ಗುರುವಾರ , ಏಪ್ರಿಲ್ 15, 2021
21 °C

ಚಳವಳಿಗಾರರಿಗೆ ಚಾಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಷ್ಟ್ರಪತಿ ಪ್ರಣವ್ ಸಲಹೆ

ನವದೆಹಲಿ (ಪಿಟಿಐ/ಐಎಎನ್‌ಎಸ್):  `ಭ್ರಷ್ಟಾಚಾರದ ವಿರುದ್ಧ ಸಿಡಿದೇಳುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಪ್ರತಿಭಟನೆ ವ್ಯಾಧಿಯಾಗಬಾರದು. ಹಾಗಾದಾಗ ಇಡೀ ವ್ಯವಸ್ಥೆ ಹಳಿ ತಪ್ಪುತ್ತದೆ~. 66ನೇ ಸ್ವಾತಂತ್ರ್ಯ ದಿನದ ಮುನ್ನಾ ದಿನವಾದ ಮಂಗಳವಾರ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಬೀದಿ ಪ್ರತಿಭಟನೆಗಳ ವಿರುದ್ಧ ತರ್ಕಬದ್ಧವಾಗಿ ಮಾಡಿದ ಆರೋಪವಿದು.`ಭ್ರಷ್ಟಾಚಾರದ ಪಿಡುಗು ದೇಶದ ಸಾಮರ್ಥ್ಯವನ್ನು ಕುಂದಿಸುತ್ತಿದೆ. ಜನರ ಸಹನೆಗೂ ಮಿತಿ ಇದೆ. ಆದರೆ ಅವರ ಆಕ್ರೋಶಗಳು ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುವಂತಾಗಬಾರದು~ ಎಂದು ಭ್ರಷ್ಟಾಚಾರವನ್ನು ವಿರೋಧಿಸಿ ಅಣ್ಣಾ ಹಜಾರೆ ಹಾಗೂ ಬಾಬಾ ರಾಮ್ ದೇವ್ ಅವರು ನಡೆಸುತ್ತಿರುವ ಆಂದೋಲನಕ್ಕೆ ಪ್ರಣವ್ ಚಾಟು ಏಟು ಬೀಸಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್‌ನ ಮಹತ್ವವನ್ನು ವ್ಯಾಖ್ಯಾನಿಸಿದ `ದಾದಾ~, `ಸಂಸತ್ ಜನರ ಆತ್ಮ. ಹಕ್ಕು ಮತ್ತು ಕರ್ತವ್ಯಗಳ ನಿರಾಕರಣೆಯಿಂದ ಉಂಟಾಗುವ ಅಪಾಯಕ್ಕೆ ನಾವೇ ಹೊಣೆಯಾಗಬೇಕಾಗುತ್ತದೆ~ ಎಂದು ನಯವಾಗಿ ಎಚ್ಚರಿಸಿದರು.`ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ಸಂವಿಧಾನಕ್ಕೆ ಪ್ರತ್ಯಕ್ಷವಾದ ಅಡಿಪಾಯ. ಅದಕ್ಕೆ ಆತಂಕ ಎದುರಾದರೆ ನಮ್ಮ ಸಂವಿಧಾನದ ಆಶಯವೇ ಬುಡಮೇಲಾಗುತ್ತದೆ. ಹಾಗಾಗಿ ಈ ವ್ಯವಸ್ಥೆಗೆ ಧಕ್ಕೆ ತರುವುದು ಬೇಡ~ ಎಂದು ಮನವಿ ಮಾಡಿಕೊಂಡರು.ರಾಷ್ಟ್ರಪತಿಯಾದ ನಂತರ ಇದೇ ಮೊದಲ ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಣವ್, ಬಡತನ ನಿರ್ಮೂಲನೆ, ಶಿಕ್ಷಣ, ಉದ್ಯೋಗ, ಆರ್ಥಿಕತೆ, ಯುವಶಕ್ತಿಯ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು.`ಪ್ರಗತಿಯು ಕುಂಠಿತವಾದರೆ ಯುವಜನರ ಆಕ್ರೋಶ ಭುಗಿಲೇಳುತ್ತದೆ. ತಲೆಮಾರು ಹಾಗೂ ಚೈತನ್ಯದ ದೃಷ್ಟಿಯಿಂದ ತಾರುಣ್ಯಪೂರ್ಣ ದೇಶ ನಮ್ಮದಾಗುತ್ತಿದೆ. ಇದು ಅವಕಾಶ ಮಾತ್ರವಲ್ಲ, ಸವಾಲೂ ಹೌದು. ಯುವಜನರ ಜ್ಞಾನ ದಾಹ ಅವರ ಕೌಶಲವನ್ನು ಔನ್ನತ್ಯಕ್ಕೇರಿಸುತ್ತದೆ. ಯುವಶಕ್ತಿಗೆ ನೈತಿಕ ಬಲವಿದೆ. ಅವರಿಗೆ ಬದಲಾವಣೆ ಬೇಕಾಗಿದೆ. ಶಿಕ್ಷಣವು ಬೀಜವಾದರೆ, ಆರ್ಥಿಕತೆಯುಅದರ ಫಲ. ಉತ್ತಮ ಶಿಕ್ಷಣವು ಹಸಿವು ಹಾಗೂ ಬಡತನ ನಿರ್ಮೂಲನೆಗೆ ಮುನ್ನುಡಿಯಾಗುತ್ತದೆ~ ಎಂದರು.ಕರಾಳ ಹಿಂಸೆ: ಇತ್ತೀಚೆಗೆ ಅಸ್ಸಾಂನದಲ್ಲಿ ನಡೆದ ಹಿಂಸಾಚಾರ ಪ್ರಸ್ತಾಪಿಸುತ್ತಾ, `ಅಲ್ಪಸಂಖ್ಯಾತರಿಗೆ ಸಾಂತ್ವನ ಬೇಕಾಗಿದೆ. ಆಕ್ರಮಣದಿಂದ ಅವರನ್ನು ರಕ್ಷಿಸಬೇಕಾಗಿದೆ. ಹಿಂಸೆಯು ನಮ್ಮ ಆಯ್ಕೆಯಾಗಬಾರದು~ ಎಂದೂ ಕಿವಿಮಾತು ಹೇಳಿದರು.`ಶಾಂತಿ ಮಂತ್ರವು ನಮ್ಮ ಸಿದ್ಧಾಂತವಾಗಬೇಕು, ಪ್ರಗತಿಯು ನಮ್ಮ ಗುರಿಯಾಗಬೇಕು~ ಎಂದು ಘೋಷಿಸುತ್ತ ಪ್ರಣವ್ ಅವರು ಭಾಷಣ  ಪೂರ್ಣಗೊಳಿಸಿದರು. `ದ್ವೇಷ ಭಾವನೆ ಬಿಟ್ಟು ಎಲ್ಲರೂ ಒಟ್ಟಾಗಿ ದೇಶಕ್ಕಾಗಿ ದುಡಿಯೋಣ~ ಎಂದು ಕರೆ ನೀಡಿದರು.

ನಾನು  ಆಶಾವಾದಿ

`ನಾನು ನಿರಾಶಾವಾದಿಯಲ್ಲ. ಆಧುನಿಕ ಭಾರತವು ಅರ್ಧಕ್ಕಿಂತಲೂ ಹೆಚ್ಚು ತುಂಬಿದೆ ಎಂದು ಹೇಳುವಷ್ಟು ಆಶಾವಾದಿ. ಬ್ರಿಟಿಷರ ವಸಾಹತುಶಾಹಿ ಆಡಳಿತವು ಭಾರತವನ್ನು ಬಡ ದೇಶವನ್ನಾಗಿ ಮಾಡಿತ್ತು. ಜಾಗತಿಕ ಆರ್ಥಿಕ ಸಂಕಷ್ಟದ ನಡುವೆಯೂ, ನಾವು  ಪ್ರಗತಿಯ ಪಥದಲ್ಲಿದ್ದೇವೆ. ಆದರೆ ಬಡತನ ಹಾಗೂ ಹಸಿವು ನಿವಾರಣೆಯಾಗಬೇಕಾದರೆ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕಿದೆ~ ಎಂದು ಮುಖರ್ಜಿ ಅಭಿಪ್ರಾಯಪಟ್ಟರು.`ಎರಡು ದಶಕಗಳ ಆರ್ಥಿಕ ಪ್ರಗತಿ ಅದ್ಭುತ ಸಾಧನೆಯೇ ಸರಿ. ಇಷ್ಟಾದರೂ ನಾವು ಮಾಡಬೇಕಾಗಿರುವುದು ಸಾಕಷ್ಟಿದೆ. ಪೂರ್ವ ಭಾರತದಲ್ಲಿ ಹಸಿರು ಕ್ರಾಂತಿ ನಡೆಯಬೇಕಿದೆ. ಮಳೆ ಕೊರತೆಯಿಂದ ದೇಶದ ಸಾಕಷ್ಟು ಭಾಗದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಹಣದುಬ್ಬರ ಹಾಗೂ ಆಹಾರ ಪದಾರ್ಥಗಳ ಬೆಲೆಯು ಆತಂಕಕ್ಕೆ ಕಾರಣವಾಗಿದೆ~ ಎಂದು ಪ್ರಣವ್ ವಿಷಾದಿಸಿದರು.

ವಿಜೇತರಿಗೆ ಮೆಚ್ಚುಗೆ

ಆ.12ರಂದು ಮುಕ್ತಾಯವಾದ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಹಾಗೂ ವಿಜೇತರಾಗಿ ನಾಡಿಗೆ ಹೆಮ್ಮೆ ಮೂಡಿಸಿದ ಕ್ರೀಡಾಪಟುಗಳನ್ನು ರಾಷ್ಟ್ರಪತಿ ಅಭಿನಂದಿಸಿದರು.ನಾಲ್ಕು ವರ್ಷಗಳ ನಂತರ ರಯೊ ಡಿ ಜನೈರೊದಲ್ಲಿ ನಡೆಯಲಿರುವ ಈ ಮಹಾ ಕ್ರೀಡಾಮೇಳದಲ್ಲಿ ನಮ್ಮ ಕ್ರೀಡಾಪಟುಗಳು ಇನ್ನೂ ಹೆಚ್ಚು ಪದಕಗಳನ್ನು ಬಾಚಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.`ನಾವು ಗೆದ್ದಿರುವ ಪದಕಗಳ ಸಂಖ್ಯೆ ಹೆಚ್ಚೇನೂ ಇಲ್ಲದಿರಬಹುದು. ಆದರೆ ಕಳೆದ ಒಲಿಂಪಿಕ್ಸ್‌ಗೆ ಹೋಲಿಸಿದರೆ ಈ ಬಾರಿ ಗಣನೀಯ ಸುಧಾರಣೆಯಾಗಿದೆ~ ಎಂದು ಪ್ರಣವ್ ನುಡಿದರು.ಪದಕ ವಿಜೇತ ಕ್ರೀಡಾಪಟುಗಳನ್ನು ರೂಪಿಸುತ್ತಿರುವ ಸಶಸ್ತ್ರ ಪಡೆಗಳ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದರು. `ಸಶಸ್ತ್ರ ಪಡೆಗಳು ನಮಗೆ ಶಾಂತಿಯನ್ನು ಖಾತ್ರಿ ಪಡಿಸುವ ಜತೆಗೆ ಶ್ರೇಷ್ಠ ಕ್ರೀಡಾಪಟುಗಳನ್ನು ಕೊಡುಗೆ ನೀಡುತ್ತಿರುವುದು ಅತ್ಯಂತ ಸಂತಸದ ಸಂಗತಿ~ ಎಂದರು. 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.