ಮಂಗಳವಾರ, ನವೆಂಬರ್ 12, 2019
28 °C

ಚಾಕುವಿನಿಂದ ಇರಿದು ವಿದ್ಯಾರ್ಥಿ ಕೊಲೆ

Published:
Updated:

ಶೃಂಗೇರಿ: ಪಟ್ಟಣದ ಭಾರತೀಬೀದಿಯಿಂದ ಮಾನ ಗಾರಿಗೆ ಸಂಪರ್ಕ ಕಲ್ಪಿಸುವ ಕಾಲು ದಾರಿಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿ ಹರ್ಷ(20) ಕೊಲೆಯಾದ ವ್ಯಕ್ತಿ. ವಿರಳ ಜನಸಂಚಾರ ಇರುವ ಕಾಲುದಾರಿಯಲ್ಲಿ ಘಟನೆ ನಡೆದಿರುವ ಕಾರಣ ಮಂಗಳವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ. ಪಟ್ಟಣದ ಹೊರವಲಯದ ಗಿಣಿಗಿಣಿ ವಾಸಿಯಾದ ಹರ್ಷನ ಎದೆಗೆ ಚಾಕುವಿನಿಂದ ಬಲವಾಗಿ ಇರಿಯಲಾಗಿದ್ದು, ಹತ್ತಿರದಲ್ಲೇ ಇರುವ ಖಾಸಗಿ ಶಾಲೆಯ ಬಳಿ ಘರ್ಷಣೆ ನಡೆದಿರುವ ಕುರುಹುಗಳು ಪತ್ತೆಯಾಗಿವೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿಕ್ಕಮಗಳೂರಿನಿಂದ ತನಿಖೆಗಾಗಿ ತರಬೇತಿ ಪಡೆದ ಶ್ವಾನವನ್ನು ಕರೆತರುವ ವರೆಗೆ ಮೃತ ದೇಹ ಸ್ಥಳದಲ್ಲೇ ಇದ್ದ ಕಾರಣ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸ್ಥಳಕ್ಕೆ ಆಗಮಿಸಿದ ಶ್ವಾನ ಸುತ್ತಮುತ್ತ ತಿರುಗಿ ಜಾಡನ್ನು ಹಿಡಿಯಿತಾದರೂ ಯಾವುದೇ ಸ್ಪಷ್ಟವಾದ ಕುರುಹು ದೊರೆತ ಬಗ್ಗೆ ತಿಳಿದುಬಂದಿಲ್ಲ.ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದ್ದು, ಕೊಲೆಯಾದ ವ್ಯಕ್ತಿಯ ಮೊಬೈಲ್ ಕರೆಗಳನ್ನು ಪರಿಶೀಲಿಸಲಾಗಿದೆ. ಇದುವರೆಗೂ ಕೊಲೆಯ ನಿಖರ ಕಾರಣವಾಗಲಿ ಅಥವಾ ಕೊಲೆ ಮಾಡಿದವರ ಬಗ್ಗೆಯಾಗಲಿ ಮಾಹಿತಿ ದೊರೆತಿಲ್ಲ. ಪ್ರಕರಣ ಪತ್ತೆ ಹಚ್ಚಲು ಪತ್ಯೇಕ ತಂಡ ರಚಿಸಲಾಗಿದೆ ಎಂದು       ಇನ್ಸ್‌ಪೆಕ್ಟರ್ ಎಸ್.ಎಸ್. ಹಿರೇಮಠ್ ತಿಳಿಸಿದ್ದಾರೆ.ಮೃತ ವಿದ್ಯಾರ್ಥಿ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ವಿದ್ಯಾರ್ಥಿ ಸಾವಿನ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮಂಗಳವಾರ ರಜೆ ನೀಡಲಾಗಿತ್ತು.

ಪ್ರತಿಕ್ರಿಯಿಸಿ (+)