ಮಂಗಳವಾರ, ನವೆಂಬರ್ 19, 2019
29 °C
ಪತ್ನಿಗೆ ಕಿರುಕುಳ ನೀಡಿದ ಗಣೇಶ್‌ಕುಮಾರ್‌ಗೆ ರಕ್ಷಣೆ ಕೊಟ್ಟ ಆರೋಪ

ಚಾಂಡಿ ರಾಜೀನಾಮೆಗೆ ಎಲ್‌ಡಿಎಫ್ ಆಗ್ರಹ

Published:
Updated:

ತಿರುವನಂತಪುರ (ಪಿಟಿಐ): ಪತ್ನಿಗೆ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಗಣೇಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಉಮ್ಮನ್ ಚಾಂಡಿ ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಸಿಪಿಎಂ ನೇತೃತ್ವದ ವಿರೋಧ ಪಕ್ಷ ಎಲ್‌ಡಿಎಫ್‌ನ ಸದಸ್ಯರು ಮಂಗಳವಾರ ವಿಧಾನಸಭೆಯ ಕಲಾಪ ಬಹಿಷ್ಕರಿಸಿ ಸಭಾತ್ಯಾಗ ಮಾಡಿದರು. ಈ ಸಂಬಂಧ ಚಾಂಡಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದೂ ಅವರು ಆಗ್ರಹಿಸಿದರು.ಪ್ರಕರಣದ ನಿಲುವಳಿ ಸೂಚನೆ ನೋಟಿಸ್‌ಗೆ ಉತ್ತರಿಸಿದ ಚಾಂಡಿ, `ಇದು ಕುಟುಂಬಕ್ಕೆ ಸಂಬಂಧಿಸಿದ ವ್ಯವಹಾರವಾಗಿದ್ದು, ಈ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಂಡು ಸದನದ ಸಮಯವನ್ನು ಹಾಳು ಮಾಡುವುದಿಲ್ಲ. ಈಗಾಗಲೇ ಪ್ರಕರಣವು ಕೌಟುಂಬಿಕ ನ್ಯಾಯಾಲಯದಲ್ಲಿದ್ದು, ಇದೇ ವಿಷಯವನ್ನು ಸದನದಲ್ಲಿ ಚರ್ಚಿಸುವುದು ಉಚಿತವಲ್ಲ' ಎಂದು ಹೇಳಿದರು.`ಗಣೇಶ್ ಕುಮಾರ್ ಪತ್ನಿ ಯಾಮಿನಿ ನೀಡಿದ ದೂರನ್ನು ಅಂಗೀಕರಿಸಲು ಚಾಂಡಿ ನಿರಾಕರಿಸಿದ್ದು, ಇದರಿಂದ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ಪತ್ನಿಯ ವಿರುದ್ಧ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಟ್ಟಂತಾಗಿದೆ' ಎಂದು ವಿರೋಧ ಪಕ್ಷದ ಸದಸ್ಯರು ಆಪಾದಿಸಿದರು.`ಯಾಮಿನಿ ಅವರ ದೂರನ್ನು ಅಂಗೀಕರಿಸಲು ನಿರಾಕರಿಸುವ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಚಾಂಡಿ ಉಲ್ಲಂಘಿಸಿದ್ದಾರೆ' ಎಂದು ವಿರೋಧ ಪಕ್ಷದ ನಾಯಕ ವಿ.ಎಸ್. ಅಚ್ಯುತಾನಂದನ್ ಆರೋಪಿಸಿದರು.ಪತ್ನಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಗಣೇಶ್ ಕುಮಾರ್, ಏಪ್ರಿಲ್ 2ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಅವರು, ತಮ್ಮ ಪತ್ನಿಯೇ ತನಗೆ ಬೆದರಿಕೆ ಹಾಕುತ್ತಿರುವುದಾಗಿ ದೂರಿದ್ದಾರೆ.

ಪ್ರತಿಕ್ರಿಯಿಸಿ (+)