ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿ:ಪ್ರಧಾನ ಹಂತಕ್ಕೆ ಯಾರ್ಕ್‌ಷೈರ್ ತಂಡ

7

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿ:ಪ್ರಧಾನ ಹಂತಕ್ಕೆ ಯಾರ್ಕ್‌ಷೈರ್ ತಂಡ

Published:
Updated:
ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿ:ಪ್ರಧಾನ ಹಂತಕ್ಕೆ ಯಾರ್ಕ್‌ಷೈರ್ ತಂಡ

ಸೆಂಚೂರಿಯನ್ (ಪಿಟಿಐ): ಇಂಗ್ಲೆಂಡ್‌ನ ಯಾರ್ಕ್‌ಷೈರ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪ್ರಧಾನ ಹಂತದಲ್ಲಿ ಆಡಲು ಅರ್ಹತೆ ಪಡೆಯಿತು.ಬುಧವಾರ ರಾತ್ರಿ ನಡೆದ ಅರ್ಹತಾ ಪಂದ್ಯದಲ್ಲಿ ಯಾರ್ಕ್‌ಶೈರ್ ಆರು ವಿಕೆಟ್‌ಗಳಿಂದ ಟ್ರಿನಿಡಾಡ್ ಅಂಡ್ ಟೊಬ್ಯಾಗೊ ವಿರುದ್ಧ ಜಯ ಸಾಧಿಸಿತು. ಈ ಮೂಲಕ ಸತತ ಎರಡು ಗೆಲುವು ಪಡೆದ ಕೌಂಟಿ ತಂಡ ಪ್ರಧಾನ ಹಂತಕ್ಕೆ ಮುನ್ನಡೆಯಿತು.ಸೂಪರ್‌ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಟ್ರಿನಿಡಾಡ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 148 ರನ್ ಪೇರಿಸಿತು. ಆ್ಯಂಡ್ರ್ಯೂ ಗೇಲ್ ನಾಯಕತ್ವದ ಯಾರ್ಕ್‌ಷೈರ್ 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 154 ರನ್ ಗಳಿಸಿ ಜಯ ಸಾಧಿಸಿತು.ಸವಾಲಿನ ಗುರಿ ಬೆನ್ನಟ್ಟಿದ್ದ ಯಾರ್ಕ್‌ಷೈರ್ 51 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಗ್ಯಾರಿ ಬ್ಯಾಲೆನ್ (ಔಟಾಗದೆ 64, 37 ಎಸೆತ, 2 ಬೌಂ, 6 ಸಿಕ್ಸರ್) ಮತ್ತು ಅದಿಲ್ ರಶೀದ್ (ಔಟಾಗದೆ 33, 27 ಎಸೆತ) ಮುರಿಯದ ಐದನೇ ವಿಕೆಟ್‌ಗೆ 103 ರನ್ ಸೇರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.ಟ್ರನಿಡಾಡ್ ತಂಡ ಡರೆನ್ ಬ್ರಾವೊ (45, 49 ಎಸೆತ) ಮತ್ತು ನಾಯಕ ದಿನೇಶ್ ರಾಮ್ದಿನ್ (59, 40 ಎಸೆತ) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಸವಾಲಿನ ಮೊತ್ತ ಪೇರಿಸಿತ್ತು. ಯಾರ್ಕ್‌ಷೈರ್ ಪರ ಸಮರ್ಥ ಬೌಲಿಂಗ್ ಪ್ರದರ್ಶಿಸಿದ ರ‌್ಯಾನ್ ಸೈಡ್‌ಬಾಟಮ್ 13 ರನ್‌ಗಳಿಗೆ ಮೂರು ವಿಕೆಟ್ ಪಡೆದರು.ಟ್ರಿನಿಡಾಡ್- ಉವಾ ನೆಕ್ಸ್ಟ್ ಪಂದ್ಯ ರದ್ದು: ಟ್ರಿನಿಡಾಡ್ ಮತ್ತು ಶ್ರೀಲಂಕಾದ ಉವಾ     ನೆಕ್ಸ್ಟ್ ತಂಡಗಳ ನಡುವೆ ಜೋಹಾನ್ಸ್‌ಬರ್ಗ್‌ನಲ್ಲಿ ಗುರುವಾರ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಮೊದಲು ಬ್ಯಾಟ್ ಮಾಡಿದ್ದ  ಟ್ರಿನಿಡಾಡ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 181 ರನ್ ಗಳಿಸಿತ್ತು.ಆದರೆ ಉವಾ ತಂಡದ ಇನಿಂಗ್ಸ್‌ನ ಆರಂಭದಲ್ಲೇ ಮಳೆ ಸುರಿಯಿತು. ಕೇವಲ ಒಂದು ಎಸೆತದ ಬಳಿಕ ಪಂದ್ಯ ರದ್ದುಗೊಂಡಿತು. ಟ್ರಿನಿಡಾಡ್ ಮತ್ತು ಉವಾ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಈ ಪಂದ್ಯಕ್ಕೆ ಯಾವುದೇ ಮಹತ್ವ ಇರಲಿಲ್ಲ.ಸಂಕ್ಷಿಪ್ತ ಸ್ಕೋರ್: ಟ್ರಿನಿಡಾಡ್ ಅಂಡ್ ಟೊಬ್ಯಾಗೊ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 148 (ಡರೆನ್ ಬ್ರಾವೊ 45, ದಿನೇಶ್ ರಾಮ್ದಿನ್ 59, ಕೆವೊನ್ ಕೂಪರ್ 15, ರ‌್ಯಾನ್ ಸೈಡ್‌ಬಾಟಮ್ 13ಕ್ಕೆ 3, ಸ್ಟೀವನ್ ಪ್ಯಾಟರ್‌ಸನ್ 32ಕ್ಕೆ 1). ಯಾರ್ಕ್‌ಷೈರ್: 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 154 (ಗ್ಯಾರಿ ಬ್ಯಾಲೆನ್ ಔಟಾಗದೆ 64, ಅದಿಲ್ ರಶೀದ್ ಔಟಾಗದೆ 33, ರವಿ ರಾಂಪಾಲ್ 22ಕ್ಕೆ 1, ಸ್ಯಾಮುಯೆಲ್ ಬದ್ರಿ 22ಕ್ಕೆ 1). ಫಲಿತಾಂಶ: ಯಾರ್ಕ್‌ಷೈರ್‌ಗೆ 6 ವಿಕೆಟ್ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry