ ಮಟ್ಟದ ಗೋವಾ, ತಿರುವನಂತಪುರ, ಬೆಂಗಳೂರು ಚಿತ್ರೋತ್ಸವಗಳಲ್ಲಿ ಭಾಗವಹಿಸುತ್ತಿರುವ ಪ್ರೇಕ್ಷಕರ ಸಂಖ್ಯೆ ಹಾಗೂ ಉತ್ಸಾಹವನ್ನು ಮೈಸೂರಿನಲ್ಲೂ ಕಾಣಬಹುದಾಗಿದೆ'. ಇದು ಚಲನಚಿತ್ರ ಸಂಸ್ಕೃತಿ ಮತ್ತು ಸಹೃದಯತೆಯ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಬೆಳವಣಿಗೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry