ಬುಧವಾರ, ನವೆಂಬರ್ 13, 2019
28 °C

ಚಾಕುವಿನಿಂದ ಇರಿದು ಕೊಲೆ

Published:
Updated:

ಬೆಂಗಳೂರು: ಅಶೋಕನಗರ ಬಳಿಯ ಆನೇಪಾಳ್ಯದಲ್ಲಿ ದುಷ್ಕರ್ಮಿಗಳು ಸೋಮವಾರ ರಾತ್ರಿ ಲೋಕೇಶ್ (35) ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.ಲೋಕೇಶ್ ಜತೆಗಿದ್ದ ಅವರ ಸ್ನೇಹಿತ ಶಂಕರ್ (30) ಎಂಬುವರ ಮೇಲೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳು ಶಂಕರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಆನೇಪಾಳ್ಯ ನಿವಾಸಿಗಳಾದ ಲೋಕೇಶ್ ಮತ್ತು ಶಂಕರ್ ರಾತ್ರಿ 11 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಐದು ಮಂದಿ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ, ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಲೋಕೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.`ಆನೇಪಾಳ್ಯದ ಪಳನಿ ಮತ್ತು ಲೋಕೇಶ್ ನಡುವೆ ಹಣಕಾಸು ವಿಷಯವಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಪಳನಿ ಸಹಚರರ ಜತೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾನೆ. ಲೋಕೇಶ್ ಜತೆ ಹೋಟೆಲ್‌ನಲ್ಲಿ ಊಟ ಮಾಡಿಕೊಂಡು ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಪಳನಿ, ದಿನೇಶ್, ಡೊಮಿನಿಕ್, ಗೋಪಿ ಮತ್ತು ಸತ್ಯ ಅವರು ಆನೇಪಾಳ್ಯ ಐದನೇ ಅಡ್ಡರಸ್ತೆಯಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಪರಾರಿಯಾದರು ಎಂದು ಶಂಕರ್ ಹೇಳಿಕೆ ಕೊಟ್ಟಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)