ಚಾಕೊಲೇಟ್, ಗಾಸಿಪ್, ಮದುವೆ

7

ಚಾಕೊಲೇಟ್, ಗಾಸಿಪ್, ಮದುವೆ

Published:
Updated:

`ದಬಂಗ್~ ತೆರೆಕಂಡು ವರ್ಷವಾಯಿತು; ಸೋನಾಕ್ಷಿ ಸಿನ್ಹ ಬದುಕು ಈ ಅವಧಿಯಲ್ಲಿ ಯದ್ವಾತದ್ವಾ ಬದಲಾಗಿದೆ. ರಾತ್ರಿ ಪಾರ್ಟಿಗಳು ಕಡಿಮೆಯಾಗಿವೆ. ದೇಹತೂಕ ಹದಿನೈದು ಕೇಜಿಯಷ್ಟು ಇಳಿದಿದೆ. ಸೂರ್ಯ ನೆತ್ತಿಗೆ ಬಂದಮೇಲೆ ಹಾಸಿಗೆಯಿಂದ ಏಳುತ್ತಿದ್ದ ಚಾಳಿ ಬಿಟ್ಟಾಗಿದೆ. ಒಂದು ಡಜನ್ ಗಾಸಿಪ್‌ಗಳು ಸುತ್ತಿಕೊಂಡಿವೆ. ರಣಬೀರ್ ಸಿಂಗ್ ಜೊತೆಗೆ ಹೆಸರು ತಳುಕು ಹಾಕಿಕೊಂಡಿದೆ.ಸೋನಾಕ್ಷಿ ಈ ಬದಲಾವಣೆಗಳನ್ನೆಲ್ಲಾ ಸ್ವೀಕರಿಸುತ್ತಾ, ಎಷ್ಟು ಬೇಕೋ ಅಷ್ಟೇ ಪ್ರತಿಕ್ರಿಯಿಸುತ್ತಾ ಸಂಬಂಧಗಳನ್ನು ಸಂಭಾಳಿಸಿಕೊಂಡು ಬರುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ಮಿಸಿ, ಪ್ರಭುದೇವ ನಿರ್ದೇಶಿಸುತ್ತಿರುವ `ರೌಡಿ ರಾಥೋಡ್~ ಚಿತ್ರಕ್ಕೆ ಕಾಲ್‌ಷೀಟ್ ಕೊಡಲು ಅವರು ಕಮಲಹಾಸನ್‌ಗೆ ಕೊಟ್ಟ್ದ್ದಿದ ಡೇಟ್ಸ್ ರದ್ದುಪಡಿಸಿರುವುದು ವಿಶೇಷ.`ವಿಶ್ವ ರೂಪಂ~ ಚಿತ್ರಕ್ಕೆ ನಾಯಕಿಯಾಗುವಂತೆ ಸೋನಾಕ್ಷಿಯನ್ನು ಕಮಲಹಾಸನ್ ಕೇಳಿದ್ದರು. ಅಂಥ ದೊಡ್ಡ ನಟ ಕೇಳಿದರೆ ಇಲ್ಲವೆನ್ನಲಾದೀತೆ? ನಟಿ ಒಪ್ಪಿದರು. ಆದರೆ, ತಿಂಗಳು ಉರುಳಿದರೂ ಸಿನಿಮಾ ಸೆಟ್ಟೇರುವ ಲಕ್ಷಣ ಕಾಣಿಸಲಿಲ್ಲ. ಈ ಕಾಲದ ಹುಡುಗಿಯಾದ ಸೋನಾಕ್ಷಿ, ಸಂಜಯ್ ಲೀಲಾ ಬನ್ಸಾಲಿ ಡೇಟ್ ಕೇಳಿದ್ದೇ ತಡ ಅತ್ತಕಡೆ ವಾಲಿದರು. ಇನ್ನು ಕಮಲಹಾಸನ್ ಮತ್ತೆ ಕರೆದರೂ ಡೇಟ್ಸ್ ಲಭ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದೂ ಆಗಿದೆ.ದೇಹಾಕಾರ ತುಸು ಹೆಚ್ಚೇ ಇದ್ದದ್ದರಿಂದಲೋ ಏನೋ ಸೋನಾಕ್ಷಿ ಹಿರಿಯ ನಟರಿಗೇ ಇದುವರೆಗೆ ಜೋಡಿಯಾಗಿರುವುದು. ಸಲ್ಮಾನ್ ಖಾನ್ ಜೊತೆ `ದಬಂಗ್~ನಲ್ಲಿ ನಟಿಸಿದ ನಂತರ ಅಕ್ಷಯ್ ಕುಮಾರ್‌ಗೆ `ಜೋಕರ್~ ಚಿತ್ರದಲ್ಲಿ ಜೋಡಿಯಾದರು. `ರೌಡಿ ರಾಥೋಡ್~ನಲ್ಲೂ ಮತ್ತೆ ಅವರೇ ನಾಯಕ. ಒಂದು ಮೂಲದ ಪ್ರಕಾರ ಖುದ್ದು ಅಕ್ಷಯ್, ಇವರೇ ನಾಯಕಿಯಾಗಲಿ ಎಂದು ಶಿಫಾರಸು ಮಾಡಿದ್ದಾರಂತೆ. ಹೊಸಬರನ್ನು ಆಯ್ಕೆ ಮಾಡಿಕೊಳ್ಳುವಾಗ ಹೆಚ್ಚು ನಿಗಾ ವಹಿಸುವ ಸಂಜಯ್ ಲೀಲಾ ಬನ್ಸಾಲಿ ಕೂಡ ಈ ನಟಿಯ ವಿಷಯದಲ್ಲಿ ಮುಕ್ತವಾಗಿರುವುದರ ಕುರಿತೂ ಬಾಲಿವುಡ್ ಚಕಿತಗೊಂಡಿದೆ.`ನಾನು ಈಗ ಯಾರ ಸ್ಕ್ರೀನ್ ಟೆಸ್ಟ್‌ಗೂ ಒಪ್ಪುವುದಿಲ್ಲ. ದಬಂಗ್ ಚಿತ್ರವೇ ನನ್ನ ಪಾಲಿಗೆ ಸ್ಕ್ರೀನ್ ಟೆಸ್ಟ್. ನನಗೆ ಅವಕಾಶ ಕೊಟ್ಟವರೆಲ್ಲಾ ಅದನ್ನು ನೋಡಿದವರೇ. ಸಂಜಯ್ ಕೂಡ ಸ್ಕ್ರೀನ್ ಟೆಸ್ಟ್ ಮಾಡಲಿಲ್ಲ. ಹಿರಿಯ ನಟರ ಜೊತೆಗೆ ಅಭಿನಯಿಸುವ ಯೋಗ ನನಗೆ ಬಂದಿದೆ. ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಕಲಿತಿದ್ದೇನೆ.ಇನ್ನು ಮುಂದೆ ಅಳೆದೂ ತೂಗಿಯೇ ನಾನು ಪಾತ್ರಗಳನ್ನು ಒಪ್ಪಿಕೊಳ್ಳುವುದು~ ಎನ್ನುವ ಸೋನಾಕ್ಷಿಗೆ ಹಣ್ಣೆಂದರೆ ಇಷ್ಟವಿಲ್ಲ. ಸ್ವಿಟ್ಜರ‌್ಲೆಂಡ್ ಚಾಕೊಲೇಟ್‌ಗಳೆಂದರೆ ಪ್ರಾಣ. ದೇಹತೂಕ ಕಾಪಾಡಿಕೊಳ್ಳುವ ಹೊಣೆಗಾರಿಕೆ ಇರುವುದರಿಂದ ಚಾಕೊಲೇಟ್ ಮೋಹ ಅತಿಯಾಗಕೂಡದೆಂಬ ಅರಿವೂ ಉಂಟು.`ಕಾಫಿ ವಿತ್ ಕರಣ್~ ಟೀವಿ ಕಾರ್ಯಕ್ರಮದಲ್ಲಿ `ನನಗೆ ರಣಬೀರ್ ಜೊತೆ ನಟಿಸುವ ಆಸೆಯಿದೆ~ ಎಂದು ಸೋನಾಕ್ಷಿ ಹೇಳಿದ್ದೇ ಗಾಸಿಪ್ ಪ್ರಿಯರಿಗೆ ಸಿಪ್ಪಾಯಿತು. ಇಬ್ಬರೂ ಡೇಟಿಂಗ್ ಮಾಡುತ್ತಾರೆ, ಸುತ್ತಾಡುತ್ತಾರೆ, ಕಷ್ಟ-ಸುಖ ಹಂಚಿಕೊಳ್ಳುತ್ತಾರೆ ಎಂದೆಲ್ಲಾ ಸುದ್ದಿ ಹಬ್ಬಿತು. `ಒಂದು ಟೀವಿ ಚಾನೆಲ್ ಅಂತೂ ನಮ್ಮಿಬ್ಬರ ಬಗ್ಗೆ ಮಿತಿಮೀರಿ ಮಾತಾಡಿತು.ನಾನು ಆ ಚಾನೆಲ್ಲನ್ನೇ ಬ್ಯಾನ್ ಮಾಡಿದೆ. ಇನ್ನು ಮುಂದೆ ಆ ಚಾನೆಲ್‌ಗೆ ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ~ ಎಂಬ ತೀರ್ಮಾನಕ್ಕೆ ಸೋನಾಕ್ಷಿ ಬಂದಿದ್ದಾರೆ. ಒಂದು ಚಾನೆಲ್ಲನ್ನೇ ಒಬ್ಬ ನಟಿ ನಿಷೇಧಿಸುವುದು ಚಕಿತಗೊಳಿಸುವ ಸಂಗತಿ.ಸೋನಾಕ್ಷಿ  ಮೆಚ್ಚಿನ ನಟ ಈಗಲೂ ಸಲ್ಮಾನ್ ಖಾನ್. ಮುಂದೆ ಅವರೊಟ್ಟಿಗೆ ಇನ್ನೊಂದು ಚಿತ್ರ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ.`ನನಗೆ ವೃತ್ತಿಬದುಕಿನ ಪಾಠ ಕಲಿಸಿದ್ದು, ಅವಕಾಶ ಕೊಟ್ಟಿದ್ದು ಸಲ್ಮಾನ್ ಖಾನ್. ಅವರು ನಮ್ಮ ಕುಟುಂಬದ ಒಳ್ಳೆಯ ಗೆಳೆಯ. ಈಗಲೂ ಮನೆಯಲ್ಲಿನ ಬರ್ತ್‌ಡೇ, ಆ್ಯನಿವರ್ಸರಿಗಳಿಗೆ ಅವರು ಕಾಯಂ ಅತಿಥಿ. ಅಪ್ಪನಿಗೂ (ಶತ್ರುಘ್ನ ಸಿನ್ಹ) ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಹಿತೈಷಿಯ ಜೊತೆ ಕೆಲಸ ಮಾಡುವುದು ಎಂದಿಗೂ ಹಿತಾನುಭವ~- ಇದು ಸೋನಾಕ್ಷಿ ಅನುಭವ ನುಡಿ.ಡೇಟಿಂಗ್‌ನಲ್ಲಿ ಒಲವಿಲ್ಲದ ಸೋನಾಕ್ಷಿಗೆ ಚಿತ್ರೋದ್ಯಮದಲ್ಲಿ ಹುಡುಗಿಯರನ್ನೇ ಗಾಸಿಪ್ ಹೆಚ್ಚಾಗಿ ಸುತ್ತಿಕೊಳ್ಳುತ್ತದೆಂಬುದಕ್ಕೆ ಬೇಸರವಿದೆ. ಗಾಳಿಸುದ್ದಿಗಳನ್ನು ಓದಿ ಮನಸ್ಸು ಕೆಡಿಸಿಕೊಳ್ಳಬಾರದೆಂದು ಅವರು ಪತ್ರಿಕೆ, ನಿಯತಕಾಲಿಕೆಗಳನ್ನು ಓದುವ, ಸುದ್ದಿ ಚಾನೆಲ್‌ಗಳನ್ನು ನೋಡುವ ಉಸಾಬರಿಗೇ ಹೋಗುವುದಿಲ್ಲ. ಬಿಡುವಿನಲ್ಲಿ ಗೆಳತಿಯರೊಟ್ಟಿಗೆ ಸುತ್ತುವುದು, ಶಾಪಿಂಗ್ ಮಾಡುವುದಷ್ಟೇ ಕೆಲಸ.`ಮದುವೆ ಅಂತ ಆದರೆ ಸಿನಿಮಾ ನಟರನ್ನು ಮಾತ್ರ ಎಂದಿಗೂ ಆಗುವುದೇ ಇಲ್ಲ~ ಎಂಬ ಸಂಕಲ್ಪವನ್ನು ಅವರು ಮಾಡಿದ್ದಾರೆ. `ಮದುವೆ ಆಗದೆ ಸುತ್ತಾಡಲು ಅಡ್ಡಿಯಿಲ್ಲ ಅಲ್ಲವೇ~ ಎಂದು ಇನ್ನೊಂದು ಪ್ರಶ್ನೆ ಹೊಮ್ಮಿದರೆ ಅವರು ಸಿಟ್ಟಾಗುತ್ತಾರೆ. ಕೆನ್ನೆ ಕೆಂಪಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry