ಚಾಂಪಿಯನ್ ಆಸ್ಟ್ರೇಲಿಯಾ ಮಿಂಚು

7

ಚಾಂಪಿಯನ್ ಆಸ್ಟ್ರೇಲಿಯಾ ಮಿಂಚು

Published:
Updated:
ಚಾಂಪಿಯನ್ ಆಸ್ಟ್ರೇಲಿಯಾ ಮಿಂಚು

ನಾಲ್ಕು ಬಾರಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಸವಾಲುಗಳು ಎದುರಾಗಿದ್ದು ತೀರ ಕಡಿಮೆ. ಕಳೆದ ಮೂರು ವಿಶ್ವಕಪ್‌ಗಳಲ್ಲಿ ಅದಕ್ಕೆ ಆಘಾತ ನೀಡುವಂಥ ಶಕ್ತಿಯನ್ನು ಯಾವುದೇ ತಂಡವೂ ತೋರಿಲ್ಲ.ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮಾತ್ರವಲ್ಲ, ಈ ತಂಡದ ಆಟಗಾರರ ವೈಯಕ್ತಿಕ ಪ್ರದರ್ಶನವೂ ಗಮನ ಸೆಳೆಯುವಂಥದು. ತಂಡದ ಯಶಸ್ಸಿನಲ್ಲಿ ಬಲವುಳ್ಳ ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಹಾಗೂ ಆಟಗಾರರ ಯಶಸ್ಸಿನ ಕಡೆಗೆ ನೋಟ ಬೀರುವ ವಿವರಗಳು ಇಲ್ಲಿವೆ.

* ವಿಶ್ವಕಪ್‌ನಲ್ಲಿ 60ಕ್ಕೂ ಹೆಚ್ಚು ಪಂದ್ಯಗಳಲ್ಲಿ ಆಡಿರುವ ಶ್ರೇಯವನ್ನು ಹೊಂದಿರುವುದು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಮಾತ್ರ. ಇಂಗ್ಲೆಂಡ್, ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡದವರು ಐವತ್ತಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದಾರೆ. 1975ರಲ್ಲಿ ಮಾತ್ರ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿದ್ದ ಪೂರ್ವ ಆಫ್ರಿಕಾ, 2007ರಲ್ಲಿ ಅರ್ಹತೆ ಗಳಿಸಿದ ಬರ್ಮುಡಾ ಅತ್ಯಂತ ಕಡಿಮೆ ಪಂದ್ಯ ಆಡಿವೆ. ಇವೆರಡೂ ತಂಡಗಳು ಪ್ರಥಮ ಹಂತದಲ್ಲಿ ತಲಾ ಮೂರು ಪಂದ್ಯಗಳನ್ನು ಮಾತ್ರ ಆಡಿವೆ. ಹೆಚ್ಚು ಗೆಲುವಿನ ಗೌರವ ಪಡೆದಿರುವುದು ಆಸ್ಟ್ರೇಲಿಯಾ ಎನ್ನುವುದು ಅಚ್ಚರಿಯ ವಿಷಯವೇನಲ್ಲ. ಏಕೆಂದರೆ ಅದು ನಾಲ್ಕು ಬಾರಿ ಚಾಂಪಿಯನ್ ಪಟ್ಟವನ್ನು ಪಡೆದ ತಂಡ.* ಆಸ್ಟ್ರೇಲಿಯಾದವರು ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿದ್ದು ಭಾರತ ಹಾಗೂ ಜಿಂಬಾಬ್ವೆ ವಿರುದ್ಧ (ತಲಾ ಏಳು ಬಾರಿ). ವೆಸ್ಟ್ ಇಂಡೀಸ್ ಎದುರು ವಿಶ್ವಕಪ್‌ನ ಒಂಬತ್ತು ಪಂದ್ಯಗಳಲ್ಲಿ ಐದು ಬಾರಿ ಸೋತಿದೆ ಎನ್ನುವುದು ಗಮನ ಸೆಳೆಯುವಂಥ ಅಂಶ. ಇಷ್ಟೊಂದು ಸೋಲನ್ನು ಬೇರೆ ಯಾವುದೇ ತಂಡದ ಎದುರು ಕಾಂಗರೂಗಳ ನಾಡಿನವರು ಅನುಭವಿಸಿಲ್ಲ. ಬಾಂಗ್ಲಾದೇಶ, ಕೆನಡಾ, ಐರ್ಲೆಂಡ್, ಕೀನ್ಯಾ, ನಮೀಬಿಯಾ, ಹೇಲೆಂಡ್ ಹಾಗೂ ಸ್ಕಾಟ್ಲೆಂಡ್ ವಿರುದ್ಧ ಸೋಲಿನ ಆಘಾತ ಪಡೆದಿಲ್ಲ.* ಕಾಂಗರೂಗಳ ನಾಡಿನ ತಂಡವು ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು ದಕ್ಷಿಣ ಆಫ್ರಿಕಾ ವಿರುದ್ಧ. 24ನೇ ಮಾರ್ಚ್ 2007ರಲ್ಲಿ 7.54ರ ಸರಾಸರಿಯಲ್ಲಿ 377 ರನ್ ಗಳಿಸಿತ್ತು. ಕಳೆದುಕೊಂಡಿದ್ದು ಆರು ವಿಕೆಟ್. ಆಸ್ಟ್ರೇಲಿಯಾ ವಿವಿಧ ಪಂದ್ಯಗಳಲ್ಲಿ ಹದಿಮೂರು ಬಾರಿ ಮುನ್ನೂರಕ್ಕೂ ಅಧಿಕ ಮೊತ್ತವನ್ನು ಗಳಿಸಿದೆ. ಅತಿ ಕಡಿಮೆ ಮೊತ್ತಕ್ಕೆ ಕುಸಿದಿದ್ದು ಭಾರತದ ವಿರುದ್ಧ. 20ನೇ ಜೂನ್ 1983ರಲ್ಲಿ ಚೆಮ್‌ಸ್ಫೋರ್ಡ್ ಪಂದ್ಯದಲ್ಲಿ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ 38.2 ಓವರುಗಳಲ್ಲಿ 129ಕ್ಕೆ ಆಲ್‌ಔಟ್ ಆಗಿತ್ತು. ಆಸೀಸ್ ಪಡೆಯು ನೂರು ರನ್‌ಗಳ ಗಡಿಯಲ್ಲಿ ಯಾವುದೇ ಪಂದ್ಯದಲ್ಲಿ ಆಲ್‌ಔಟ್ ಆಗಿಲ್ಲ ಎನ್ನುವುದು ವಿಶೇಷ.* ನಾಲ್ಕು ಸಾರಿ ಆಸ್ಟ್ರೇಲಿಯಾ ತಂಡದವರು ಇನ್ನೂರಕ್ಕೂ ಹೆಚ್ಚು ರನ್‌ಗಳ ಅಂತರದ ವಿಜಯ ಸಾಧಿಸಿದ್ದಾರೆ. ನಮೀಬಿಯಾ ಎದುರು 256 (27ನೇ ಫೆಬ್ರುವರಿ 2003), ಹಾಲೆಂಡ್ ವಿರುದ್ಧ 229 (18ನೇ ಮಾರ್ಚ್ 2007), ನ್ಯೂಜಿಲೆಂಡ್ ಎದುರು 215 (20ನೇ ಏಪ್ರಿಲ್ 2007), ಸ್ಕಾಟ್ಲೆಂಡ್ ವಿರುದ್ಧ 203 (14ನೇ ಮಾರ್ಚ್ 2007) ರನ್‌ಗಳ ಅಂತರದ ವಿಜಯ ಸಾಧಿಸಿತ್ತು. ಹತ್ತು ವಿಕೆಟ್‌ಗಳ ಅಂತರದ ಗೆಲುವು ಪಡೆದಿದ್ದು ಒಮ್ಮೆ ಮಾತ್ರ. 31ನೇ ಮಾರ್ಚ್ 2007ರಲ್ಲಿ ನಾರ್ಥ್ ಸೌಂಡ್‌ನಲ್ಲಿ ಬಾಂಗ್ಲಾದೇಶವು ನೀಡಿದ್ದ 105 ರನ್‌ಗಳ ಗುರಿಯನ್ನು 49 ಎಸೆತಗಳು ಬಾಕಿ ಇರುವಂತೆಯೇ ತಲುಪಿತ್ತು.* ಈ ತಂಡದ ರಿಕಿ ಪಾಂಟಿಂಗ್ (1537), ಆ್ಯಡಮ್ ಗಿಲ್‌ಕ್ರಿಸ್ಟ್ (1085) ಹಾಗೂ ಮಾರ್ಕ್ ವಾ (1004) ಅವರು ವಿಶ್ವಕಪ್‌ನಲ್ಲಿ ಒಟ್ಟಾರೆಯಾಗಿ ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಶಕ್ತಿ ಏನೆಂದು ಸಾಬೀತುಪಡಿಸಿದ್ದಾರೆ. ಆಸ್ಟ್ರೇಲಿಯಾ ಪರ ಇಪ್ಪತ್ತೊಂದು ಶತಕಗಳು ವಿಶ್ವಕಪ್‌ನಲ್ಲಿ ದಾಖಲಾಗಿವೆ. ಆದರೆ 150ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದು ಮ್ಯಾಥ್ಯೂ ಹೇಡನ್ (158; 143 ಎ., 14 ಬೌಂಡರಿ, 4 ಸಿಕ್ಸರ್; ವೆಸ್ಟ್ ಇಂಡೀಸ್ ವಿರುದ್ಧ, 27ನೇ ಮಾರ್ಚ್ 2007) ಮಾತ್ರ.* ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ ಒಟ್ಟಾರೆಯಾಗಿ ಹೆಚ್ಚು ವಿಕೆಟ್ ಕಬಳಿಸಿದ್ದು ಗ್ಲೆನ್ ಮೆಕ್‌ಗ್ರಾ (71). ಇಪ್ಪತ್ತಕ್ಕೂ ಹೆಚ್ಚು ವಿಕೆಟ್ ಕೆಡವಿದವರ ಪಟ್ಟಿಯಲ್ಲಿ ಬ್ರಾಡ್ ಹಾಗ್ (34), ಶೇನ್ ವಾರ್ನ್ (32), ಕ್ರೇಗ್ ಮೆಕ್‌ಡೆರ್ಮಾಟ್ (27), ಸ್ಟೀವ್ ವಾ (27), ಡೇಮಿಯನ್ ಫ್ಲೆಮಿಂಗ್ (26), ಶಾನ್ ಟೈಟ್ (23) ಹಾಗೂ ಬ್ರೆಟ್ ಲೀ (22) ಅವರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry