ಚಾಮರಾಜನಗರದಲ್ಲಿ ರಂಗಮುಂಗಾರು

7

ಚಾಮರಾಜನಗರದಲ್ಲಿ ರಂಗಮುಂಗಾರು

Published:
Updated:
ಚಾಮರಾಜನಗರದಲ್ಲಿ ರಂಗಮುಂಗಾರು

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವುದು ಕಡಿಮೆ. ಅದರಲ್ಲೂ ರಂಗಪ್ರಯೋಗಗಳು ವಿರಳ. ಈಚೆಗೆ ನಗರದ ‘ರಂಗವಾಹಿನಿ ರಂಗಸಂಸ್ಥೆ’ಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಅವರ ಆಸಕ್ತಿಯ ಫಲವಾಗಿ ಮಂಡ್ಯ ರಮೇಶ್‌ರ ‘ನಟನ ನಾಟಕೋತ್ಸವ’ ಯಶಸ್ವಿಯಾಗಿ ನಡೆಯಿತು. ಮೂರು ದಿನಗಳ ಕಾಲ ನಡೆದ ಈ ನಾಟಕೋತ್ಸವದಲ್ಲಿ ನಟನ ತಂಡ ‘ಅಗ್ನಿ ಮತ್ತು ಮಳೆ’, ‘ಚೋರ ಚರಣದಾಸ’ ಹಾಗೂ ‘ಸತ್ರು ಅಂದ್ರೆ ಸತ್ರಾ’ ನಾಟಕಗಳ ಪ್ರಯೋಗ ನಡೆಸಿತು. ಈ ಉತ್ಸವದಿಂದಾಗಿ ನಗರದ ರಂಗಾಸಕ್ತರು ಬರದ ನಾಡಿನಲ್ಲಿ ಮುಂಗಾರು ಮಳೆಯ ತಂಪನುಭವಿಸಿದರು ಎಂದರೆ ಅತಿಶಯೋಕ್ತಿಯಲ್ಲ.ಮೊದಲ ದಿನ, ಗಿರೀಶ ಕಾರ್ನಾಡರ ‘ಅಗ್ನಿ ಮತ್ತು ಮಳೆ’ ಪ್ರಯೋಗ ಕಂಡಿತು. ಈ ನಾಟಕದ ಮೂಲ ಕಥಾವಸ್ತು ಮಹಾಭಾರತದ ವನಪರ್ವದಲ್ಲಿ ಬರುವ ಯವಕ್ರೀತನ ಪ್ರಸಂಗ. ಇಂದ್ರನನ್ನು ಒಲಿಸಿಕೊಂಡು ಬ್ರಹ್ಮಜ್ಞಾನ ಗಳಿಸುವ ಯವಕ್ರೀತ, ಪರ್ಜನ್ಯ ಯಾಗದ ಅಧ್ವರ್ಯು ಪರಾವಸು, ಈತನ ತಂದೆ ಮಹಾಜ್ಞಾನಿ ರೈಭ್ಯ-ಇವರೆಲ್ಲ ಲಾಲಸೆಯ, ಸೇಡಿನ ಮಾರ್ಗ ಹಿಡಿದ ಋಷಿಗಳು. ಪರಾವಸುವಿನ ತಮ್ಮ ಅರವಸು, ಋಷಿಪುತ್ರನಾದರೂ ಅಣ್ಣನಂತೆ ಸೋಗಲಾಡಿತನದ ಸನ್ಯಾಸಿಯಾಗದೇ, ಬೇಡರ ಕನ್ಯೆ ನಿತ್ತಿಲೆಯನ್ನು ಮುಗ್ಧನಂತೆ ಪ್ರೀತಿಸುತ್ತಾನೆ.ತಂದೆ ರೈಭ್ಯ ಮತ್ತು ಅಣ್ಣ ಪರಾವಸು ಮಹಾತಪಸ್ಸು ಮಾಡಿದ ಋಷಿಗಳಾದರೂ, ತಪಸ್ವಿಯಲ್ಲ ಸಾಮಾನ್ಯ ತರುಣ ಅರವಸು ಇವರೆಲ್ಲರನ್ನೂ ಮೀರಿಸಿದ ಜ್ಞಾನಿಯಾಗಿ ಕಾಣಿಸುತ್ತಾನೆ. ಕೋಪ, ಕಾಮನೆ, ಸ್ವಾರ್ಥಗಳನ್ನು ಗೆಲ್ಲದ ತಪಸ್ವಿಗಳಿಗಿಂತ ಕಾಡುಜನರ ಮುಗ್ಧತೆಯೇ ಶ್ರೇಷ್ಠ ಎಂಬ ಮಾತು ನಾಟಕದಲ್ಲಿ ಕೇಳಿಬರುತ್ತದೆ. ಇದು ಈ ಕಾಲಕ್ಕೂ ಹೊಂದುವ ಮಾತು.ಎರಡನೇ ದಿನ ಪ್ರಯೋಗ ಕಂಡ, ಹಬೀಬ್ ತನ್ವೀರ್ ರಚಿಸಿದ ‘ಚೋರ ಚರಣದಾಸ’ ಹಾಸ್ಯದ ಹೊನಲನ್ನೇ ಹರಿಸುವ ನಾಟಕ. ಕಳ್ಳನೊಬ್ಬ ಸನ್ಯಾಸಿಗೆ ನೀಡಿದ ವಚನಕ್ಕೆ ಕಟ್ಟುಬಿದ್ದು ಸತ್ಯ ಹೇಳಲು ಹೋಗಿ ಪಡಿಪಾಟಲು ಅನುಭವಿಸುವುದು ಕಥಾವಸ್ತು. ತರ್ಕವನ್ನು ಬದಿಗಿಟ್ಟು ನೋಡಿದರೆ ಎರಡು ಗಂಟೆ ಕಾಲ ನಡೆಯುವ ಈ ನಾಟಕ ಮನರಂಜಿಸುತ್ತದೆ. ಮುಖ್ಯಪಾತ್ರಧಾರಿ ಲೋಕೇಶ್ ಬಸವಟ್ಟಿ ಅಭಿನಯ ನಾಟಕದ ಹೈಲೈಟ್. ನಾಟಕದೊಂದಿಗೆ ಪ್ರಸಕ್ತ ರಾಜಕೀಯ ಸಂದರ್ಭಗಳನ್ನು ಹೆಣೆದಿದ್ದು ಪರಿಣಾಮಕಾರಿಯಾಗಿತ್ತು. ಚಂದ್ರಶೇಖರಾಚಾರ್ ಹೆಗ್ಗೊಠಾರ ಅವರ ಸಂಗೀತ ನಾಟಕದ ಇನ್ನೊಂದು ಆಕರ್ಷಣೆ. ದಿಶಾ ರಮೇಶ್ ಮತ್ತು ವೃಂದದವರ ಹಿನ್ನೆಲೆ ಗಾಯನ ಗಮನ ಸೆಳೆಯಿತು.ಮೂರನೇ ನಾಟಕ- ವೈದೇಹಿ ರಚಿಸಿದ, ‘ಸತ್ರು ಅಂದ್ರೆ ಸತ್ರಾ’ ಐಲು ದೊರೆಯ ಅವಾಂತರಗಳ ಸರಣಿ. ಬಡವನೊಬ್ಬನ ಮೇಕೆ ಸತ್ತಿದ್ದಕ್ಕೆ ಯಾರ್ಯಾರನ್ನೋ ಹೊಣೆಮಾಡುವ ಐಲು ದೊರೆ, ಕೊನೆಗೆ ಅದಕ್ಕೆ ತಾನೇ ಬಲಿಯಾಗುತ್ತಾನೆ. ಮಕ್ಕಳ ನಾಟಕದಂತೆ ತೋರುವ ಈ ಪ್ರಯೋಗದಲ್ಲಿ ಐಲು ದೊರೆಯ ಪಾತ್ರ ನಿರ್ವಹಿಸಿರುವ ರಜನೀಕಾಂತ್ ಅಭಿನಯವೇ ಜೀವಾಳ. ಇಡೀ ನಾಟಕವನ್ನು ತಮ್ಮ ಹೆಗಲಿನಲ್ಲಿ ಹೊತ್ತುಕೊಂಡು ನಿರ್ವಹಿಸಿರುವ ರಜನೀಕಾಂತ್ ತಮ್ಮ ಆಂಗಿಕ ಅಭಿನಯದಿಂದ ಗಮನ ಸೆಳೆಯುತ್ತಾರೆ.ಈ ಮೂರೂ ನಾಟಕಗಳ ನಿರ್ದೇಶನ ಮಂಡ್ಯ ರಮೇಶ್ ಅವರದ್ದು. ಮೂರು ವಿಭಿನ್ನವಸ್ತುಗಳನ್ನು ಆರಿಸಿಕೊಂಡಿರುವ ಅವರು ಉತ್ತಮವಾಗಿ ನಿರ್ದೇಶಿಸಿದ್ದಾರೆ. ಚಾಮರಾಜನಗರದ ಇಬ್ಬರು ಪ್ರತಿಭೆಗಳು ನಾಟಕದಲ್ಲಿ ಪಾತ್ರವಹಿಸಿದ್ದು ವಿಶೇಷ. ಅರವಸು ಪಾತ್ರಧಾರಿ ಲೋಕೇಶ್ ಬಸವಟ್ಟಿ ಹಾಗೂ ವಿಶಾಖೆಯ ಪಾತ್ರವಹಿಸಿದ್ದ ಚಿತ್ರಾ ಅವರಿಗೆ ತವರಿನ ಪ್ರೇಕ್ಷಕರ ಎದುರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು ವಿಶಿಷ್ಟ ಅನುಭವ ನೀಡಿರಬೇಕು. ನಿತ್ತಿಲೆ ಪಾತ್ರಧಾರಿ ಯಶಸ್ವಿನಿ, ಪರಾವಸು ಪಾತ್ರದಲ್ಲಿ ಅರುಣ್‌ಮೂರ್ತಿ, ಯವಕ್ರೀತನಾಗಿ ಚ.ನಾರಾಯಣಸ್ವಾಮಿ, ರೈಭ್ಯನಾಗಿ ಮುರಳಿ ಶೃಂಗೇರಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.ಬ್ರಿಜ್ ಪ್ರಯೋಗದಂತೆ ಕಾಣುವ ಮಂಡ್ಯ ರಮೇಶರ ಈ ಮೂರು ನಾಟಕಗಳು ಎಲ್ಲ ವರ್ಗದ ಪ್ರೇಕ್ಷಕರ ತಲುಪುವಲ್ಲಿ ಯಶಸ್ವಿಯಾದವು. ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದ ಕಿರು ವೇದಿಕೆಯಲ್ಲೂ ಹೊಂದಾಣಿಕೆ ಮಾಡಿಕೊಂಡು ಪ್ರಯೋಗ ನಡೆಸಿದ್ದು ‘ನಟನ’ ಕಲಾವಿದರ ಹೆಗ್ಗಳಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry