ಚಾಮರಾಜನಗರ ಜಿಲ್ಲೆಗೆ ಶೆಟ್ಟರ್ ಭೇಟಿ ಇಂದು

7

ಚಾಮರಾಜನಗರ ಜಿಲ್ಲೆಗೆ ಶೆಟ್ಟರ್ ಭೇಟಿ ಇಂದು

Published:
Updated:
ಚಾಮರಾಜನಗರ ಜಿಲ್ಲೆಗೆ ಶೆಟ್ಟರ್ ಭೇಟಿ ಇಂದು

ಚಾಮರಾಜನಗರ: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜ. 9ರಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ರೂ.182 ಕೋಟಿ  ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.ಬೆಳಿಗ್ಗೆ 9.10ಗಂಟೆಗೆ ಮಲೆಮಹದೇಶ್ವರಬೆಟ್ಟಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಲಿದ್ದಾರೆ. ಬಳಿಕ, ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಮಧ್ಯಾಹ್ನ 12ಗಂಟೆಗೆ ಹೆಲಿಕಾಪ್ಟರ್‌ನಲ್ಲಿ ನಗರಕ್ಕೆ ಆಗಮಿಸಲಿದ್ದು, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಿಂದ ನಿರ್ಮಿಸಿರುವ ಕಟ್ಟಡ ಸಮುಚ್ಚಯ ಉದ್ಘಾಟಿಸಲಿದ್ದಾರೆ.ಮಧ್ಯಾಹ್ನ 3ಗಂಟೆಗೆ ಜಿಲ್ಲಾಡಳಿತದಿಂದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲಿದ್ದಾರೆ.

ಮುಖ್ಯಮಂತ್ರಿ, ಸಚಿವರು ನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ಬೇರುಬಿಟ್ಟಿದೆ. ಹೀಗಾಗಿ, ಜಿಲ್ಲೆಯ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದ ಮುಖ್ಯಮಂತ್ರಿ, ಸಚಿವರು ನಗರಕ್ಕೆ ಮಾತ್ರ ಕಾಲಿಡುತ್ತಿರಲಿಲ್ಲ.ಸರ್ಕಾರದ ಅಧಿಕಾರಾವಧಿ ಪೂರ್ಣಗೊಳ್ಳಲು ಕೆಲವೇ ತಿಂಗಳು ಬಾಕಿಯಿದೆ. ಈ ನಡುವೆ ರಾಜಕೀಯ ಅಸ್ಥಿರತೆಗೆ ಸಿಲುಕಿ ಶೆಟ್ಟರ್ ಅಧಿಕಾರದಿಂದ ಕೆಳಗಿಳಿದರೆ ಜಿಲ್ಲೆಗೆ ಅಂಟಿಕೊಂಡಿರುವ ಕಳಂಕ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಅವರು ನಗರಕ್ಕೆ ಭೇಟಿ ನೀಡಬಾರದು ಎಂದು ವಿವಿಧ ಸಂಘಟನೆಯ ಮುಖಂಡರು ಈಚೆಗೆ ನಡೆದ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು.2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ನಗರಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ನಂತರ, ಬಿಜೆಪಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ ಮಲೆಮಹದೇಶ್ವರಬೆಟ್ಟಕ್ಕೆ ಭೇಟಿ ನೀಡಿದ್ದರು. ಆದರೆ, ನಗರಕ್ಕೆ ಮಾತ್ರ ಭೇಟಿ ನೀಡಿರಲಿಲ್ಲ. ಹೀಗಾಗಿ, ಶೆಟ್ಟರ್ ಭೇಟಿ ಜಿಲ್ಲೆಯ ಜನರಲ್ಲಿ ಕುತೂಹಲ ಹೆಚ್ಚಿಸಿದೆ.ಮೌಢ್ಯ ಏಕೆ?: ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಜಿಲ್ಲೆ 25ನೇ ಸ್ಥಾನದಲ್ಲಿದೆ. ಅಧಿಕಾರಸ್ಥರು ಭೇಟಿ ನೀಡಲು ಹಿಂದೇಟು ಹಾಕಿರುವುದೇ ಜಿಲ್ಲೆ ಹಿಂದುಳಿಯಲು ಕಾರಣ ಎಂಬುದು ಜನರ ಆರೋಪ.ಮುಖ್ಯಮಂತ್ರಿಯಾಗಿದ್ದಾಗ ವೀರೇಂದ್ರ ಪಾಟೀಲ್ ಕುಡಿಯುವ ನೀರು ಪೂರೈಕೆ ಕಾಮಗಾರಿ ಉದ್ಘಾಟಿಸಲು ನಗರಕ್ಕೆ ಭೇಟಿ ನೀಡಿದ್ದರು. ಅವರು ಕೆಲವೇ ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿದರು. ಚಾಮರಾಜನಗರಕ್ಕೆ  ಹೋಗಿರುವ ಪರಿಣಾಮ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂಬ ಕಳಂಕ ಅಂದಿನಿಂದ ಅಂಟಿಕೊಂಡಿದೆ.ನಂತರ ಗದ್ದುಗೆ ಏರಿದ ಎಸ್. ಬಂಗಾರಪ್ಪ, ಎಂ. ವೀರಪ್ಪಮೊಯಿಲಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ ಹಾಗೂ ಧರ್ಮಸಿಂಗ್ ನಗರಕ್ಕೆ ಭೇಟಿ ನೀಡಿರಲಿಲ್ಲ. ಮುಖ್ಯಮಂತ್ರಿಯಾಗಿ ಅಧಿಕಾರದ ಕೊನೆಯ ಅಂಚಿನಲ್ಲಿರುವಾಗ  ಕುಮಾರಸ್ವಾಮಿ ನಗರಕ್ಕೆ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry