ಗುರುವಾರ , ಜನವರಿ 23, 2020
28 °C
ಮಾನವೀಯತೆ ಮರೆತ ಬಂಧುಗಳು, ಚಿಕಿತ್ಸೆಯೂ ಅಲಭ್ಯ

ಚಳಿ ಗಾಳಿಗೆ ಮೈಯೊಡ್ಡಿದ ಹಿರಿಯಜೀವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳಿ ಗಾಳಿಗೆ ಮೈಯೊಡ್ಡಿದ ಹಿರಿಯಜೀವ

ಕುಷ್ಟಗಿ: ಅದೊಂದು ಬಾಳ ಮುಸ್ಸಂಜೆ­ಯಲ್ಲಿರುವ ದಿಕ್ಕಿಲ್ಲದ ಹಿರಿ ಜೀವ. ಕೈಕಾಲುಗಳಿಗೆ ಬೊಕ್ಕೆಗಳಾಗಿ ಕೀವು ತುಂಬಿದೆ. ನೊಣಗಳು ದಾಳಿ ಇಡುತ್ತಿವೆ. ಕೈಕಾಲುಗಳಲ್ಲಿ ಶಕ್ತಿ ಇಲ್ಲ. ತೆವಳುತ್ತಲೇ ಹೋಗಬೇಕು. ಯಾರಾದರೂ ಕೊಟ್ಟಿದ್ದ­ರಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕು. ಹಗಲು ಹಂದಿ, ನಾಯಿಗಳ ಕಾಟ, ರಾತ್ರಿ ಕೊರೆವ ಚಳಿಯ ಜೊತೆಗೆ ಸೊಳ್ಳೆಗಳ ಕಾಟ.ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಮುಖ್ಯದ್ವಾರದಲ್ಲೇ 15 ದಿನಗ­ಳಿಂದ ಠಿಕಾಣಿ ಹೂಡಿರುವ ತಾಲ್ಲೂ­ಕಿನ ಯಲಬುಣಚಿ ಗ್ರಾಮದ 70 ವರ್ಷದ ಭೀಮಪ್ಪ ಮಟ್ಟೆಪ್ಪನವರ ಕರುಣಾಜನಕ ಕಥೆ ಇದು.ಚಿಕಿತ್ಸೆಗಾಗಿ ಕರೆತಂದ ತಮ್ಮ ಹನು­ಮಪ್ಪ ಆಸ್ಪತ್ರೆ ಬಳಿ ಬಿಟ್ಟು ಹೋಗಿದ್ದು ಮರಳಿ ಬಂದಿಲ್ಲ. ಇತ್ತ ಆಸ್ಪತ್ರೆಯ ಒಳಗೆ ಈತನನ್ನು ಯಾರೂ ಸೇರಿಸಿಕೊಂಡಿಲ್ಲ. ಬಿಸಿಲು, ಗಾಳಿ, ಚಳಿಗೆ ಮೈಯೊಡ್ಡಿರುವ ಇವರು ಕಣ್ಣೀರಿಡುತ್ತಿರುವ ದೃಶ್ಯ ಎಂಥವರ ಮನಕರಗುವಂತಿದೆ.ಹೊಲ ಮನೆ ಇಲ್ಲದ ಇವರು ಕೆಲ ವರ್ಷಗಳ ಹಿಂದೆಯೇ ಪತ್ನಿಯನ್ನು ಕಳೆದುಕೊಂಡಿದ್ದಾರೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಮದುವೆಯಾ­ಗಿದ್ದಾರೆ. ಭೀಮಪ್ಪ ಅನಾರೋಗ್ಯಕ್ಕೀಡಾ­ಗಿದ್ದು ಕಷ್ಟದ ಕಾಲದಲ್ಲಿ ಯಾರ ನೆರವೂ ಇಲ್ಲದೆ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.ಆಸ್ಪತ್ರೆಯ ಅಂಗಳದಲ್ಲಿಯೇ ಹಗಲುರಾತ್ರಿ ಕಳೆಯುವ ಭೀಮಪ್ಪನ ಕಷ್ಟ ನೋಡಲಾರದ ಜನ ಒಂದಷ್ಟು ಕಾಸು, ಅನ್ನ ನೀಡುತ್ತಿದ್ದು ಅದರಿಂದಲೇ ಜೀವ ಹಿಡಿದುಕೊಂಡಿದ್ದಾರೆ. ಪರಿಸ್ಥಿತಿ ಕುರಿತು ಮಾತನಾಡಿಸಿದಾಗ, ‘ಯಾರರ ಪುಣ್ಯಾತ್ಮರು ಹೊಟ್ಟಿಗೆ ಕೊಡ್ತಾರಿ, ಇಲ್ಲೇ ಬಯಲಿನಲ್ಲೇ ಬಿದ್ಕೊಂತೀನ್ರಿ, ಮೈಯಾಗ ಕಸುವಿದ್ದಾಗ ಯಲಬುಣಚಿ ದೇಸಾಯಿಯವರ ಮನೆಯಲ್ಲಿ ದುಡ್ದೆ, ಈಗ ನನ್ನವರಂತಾ ಯಾರೂ ಇಲ್ರಿ, ದವಾಖಾನಿಗೆ ತಂದು ಬಿಟ್ಟುಹೋದ ತಮ್ಮಾ ಹೊಳ್ಳಿಬಂದಿಲ್ರಿ, ಫೋನ ಮಾಡಿಸೀದ್ರ ಮಾತಾಡಂಗಿಲ್ರಿ. ಎಲ್ಲ ನನ್ನ ಹಣೆಬಾರಿ ಯಪ್ಪಾ’ ಎಂದು ಗೋಳು ತೋಡಿಕೊಂಡರು.‘ಎರಡು ವಾರಗಳಿಂದ ಆಸ್ಪತ್ರೆ ಮುಂದೆ ಮಲಗುತ್ತಿದ್ದರೂ ಯಾರೂ ನೋಡುತ್ತಿಲ್ಲ. ಆಸ್ಪತ್ರೆ ಒಳಗೆ ಹೋಗಬೇಕೆಂದರೆ ಸಿಬ್ಬಂದಿ ವೈದ್ಯರು ಇಲ್ಲ ಹೋಗು ಎಂದು ಹೇಳುತ್ತಾರೆ’ ಎಂದು ಭೀಮಪ್ಪ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಪ್ರತಿಕ್ರಿಯಿಸಿ (+)