ಚಾಕೋಲೇಟ್ ಬದಲು ಕೈ ಕಿತ್ತುಕೊಂಡ ಭೀಮ...

7

ಚಾಕೋಲೇಟ್ ಬದಲು ಕೈ ಕಿತ್ತುಕೊಂಡ ಭೀಮ...

Published:
Updated:
ಚಾಕೋಲೇಟ್ ಬದಲು ಕೈ ಕಿತ್ತುಕೊಂಡ ಭೀಮ...

ಬಳ್ಳಾರಿ: ಪಾಲಕರಿರಲಿ, ಪೋಷಕರಿರಲಿ. ಚಿಕ್ಕ ಮಕ್ಕಳ ಬಗ್ಗೆ ಸ್ವಲ್ಪವೂ  ನಿರ್ಲಕ್ಷ್ಯ ತೋರಿದರೂ ಯಾವುದೇ ಕ್ಷಣ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಸೋಮವಾರ ಸಂಜೆ ಸ್ಥಳೀಯ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದ ಘಟನೆ ಉದಾಹರಣೆಯಾಗಿದೆ.

ಏನೂ ಅರಿಯದ ಮುಗ್ಧ ಮಗು, ಹುಲಿಯ ಸ್ನೇಹ ಬಯಸಿ, ಅದರ ಬೋನಿನ ಕಬ್ಬಿಣದ ಸರಳುಗಳೊಳಗೆ ಕೈಹಾಕಿ ಚಾಕೋಲೇಟ್ ನೀಡಲು ಹೋಗಿ ತನ್ನ ಕೈಯನ್ನೇ ಕಳೆದುಕೊಂಡು ಶಾಶ್ವತ ಅಂಗವಿಕಲವಾಗಿದೆ.ಅಜ್ಜಿಯೊಂದಿಗೆ ಸೋಮವಾರ ಸಂಜೆ ನಗರದ ಪ್ರಾಣಿ ಸಂಗ್ರಹಾಲಯಕ್ಕೆ ತೆರಳಿದ್ದ ಎರಡೂವರೆ ವರ್ಷದ ನಿಖಿಲ್ ಎಡಗೈ ಕಳೆದುಕೊಂಡಿರುವ ನತದೃಷ್ಟ ಮಗು.ಅಜ್ಜಿ ಜತೆಗಿದ್ದರೂ ಅವರ ಗಮನ ಬೇರೆಡೆ ಇದ್ದಾಗ, ಹುಲಿಯ ಘರ್ಜನೆಗೆ ಮನಸೋತು, ಬೋನಿನ ಬಳಿ ತೆರಳಿದ್ದ ನಿಖಿಲ್, ಕ್ಷಣಾರ್ಧದಲ್ಲಿ ಹುಲಿ (ಇದರ ಹೆಸರು ಭೀಮ) ತನ್ನ ಎಡಗೈಯನ್ನು ಸಂಪೂರ್ಣ ಕಿತ್ತು ತಿಂದಕೂಡಲೇ ಚೀರಿ ಪ್ರಜ್ಞಾಹೀನವಾಗಿದ್ದಾನೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.ಬಾಯಿಗೇ ಕೈಹಾಕುತ್ತೇವೆ: `ನಮ್ಮ ಭೀಮ ಎಂದೂ ಸಿಟ್ಟಿಗೆದ್ದವನಲ್ಲ. ನಿತ್ಯವೂ ಆಹಾರ ನೀಡುವಾಗ ನಾವು ಆತನ ಬಾಯಿಗೇ ಕೈಹಾಕುತ್ತೇವೆ. ಇದುವರೆಗೆ ನಮ್ಮ ಸೂಚನೆಯನ್ನು ಧಿಕ್ಕರಿಸಿ, ಅನೇಕರು ಅದರ ಸಮೀಪವೇ ತೆರಳಿದರೂ ಅದು ಎಂದೂ ಸಿಟ್ಟಿಗೆದ್ದಿರಲಿಲ್ಲ~ ಎಂದು ಹುಲಿಯ ಉಸ್ತುವಾರಿ ವಹಿಸಿಕೊಂಡಿರುವ ಪ್ರಾಣಿ ಸಂಗ್ರಹಾಲಯದ ನೌಕರ ಬಸವರಾಜ್ ತಿಳಿಸುತ್ತಾರೆ.`ಹೊಟ್ಟೆ ಹಸಿದರೂ ನಮ್ಮ ಭೀಮ ಕ್ರೌರ್ಯ ಮೆರೆಯುವವನಲ್ಲ. ಆ ಮಗುವಿನ ದುರದೃಷ್ಟ ಕೈ ಬಲಿಯಾಗಿದೆ. ಘಟನೆ ನಡೆಯುವುದಕ್ಕೆ ಐದು ನಿಮಿಷ ಮೊದಲು ಅಲ್ಲೇ ಇದ್ದ ನಾನು, ಹುಲ್ಲು ಕತ್ತರಿಸಲೆಂದು ಪಕ್ಕದ ಬಯಲಿಗೆ ತೆರಳಿದ್ದೆ~ ಎಂದು ತಿಳಿಸಿದ ಅವರು, ಪಾಲಕರು ಕೊಂಚ ಮೈ ಮರೆತರೂ ಇಂತಹ ಘಟನೆಗಳು ನಡೆಯುತ್ತವೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಎಷ್ಟು ಕಷ್ಟವೋ ಪ್ರಾಣಿಗಳ, ಅದರಲ್ಲೂ ಕ್ರೂರ ಪ್ರಾಣಿಗಳ ಮನಸ್ಸನ್ನೂ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಅವರು ಹೇಳಿದರು.ಮಕ್ಕಳು, ಮರಿ ಜತೆ ನಿತ್ಯವೂ ನೂರಾರು ಜನ ಇಲ್ಲಿಗೆ ಬರುತ್ತಾರೆ. ಉದ್ಯಾನದಲ್ಲಿ ಆಟವಾಡಿ ನಲಿಯುತ್ತಾರೆ. ಪ್ರಾಣಿಗಳನ್ನು ಕಂಡು ಹರ್ಷಿಸುತ್ತಾರೆ. ಹತ್ತಿರ ಹೋಗದಂತೆ ಸೂಚಿಸಲಾಗಿದ್ದರೂ, ಕೆಲವರು ಪ್ರಾಣಿಗಳ ಹತ್ತಿರವೇ ತೆರಳಿ ಅವುಗಳಿಗೆ ಆಹಾರ ನೀಡುತ್ತಾರೆ ಎಂಬುದು ಅಧಿಕಾರಿಗಳ ದೂರು.ಹುಲಿಯಂತಹ ಕ್ರೂರ ಮೃಗಗಳಿರುವ ಬೋನಿನ ಬಳಿಯೇ ಮಕ್ಕಳನ್ನು ಕರೆದೊಯ್ಯುವ ಮುನ್ನ ಸೂಕ್ತ ಎಚ್ಚರಿಕೆ ವಹಿಸುವುದು ಅಗತ್ಯ. ಇಂತಹ ದುರ್ಘಟನೆ ಹಿಂದೆಂದೂ ಇಲ್ಲಿ ನಡೆದಿಲ್ಲ. ಇದೇ ಮೊದಲ ಬಾರಿಗೆ ನಡೆದಿದೆ ಎಂದು ಅವರು ಹೇಳುತ್ತಾರೆ.ಹುಲಿಯ ಬೋನಿಗೆ ಅಂಟಿಕೊಂಡಂತೆಯೇ ಹೊರ ವರ್ತುಲ ಕಟಕಟೆಯೂ ಇದೆ. ಬೋನಿನೊಳಗೆ ಕೈ ಹಾಕಲು ಸಾಧ್ಯವಾಗದಂತೆ ಕಟಕಟೆಯೊಳಗೆ ನುಸುಳಲು ಅವಕಾಶವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳಕ್ಕೆ ಆಗಮಿಸಿದ್ದ ನರಸಿಂಹಮೂರ್ತಿ ಆಗ್ರಹಿಸಿದರು.ದೂರದ ಚೆನ್ನಪಟ್ಟಣದಿಂದ ತಾಯಿಯ ತವರುಮನೆ ಬತ್ರಿ ಗ್ರಾಮಕ್ಕೆ ಇತ್ತೀಚೆಗಷ್ಟೇ ಬಂದಿದ್ದ ನಿಖಿಲ್, ಅಜ್ಜಿ ಬಾಲಮಣಿಯ ಜತೆ ಪ್ರಾಣಿ ಸಂಗ್ರಹಾಲಯಕ್ಕೆ ಬಂದು ಪ್ರಾಣಿಗಳನ್ನು ಕಂಡು ಸಂಭ್ರಮಿಸಿದ್ದ.

ಕ್ಷಣದ ನಿರ್ಲಕ್ಷ್ಯದಿಂದ ಕೈ ಕಳೆದುಕೊಂಡ ಮೊಮ್ಮಗನ ಸ್ಥಿತಿ ಕಂಡು ಮಮ್ಮಲ ಮರುಗುತ್ತಿರುವ ಅಜ್ಜಿ, ಆಸ್ಪತ್ರೆಯಲ್ಲಿ ಕಣ್ಣೀರ ಕೋಡಿ ಹರಿಸುತ್ತಿದ್ದುದು ನೋಡುಗರ ಕರುಳು ಚುರುಕ್ ಎನ್ನಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry