ಚಹಾ ಪುಡಿ ಕಲಾಕೃತಿಗಳು!

7

ಚಹಾ ಪುಡಿ ಕಲಾಕೃತಿಗಳು!

Published:
Updated:

`ಮನೆ, ಹೋಟೆಲ್‌ಗಳಲ್ಲಿ ಟೀ ಮಾಡಿ ಬಿಸಾಡಿದ ತ್ಯಾಜ್ಯವೇ ನನ್ನ ಕಲಾಕೃತಿಗಳ ಹಿಂದಿರುವ ರಹಸ್ಯ. ಖಾಲಿಯಾದ ಕೋಲ್ಗೇಟ್ ಟ್ಯೂಬ್, ತೆಂಗಿನ ಕರಟ, ನಾರು, ಮಾವಿನ ಓಟೆ, ಅಡಿಕೆ ಸಿಪ್ಪೆ ಇವುಗಳನ್ನು ಕಸ ಎಂದು ಬಿಸಾಡುತ್ತಾರೆ.

 

ಈ ವಸ್ತುಗಳನ್ನು ನನ್ನ ಕೈಯಲ್ಲಿ ಭಿನ್ನವಾಗಿ  ತೋರಿಸಬೇಕು, ಇವುಗಳಿಗೆ ಸುಂದರ

               ದೇವಕಿಸುತ

ರೂಪ ನೀಡಿ ಎಲ್ಲರೂ ಆಶ್ಚರ್ಯದಿಂದ ಕಣ್ಣರಳಿಸುವಂತೆ ಮಾಡಬೇಕು ಎನ್ನುವುದೇ ನನ್ನ ಉದ್ದೇಶ~ ಎನ್ನುತ್ತಿದ್ದ ದೇವಕಿಸುತ ಅವರ ಮಾತಿನಲ್ಲಿ ಆತ್ವವಿಶ್ವಾಸವಿತ್ತು.`ದಿನನಿತ್ಯ ನಗರದ ಹೋಟೆಲ್‌ಗಳಿಂದ 10 ಟನ್ ಟೀ ಪುಡಿ ವ್ಯರ್ಥವಾಗುತ್ತದೆ. ಅದನ್ನು ಪುನರ್ಬಳಸಲು ಸಾಧ್ಯ ಎಂಬುದನ್ನು ನಾನು ತೋರಿದ್ದೇನೆ. 4 ವರ್ಷಗಳಿಂದ ಈ ಕಲಾಕೃತಿಗಳನ್ನು ಮಾಡುತ್ತಾ ಬಂದಿದ್ದೇನೆ~ ಎಂದು ತಾವು ತಯಾರಿಸಿದ್ದ ಕೃತಕ ತರಕಾರಿಗಳನ್ನು ತೋರಿಸುತ್ತಿದ್ದರು.ಟೀ ಪುಡಿಯನ್ನು ವಾರಗಟ್ಟಲೆ ಒಣಗಿಸಿ, ಅದಕ್ಕೆ ಪೇಪರ್, ಪ್ಲಾಸ್ಟರ್ ಆಫ್ ಪ್ಯಾರಿಸ್ ಬೆರೆಸಿ, ಗೋಂದನ್ನೂ ತಾವೇ ತಯಾರಿಸಿ ಹಲವು ಕಲಾಕೃತಿಗಳನ್ನು ಮೂಡಿಸಿದ್ದಾರೆ. ಇವರ ಕೈಯಲ್ಲಿ ಅಸಲಿ ಎಂಬಂತೆ ತೋರುವ ಹಲವು ತರಕಾರಿ, ಹಣ್ಣು, ಬಳ್ಳಿಗಳು ಅರಳಿವೆ. ಗೇರು ಹಣ್ಣು, ಬದನೆಕಾಯಿ, ನಾಟಿ ಬದನೆ, ಅಣಬೆ, ಸೌತೆಕಾಯಿ, ಕುಡಿದು ಬಿಸಾಡಿದ ಎಳನೀರಿನ ಕರಟಕ್ಕೆ ಟೀಪುಡಿಯ ಲೇಪದಿಂದ ಕಲಾಕೃತಿಗಳ ರೂಪು ಸಿಕ್ಕಿದೆ.ತರಕಾರಿಗಳನ್ನು ಮನೆಯಲ್ಲಿ ಅಲಂಕೃತವಾಗಿ ಜೋಡಿಸಲೆಂದು ಸಣ್ಣ ಕಂಬಿಗೆ ಗೋಂದು ಮೆತ್ತಿದ ಟೇಪ್ ಬಳಸಿ ತೂಗುಹಾಕುವಂತೆಯೂ ಮಾಡಿದ್ದಾರೆ. ಇವಕ್ಕೆ ಬಳಸಿರುವ ಬಣ್ಣವೂ ಪರಿಸರಸ್ನೇಹಿ. ಬಣ್ಣ ಬಳಸುವಾಗಲೂ ಹಲವು ನಿಯಮಗಳಿವೆ ಎಂದು ವಿವರಿಸಿದರು.ಇಲ್ಲಿ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ `ಗುಬ್ಬಚ್ಚಿಗೊಂದು ಗೂಡು ಕೊಡಿ~ ಎನ್ನುತ್ತಾ, ಮನೆಯ ತೋಟಕ್ಕೆ ಚೆಂದ ಕಾಣುವ, ಗುಬ್ಬಚ್ಚಿ ಬಂದು ಕೂರಬಹುದಾದ ಗೂಡುಗಳನ್ನೂ ಮಾಡಿದ್ದಾರೆ. ಮನೆಯ ತೋಟಕ್ಕೆ, ಒಳಗೆ ಹೇಳಿಮಾಡಿಸಿದಂತಹ ಅಲಂಕಾರಿಕ ಸಾಮಗ್ರಿಗಳು ಇವು.ಮಾವಿನ ಓಟೆಯಲ್ಲಿ ತಯಾರಿಸಿರುವ ಗಿಳಿಗಳಂತೂ ನೈಜ ಎಂಬಂತೆ ತೋರುತ್ತವೆ. ಮಂಜೊಟ್ಟಿ ಬೀಜದಿಂದ ಮಾಡಿರುವ ಜೇನುಗೂಡು ಮೊದಲ ನೋಟಕ್ಕೆ ಭಯ ಹುಟ್ಟಿಸುತ್ತದೆ. ತೆಂಗಿನ ಕರಟದಿಂದ ಮೂಡಿದ ಕೋತಿ, ಮನುಷ್ಯನ ಆಕಾರದ ಹುಂಡಿಗಳು ಆಕರ್ಷಕ.

 

ಇನ್ನು ಪ್ರಾಣಿ ಪಕ್ಷಿಗಳ ವಿಷಯಕ್ಕೆ ಬಂದರೆ ಗಂಡಬೇರುಂಡ, ಕೋತಿ, ಇಲಿ, ಬೆಕ್ಕು, ಕುರಿ ಹೀಗೆ ಹಲವು ಆಯ್ಕೆಗಳಿವೆ. ಖಾಲಿಯಾದ ಕೋಲ್ಗೇಟ್ ಟ್ಯೂಬ್‌ನಿಂದ ಒಡಮೂಡಿರುವ ಮೀನುಗಳು ನಿಜವೆಂಬಂತೆ ಭಾಸವಾಗುತ್ತವೆ. ಇದೇ ಟ್ಯೂಬ್‌ನಿಂದ ಹಸಿರು ಎಲೆಗಳ ಬಳ್ಳಿಯನ್ನೂ ಮಾಡಿದ್ದಾರೆ.ಮೂಲತಃ ಟೈಲರ್ ಆಗಿರುವ ದೇವಕಿ ಸುತ ಬಿಡುವಿನ ಸಮಯದಲ್ಲಿ ಈ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದಲ್ಲೂ ಆಸಕ್ತಿ ಇರುವುದರಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವ ಚಿತ್ರಗಳನ್ನು ಮತ್ತು ಕನ್ನಡ ಅಂಕಿಗಳನ್ನು ಹೊಂದಿರುವ ಸುಂದರ ಗಡಿಯಾರವನ್ನೂ ತಯಾರಿಸಿದ್ದಾರೆ. ಬರವಣಿಗೆಯಲ್ಲೂ ಇವರಿಗೆ ಅಪರಿಮಿತ ಆಸಕ್ತಿಯಂತೆ.ಕರ್ನಾಟಕ, ಭಾರತ ಧ್ವಜದ ಬಣ್ಣಗಳನ್ನು ಹೊಂದಿರುವ ಹುಂಡಿಗಳೂ ಇವರಲ್ಲಿವೆ. ಮಕ್ಕಳಿಗೆ ಎಳೆಯರಾಗಿರುವಾಗಲೇ ಉಳಿತಾಯದ ಕಲ್ಪನೆ ಮೂಡಿಸಬೇಕು ಎಂಬ ಉದ್ದೇಶದಿಂದ ವಿವಿಧ ಆಕಾರದ ಹುಂಡಿಗಳನ್ನು ತಯಾರಿಸಿದ್ದಾರೆ.ನಟ ರಾಜ್‌ಕುಮಾರ್ ಅವರ ಭಾವಚಿತ್ರ ಹೊಂದಿರುವ `ಆಟ-ಪಾಠ ಕನ್ನಡ ಕಲಿಕೆ~ಗೆ ಬುಗರಿ ಬೀಜಗಳನ್ನು ಬಳಸಿ ಕಲಾಕೃತಿ ಮೂಡಿಸಿರುವುದು ನನ್ನ ಅಚ್ಚುಮೆಚ್ಚಿನ ಕಲಾಕೃತಿಗಳಲ್ಲಿ ಒಂದು~ ಎಂದು ಸಂತಸದಿಂದ ಹೇಳಿಕೊಂಡರು.`ಅಲಂಕಾರಿಕ ಸಾಮಗ್ರಿಗಳಲ್ಲಿ ಇಂದು ಆಯ್ಕೆ ಹಲವು. ಆದರೆ, ವಿಭಿನ್ನ ಮತ್ತು ಪರಿಸರಕ್ಕೆ ಪೂರಕವಾಗಿರುವುದು ಕಡಿಮೆ. ಇದೇ ಕಾರಣಕ್ಕೆ ವ್ಯರ್ಥ ಪದಾರ್ಥಗಳಿಂದ ಆಕೃತಿಗಳನ್ನು ಮೂಡಿಸಿದೆ. ಇದುವರೆಗೂ ಸುಮಾರು  60 ಬಗೆಯ ಕಲಾಕೃತಿಗಳನ್ನು ಮಾಡಿದ್ದೇನೆ. ಅದಕ್ಕೆ ಬಂದ ಸ್ಪಂದನೆಯೂ ಖುಷಿ ಕೊಟ್ಟಿದೆ~ ಎಂದು ಹೆಮ್ಮೆಯಿಂದ ಹೇಳಿಕೊಂಡರು.`ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕೆನ್ನುವ ಉದ್ದೇಶ ನನ್ನದು. ಆದ್ದರಿಂದ ನೇತ್ರದಾನ ಮಹಾದಾನ, ಧೂಮಪಾನ ತ್ಯಜಿಸಿ ಹೀಗೆ ಹಲವು ಸಂದೇಶಗಳನ್ನು, ಮನುಷ್ಯನ ಮುಖದ ಆಕೃತಿ ಹಾಗೂ ಅಕ್ಷರಗಳನ್ನು ಫಲಕದಲ್ಲಿ ಮೂಡಿಸಿದ್ದೇನೆ. `ಮಡಿಲೇ ಹೊನ್ನ ತೊಟ್ಟಿಲು~ ಎಂಬುದು ನನ್ನ ಇತ್ತೀಚಿನ ಕಲಾಕೃತಿ.

 

ಆಸಿಡ್ ದಾಳಿಗೆ ತುತ್ತಾಗಿ ಹೆಣ್ಣು ಅನುಭವಿಸುತ್ತಿರುವ ಯಾತನೆಯನ್ನು ಕಲೆಯ ಮೂಲಕ ಪ್ರಭಾವಕಾರಿಯಾಗಿ ಚಿತ್ರಿಸಬೇಕೆಂದು ಹೊರಟಿದ್ದೇನೆ~ ಎಂದು ತಮ್ಮ ಕನಸುಗಳನ್ನು ಬಿಚ್ಚಿಟ್ಟರು.ದೇವಕಿ ಕಲಾ ಕುಟೀರ ಎಂಬ ಹೆಸರಿನಲ್ಲಿ ಕಲಾಕೃತಿಗಳನ್ನು ತಯಾರಿಸುತ್ತಿರುವ ಇವರಿಗೆ ಇತರರಿಗೂ ತಮ್ಮ ಪ್ರತಿಭೆಯನ್ನು ಹಂಚುವಾಸೆ. ಸಂಪರ್ಕಕ್ಕೆ: 98861 91206.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry