ಚಾಕೃತಿಗೊಬ್ಬ ಸಚಿನ್!

ಶನಿವಾರ, ಜೂಲೈ 20, 2019
27 °C

ಚಾಕೃತಿಗೊಬ್ಬ ಸಚಿನ್!

Published:
Updated:

ವಿಶ್ವಕಪ್ ಹಿಡಿದು ಸಂಭ್ರಮಿಸುತ್ತಿರುವ ತಮ್ಮದೇ ಚಾಕ್‌ಪೀಸ್‌ನ ಕಲಾಕೃತಿ ನೋಡುತ್ತಿದ್ದಂತೆ ಸಚಿನ್ ರೋಮಾಂಚಿತರಾದರಂತೆ. ಹೈದರಾಬಾದ್‌ನಲ್ಲಿ ಈಚೆಗೆ ನಡೆದ ಐಪಿಎಲ್ ಪಂದ್ಯದ ವೇಳೆ ತಮ್ಮ ಸೀಮೆಸುಣ್ಣದ ಕಲಾಕೃತಿಗಳನ್ನು ನೋಡಿದ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದು ಹೀಗೆಂದು ಮುದಿಗೆರೆಯ ಯುವ ಕಲಾವಿದ ಎಂ.ಜೆ.ಸಚಿನ್ ಸಾಂಘೆ ವಿವರಿಸುತ್ತಾರೆ. ಹನಿಗವಿ ಡುಂಡಿರಾಜ್ ತಮ್ಮ ಸೀಮೆಸುಣ್ಣದ ಕಲಾಕೃತಿ ನೋಡುತ್ತಿದ್ದಂತೆ `ಪ್ರಿಯ ಸಚಿನ್ ಸಾಂಗೆ, ಅಲ್ಲೇ ಒಂದು ಹನಿಗವನ ರಚಿಸಿ ಸಾಂಘೆಯ ಪ್ರತಿಭೆಯನ್ನು ಕೊಂಡಾಡಿದರಂತೆ.ಬಿಡುವಿಲ್ಲದ ಒತ್ತಡದ ನೌಕರಿ ನಡುವೆಯೂ ಕಲಿಯುವ ಕುತೂಹಲ. ಹೊಸತರ ಪ್ರಯೋಗ. ಸಾಧನೆ ವಿಶಿಷ್ಟವಾಗಿರಬೇಕು. ಬೇರೆಲ್ಲರಿಗಿಂತ ವಿಭಿನ್ನವಾಗಿರಬೇಕು ಎಂಬ ತುಡಿತದಿಂದ ಸಚಿನ್‌ನ ಚಿತ್ತ `ಚಾಕೃತಿ'ಯತ್ತ ಒಲಿದಿದೆ.ಬೆಂಗಳೂರಿನ ಸಿಸ್ಕೋ ಸಿಸ್ಟಮ್ಸನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಸಚಿನ್ ಪ್ರವೃತ್ತಿಯಲ್ಲಿ ಕಲಾವಿದ. ಅದೂ ಒಂದಿಂಚಿನ ಚಿಕ್ಕ ಸೀಮೆಸುಣ್ಣದಲ್ಲಿ ಕಲಾಕೃತಿ ರಚಿಸುವ ಸೂಕ್ಷ್ಮ ಕೆಲಸ. ತಾಳ್ಮೆ, ಏಕಾಗ್ರತೆಗೆ ಸವಾಲು. ಒಂದು ಚಾಕೃತಿ ರಚನೆಗೆ ಕನಿಷ್ಠ ಹತ್ತು ಗಂಟೆ ಬೇಕು. ಕೃತಿಗಳು ಕ್ಲಿಷ್ಟವಾದಂತೆ ಸಮಯವೂ ಹೆಚ್ಚುತ್ತದೆ ಎನ್ನುತ್ತಾರೆ ಸಚಿನ್.ಹೈಸ್ಕೂಲ್‌ನಲ್ಲಿ ಓದುವಾಗ ಸೀಮೆಸುಣ್ಣದ ನಂಟು ಬೆಸೆದುಕೊಂಡಿತು. ಅಕ್ಷರಗಳನ್ನು ದುಂಡಾಗಿ ಬರೆಯುತ್ತಿದ್ದೆ ಎಂಬ ಕಾರಣಕ್ಕೆ ಶಿಕ್ಷಕರು ಕಪ್ಪು ಹಲಗೆ ಮೇಲೆ ಬರೆಯಲು ಸೂಚಿಸುತ್ತಿದ್ದರು. ಆಗಿನಿಂದಲೂ ಸೀಮೆಸುಣ್ಣದ ನಂಟಿನ ಅಂಟು. ಪೆನ್ನು-ಪುಸ್ತಕದ ಗೋಜಿಗೆ ಹೋಗದ ನನಗೆ ಸೀಮೆಸುಣ್ಣದ ಮೇಲೆ ಇನ್ನಿಲ್ಲದ ಪ್ರೀತಿ. ಇದಕ್ಕೆ ತಕ್ಕಂತೆ ಶಿಕ್ಷಕರು ಸೀಮೆಸುಣ್ಣದ ಡಬ್ಬಗಳನ್ನೇ ಕೊಡುತ್ತಿದ್ದರು. ಚಿಕ್ಕಂದಿನಿಂದಲೂ ಚಿತ್ರಕಲೆ, ಪೇಂಟಿಂಗ್, ಡ್ರಾಯಿಂಗ್ ನನ್ನ ಮೆಚ್ಚಿನ ಹವ್ಯಾಸಗಳು. ಸೀಮೆಸುಣ್ಣದಿಂದ ಇದನ್ನೆಲ್ಲಾ ಮಾಡಬಹುದು ಎಂಬುದು ಗೊತ್ತೇ ಇರಲಿಲ್ಲ. ಸದಾ ಕೈಯಲ್ಲಿರುತ್ತಿದ್ದ ಸೀಮೆಸುಣ್ಣದಿಂದ ಏನಾದರೂ ಮಾಡಬೇಕು ಎಂಬ ಕುತೂಹಲ ನನ್ನನ್ನು ಇಲ್ಲಿ ತನಕ ಕರೆತಂದಿದೆ.ಕುತೂಹಲ ತಣಿಸಲು ಆರಂಭದಲ್ಲಿ ಮೆಂಡರ್‌ನ ಬ್ಲೇಡ್ ಬಳಸಿ ಅಕ್ಷರ ಕೆತ್ತಲು ಆರಂಭಿಸಿದೆ. ಹಂತ ಹಂತವಾಗಿ ಹಿಡಿತ ಸಿಕ್ಕಿತು. ನಂತರ ವಿಭಿನ್ನ ಬಗೆಯ ಆಕಾರ ಕೆತ್ತಲು ಆರಂಭಿಸಿದೆ. ಮುಖ ರಚನೆಗೆ ಮೊದಲ ಮನ್ನಣೆ ನೀಡಿದೆ. ಕೆಲ ವರ್ಷಗಳ ನಂತರ ಎರಡು ಮೂರು ಸೀಮೆಸುಣ್ಣ ಬಳಸಿ ಪ್ರತಿಕೃತಿ ರೂಪಿಸುವುದು ಕಲಿತೆ. ಈ ನಡುವೆ ಓದಿಗಾಗಿ ಕಲೆಯಿಂದ ದೂರವುಳಿದೆ.ಪದವಿ ವ್ಯಾಸಂಗ ಪೂರ್ಣಗೊಂಡ ನಂತರ ಮತ್ತೆ ಕಲೆಯತ್ತ ಹೊರಳಿದೆ. ಇದೀಗ ಮೆಂಡರ್‌ನ ಬ್ಲೇಡ್ ಬಿಟ್ಟು ಪ್ರಯೋಗಾಲಯದಲ್ಲಿ ಬಳಸುವ ಹಿಡಿಯಿರುವ ಸೂಜಿ (ಡಿಸಕ್ಷನ್ ನೀಡಲ್) ಉಪಯೋಗಿಸಿದೆ. ಕಲಾಕೃತಿ ರಚಿಸುವಾಗ ಛಾಯಾಚಿತ್ರ ಬಳಸುವುದು ಮಾಮೂಲಿಯಾದರೂ ಮನಸ್ಸಲ್ಲೇ ಆ ಕೃತಿಯ ಪಡಿಯಚ್ಚು ಮೂಡಿಸಿಕೊಂಡು ಕೆಲಸ ಮಾಡುತ್ತೇನೆ. ನಿರೀಕ್ಷೆಗೂ ಮೀರಿ ಅದ್ಭುತ ಕಲಾಕೃತಿ ರೂಪುಗೊಳ್ಳುತ್ತವೆ. ಚಾಕ್‌ಪೀಸ್ ಬಳಸಿ ರಚಿಸುವ ಕಲಾಕೃತಿಗಳಿಗೆ ನಾನೇ `ಚಾಕೃತಿ' ಎಂದು ಹೆಸರಿಸಿದ್ದೇನೆ ಎಂಬ ವಿವರಣೆ ಸಚಿನ್ ಅವರದ್ದು.ಇದು ಹತ್ತು ವರ್ಷದ ಸಾಧನೆ. ಮಹಾತ್ಮಗಾಂಧೀಜಿ, ಜವಾಹರಲಾಲ್ ನೆಹರೂ, ಲಾಲ್‌ಬಹದ್ದೂರ್ ಶಾಸ್ತ್ರೀ, ಎಸ್. ರಾಧಾಕೃಷ್ಣನ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಕನ್ನಡ ಚಲನಚಿತ್ರ ರಂಗದ ಮೇರುನಟ ರಾಜ್‌ಕುಮಾರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಲೇಖಕರು ಸೇರಿದಂತೆ ಇತರ ಮಹನೀಯರ ಚಾಕೃತಿ ರೂಪಿಸಿದ್ದಾರೆ. ಮೊದಲು ಎರಡ್ಮೂರು ಸೀಮೆಸುಣ್ಣ ಬಳಸಿ ರಚಿಸುತ್ತಿದ್ದ ಚಾಕೃತಿಗಳನ್ನು ಇದೀಗ ಒಂದೇ ಸೀಮೆಸುಣ್ಣದಲ್ಲಿ ತಯಾರಿಸುವಷ್ಟು ಪ್ರವೀಣರು.

ಇದರ ಜತೆ ಲಾಂಛನ ಸಹಿತ 24 ಜೈನ ತೀರ್ಥಂಕರರ ಚಾಕೃತಿ, ನಾಟ್ಯ ಗಣಪತಿ, ಈಶ್ವರ, ಆಂಜನೇಯ, ಶಿರಡಿ ಸಾಯಿಬಾಬಾ ದೇವರ ಮೂರ್ತಿಗಳು, ರಾಷ್ಟ್ರ ಲಾಂಛನ, ಸ್ವಾಮಿ ವಿವೇಕಾನಂದ, ಮದರ್ ತೆರೇಸಾ ಚಾಕೃತಿಗಳು ಮೈದಳೆದಿವೆ. ಬಣ್ಣದ ಸೀಮೆಸುಣ್ಣ ಬಳಸಿ ವರ್ಣಮಯ ಕಲಾಕೃತಿಗಳು ರೂಪುಗೊಂಡಿವೆ. ಬಹುತೇಕ ಚಾಕೃತಿಗಳ ಉದ್ದ ಒಂದಿಂಚು. ಕೆಲವು ಎರಡಿಂಚಿವೆ.ಎಂಥವರನ್ನೂ ಸೂಜಿಗಲ್ಲಿನಂತೆ ತನ್ನತ್ತ ಆಕರ್ಷಿಸುವ ಮೋಹಕಶಕ್ತಿ ಈ ಚಾಕೃತಿಗಳದ್ದು. ಇವನ್ನು ನೋಡಿದ ಬಹುತೇಕರು ತಮ್ಮ, ತಮ್ಮಿಷ್ಟ ದೈವ, ಇಷ್ಟಪಟ್ಟವರ ಚಾಕೃತಿ ಕೆತ್ತಿ ಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಸಾಕಷ್ಟು ಬೇಡಿಕೆ ಇಟ್ಟಿದ್ದಾರೆ. ಆದರೆ ದುಡ್ಡಿಗೆ ಮನ್ನಣೆ ನೀಡದ ಸಚಿನ್ ಕೆಲ ಆತ್ಮೀಯರಿಗಷ್ಟೇ ಚಾಕೃತಿ ನೀಡಿದ್ದಾರೆ.ತಾಲ್ಲೂಕು ಸಾಹಿತ್ಯ ಸಮ್ಮೇಳನ, ಕನ್ನಡ ರಾಜ್ಯೋತ್ಸವ, ಮಹಾವೀರ ಜಯಂತಿ ಸಂದರ್ಭಗಳಲ್ಲಿ ತಮ್ಮ ಚಾಕೃತಿಗಳ ಪ್ರದರ್ಶನ ಏರ್ಪಡಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈಚೆಗೆ ಜೈನ ಧಾರ್ಮಿಕ ಕಾರ್ಯಕ್ರಮಗಳು ನಡೆದ ಶಿವಮೊಗ್ಗದ ಹೊಂಬುಜ ಕ್ಷೇತ್ರ, ಬೆಂಗಳೂರು, ತುಮಕೂರು ಜಿಲ್ಲೆಯ ಗುಬ್ಬಿ, ಕೊರಟಗೆರೆ ತಾಲ್ಲೂಕು ಅಕ್ಕಿರಾಂಪುರ, ಗೌರಿಬಿದನೂರು ಇತರೆಡೆ ಚಾಕೃತಿಗಳ ಪ್ರದರ್ಶನ ಏರ್ಪಡಿಸಿದ್ದರು. `ಚಾಕೃತಿ' ಕಲೆಯನ್ನು ಬೆಳೆಸಬೇಕು. ಎಲ್ಲೆಡೆ ಇದಕ್ಕೆ ಮನ್ನಣೆ ಸಿಗುವಂತೆ ಮಾಡಬೇಕು ಎಂಬ ಮಹದಾಸೆ ಹೊಂದಿರುವ ಸಚಿನ್‌ರನ್ನು 9972248144 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry