ಗುರುವಾರ , ನವೆಂಬರ್ 14, 2019
23 °C
ಜೆಪಿಸಿ ಹೋಳು: `2ಜಿ' ಹಗರಣ ವಿಚಾರಣೆಗೆ ಹಿನ್ನಡೆ?

ಚಾಕೊ ವಜಾಕ್ಕೆ ಪಟ್ಟು

Published:
Updated:

ನವದೆಹಲಿ: `2ಜಿ' ತರಂಗಾಂತರ ಹಗರಣ' ವಿಚಾರಣೆಗೆ ನೇಮಕವಾಗಿರುವ 30 ಸದಸ್ಯರ `ಜಂಟಿ ಸದನ ಸಮಿತಿ' (ಜೆಪಿಸಿ) ಗುರುವಾರ ಎರಡು ಹೋಳಾಗಿದೆ.ವಿರೋಧ ಪಕ್ಷಗಳಿಗೆ ಸೇರಿದ 15 ಸದಸ್ಯರು ಜೆಪಿಸಿ ಅಧ್ಯಕ್ಷ ಪಿ.ಸಿ. ಚಾಕೊ ಮೇಲೆ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ `ಜಿ ತರಂಗಾಂತರ ಹಂಚಿಕೆ ವಿಷಯದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಸಂಬಂಧ ಹೊಂದಿದ್ದ' ಮೂವರು ಬಿಜೆಪಿ ಸದಸ್ಯರನ್ನು ಸಮಿತಿಯಿಂದ ಕೈಬಿಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.ಬಿಜೆಪಿ, ಎಡಪಕ್ಷ ಒಳಗೊಂಡಂತೆ ಎಂಟು ಪಕ್ಷಗಳ 14 ಸದಸ್ಯರು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರನ್ನು ಮಧ್ಯಾಹ್ನ ಭೇಟಿ ಮಾಡಿ ಜೆಪಿಸಿ ಅಧ್ಯಕ್ಷರ ಮೇಲೆ ಅವಿಶ್ವಾಸ ವ್ಯಕ್ತಪಡಿಸುವ ಪತ್ರ ನೀಡಿದರು. ಚಾಕೊ ಅವರನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿದರು. ಜೆಡಿಯುಗೆ ಸೇರಿದ ಮತ್ತೊಬ್ಬ ಸದಸ್ಯರು ಅನಂತರ ಇದೇ ಧಾಟಿಯ ಪ್ರತ್ಯೇಕ ಪತ್ರ ಕೊಟ್ಟರು.ಈ ಮಧ್ಯೆ, ಜೆಪಿಸಿ ಸದಸ್ಯ ಬಿಜೆಪಿಯ ಯಶವಂತ ಸಿನ್ಹಾ, ಜಸ್ವಂತ್ ಸಿಂಗ್ ಹಾಗೂ ರವಿಶಂಕರ್ ಪ್ರಸಾದ್ ಅವರನ್ನು `ಹಿತಾಸಕ್ತಿಗಳ ಸಂಘರ್ಷ'ದ ಹಿನ್ನೆಲೆಯಲ್ಲಿ ತೆಗೆದುಹಾಕಬೇಕು, ಇಲ್ಲವೆ ಮತದಾನ ಮಾಡದಂತೆ ನಿರ್ಬಂಧಿಸಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದ್ದಾರೆ. ಆರು ಸಂಸದರು ಸ್ಪೀಕರ್‌ಗೆ ನೀಡಿರುವ ಪತ್ರಕ್ಕೆ ಸಹಿ ಹಾಕಿದ್ದಾರೆ. ಎರಡೂ ಮನವಿಗಳ ಭವಿಷ್ಯ ಮೀರಾಕುಮಾರ್ ಅವರ ಕೈಯಲ್ಲಿದೆ.`2ಜಿ' ಹಗರಣಕ್ಕೆ ಸಂಬಂಧಿಸಿದ ಕರಡು ವರದಿ ಕುರಿತು ಚರ್ಚಿಸಲು ಮಧ್ಯಾಹ್ನ ಮೂರು ಗಂಟೆಗೆ ಕರೆಯಲಾಗಿದ್ದ ಜೆಪಿಸಿ ಸಭೆಯನ್ನು ಲೋಕಸಭೆಯ ಟಿಎಂಸಿ ಸದಸ್ಯ ಅಂಬಿಕ ಬ್ಯಾನರ್ಜಿ ಅವರ ನಿಧನದಿಂದ ಮುಂದೂಡಲಾಯಿತು. ಆದರೂ ಚಾಕೊ ಪರ ಹಾಗೂ ವಿರುದ್ಧದ ಚಟುವಟಿಕೆಗಳು ಬಿರುಸಿನಿಂದ ನಡೆದವು.ಕುತೂಹಲ ಕೆರಳಿಸಿರುವ ಒಗ್ಗಟ್ಟು: ಚಾಕೊ ಪದಚ್ಯುತಿ ವಿಚಾರದಲ್ಲಿ ರಾಜಕೀಯ ಎದುರಾಳಿಗಳಾದ ಬಿಜೆಪಿ- ಎಡಪಕ್ಷಗಳು ಮತ್ತು ಡಿಎಂಕೆ-  ಎಐಎಡಿಎಂಕೆ ಒಗ್ಗೂಡಿರುವುದು ರಾಜಕೀಯ ವಲಯದಲ್ಲಿ  ಕುತೂಹಲ ಕೆರಳಿಸಿದೆ.1999 ರಿಂದ ಈಚೆಗೆ ದೂರಸಂಪರ್ಕ ಇಲಾಖೆಯಲ್ಲಿ ರೂಪಿಸಿದ ನೀತಿ- ತೀರ್ಮಾನಗಳು ಹಾಗೂ ತರಂಗಾಂತರದ ಹಂಚಿಕೆ ಕುರಿತು ಜೆಪಿಸಿ ವಿಚಾರಣೆ ನಡೆಸುತ್ತಿದೆ.ಆದರೆ ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಈ ಮೂವರೂ ನಾಯಕರು (ಸಿನ್ಹಾ, ಜಸ್ವಂತ್, ಪ್ರಸಾದ್) ದೂರಸಂಪರ್ಕ ಇಲಾಖೆ ಸಚಿವರಾಗಿದ್ದರು, ಇಲ್ಲವೆ ಈ ಸಂಬಂಧ ನೇಮಕವಾಗಿದ್ದ ಉನ್ನತ ಸಮಿತಿ ಸದಸ್ಯರಾಗಿದ್ದರು. ಹೀಗಾಗಿ ಅವರು ಜೆಪಿಸಿಯಲ್ಲಿ ಮುಂದುವರಿಯುವುದು `ಹಿತಾಸಕ್ತಿಗಳ ಸಂಘರ್ಷ'ವಾಗಲಿದೆ ಎಂದು `ಜೆಪಿಸಿ'ಯಲ್ಲಿನ ಕಾಂಗ್ರೆಸ್ ಸದಸ್ಯರು ಪ್ರತಿಪಾದಿಸಿದ್ದಾರೆ. ಈ ಮೂವರನ್ನು ಕೈಬಿಡುವಂತೆ ಮೀರಾ ಕುಮಾರ್ ಅವರಿಗೆ ಸಲ್ಲಿಸಿರುವ ಮನವಿಗೆ ಸಹಿ ಮಾಡಿದ ಕಾಂಗ್ರೆಸ್ ಸಂಸದರಲ್ಲಿ ನಿರ್ಮಲ್ ಖತ್ರಿ ಹಾಗೂ ಜೈಪ್ರಕಾಶ್ ಅಗರವಾಲ್ ಸೇರಿದ್ದಾರೆ.ಕಾಂಗ್ರೆಸ್ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಯಶವಂತ ಸಿನ್ಹಾ, `ಎರಡು ವರ್ಷದ ಹಿಂದೆ ಸ್ಪೀಕರ್ ಈ ಸಂಬಂಧ ರೂಲಿಂಗ್ ನೀಡಿದ್ದಾರೆ. ನಮ್ಮ ವಿಷಯದಲ್ಲಿ ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಬರುವುದಿಲ್ಲ. ಜೆಪಿಸಿ ಆಯ್ಕೆ ಸಂದರ್ಭದಲ್ಲಿ ಯಾರೂ ಆಕ್ಷೇಪ ಎತ್ತಿಲ್ಲ' ಎಂದು ಸ್ಪಷ್ಟಪಡಿಸಿದರು.`ಸಂಸತ್ ನಿರ್ಣಯದ ಮೂಲಕ ಜೆಪಿಸಿ ಸದಸ್ಯರ ಆಯ್ಕೆ ನಡೆದಿದೆ. ನಾವು ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದ ಇಲ್ಲವೆ ಉನ್ನತ ಅಧಿಕಾರ ಸಮಿತಿ ಸದಸ್ಯರಾಗಿದ್ದ ಸಂಗತಿ ಎಲ್ಲರ ಗಮನದಲ್ಲಿದೆ. ಹಿಂದೆ ನಡೆದಿರುವ ಬೆಳವಣಿಗೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ನಮ್ಮ ಬದಲಾವಣೆಗೆ ಆಗ್ರಹ ಮಾಡಲಾಗುತ್ತಿದೆ' ಎಂದು ಮಾಜಿ ಹಣಕಾಸು ಸಚಿವರೂ ಆದ ಸಿನ್ಹ ದೂರಿದರು.ಸೋನಿಯಾ ಅಸಮಾಧಾನ

 ನವದೆಹಲಿ:
`ಜಂಟಿ ಸದನ ಸಮಿತಿ' ಅಧ್ಯಕ್ಷರಾಗಿ ಪಿ.ಸಿ. ಚಾಕೊ ನಡೆದುಕೊಂಡ ರೀತಿ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಅಸಮಾಧಾನ ಹೊಂದಿದ್ದಾರೆ.ಸೋನಿಯಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪ್ರಮುಖರ ಸಮಿತಿ ಸಭೆಗೆ ಚಾಕೊ ಅವರನ್ನು ಕರೆಸಿಕೊಳ್ಳಲಾಗಿತ್ತು. ಸಂಸತ್ ಅಧಿವೇಶನದ ವೇಳೆ ಜೆಪಿಸಿ ವರದಿಯ ಕರಡು ಪ್ರತಿ ಬಹಿರಂಗಪಡಿಸಿ ಬಿಕ್ಕಟ್ಟು ಸೃಷ್ಟಿಸಿದ ಬಗ್ಗೆ ಸೋನಿಯಾ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ವರದಿ ಬಗ್ಗೆ ಚರ್ಚಿಸಲು ಈಗ ಜೆಪಿಸಿ ಸಭೆ ಕರೆದಿದ್ದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.ಯುಪಿಎ ಸರ್ಕಾರ ಜಾರಿಗೆ ತರಲು ಹೊರಟಿರುವ ಮಹತ್ವದ ಭೂಸ್ವಾಧೀನ ಮತ್ತು ಆಹಾರ ಭದ್ರತೆ ಮಸೂದೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಹಂತದಲ್ಲಿ ಜೆಪಿಸಿ ಬಿಕ್ಕಟ್ಟು ಸೃಷ್ಟಿಸಿದ್ದು, ಕಾಂಗ್ರೆಸ್ ಅಧ್ಯಕ್ಷರಿಗೆ ಕೋಪ ತರಿಸಿದೆ. ಆದರೆ, ಮಸೂದೆ ಅಂಗೀಕಾರಕ್ಕೆ ಒಪ್ಪಿಗೆ ನೀಡುವಂತೆ ವಿರೋಧ ಪಕ್ಷಗಳ ಮನವೊಲಿಸಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ.ಈ ಮಧ್ಯೆ, ಜೆಪಿಸಿ ಬಿಕ್ಕಟ್ಟು ಕುರಿತು ಚರ್ಚಿಸಲು ಸ್ಪೀಕರ್ ಮೀರಾ ಕುಮಾರ್ ಶುಕ್ರವಾರ ಚಾಕೊ ಅವರನ್ನು ಕರೆದಿದ್ದಾರೆ.

 

ಪ್ರತಿಕ್ರಿಯಿಸಿ (+)