ಚಳಿಗಾಲದ ಉಡುಪು, ರೂಪದರ್ಶಿಯರ ಹುರುಪು

7

ಚಳಿಗಾಲದ ಉಡುಪು, ರೂಪದರ್ಶಿಯರ ಹುರುಪು

Published:
Updated:

ಹೊರಗೆ ಮೋಡ ಕವಿದ ವಾತಾವರಣ. ಹೋಟೆಲಿನ ಹವಾನಿಯಂತ್ರಿತ ಕೊಠಡಿಯೊಳಗೆ ಮಂದ ಬೆಳಕು. ಒಮ್ಮೆಲೆ ಕತ್ತಲು ಆವರಿಸಿತು. ಎಲ್ಲರ ಕಣ್ಣು ವೇದಿಕೆ ಮೇಲೆ. ಬೆಳಕು ಮೂಡಿದ ಮರುಕ್ಷಣವೇ ರ್‍ಯಾಂಪ್‌ ಮೇಲೆ ರೂಪದರ್ಶಿಯರು ಹೆಜ್ಜೆಹಾಕತೊಡಗಿದರು. ಕಪ್ಪು, ಕೆಂಪು, ಹಳದಿ, ಹಸಿರು, ತಿಳಿನೀಲಿ ಹೀಗೆ ಬಣ್ಣ ಬಣ್ಣದ ಉಡುಪುಗಳನ್ನು ಧರಿಸಿದ ಇವರು ಕ್ಯಾಟ್‌ವಾಕ್‌ ಮಾಡಿದ ನಂತರ ತಮ್ಮತಮ್ಮ ಪರಿಚಯ ಮಾಡಿಕೊಂಡರು.ಲೀ ಮೆರಿಡಿಯನ್‌ ಹೋಟೆಲ್‌ನಲ್ಲಿ ಮ್ಯಾಕ್ಸ್‌ ಕಂಪೆನಿ ಡ್ರೀಮ್‌ ಮರ್ಚೆಂಟ್‌ ಸಹಯೋಗದಲ್ಲಿ ಆಯೋಜಿಸಿದ್ದ ಫ್ಯಾಷನ್‌ ಶೋನ ಝಲಕ್‌ಗಳಿವು. ಅಂದಹಾಗೆ ‘ಮ್ಯಾಕ್ಸ್‌ ಮಿಸ್‌ ಬೆಂಗಳೂರು 2013’ ಫ್ಯಾಷನ್‌ ಶೋನ ಗ್ರಾಂಡ್‌ ಫಿನಾಲೆಗೆ ಆಯ್ಕೆಯಾದ 17 ಮಂದಿಯನ್ನು ಪರಿಚಯಿಸಲು ಆಯೋಜಿಸಿದ್ದ ಶೋ ಇದಾಗಿತ್ತು.ಎಲ್ಲಾ ರೂಪದರ್ಶಿಯರು ಚಳಿಗಾಲದ ಉಡುಪುಗಳನ್ನು ಧರಿಸಿ ಗ್ರಾಂಡ್‌ ಫಿನಾಲೆಯ ಪೂರ್ವಭಾವಿ ಶೋಗೆ ರಂಗುತುಂಬಿದರು. ಮೊದಲು ಬಂದ ಮೂವರು ರೂಪದರ್ಶಿಯರು ಪಾಶ್ಚಾತ್ಯ ಉಡುಪು ಧರಿಸಿದ್ದರು. ಹೈಹೀಲ್ಸ್‌ ಚಪ್ಪಲಿ ಹಾಕಿದ್ದ ಇವರು ಬಗೆಬಗೆಯ ಕಿವಿಯ ಒಡವೆ, ಸರಗಳಿಂದ ಗಮನಸೆಳೆದರು.ಆಧುನಿಕ ವಸ್ತ್ರಕ್ಕೆ ಬುಡಕಟ್ಟು ಸ್ಪರ್ಶ ನೀಡಲಾಗಿತ್ತು. ಹಾಗೂ ಚೂಡಿದಾರ್‌ ಮತ್ತು ಕುರ್ತಾ ಧರಿಸಿದ್ದ ರೂಪದರ್ಶಿಯರದ್ದು ಮತ್ತೊಂದು ಆಕರ್ಷಕ ನಡಿಗೆ. ತುರುಬಿಗೊಂದು ವಸ್ತ್ರ ಸುತ್ತಿಕೊಂಡು ಗೇಣುದ್ದದ ಮಣಿಹಾರವನ್ನು ಧರಿಸಿದ ಇಬ್ಬರು ರೂಪರ್ಶಿಯರು ಬುಡಕಟ್ಟು ಜನಾಂಗಗಳ ವಿನ್ಯಾಸದ ಉಡುಪಿನಲ್ಲಿ ಗಮನ ಸೆಳೆದರು.ಆಯ್ಕೆಯಾದ ಬಹುತೇಕ ರೂಪದರ್ಶಿಯರು ವಿದ್ಯಾರ್ಥಿಗಳಾಗಿದ್ದು ವಿಶೇಷವಾಗಿತ್ತು. ಕೆಲವರಿಗೆ ಮೊದಲ ನಡಿಗೆಯ ಅನುಭವ.

‘ಆರ್‌.ವಿ. ಕಾಲೇಜಿನಲ್ಲಿ ಆರ್ಕಿಟೆಕ್ಟ್‌ ಪದವಿ ಆಗಿದೆ. ಮಾಡೆಲಿಂಗ್‌ ನನ್ನ ಕನಸು. ಹಾಗಾಗಿ ಇಲ್ಲಿ ಭಾಗವಹಿಸಿದೆ. ಮೊದಲ ಬಾರಿ ಇಂಥ ದೊಡ್ಡ ವೇದಿಕೆಯಲ್ಲಿ ಅವಕಾಶ ಸಿಕ್ಕಿದೆ.ಫೈನಲ್‌ನಲ್ಲಿ ಗೆಲ್ಲುವ ಆತ್ಮವಿಶ್ವಾಸವಿದೆ. ಇವತ್ತಿನ ಶೋ ಬಗ್ಗೆ ಹೇಳುವುದಾದರೆ ಬುಡಕಟ್ಟು ಪ್ರಿಂಟ್ಸ್‌ ಇರುವ ಚಳಿಗಾಲದ ಸಂಗ್ರಹ ಧರಿಸಿದ್ದೇನೆ. ಮ್ಯಾಕ್ಸ್‌ನ ಉಡುಪುಗಳು ಕಾಲೇಜಿಗೂ, ಪಾರ್ಟಿಗಳಿಗೂ ಹಾಕಿಕೊಂಡು ಹೋಗಲು ಯೋಗ್ಯವಾಗಿವೆ. ಆಯ್ಕೆಯೂ ಬಹಳಷ್ಟಿದೆ. ಎರಡು ವಾರದಿಂದ ಅಭ್ಯಾಸ ಮಾಡಿದ್ದೇವೆ’ ಎಂದು ಶೋ ಅನುಭವ ಹಂಚಿಕೊಂಡರು ರೂಪದರ್ಶಿ ನಿಧಿ.‘ಪ್ಲೇ ಆನ್‌ ಥೀಮ್‌ನಡಿ ವಿನ್ಯಾಸಗಳನ್ನು ಮಾಡಲಾಗಿದ್ದು, ಚಳಿಗಾಲದ ಸಂಗ್ರಹಗಳನ್ನು ಕಾಣಬಹುದು. ಪ್ರತಿದಿನ ಫ್ಯಾಷನ್‌ ಟ್ರೆಂಡ್‌ ಬದಲಾಗುತ್ತಿರುತ್ತದೆ. ಇತ್ತೀಚಿನ ಅಂತರರಾಷ್ಟ್ರೀಯ ಟ್ರೆಂಡ್‌ಗೆ ಅನುಗುಣವಾಗಿ ವಸ್ತ್ರಗಳ ವಿನ್ಯಾಸ ಮಾಡಲಾಗಿದೆ. ಇದೇ 21ರಂದು ನಡೆಯುವ ಗ್ರಾಂಡ್‌ ಫಿನಾಲೆಗೆ ಹಬ್ಬಗಳ ಸಂಗ್ರಹದ ಉಡುಪುಗಳ ವಿನ್ಯಾಸ ಇರುತ್ತದೆ’ ಎಂಬುದು ಮುಖ್ಯ ವಿನ್ಯಾಸಕಿ ಕಾಮಾಕ್ಷಿ ಕೌಲ್‌ ಅಭಿಮತ.ಈ ‘ಮ್ಯಾಕ್ಸ್‌ ಮಿಸ್‌ ಬೆಂಗಳೂರು’ ಸ್ಪರ್ಧೆಗೆ ಮ್ಯಾಕ್ಸ್ ಮಳಿಗೆಗಳಲ್ಲಿ ನೂರಾರು ರೂಪದರ್ಶಿಯರು ನೋಂದಣಿ ಮಾಡಿಸಿದ್ದರು. ಅವರಲ್ಲಿ ಅಂತಿಮವಾಗಿ 17 ಮಂದಿ ಆಯ್ಕೆಯಾಗಿದ್ದಾರೆ. ಇದಕ್ಕಾಗಿ ನಗರದ ಹಲವು ಮಾಲ್‌ಗಳು, ಕಾಲೇಜ್‌ಗಳಲ್ಲಿ ಆಡಿಷನ್ ಮಾಡಲಾಗಿದೆ. ಸೆ.21ರಂದು ಕ್ರೌನ್‌ ಪ್ಲಾಜಾದಲ್ಲಿ ಅಂತಿಮ ಸ್ಪರ್ಧೆ ನಡೆಯಲಿದೆ.

ಚಿತ್ರಗಳು: ಸವಿತಾ ಬಿ.ಆರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry