ಸೋಮವಾರ, ಮೇ 17, 2021
21 °C

ಚಳ್ಳಕೆರೆ: ಕುಡಿಯುವ ನೀರಿಗೂ ತತ್ವಾರ; ಇತ್ತ ತಲೆಹಾಕದ ಜನಪ್ರತಿನಿಧಿಗಳು

ಪ್ರಜಾವಾಣಿ ವಾರ್ತೆ/ಜಡೇಕುಂಟೆ ಮಂಜುನಾಥ್ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ತಾಲ್ಲೂಕಿನ್ಲ್ಲಲಿ ಬಾವಿಗಳು ಬತ್ತಿದೆ. ಅಂತರ್ಜಲ ಕುಸಿದಿದ್ದು, ಜನ ಕುಡಿಯುವ ನೀರಿಗೆ ತತ್ವಾರಪಡುವ ಸ್ಥಿತಿ ಉಂಟಾಗಿದೆ.ಕುಡಿಯುವ ನೀರು ಹಾಗೂ ನೀರಾವರಿ ಜಮೀನುಗಳಿಗಾಗಿಯೇ ಹಿರಿಯರು ಬಾವಿಗಳನ್ನು ತೋಡಿ ಮಳೆಗಾಲದಲ್ಲಿ ಬಿದ್ದ ಮಳೆ ನೀರು ಹಾಗೂ ಅಂತರ್ಜಲದ ಒರತೆಯಿಂದಲೇ ನೀರನ್ನು ಮೇಲಕ್ಕೆತ್ತಿ  ಬದುಕು ಕಂಡುಕೊಂಡಿದ್ದ ಕಾಲವೊಂದಿತ್ತು.ಸುಮಾರು ವರ್ಷಗಳ ಹಿಂದೆ ಯಾವುದೇ ಯಂತ್ರಗಳ ಸಹಾಯ ಇಲ್ಲದೇ ನೂರಾರು ಅಡಿ ಆಳದಷ್ಟು ಬಾವಿಗಳನ್ನು ತೋಡಿ ಅಂತರ್ಜಲದಿಂದ ನೀರನ್ನು ಸಂಗ್ರಹಿಸುವ ಕಸರತ್ತನ್ನು ನಮ್ಮ ಹಿರಿಯರು ಮಾಡಿ ಹೋಗಿದ್ದಾರೆ. ಅಂದಿನ ಕಾಲಕ್ಕೆ ಇಂತಹ ತೋಡಿದ ಬಾವಿಗಳೇ ರೈತರ ಜೀವಾಳವಾಗಿದ್ದವು. ಎಲ್ಲಾ ಕಾಲಕ್ಕೂ ಜನರು ಇಂತಹ ಬಾವಿಗಳನ್ನೇ ಅವಲಂಬಿಸಿದ್ದರು. ಕಾಲ ಬದಲಾದಂತೆ ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬಂದ ಪರಿಣಾಮ ಬೋರ್‌ವೆಲ್ ಕೊರೆಸಿ ಪಂಪ್‌ಸೆಟ್‌ಗಳಲ್ಲಿ ನೀರನ್ನು ಅಂತರ್ಜಲದಿಂದ ಮೇಲಕ್ಕೆತ್ತುವ ಪದ್ದತಿ ಬಂದಿತು. ಇದಕ್ಕೂ ಮುಂಚೆ ಹಿರಿ ತಲೆಮಾರಿನವರು ಮೈಯಲ್ಲಾ ಕೆಸರಾಗಿಸಿಕೊಂಡು ತೋಡುತ್ತಿದ್ದ ಬಾವಿಗಳಲ್ಲಿ ಇಂದು ಒಂದು ಹನಿ ನೀರೂ ಕಾಣದ ಪರಿಸ್ಥಿತಿ ತಲೆದೋರಿದೆ.ಚಳ್ಳಕೆರೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಇರುವ ಪಾರಂಪರಿಕ ತೋಡು ಬಾವಿಗಳು ನೀರಿಲ್ಲದೇ ಒಣಗುತ್ತಿದ್ದರೆ, ಇತ್ತ ಬೋರ್‌ವೆಲ್ ಕೊರೆಸಿ ಹಾಕಿದ ಪಂಪ್‌ಸೆಟ್‌ಗಳಲ್ಲಿಯೂ ನೀರು ಬರುತ್ತಿಲ್ಲ. ನೀರಾವರಿ ಜಮೀನುಗಳಿಗೆ ಒತ್ತಟ್ಟಿಗಿರಲಿ ಕುಡಿಯುವ ನೀರಿಗೂ ಇಂದು ಬಹುತೇಕ ಹಳ್ಳಿಗಳಲ್ಲಿ ತತ್ವಾರ ಪಡುವಂತಾಗಿದೆ.ಬಂದ ಬೆಳೆ ಉಳಿಸಿಕೊಳ್ಳಲು ಕಂಡಕಂಡಲ್ಲಿ ಬೋರ್ ಕೊರೆಸಿದರೆ ನೀರಿನ ಅಂಶವೇ ಕಾಣಸಿಗುತ್ತಿಲ್ಲ. ಮೊದಲಾದರೆ, ನೂರು, ಇನ್ನೂರು ಅಡಿಗಳಷ್ಟು ಬೋರ್ ಕೊರೆಸಿದರೆ ಸಾಕು 2, 3 ಇಂಚು ನೀರು ಬೀಳುತ್ತಿತ್ತು. ಪ್ರಸ್ತುತ 400, 500 ಅಡಿ ಕೊರೆಸಿದರೂ ಎರಡಿಂಚು ನೀರು ಸಿಗುತ್ತಿಲ್ಲ ಎಂದು ರೈತರು ನೋವು ತೋಡಿಕೊಳ್ಳುತ್ತಾರೆ.ಯಾವುದೇ ನೀರಾವರಿ ಸೌಲಭ್ಯ ಇಲ್ಲದಿದ್ದರೂ, ಮಳೆಯನ್ನು ನಂಬಿ ನಡೆಸುತ್ತಿದ್ದ ಬೇಸಾಯ ಪದ್ದತಿಯಲ್ಲಿ ಒಣ ಭೂಮಿಯಲ್ಲಿ ಪ್ರಧಾನ ಬೆಳೆಯಾಗಿ ಶೇಂಗಾ ಬೆಳೆಯುತ್ತಿದ್ದ ರೈತರು ಇತ್ತೀಚೆಗೆ ಬೋರ್‌ವೆಲ್ ಕೊರೆಸಿ ಸ್ವಲ್ಪಮಟ್ಟಿಗೆ ತೋಟಗಾರಿಕೆ ಬೆಳೆಯತ್ತ ಗಮನಹರಿಸುತ್ತಿದ್ದಾರೆ.ಇದರಿಂದಾಗಿಯೇ ಕೆಲವು ಕಡೆ ದಾಳಿಂಬೆ, ಪಪ್ಪಾಯಿ, ಸಪೋಟಾ, ಹೆಬ್ಬೇವು ಬೆಳೆಗಳಿಗೆ ಮೊರೆಹೋಗಿದ್ದಾರೆ. ಮಳೆ ಇಲ್ಲದೇ ಪಂಪ್‌ಸೆಟ್‌ಗಳಲ್ಲಿ ನೀರಿಲ್ಲ. ಕನಿಷ್ಟ 5, 6 ಬೋರ್‌ವೆಲ್ ಕೊರೆಸಿದರೂ ಒಂದಿಚೂ ನೀರು ಸಹ ಬರುತ್ತಿಲ್ಲ. ದಿನಾಲೂ ಮುಗಿಲ ಕಡೆಗೆ ಕತ್ತೆತ್ತಿ ನೋಡುವುದೇ ಕೆಲಸವಾಗಿದೆ ಎನ್ನುತ್ತಾರೆ ನಾಯಕನಹಟ್ಟಿ ಹೋಬಳಿ ಮಲ್ಲೂರಹಟ್ಟಿಯ ದಾಳಿಂಬೆ ಬೆಳೆಯುವ ರೈತ ಅಶ್ವತ್ಥ್ ನಾಯಕ.   ಐದಾರು ವರ್ಷಗಳಿಂದ ಮುಂಗಾರು ಮಳೆ ಸೇರಿದಂತೆ ಕಾಲಕಾಲಕ್ಕೆ ಮಳೆ ಬಾರದ ಪರಿಣಾಮ ತಾಲ್ಲೂಕಿನಾದ್ಯಂತ ಅಂತರ್ಜಲ ಮಟ್ಟ ಬಹುತೇಕ ಕುಸಿದು ಹೋಗಿದೆ. ಗೋ ಕಟ್ಟೆ, ಕೆರೆಗಳಲ್ಲಿ ಬಿರುಕು ಬಿಟ್ಟ ಒಣ ಭೂಮಿ ಕಾಣಸಿಗುತ್ತದೆ.ಸರ್ಕಾರ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ, ಕೆರೆ ಹೂಳೆತ್ತುವಿಕೆ, ಗೋ ಕಟ್ಟೆಗಳ ಹೂಳೆತ್ತುವಿಕೆ ಕಾಮಗಾರಿಗಳನ್ನು ಮಾಡಿದರೂ ಮಳೆ ಇಲ್ಲದೇ ಇವೆಲ್ಲಾ ಬಣಗುತ್ತಿವೆ. ಹಳ್ಳಿಗರು ಜಮೀನುಗಳಲ್ಲಿ ಕೆಲಸ ಮಾಡುವಾಗ ತಮ್ಮ ಜಮೀನುಗಳಲ್ಲಿಯೇ ನೀರಿನ ಚಿಲುಮೆಗಳನ್ನು ತೋಡಿಕೊಂಡು ನೀರು ಕುಡಿಯುತ್ತಿದ್ದ ಕಾಲ ಈಗ ಇಲ್ಲ ಎಂಬ ಮಾತು ಹಿರಿ ತಲೆಮಾರಿನವರಿಂದ ಕೇಳಿಬರುತ್ತಿದೆ.ಒಂದೆಡೆ ತೋಡು ಬಾವಿಗಳು ಬತ್ತಿ ಹೋಗಿವೆ, ಪಂಪ್‌ಸೆಟ್‌ಗಳಲ್ಲಿ ನೀರಿಲ್ಲ. ಎಲ್ಲವೂ ಬಣಗುತ್ತಿರುವ ಸಂಕಷ್ಟದ ದಿನಗಳಲ್ಲಿಯೂ ಪ್ರಕೃತಿಯನ್ನು ನಾಶ ಮಾಡುವ ನದಿಪಾತ್ರದ ಮರಳನ್ನು ಲೂಟಿ ಮಾಡುವ ಕೃತ್ಯಗಳು ನಡೆಯುತ್ತಲೇ ಇವೆ. ಇದು ನಿಲ್ಲುವವರೆಗೂ ಮಳೆ ಇಲ್ಲ. ಮಳೆ ಬಂದರೂ ನೀರಿನ ಒರೆತೆಯ ನದಿ ಪಾತ್ರದಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆ ಅಂತರ್ಜಲ ಕ್ಷೀಣಿಸಲು ಕಾರಣವಾಗಿದೆ.ಸರ್ಕಾರ ಶಾಶ್ವತ ಕುಡಿಯುವ ನೀರಿನ ಯೋಜನೆ ತಾಲ್ಲೂಕಿಗೆ ತರಬೇಕು. ಬರದ ಬವಣೆಯಲ್ಲಿರುವ ಜನತೆಯ ಅಹವಾಲು ಆಲಿಸಲು ಯಾವೊಬ್ಬ ಜನಪ್ರತಿನಿಧಿಯೂ ಬಂದಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.