ಭಾನುವಾರ, ಏಪ್ರಿಲ್ 11, 2021
22 °C

ಚಾಕುವಿನಿಂದ ಕುತ್ತಿಗೆಗೆ ಇರಿದು ಮಹಿಳೆ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳೆಯೊಬ್ಬರ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯ ವಿಶ್ವಪ್ರಿಯ ಲೇಔಟ್‌ನಲ್ಲಿ ಗುರುವಾರ ನಡೆದಿದೆ.

ತರಕಾರಿ ಮಾರಾಟಗಾರ ಆಂಜನೇಯರೆಡ್ಡಿ ಎಂಬುವರ ಪತ್ನಿ ಮಮತಾ (26) ಕೊಲೆಯಾದ ಮಹಿಳೆ. ಆಂಜನೇಯರೆಡ್ಡಿ ಅವರು ಬೆಳಗ್ಗೆ ಐದು ಗಂಟೆಗೆ ತರಕಾರಿ ಖರೀದಿಗೆಂದು ಮಡಿವಾಳ ಮಾರುಕಟ್ಟೆಗೆ ಹೋಗಿದ್ದ ಸಂದರ್ಭದಲ್ಲಿ ಕೊಲೆ ನಡೆದಿದೆ. ಅವರ ಬಟ್ಟೆಗಳು ಅಸ್ತವ್ಯಸ್ತವಾದ ಸ್ಥಿತಿಯಲ್ಲಿದ್ದವು. ಹೀಗಾಗಿ ಅತ್ಯಾಚಾರದ ಯತ್ನದ ನಂತರ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಐದು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆಂಜನೇಯರೆಡ್ಡಿ ಅವರ ಸಂಬಂಧಿಯೊಬ್ಬರ ಮಗ ಹತ್ತು ವರ್ಷದ ಲೋಕೇಶ್ ಕೂಡಾ ಇವರೊಂದಿಗೇ ವಾಸವಿದ್ದ. ಗುರುವಾರ ಬೆಳಿಗ್ಗೆ ಎದ್ದು ಆತ ಮಮತಾ ಅವರು ಅಡುಗೆ ಕೋಣೆಯಲ್ಲಿ ಬಿದ್ದಿರುವುದನ್ನು ನೋಡಿ ಗಾಬರಿಗೊಂಡಿದ್ದಾನೆ. ನಂತರ ಅವರನ್ನು ಎಚ್ಚರಗೊಳಿಸಲು ಯತ್ನಿಸಿದ್ದಾನೆ. ಎಷ್ಟು ಎಚ್ಚರಿಸಿದರೂ ಅವರು ಏಳದಿದ್ದಾಗ ಆತ ಮನೆಯಿಂದ ಆಚೆಗೆ ಬಂದು ಸಹಾಯಕ್ಕಾಗಿ ಕೂಗಿದ್ದಾನೆ. ನಂತರ ಆಂಜನೇಯರೆಡ್ಡಿ ಅವರ ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. `ಪತಿ ಆಂಜನೇಯರೆಡ್ಡಿಯೇ ಕೊಲೆ ಮಾಡಿ ನಂತರ ಈ ನಾಟಕವಾಡುತ್ತಿರಬಹುದು ಎಂಬ ಅನುಮಾನವೂ ಇದೆ. ಶವದ ಮೇಲಿನ ಬಟ್ಟೆಗಳು ಅಸ್ತವ್ಯಸ್ತವಾಗಿದ್ದನ್ನು ಗಮನಿಸಿದರೆ ಅತ್ಯಾಚಾರದ ಯತ್ನವೂ ನಡೆದಿರುವ ಶಂಕೆ ಇದೆ. ಹೆಚ್ಚಿನ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯಿಂದ ಸತ್ಯ ಏನು ಎಂಬುದು ತಿಳಿಯಲಿದೆ~ ಎಂದು ಈಶಾನ್ಯ ವಿಭಾಗದ ಡಿಸಿಪಿ ಪಿ.ಎಸ್.ಹರ್ಷ ಹೇಳಿದ್ದಾರೆ.

ಆಂಜನೇಯರೆಡ್ಡಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತಿಳಿಸಿದ್ದಾರೆ.

ಚಿನ್ನಾಭರಣ ಕಳ್ಳತನ

ಮನೆಯ ಬಾಲ್ಕನಿ ಬಾಗಿಲಿನಿಂದ ಒಳ ಪ್ರವೇಶಿಸಿರುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿರುವ ಘಟನೆ ಆರ್.ಟಿ.ನಗರದ ನಂದಿ ಲೇಔಟ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.

ನಂದಿ ಲೇಔಟ್‌ನ ನಿವಾಸಿ ನಿಸಾರ್ ಅಹಮದ್ ಖಾನ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ನಂದಿ ಲೇಔಟ್‌ನ 6ನೇ ಅಡ್ಡರಸ್ತೆಯ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ವಾಸವಿರುವ ಅವರು ಬುಧವಾರ ರಾತ್ರಿ ಊಟಕ್ಕೆಂದು ಹೊರಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಬಾಲ್ಕನಿಯ ಬಾಗಿಲು ಮುಚ್ಚಿರಲಿಲ್ಲ. ಇದನ್ನು ಗಮನಿಸಿರುವ ದುಷ್ಕರ್ಮಿಗಳು ಬಾಲ್ಕನಿ ಬಾಗಿಲಿನಿಂದ ಒಳನುಗ್ಗಿ ಮನೆಯಲ್ಲಿದ್ದ ಚಿನ್ನದ ಸರ, ಉಂಗುರ ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಿದ್ದಾರೆ ಎಂದು ನಿಸಾರ್ ಅವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರ್.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.