ಭಾನುವಾರ, ಜೂನ್ 13, 2021
24 °C

ಚಹಾ ತೋಟದ ಚೆಂಗುಲಾಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಹಾ ತೋಟದಲ್ಲಿ ಕೆಲಸ ಮಾಡುವ ಹುಡುಗಿಯೊಬ್ಬಳು ಮಾಲೀಕನ ಮಗನನ್ನು ವರಿಸುತ್ತಾಳೆ. ಹೆಣ್ಣು ಎಂದರಾಗದ ಮಾವನ ಎದುರು ವಾಗ್ವಾದ ನಡೆಸುತ್ತಾಳೆ. ತನ್ನಂಥ ಹಲವು ಹೆಣ್ಣುಮಕ್ಕಳ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಾಳೆ. ಆಕೆಯ ಮನೆಯಲ್ಲಿ ನಡೆಯುವ ಕತೆ ಆಕೆಯದೂ ಹೌದು, ಪ್ರಪಂಚದ ಯಾವುದೇ ಹೆಣ್ಣುಮಗಳದ್ದೂ ಹೌದು.`ಸ್ತ್ರೀ ಶಕ್ತಿ~ಯ ಅಂತಹ ದಿಟ್ಟ ಪಾತ್ರಕ್ಕೆ ಆಯ್ಕೆಯಾಗಿರುವುದು ಸೋನು ಯಾನೆ ಶೃತಿ.

`ಇಂತಿ ನಿನ್ನ ಪ್ರೀತಿಯ~, `ಗುಲಾಮ~, `ಪರಮೇಶ್ ಪಾನ್‌ವಾಲಾ~ `ಪೊಲೀಸ್ ಕ್ವಾರ್ಟರ್ಸ್~ ಚಿತ್ರಗಳ ಮೂಲಕ ಗಮನ ಸೆಳೆದ ಸೋನು ಕೇವಲ ನಾಯಕಿಯ ಪಾತ್ರಕ್ಕೆ ಜೋತು ಬಿದ್ದವರಲ್ಲ. ಗ್ಲಾಮರ್‌ಗೆ ಹೊರತಾದ ಅಭಿನಯವನ್ನು ಕಂಡುಕೊಳ್ಳಲು ಹೊರಟವರು.ಹೀಗಾಗಿಯೇ ನಾಯಕಿಯ ಪಾತ್ರದಿಂದ ಕೆಳಗಿಳಿದು ಪೋಷಕ ಪಾತ್ರಗಳಲ್ಲಿ ನಟಿಸಲು ಕೂಡ ಅವರಿಗೆ ಹಿಂಜರಿಕೆ ಇಲ್ಲ. ಪಾತ್ರ ಯಾವುದಾದರೇನು ಅದಕ್ಕೆ ಜೀವ ತುಂಬುವುದು ತನ್ನ ಕೆಲಸ ಎಂಬ ಮನೋಭಾವದ ಛಲಗಾತಿ. ಈ ಒಗ್ಗಿಕೊಳ್ಳುವ ಗುಣವೇ ಅವರನ್ನು ತಮಿಳು, ಮಲಯಾಳ ಚಿತ್ರರಂಗದತ್ತಲೂ ಕರೆದೊಯ್ದಿದೆ. ಮಲಯಾಳದ `ಡಬಲ್ಸ್~, ಮುಮ್ಮಟ್ಟಿ ಅವರ `ಬೆಸ್ಟ್ ಆಕ್ಟರ್~, ತಮಿಳಿನ `ಆನ್ಮೈ ತವರೇಯಿಲ್~ ಅವರು ಅಭಿನಯಿಸಿರುವ ಚಿತ್ರಗಳು. ತಂದೆ ಎನ್.ಕೆ.ರಾಮಕೃಷ್ಣ ಮೇಕಪ್ ಕಲಾವಿದ. ಹೀಗಾಗಿ ಬಾಲ್ಯದಿಂದಲೂ ಚಿತ್ರರಂಗವನ್ನು ಕಂಡು ಬೆಳೆದವರು ಸೋನು. `ಸ್ತ್ರೀ ಶಕ್ತಿ~ಯಲ್ಲಿ ಅಭಿನಯಿಸಲು ಕೂಡ ಅಪ್ಪನ ಪ್ರೋತ್ಸಾಹವೇ ಪ್ರೇರಣೆಯಾಯಿತು. ಒಂದು ದಿನ ನಿರ್ದೇಶಕ ಎಸ್.ವಿ.ಸುರೇಶ್ ಮನೆಗೆ ಬಂದು ಪಾತ್ರವನ್ನು ವಿವರಿಸಿದರು. ಕತೆ ವಿವರಿಸಿದರು. ವಿಭಿನ್ನ ವಸ್ತುವೇ ಆಕೆ ಚಿತ್ರವನ್ನು ಥಟ್ಟೆಂದು ಒಪ್ಪಲು ಕಾರಣವಾಯಿತು. `ಇಡೀ ಚಿತ್ರ ಮೂರು ತಲೆಮಾರುಗಳ ನಡುವೆ ಏಳುವ ಹೆಣ್ಣಿನ ತಲ್ಲಣವನ್ನು ಬಿಂಬಿಸುತ್ತದೆ. ಹಳ್ಳಿಯ ಹೆಣ್ಣುಮಗಳು ತನ್ನ ಸೀಮಿತ ಪರಿಧಿಯಲ್ಲೇ ಏನನ್ನೆಲ್ಲಾ ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ. ಗಂಡು ಹೆಣ್ಣಿನ ಮಾನಸಿಕ ಸಂಘರ್ಷ ಇತರೆ ಚಿತ್ರಗಳಲ್ಲಿ ಕಾಣುವ ಹೊಡೆದಾಟ ಬಡಿದಾಟದಷ್ಟೇ ಪ್ರಖರವಾಗಿದೆ. ಹೆಣ್ಣು ಇಲ್ಲಿ ಸೋತು ಗೆಲ್ಲುತ್ತಾಳೆ. ಹೆಣ್ಣಿನ ಅಂತಃಶಕ್ತಿಗೆ ಗಂಡು ಕರಗುತ್ತಾನೆ~ ಎನ್ನುತ್ತಾರೆ ಸೋನು.ಚಿತ್ರಕ್ಕೊಂದು ದೊಡ್ಡ ವಸ್ತುವಿದೆ. ಅದು ಭ್ರೂಣ ಹತ್ಯೆ ಕುರಿತಾದುದು. ಚಿತ್ರದ ನಾಯಕಿ (ಸೋನು) ಹೆಣ್ಣು ಮಗುವಿಗೆ ಜನ್ಮ ನೀಡುವುದು ಗೊತ್ತಾದಾಗ ಪುರುಷ ಕುಲ ಅದನ್ನು ಬಲವಾಗಿ ವಿರೋಧಿಸುತ್ತದೆ. ಆಗ, `ಪೆಣ್ಣಲ್ಲವೆ ನಮ್ಮನೆಲ್ಲ ಪೊರೆದ ತಾಯಿ~ ಎಂದು ಕಣ್ಣು ತೆರೆಸುವ ಕಾಯಕ ನಾಯಕಿಯದು.ಚಿತ್ರದಲ್ಲಿ ಮಾವ ಮತ್ತು ಸೊಸೆಯ ನಡುವೆ ನಡೆಯುವ ವಾಗ್ವಾದ ಸೋನು ಅವರಿಗೆ ಬಹಳ ಇಷ್ಟವಂತೆ. ಸುದೀರ್ಘ ಸಂಭಾಷಣೆ ಇರುವ ದೃಶ್ಯವದು. ಇಬ್ಬರೂ ಪರಸ್ಪರ ಟೀಕಿಸುವುದಿಲ್ಲ. ಬದಲಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾ ಹೋಗುತ್ತಾರೆ.`ಪುರುಷಾಕಾರ~ ತನ್ನ ಹಿರಿಮೆಯನ್ನು ಗರ್ವದಿಂದ ಬಣ್ಣಿಸಿದರೆ ಹೆಣ್ಣಿನ ಮಹತ್ವವನ್ನು ಸೊಸೆ ವಿವರಿಸುತ್ತಾಳೆ. ಹಾಗೆಂದು ಚಿತ್ರ ವಾಚ್ಯವೂ ಆಗಿಲ್ಲವಂತೆ. ಗಂಡು ತನ್ನ ತಪ್ಪನ್ನು ಅರಿಯುವುದು ಚಿತ್ರದಲ್ಲಿ ಅಡಗಿರುವ ಯಶಸ್ಸು ಎನ್ನುವಾಗ ಅವರ ಕಣ್ಣಲ್ಲಿ ಮಿಂಚಿತ್ತು.ಚಿತ್ರದ ನಾಯಕ ರಾಜೀವ್ ಹಾಗೂ ಸೋನು ಇಬ್ಬರೇ ಅಲ್ಲಿ ಕಿರಿಯ ಕಲಾವಿದರು. ಶರತ್ ಲೋಹಿತಾಶ್ವ, ರಾಮಕೃಷ್ಣ, ಅಚ್ಯುತ್‌ಕುಮಾರ್, ತುಳಸಿ ಶಿವಮಣಿ, ಸುಂದರ್‌ರಾಜ್ ಮುಂತಾದ ಪಳಗಿದವರ ಪಡೆಯೇ ಅಲ್ಲಿದೆ. `ದೊಡ್ಡವರಿಂದ ಕಲಿತದ್ದು ಅಪಾರ. ಅವರ ನಡೆ ನುಡಿ ನಮ್ಮನ್ನು ಮತ್ತಷ್ಟು ಪಕ್ವವಾಗಿಸಿದವು~ ಎನ್ನುತ್ತಾರೆ ಸೋನು.ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸೋನು ಮಲೆನಾಡಿನ ಬಣ್ಣನೆಗೆ ಇಳಿದರು. ಚಿತ್ರದ ಚಿತ್ರೀಕರಣ ನಡೆದಿರುವುದು ಕಳಸ, ಹೊರನಾಡು, ಕೆಳಗೂರು ಚಹಾತೋಟ ಮುಂತಾದೆಡೆಗಳಲ್ಲಿ. ಚಿತ್ರೀಕರಣದ ವೇಳೆ ಅವರು ಬೆಂಗಳೂರಿನಿಂದ ಮಾತ್ರ ದೂರವಾಗಿರಲಿಲ್ಲವಂತೆ. `ಮೊಬೈಲ್ ನೆಟ್‌ವರ್ಕ್ ಇಲ್ಲದೆ ಇದ್ದುದರಿಂದಾಗಿ ಬಾಹ್ಯ ಸಂಪರ್ಕವೇ ಇರಲಿಲ್ಲ. ಎತ್ತರದ ಸ್ಥಳಕ್ಕೆ ತೆರಳಿ ಕರೆ ಮಾಡಬೇಕಿತ್ತು. ಅದೊಂದು ವಿಶಿಷ್ಟ ಅನುಭವ. ಹಳ್ಳಿಯ ನಿಜ ಸೌಂದರ್ಯ ಗೊತ್ತಾದದ್ದೇ ಚಿತ್ರೀಕರಣದ ಸಂದರ್ಭದಲ್ಲಿ~ ಎಂದರು.ಒಂದು ಚಿತ್ರವನ್ನು ವ್ಯಾಪಾರಿ ಸಿನಿಮಾ, ಕಲಾತ್ಮಕ ಸಿನಿಮಾ ಎಂದು ವಿಭಜಿಸುವುದಕ್ಕೆ ಅವರ ವಿರೋಧವಿದೆ. ಚಿತ್ರ ಕೇವಲ ಚಿತ್ರವಷ್ಟೇ. ಉತ್ತಮ ಚಿತ್ರ ಸದಾ ಗೆಲ್ಲುತ್ತದೆ.ವ್ಯಾಪಾರಿ ಚಿತ್ರವನ್ನು ಅಳೆಯುವ ಮಾನದಂಡವೇ ಬೇರೆ, ಕಲಾತ್ಮಕ ಚಿತ್ರವನ್ನು ಅಳೆಯುವ ಮಾನದಂಡವೇ ಬೇರೆ. ಎರಡಕ್ಕೂ ಅವುಗಳದೇ ಆದ ಸಾಧ್ಯತೆಗಳಿವೆ. ಒಂದು ರಂಜನೆಗೆ ಮತ್ತೊಂದು ಅರಿವಿಗೆ. ಎರಡೂ ಬೇಕು ಎನ್ನುತ್ತಾ ಮಲೆಯಾಳ ಚಿತ್ರರಂಗದತ್ತ ಮಾತು ಹೊರಳಿಸಿದರು.ಮಲೆಯಾಳದಲ್ಲಿ ಎರಡೂ ಬಗೆಯ ಚಿತ್ರಗಳು ಗೆಲ್ಲುತ್ತವೆ. ಯಾವುದೇ ಚಿತ್ರವನ್ನು ಗಂಭೀರವಾಗಿ ನೋಡುವ ವಿದ್ಯಾವಂತರು ಅಲ್ಲಿದ್ದಾರೆ. ಕನ್ನಡದ ಮಟ್ಟಿಗೆ ಪರ್ಯಾಯ ಚಿತ್ರಗಳ ಸಂಖ್ಯೆ ಹೆಚ್ಚಬೇಕು. ನಿರ್ಮಾಪಕರು ಈ ಬಗ್ಗೆ ಕಾಳಜಿ ವಹಿಸಬೇಕು ಎಂಬ ಅವರ ಮಾತಿನಲ್ಲಿ ಮನವಿಯಿತ್ತು.ಮನೋಜ್ ಎಂಬ ಉದ್ಯಮಿಯನ್ನು ಕೈ ಹಿಡಿದವರು ಸೋನು. ಅವರ ಪ್ರಕಾರ ಮನು ಸ್ತ್ರೀವಾದಿ! ನಿನಗೊಪ್ಪುವ ಪಾತ್ರಗಳನ್ನು ಮಾಡು ಎಂದು ಬೆಂಬಲಿಸುವವರು. ಚಿತ್ರರಂಗದ ಬಗ್ಗೆ ಅವರಿಗೆ ಅಪಾರ ಪ್ರೀತಿ. ಆ ಪ್ರೀತಿಯ ಚಿಮ್ಮು ಹಲಗೆಯ ಮೇಲೆ ನಿಂತು ಸೋನು ಜಿಗಿದಿದ್ದಾರೆ. ಇತ್ತೀಚೆಗೆ ತಮಿಳು ಚಿತ್ರರಂಗದಿಂದ ಎರಡು ಅವಕಾಶಗಳು ಅವರನ್ನು ಅರಸಿ ಬಂದಿವೆ. `ಅಮರ್~ ಹಾಗೂ ಬಾಲಮುರುಗನ್ ಅವರ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.