ಶುಕ್ರವಾರ, ಮೇ 14, 2021
21 °C

ಚಾಂಪಿಯನ್ಸ್ ಲೀಗ್: ನಾಲ್ಕು ಪಂದ್ಯಗಳ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ/ಹೈದರಾಬಾದ್ (ಪಿಟಿಐ/ಐಎಎನ್‌ಎಸ್): ಭಾರಿ ಮಳೆ ಹಾಗೂ ಪ್ರವಾಹ ಉಂಟಾದ ಕಾರಣ ಕೋಲ್ಕತ್ತದಲ್ಲಿ ನಡೆಯಬೇಕಿದ್ದ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ನಾಲ್ಕು ಪಂದ್ಯಗಳನ್ನು ಬೆಂಗಳೂರು ಹಾಗೂ ಹೈದರಾಬಾದ್‌ಗೆ ಸ್ಥಳಾಂತರ ಮಾಡಲಾಗಿದೆ.ನಾಲ್ಕು ಪಂದ್ಯಗಳು ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಅಲ್ಲಿ ಭಾರಿ ಮಳೆ ಸುರಿದ ಕಾರಣ ಕ್ರೀಡಾಂಗಣವನ್ನು ಸಜ್ಜುಗೊಳಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಹಾಗೂ ಚಾಂಪಿಯನ್ಸ್ ಲೀಗ್ ಸಂಘಟನಾ ಸಮಿತಿ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬಂದಿವೆ.ಬೆಂಗಳೂರು ಹಾಗೂ ಹೈದರಾಬಾದ್‌ಗೆ ನಾಲ್ಕು ಪಂದ್ಯಗಳನ್ನು ವರ್ಗಾಯಿಸಲು ತೀರ್ಮಾನಿಸಿರುವ ಸಮಿತಿ ಸ್ಥಳೀಯ ಸಂಸ್ಥೆಗಳ ಒಪ್ಪಿಗೆಯನ್ನು ಎದುರು ನೋಡುತ್ತಿದೆ. `ಬಿ~ ಗುಂಪಿನ ನಾಲ್ಕು ಪಂದ್ಯಗಳು ಕೋಲ್ಕತ್ತದಲ್ಲಿ ನಡೆಯಬೇಕಿತ್ತು.`ಬಿ~ ಗುಂಪಿನ ತಂಡಗಳಾದ ವಾರಿಯರ್ಸ್‌-ಸೌತ್ ಆಸ್ಟ್ರೇಲಿಯಾ ಹಾಗೂ ಅರ್ಹತಾ ಸುತ್ತಿನಿಂದ ಬಂದ ತಂಡಗಳ ನಡುವೆ (ಸೆಪ್ಟೆಂಬರ್ 25) ಮತ್ತು ಅರ್ಹತಾ ಸುತ್ತಿನ ತಂಡ-ಸೌತ್ ಆಸ್ಟ್ರೇಲಿಯಾ (ಸೆ. 27) ತಂಡಗಳ ನಡುವೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ವೇಳಾಪಟ್ಟಿಯಲ್ಲಿ ಬದಲಾವಣೆಯಾದ ಕಾರಣ ಇಲ್ಲಿ ಒಟ್ಟು ಮೂರು ಪ್ರಧಾನ ಹಂತದ ಪಂದ್ಯಗಳನ್ನು ನೋಡುವ ಅವಕಾಶ ಕ್ರೀಡಾಭಿಮಾನಿಗಳಿಗೆ ಲಭಿಸಿದೆ.ಅರ್ಹತಾ ಸುತ್ತಿನ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳ ನಡುವೆ ಸೆ. 29ರಂದು ಕೋಲ್ಕತ್ತದಲ್ಲಿ ನಡೆಯಬೇಕಿದ್ದ  ಪಂದ್ಯ ಇದೀಗ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರಿಂದ ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ಸಂಖ್ಯೆ 10ಕ್ಕೆ ಏರಿದೆ.`ಈ ಘಟನೆಯಿಂದ ನಮಗೆ ಬೇಸರವಾಗಿದೆ. ಚಾಂಪಿಯನ್ಸ್ ಟೂರ್ನಿಯ ಪಂದ್ಯಗಳ ಆತಿಥ್ಯ ವಹಿಸಲು ಸಾಧ್ಯವಾಗುತ್ತಿಲ್ಲ. ಈ ಟೂರ್ನಿ ಆಯೋಜಿಸಲು ಸಾಕಷ್ಟು ಆಸಕ್ತಿ ಇತ್ತು. ಆದರೂ ಅನಿವಾರ್ಯವಾಗಿ ಈ ನಿರ್ಧಾರ ತಗೆದುಕೊಳ್ಳಬೇಕಾಗಿದೆ. ಸದ್ಯದ ವಾತಾವರಣದಲ್ಲಿ ಏನೂ ಮಾಡುವಂತಿಲ್ಲ~ ಎಂದು ಸಿಎಬಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಬೇಸರ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.