ಚಾಂಪಿಯನ್ಸ್ ಲೀಗ್‌ನಲ್ಲಿ ಮುಂಬೈ ಯಶಸ್ಸಿಗೆ ಮಾಲಿಂಗ ಕಾರಣ: ಹರಭಜನ್

7

ಚಾಂಪಿಯನ್ಸ್ ಲೀಗ್‌ನಲ್ಲಿ ಮುಂಬೈ ಯಶಸ್ಸಿಗೆ ಮಾಲಿಂಗ ಕಾರಣ: ಹರಭಜನ್

Published:
Updated:

ಚೆನ್ನೈ (ಪಿಟಿಐ): ಮಧ್ಯದ ಕೆಲವು ಓವರುಗಳಲ್ಲಿ ಇನ್ನಷ್ಟು ರನ್ ಗಳಿಸಲು ಸಾಧ್ಯವಿತ್ತು. ಆದರೆ ಸರಿಯಾದ ಗತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲವೆಂದು ಹೇಳಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹರಭಜನ್ ಸಿಂಗ್ `160 ರನ್ ಗಳಿಸಬಹುದಿತ್ತು~ ಎಂದು ಪ್ರತಿಕ್ರಿಯಿಸಿದರು.

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ ಫೈನಲ್‌ನಲ್ಲಿ ಭಾನುವಾರ ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ 31 ರನ್‌ಗಳ ಅಂತರದಿಂದ ವಿಜಯ ಸಾಧಿಸಿದ ನಂತರ ಮಾತನಾಡಿದ `ಭಜ್ಜಿ~ ನಿರೀಕ್ಷಿಸಿದಷ್ಟು ರನ್ ಗಳಿಸಲು ತಮ್ಮ ತಂಡದಿಂದ ಸಾಧ್ಯವಾಗಲಿಲ್ಲವೆಂದು ತಿಳಿಸಿದರು.

ಚೀಪಾಕ್ ಅಂಗಳದಲ್ಲಿ ಫೈನಲ್‌ಗೆ ಮುನ್ನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳನ್ನು ಆಡಿದ್ದ ಇಂಡಿಯನ್ಸ್ ಇಲ್ಲಿನ  ಪಿಚ್ ಗುಣವನ್ನು ಅರಿತಿದ್ದರು. ಆದ್ದರಿಂದ ಹೆಚ್ಚು ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟಿದರು. ಆದರೂ ತಾವು ಅಂದುಕೊಂಡಷ್ಟು ರನ್‌ಗಳು ಬರಲಿಲ್ಲ ಎನ್ನುವುದು ಹರಭಜನ್ ಅಭಿಪ್ರಾಯ. 139 ರನ್‌ಗೆ ಕುಸಿದರೂ ಎದುರಾಳಿ ತಂಡವನ್ನು ಬಹುಬೇಗ ನಿಯಂತ್ರಿಸುವಲ್ಲಿ ತಮ್ಮ ಬೌಲರ್‌ಗಳು ಯಶಸ್ವಿಯಾಗಿದ್ದು ಅವರಿಗೆ ಸಮಾಧಾನ.

`ಬೌಲರ್‌ಗಳಿಗೆ ಈ ಗೆಲುವಿನ ಶ್ರೇಯ ಸಲ್ಲಬೇಕು~ ಎಂದ ಅವರು `ಲಸಿತ್ ಮಾಲಿಂಗ ಅವರು ಚಾಂಪಿಯನ್ಸ್ ಲೀಗ್ ಟೂರ್ನಿಯುದ್ದಕ್ಕೂ ತಂಡದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಫೈನಲ್‌ನಲ್ಲಿಯೂ ಅದೇ ಮಟ್ಟದಲ್ಲಿ ಬೌಲಿಂಗ್ ದಾಳಿ ನಡೆಸಿದರು~ ಎಂದು ಮೆಚ್ಚುಗೆ ಸೂಚಿಸಿದರು.

`ಪಿಚ್ ಅಪಾಯಕಾರಿಯಾಗಿತ್ತು. ಬ್ಯಾಟಿಂಗ್ ಮಾಡುವುದು ಅಷ್ಟೇನು ಸುಲಭವಾಗಿರಲಿಲ್ಲ. ಆದರೆ ಇಲ್ಲಿಯೇ ಹಿಂದೆ ಆಡಿದ್ದ ಮೂರು ಪಂದ್ಯಗಳ ಅನುಭವದ ಲೆಕ್ಕಾಚಾರದಲ್ಲಿ ಇನ್ನೂ ಇಪ್ಪತ್ತು ರನ್‌ಗಳನ್ನು ಗಳಿಸಬೇಕಿತ್ತು. ಆಗ ಇನ್ನಷ್ಟು ಒತ್ತಡದಿಂದ ಮುಕ್ತವಾಗಿ ಜಯ ಪಡೆಯಬಹುದಿತ್ತು. ನಮ್ಮ ಬ್ಯಾಟ್ಸ್‌ಮನ್‌ಗಳು ಕೆಲವು ಕೆಟ್ಟ ಹೊಡೆತಗಳಿಗೆ ಮುಂದಾಗಿ ಅಪಾಯಕ್ಕೊಳಗಾದರು. ಆದ್ದರಿಂದ ನಿರೀಕ್ಷಿಸಿದಷ್ಟು ರನ್‌ಗಳು ಬರಲಿಲ್ಲ~ ಎಂದು ವಿವರಿಸಿದರು.

`ಚಾಲೆಂಜರ್ಸ್ ಮುಂದೆ 140 ರನ್‌ಗಳ ಗೆಲುವಿನ ಗುರಿ ಇದ್ದಾಗ ಒತ್ತಡಕ್ಕೆ ಸಿಲುಕಿದ್ದು ನಾವು. ಆದರೆ ಇನಿಂಗ್ಸ್ ನಡುವಣ ವಿರಾಮದಲ್ಲಿ ಡ್ರೆಸಿಂಗ್ ಕೋಣೆಯಲ್ಲಿ ಕೋಚ್‌ಗಳಾದ ಶಾನ್ ಪೊಲಾಕ್ ಹಾಗೂ ರಾಬಿನ್ ಸಿಂಗ್ ಅವರು ಪ್ರೇರಣೆ ನೀಡುವಂಥ ಮಾತುಗಳನ್ನು ಆಡಿದರು. ಕೊನೆಯ ಎಸೆತದವರೆಗೆ ಹೋರಾಡಬೇಕು. ಎದುರಾಳಿಗಳನ್ನು ನಿಯಂತ್ರಿಸಲು ಹೆಚ್ಚು ರನ್‌ಗಳ ಬಲವಿಲ್ಲದಿದ್ದರೂ, ಬೌಲಿಂಗ್ ಬಲ ಏನೆನ್ನುವುದನ್ನು ಸಾಬೀತುಮಾಡಬೇಕು ಎಂದು ಹೇಳಿದರು. ಅದೇ ಪ್ರೇರಕ ನುಡಿಯ ಶಕ್ತಿಯೊಂದಿಗೆ ದಾಳಿ ನಡೆಸಿದೆವು~ ಎಂದು ತಿಳಿಸಿದರು.

`ಅಂಗಳಕ್ಕಿಳಿದು ತಂಡದ ಎಲ್ಲ ಸದಸ್ಯರಿಗೆ ಈ ಒಂದೂವರೆ ತಾಸು ನಮ್ಮದು. ನಮ್ಮೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಹೋರಾಡೋಣ. ಗೆಲುವು ನಮ್ಮದಾಗುತ್ತದೆ ಎಂದು ಹೇಳಿದೆ. ಅದಕ್ಕೆ ತಕ್ಕ ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆ ಸಾಧ್ಯವಾಯಿತು. ಇಂಥದೊಂದು ಉತ್ಸಾಹದ ಪರಿಣಾಮವಾಗಿ ಗೆಲುವು ನಮ್ಮದಾಯಿತು~ ಎಂದು ಹೇಳಿದ ಭಜ್ಜಿ ಮಂದಹಾಸ ಬೀರಿದರು.

`ದಿಲ್ಶಾನ್ ವಿಕೆಟ್ ಕೆಡವಿದ್ದು ಮಹತ್ವದ ಘಟ್ಟ. ಶ್ರೀಲಂಕಾದ ಬೌಲರ್ ಮಾಲಿಂಗ ಸರಿಯಾದ ಸಮಯದಲ್ಲಿ ಪರಿಣಾಮ ಹೊರಹೊಮ್ಮಿಸಿದರು. ಅದೇ ಮಹತ್ವದ ತಿರುವು. ಆನಂತರ ಒತ್ತಡ ಹೆಚ್ಚಿಸುವುದು ಕಷ್ಟವಾಗಲಿಲ್ಲ. `ಮಾಲ್ಲಿ~ (ಮಾಲಿಂಗ) ನನ್ನ ಮಟ್ಟಿಗೆ ಅದೃಷ್ಟದ ಕಾರ್ಡ್. ಈ ಟೂರ್ನಿಯಲ್ಲಿ ಪ್ರಮುಖ ಘಟ್ಟದಲ್ಲಿ ಬಯಸಿದಂತೆ ಬೌಲಿಂಗ್ ಮಾಡಿದ್ದಾರೆ. ಬೌಲಿಂಗ್ ಮೂಲಕ ಮಾತ್ರವಲ್ಲ ಬ್ಯಾಟಿಂಗ್‌ನಲ್ಲಿಯೂ ಅವರು ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry