ಚಾಮರಾಜೇಂದ್ರ ಉದ್ಯಾನ: ಪ್ರಸ್ತಾವ ಕೈಬಿಟ್ಟ ಇಲಾಖೆ

7

ಚಾಮರಾಜೇಂದ್ರ ಉದ್ಯಾನ: ಪ್ರಸ್ತಾವ ಕೈಬಿಟ್ಟ ಇಲಾಖೆ

Published:
Updated:

ಬೆಂಗಳೂರು:  ‘ಕಬ್ಬನ್‌ ಉದ್ಯಾನದ ಹೆಸರನ್ನು ಸರ್ಕಾರಿ ಆದೇಶದಂತೆ ಶ್ರೀ ಚಾಮರಾಜೇಂದ್ರ ಉದ್ಯಾನ ಎಂದು ಬದಲಾಯಿಸುವ ಚಿಂತನೆ ನಡೆದಿತ್ತು. ಆದರೆ ಈ ವಿಚಾರ ವಿವಾದ ಸೃಷ್ಟಿಸಬಹುದು ಎಂದು ಮರು ನಾಮಕರಣದ ವಿಚಾರವನ್ನು ಸದ್ಯಕ್ಕೆ ಕೈ ಬಿಡಲಾಗಿದೆ’ ಎಂದು ಮಂಗಳವಾರ ತೋಟಗಾರಿಕಾ ಇಲಾಖೆಯ ನಿರ್ದೇಶಕ ಡಾ.ಡಿ.ಎಲ್‌. ಮಹೇಶ್ವರ್‌ ತಿಳಿಸಿದರು.ಕಬ್ಬನ್‌ ಉದ್ಯಾನದ ಹೆಸರನ್ನು ಬದಲಾಯಿಸಲು 1948ರಲ್ಲಿ ಸರ್ಕಾರ  ಆದೇಶ ಹೊರಡಿಸಿತ್ತಾದರೂ ಅದು ಜಾರಿಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ 65 ವರ್ಷಗಳ ನಂತರ ಅದನ್ನು ಜಾರಿಗೊಳಿಸಲು ಇಲಾಖೆ ತಯಾರಿ ನಡೆಸಿತ್ತು. ಆದರೆ ಇದರಿಂದ ಸಮಸ್ಯೆಗಳು ಉಂಟಾಗಬಹುದು ಎಂದು ಉದ್ಯಾನದ ಹೆಸರನ್ನು ಬದಲಾಯಿಸುವುದಿಲ್ಲ ಎಂದರು.ಈ ಬಗ್ಗೆ ಸರ್ಕಾರಿ ದಾಖಲಾತಿಗಳನ್ನು ಪರಿಶೀಲಿಸಿ, ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ನಂತರ ಮರು ನಾಮಕರಣದ ಬಗ್ಗೆ ಸ್ಪಷ್ಟವಾದ ಚಿತ್ರಣ ದೊರೆಯಲಿದೆ ಎಂದು ವಿವರಿಸಿದರು.     

 

ಕಬ್ಬನ್‌ ಉದ್ಯಾನಕ್ಕೆ ಮರು ನಾಮಕರಣ ಮಾಡುವುದಾಗಿ ಸೋಮವಾರ  ತೋಟಗಾರಿಕಾ ಇಲಾಖೆ ತಿಳಿಸಿತ್ತು. ಇದಕ್ಕೆ ತಜ್ಞರಿಂದ ವಿರೋಧ  ವ್ಯಕ್ತವಾಗಿದೆ.ಕಬ್ಬನ್ ಉದ್ಯಾನದ ಇತಿಹಾಸ: ಮೈಸೂರು ಸಂಸ್ಥಾನದ ಮುಖ್ಯ ಕಮೀಷನರ್ ಆಗಿದ್ದ ಸರ್ ಮಾರ್ಕ್ಸ್ ಕಬ್ಬನ್ ಅವರು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗಾಗಿ ಅಪಾರ ಕೊಡುಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಬ್ಬನ್‌ ನಂತರ ಬಂದ ಬೌರಿಂಗ್ ಅವರು ೧೮೬೮ರಲ್ಲಿ ಹೈಕೋರ್ಟ್ ಕಟ್ಟಡ ಕಟ್ಟಿಸಿ, ಕಬ್ಬನ್‌ ಅವರ ಕಾರ್ಯಗಳ ನೆನಪಿನಾರ್ಥ ಕಟ್ಟಡದ ಮುಂಭಾಗದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಿದರು.೧೮೭0ರ ಆಸುಪಾಸಿನಲ್ಲಿ ಅಂದಿನ ಕಮೀಷನರ್‌ ಜಾನ್‌ ಮೀಡ್ ಅವರು 192.19 ಎಕರೆ ಪ್ರದೇಶದಲ್ಲಿ  ಉದ್ಯಾನ ವನ್ನು ಪ್ರಾರಂಭಿಸಲು ನಿರ್ಧರಿಸಿದರು. ಅದಕ್ಕೆ ಆಗಿನ ಮುಖ್ಯ ಎಂಜಿನಿಯರ್‌ ಮೇಜರ್‌ ಜನರಲ್‌ ರಿಚರ್ಡ್‌ ಸ್ಯಾಂಕಿ  ಅದಕ್ಕೆ ರೂಪುರೇಷೆ ನೀಡಿದರು. ಆಗ ಮೊದಲಿಗೆ ಮೀಡ್‌ ಉದ್ಯಾನ ಎಂದು ಕರೆಯಲ್ಪಡುತ್ತಿದ್ದ ಉದ್ಯಾನ ನಂತರದ ದಿನಗಳಲ್ಲಿ ಕಬ್ಬನ್ ಉದ್ಯಾನವೆಂಬ ಹೆಸರಿನಲ್ಲಿ ಪ್ರಸಿದ್ಧಿಯಾಯಿತು.ಬದಲಾವಣೆ ಸೂಕ್ತವಲ್ಲ

ಮಾರ್ಕ್‌ ಕಬ್ಬನ್‌ ಹಾಗೂ ಚಾಮರಾಜೇಂದ್ರ ಅರಸು ಅವರು ತಮ್ಮದೇ ಆದ ರೀತಿಯಲ್ಲಿ ರಾಜ್ಯ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.  ಕಬ್ಬನ್‌ ಎಂಬ ಪದ ಈಗ ಬೆಂಗಳೂರಿನ ಜನರಲ್ಲಿ ಬೆರೆತು ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಬ್ಬನ್‌ ಅವರ ಹೆಸರನ್ನು ಬದಲಾಯಿಸುವುದು ಸೂಕ್ತ ಅಲ್ಲ. ಜಯ ಚಾಮರಾಜೇಂದ್ರ ಅರಸು ಅವರಿಗೆ ಗೌರವ ಸೂಚಿಸಲು ಅವರ ಪ್ರತಿಮೆಯನ್ನು ಕಬ್ಬನ್‌ ಉದ್ಯಾನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಅವರ ಹೆಸರನ್ನು ಉದ್ಯಾನಕ್ಕೆ ನೀಡುವ ಮೂಲಕವೇ ಅವರಿಗೆ ಗೌರವ ಸಲ್ಲಿಸುವ ಅಗತ್ಯ ಇಲ್ಲ.  

–ಮೂ.ನ.ಸುರೇಶ್‌, ನಿರ್ದೇಶಕರು, ಆರಂಭ ಸಂಸ್ಥೆ.ಕಬ್ಬನ್‌ ಸೇವೆ ಅಪಾರ

ಕಬ್ಬನ್‌ ಎಂದ ಕೂಡಲೇ ಅವರು ವಿದೇಶಿಗರು ಎಂದು ಭಾವಿಸುವುದು ತಪ್ಪು. ಬೆಂಗಳೂರಿಗೆ ಕಬ್ಬನ್‌ ಅವರ ಕೊಡುಗೆ ಅಪಾರ. ಅದನ್ನು ಮರೆಯಬಾರದು. ಅವರ ಸೇವೆಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಉದ್ಯಾನವನ್ನು ಕಬ್ಬನ್‌ ಉದ್ಯಾನವೆಂದೇ ಮುಂದುವರೆಸಬೇಕು.

–ದೇವರಕೊಂಡಾ ರೆಡ್ಡಿ, ಅಧ್ಯಕ್ಷ ಇತಿಹಾಸ ಅಕಾಡೆಮಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry