ಚಳವಳಿಯಲ್ಲಿ ನ್ಯಾಷನಲ್ ಕಾಲೇಜ್‌ಗೂ ಪಾಲು

ಭಾನುವಾರ, ಏಪ್ರಿಲ್ 21, 2019
25 °C
ಸ್ವಾತಂತ್ರ್ಯದ ತೊರೆಗಳು 5

ಚಳವಳಿಯಲ್ಲಿ ನ್ಯಾಷನಲ್ ಕಾಲೇಜ್‌ಗೂ ಪಾಲು

Published:
Updated:

ವ್ಯಾಪಾರ ವಹಿವಾಟಿಗೆಂದು ಭಾರತಕ್ಕೆ ಬಂದ ಬ್ರಿಟಿಷ್ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಮಾರುವುದಕ್ಕಿಂತಲೂ ಇಲ್ಲಿನ ವಸ್ತುಗಳನ್ನು ಕೊಂಡೊಯ್ಯುವ ಉದ್ದೇಶದಿಂದ ಅನೇಕ ಗೋದಾಮುಗಳನ್ನು ತೆರೆದು, ಭಾರತದ ಮಸ್ಲಿನ್ ಬಟ್ಟೆ, ಮಸಾಲೆ ಪದಾರ್ಥಗಳನ್ನು ಖರೀದಿಸಿ ಕೂಡಿಡತೊಡಗಿದರು. ಆ ಸಂದರ್ಭದಲ್ಲಿ ಭಾರತ ಹಲವಾರು ರಾಜ ಮಹಾರಾಜರು ಹಾಗೂ ಪಾಳೆಗಾರರ ಆಳ್ವಿಕೆಯಲ್ಲಿತ್ತು. ಪರಸ್ಪರ ಸಾಮರಸ್ಯವಿರಲಿಲ್ಲ. ಆಗೀಗ ಭಾರತೀಯ ರಾಜರ ನಡುವೆ ಯುದ್ಧಗಳು ಸಾಮಾನ್ಯವಾಗಿ ಹೋಗಿದ್ದವು. ಇಂತಹ ಸನ್ನಿವೇಶವನ್ನು ಸದುಪಯೋಗ ಪಡಿಸಿಕೊಂಡ `ಈಸ್ಟ್ ಇಂಡಿಯಾ ಕಂಪನಿ' ದೇಸೀಯ ರಾಜರ ನಡುವೆ ಅನೇಕತೆ ಮೂಡಿಸಿ, ಅವರೆಲ್ಲಾ ತಮ್ಮ ಬಳಿಗೆ ಸಹಕಾರಕ್ಕಾಗಿ ಬರುವಂತೆ ಮಾಡಿಕೊಂಡಿತು. ಕೊನೆಗೆ ಇಡೀ ದೇಶವನ್ನು ತನ್ನ ಆಡಳಿತದ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬ್ರಿಟಿಷ್ ಸರ್ಕಾರ ಸಫಲವಾಯಿತು.ತಮ್ಮ ಸಂಸ್ಕೃತಿಯನ್ನು ಭರತಖಂಡದಲ್ಲಿ ಹರಡಲು ಆರಂಭಿಸಿದ ಬಿಳಿಯರು ಕ್ರಮೇಣ ಸ್ಥಳೀಯ ರೀತಿ ರಿವಾಜುಗಳನ್ನು ಕಡೆಗಣಿಸತೊಡಗಿದರು. ಇಲ್ಲಿನ ಬೇಸಾಯ, ಗುಡಿ ಕೈಗಾರಿಕೆ, ಭಾಷೆ ಮೊದಲಾದವುಗಳ ಮೇಲೆ ಬ್ರಿಟಿಷ್ ಆಡಳಿತಗಾರರು ನಿಧಾನವಾಗಿ ಪರೋಕ್ಷವಾಗಿ ದಾಳಿ ಮಾಡಲು ಪ್ರಾರಂಭಿಸಿದರು. 20ನೆಯ ಶತಮಾನದ ಆರಂಭಕ್ಕೆ ಭಾರತೀಯರು ಜಾಗೃತರಾಗಿ ಬಿಳಿಯರಿಂದ ಭಾರತವನ್ನು ಬಿಡಿಸುವ ಪ್ರಯತ್ನ ಆರಂಭಿಸಿದಾಗ ಎಲ್ಲಾ ವರ್ಗಗಳ ಜನರೂ ಇದಕ್ಕೆ ಕೈಜೋಡಿಸಿದರು. ಭಾರತೀಯರನ್ನು ಎಚ್ಚರಿಸುವ ಹಾಗೂ ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸುವ ಸಲುವಾಗಿ ಅನೇಕ ಸಾಮಾಜಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು. ಅಂತಹ ಸಾಮಾಜಿಕ ಸಂಸ್ಥೆಗಳ ಒತ್ತಾಸೆಯಿಂದಾಗಿ ಸ್ಥಳೀಯ ಮಟ್ಟದಲ್ಲಿ ನಾಲ್ಕಾರು ಸಂಘಗಳು ತಲೆಯೆತ್ತಿದವು. ಥಿಯೊಸಾಫಿಕಲ್ ಸೊಸೈಟಿಯ ವಿಚಾರಧಾರೆಯನ್ನು ಒಪ್ಪಿಕೊಂಡ ಕೆಲವರು ಬೆಂಗಳೂರಿನ ದೊಡ್ಡಣ್ಣ ಶೆಟ್ಟಿ ಸಂಸ್ಥೆಗಳ ಆವರಣದಲ್ಲಿ ದೇಶೀಯ ಶಾಲೆಯೊಂದನ್ನು 1917ರಲ್ಲಿ ಪ್ರಾರಂಭಿಸಿದರು. ನಂತರ ಅದೇ ಶಾಲೆ ಬಸವನಗುಡಿ ಪ್ರದೇಶದಲ್ಲಿ ನ್ಯಾಷನಲ್ ಹೈಸ್ಕೂಲ್ ಆಗಿ ಅಭಿವೃದ್ಧಿಗೊಂಡು ಈಗ ಅದೊಂದು ಪ್ರತಿಷ್ಠಿತ ಶಿಕ್ಷಣ ಕೇಂದ್ರವಾಗಿ ಬೆಳೆದು ನಿಂತಿದೆ. ಸ್ವಾತಂತ್ರ್ಯ ಸಮರದ ಒಂದು ಅಂಗವಾಗಿ ಆರಂಭಗೊಂಡ ನ್ಯಾಷನಲ್ ಹೈಸ್ಕೂಲ್ ಹಾಗೂ ಅದರ ಅಕ್ಕಪಕ್ಕದ ಸ್ಥಳಗಳು ಸ್ವಾತಂತ್ರ್ಯ ಹೋರಾಟಕ್ಕೆ ನಾನಾ ರೀತಿ ಸಹಕಾರ ನೀಡಿದವು. ಎನ್.ಎಸ್. ಹರ್ಡೀಕರ್ ಅವರು ಹಿಂದೂಸ್ತಾನಿ ಸೇವಾದಳದ ಶಾಖೆಯನ್ನು ನ್ಯಾಷನಲ್ ಹೈಸ್ಕೂಲ್‌ನಲ್ಲಿ 1923ರಲ್ಲಿ ಆರಂಭಿಸಿದರು. ಇದರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಮೂಡಿಸಲು ಅನುಕೂಲವಾಯಿತು. ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳಿಗೆ ಈ ಶಾಲೆಯಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಕ್ಕಿತು.ಬೆಂಗಳೂರು ನ್ಯಾಷನಲ್ ಕಾಲೇಜಿನ ಸೇವಾದಳದ ಕಾರ್ಯಕರ್ತರು ಬಾಪೂಜಿಯವರು ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಾವೇಶದಲ್ಲಿ (ಬೆಳಗಾವಿ, 1924) ಸ್ವಯಂ ಸೇವಕರಾಗಿ ಭಾಗವಹಿಸಿದ್ದರು. ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಗಾಂಧೀಜಿಯವರು ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ದಕ್ಷಿಣ ಭಾರತ ಖಾದಿ ಪ್ರದರ್ಶನವನ್ನು ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿಯೇ ಏರ್ಪಡಿಸಲಾಗಿದ್ದು, ಅದನ್ನು ಬಾಪೂಜಿಯವರೇ ಉದ್ಘಾಟಿಸಿದರು. ಖಾದಿ ಪ್ರದರ್ಶನ ಸಮಯದಲ್ಲಿ ವಿದ್ಯಾರ್ಥಿಗಳು ಸಂಗ್ರಹಿಸಿದ್ದ 1,200 ರೂಪಾಯಿ ದೇಣಿಗೆಯನ್ನು ಬಳಸಿಕೊಂಡು ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿಯೇ ನಿರ್ಮಿಸಲಾದ ವ್ಯಾಯಾಮ ಶಾಲಾ ಕಟ್ಟಡದ ಉದ್ಘಾಟನೆಯನ್ನು ಮಹಾತ್ಮ ಗಾಂಧಿಯವರೇ ನೆರವೇರಿಸಿದರು.ಬೆಂಗಳೂರಿನ ಸ್ವಾತಂತ್ರ್ಯ ಚಳವಳಿಯ ಅನೇಕ ಸಭೆ ಸಮಾರಂಭಗಳಿಗೆ ನ್ಯಾಷನಲ್ ಹೈಸ್ಕೂಲ್ ಆವರಣ ಯಾವಾಗಲೂ ಬಳಕೆಯಾಗುತ್ತಿತ್ತು.  ಹೈಸ್ಕೂಲಿನ ಮುಂಭಾಗದಲ್ಲಿದ್ದ ಚೌಕ ಸದಾ ಚಟುವಟಿಕೆಯ ತಾಣವಾಗಿತ್ತು. ಈ ಕಾಲೇಜಿನ ವಿದ್ಯಾರ್ಥಿಯಾಗಿದ್ದು ನಂತರ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಡಾ. ಎಚ್. ನರಸಿಂಹಯ್ಯನವರು ಮಹಾತ್ಮರೊಂದಿಗೆ ಮಾತಾನಾಡಿದ್ದು, ಅವರಿಬ್ಬರ ಛಾಯಾಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಈಗ ಇತಿಹಾಸ.ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರೀಯವಾದಿ ಚಿಂತನೆಗಳಿಗೆ ಓಗೊಟ್ಟು ಭಾರತೀಯರನ್ನು ಜಾಗೃತ ಮಾಡುವ ಸಂಘ ಸಂಸ್ಥೆಗಳಲ್ಲಿ ಬೆಂಗಳೂರು ನ್ಯಾಷನಲ್ ಹೈಸ್ಕೂಲ್‌ಗೂ ಪ್ರಮುಖ ಸ್ಥಾನವಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry