ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಐವರು ಪಾರು

ಬೆಂಗಳೂರು: ಕಾವೇರಿ ಜಂಕ್ಷನ್ ಸಮೀಪ ಭಾನುವಾರ ಮಧ್ಯಾಹ್ನ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಒಳಗಿದ್ದ ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಐದು ಮಂದಿ ಕೂಡಲೇ ವಾಹನದಿಂದ ಕೆಳಗಿಳಿದು ಪ್ರಾಣ ಉಳಿಸಿಕೊಂಡರು.
ಬೊಮ್ಮನಹಳ್ಳಿಯ ಶ್ರೀನಿವಾಸ್ ರೆಡ್ಡಿ ಎಂಬುವರು, ಕುಟುಂಬ ಸದಸ್ಯರ ಜತೆ ಮಧ್ಯಾಹ್ನ 12.30ರ ಸುಮಾರಿಗೆ ಯಲಹಂಕಕ್ಕೆ ಹೋಗುತ್ತಿದ್ದರು. ಕಾವೇರಿ ಜಂಕ್ಷನ್ ಬಳಿ ಸಾಗುವಾಗ ಎಂಜಿನ್ನಿಂದ ಹೊಗೆ ಬರಲಾರಂಭಿಸಿದೆ. ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿದ ಶ್ರೀನಿವಾಸ್ರೆಡ್ಡಿ, ಸ್ಥಳೀಯರ ನೆರವಿನಿಂದ ಕುಟುಂಬ ಸದಸ್ಯರನ್ನು ವಾಹನದಿಂದ ಕೆಳಗಿಳಿಸಿದ್ದಾರೆ. ನಂತರ ಪೊಲೀಸ್ (100) ಹಾಗೂ ಅಗ್ನಿಶಾಮಕ ನಿಯಂತ್ರಣ ಕೊಠಡಿಗಳಿಗೆ (101) ಕರೆ ಮಾಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಎರಡು ವಾಹನಗಳಲ್ಲಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದರು. ‘ಎಂಜಿನ್ನಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.
‘ಸ್ನೇಹಿತರೆಲ್ಲ ಚಿತ್ರಮಂದಿರ ಸಮೀಪದ ಪೆಟ್ಟಿಗೆ ಅಂಗಡಿಯಲ್ಲಿ ಟೀ ಕುಡಿಯುತ್ತ ನಿಂತಿದ್ದೆವು. ವ್ಯಕ್ತಿಯೊಬ್ಬರು ನೆರವಿಗಾಗಿ ಕೂಗಿಕೊಳ್ಳುತ್ತಿರುವುದು ಕೇಳಿಸಿತು. ನೋಡಿದರೆ ಕಾರಿಗೆ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿತ್ತು. ಕೂಡಲೇ ಸ್ಥಳಕ್ಕೆ ಓಡಿ, ಒಳಗಿದ್ದವರನ್ನು ಹೊರಗೆ ಕರೆತಂದೆವು’ ಎಂದು ಸ್ಥಳೀಯ ನಿವಾಸಿ ಪವನ್ ಕುಮಾರ್ ತಿಳಿಸಿದರು.
ಘಟನೆ ಕಾರಣದಿಂದ ಪೊಲೀಸರು ಆ ಮಾರ್ಗದಲ್ಲಿ ಕೆಲ ಕಾಲ ಸಂಚಾರ ನಿರ್ಬಂಧಿಸಿದ್ದರು. ಈ ಸಂಬಂಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.