ಸೋಮವಾರ, ಮೇ 16, 2022
27 °C

ಚಾಮರಾಜ ಕಮಾಂಡೊ ಪಡೆ ಕಾರ್ಯಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯಲ್ಲಿ ಸಂಭವಿಸುವ ಗುಂಪು ಘರ್ಷಣೆ, ಕೋಮುಗಲಭೆ ವೇಳೆ ಸಾರ್ವಜನಿಕ ಸ್ವತ್ತುಗಳಿಗೆ ಹಾನಿಯಾಗದಂತೆ ತಡೆಯಲು `ಚಾಮರಾಜ ಕಮಾಂಡೊ ಪಡೆ~ ಸಜ್ಜಾಗಿದೆ.ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಈ ಪಡೆ ಅಧಿಕೃತವಾಗಿ ಕರ್ತವ್ಯ ಆರಂಭಿಸಿತು. ಕಮಾಂಡೊ ಪಡೆಯ ಸೇವೆಗೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಮಾತನಾಡಿ, `ಈ ಪಡೆಯು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 31 ಸಿಬ್ಬಂದಿಯನ್ನು ಒಳಗೊಂಡಿದೆ. ಮಧ್ಯಪ್ರದೇಶದಲ್ಲಿ ಈ ಪಡೆಗೆ ಶಸ್ತ್ರಾಸ್ತ್ರ ಬಳಕೆ ಕುರಿತು ತರಬೇತಿ ನೀಡಲಾಗಿದೆ. ದೃಢಕಾಯ ಸಿಬ್ಬಂದಿಯನ್ನು ಪಡೆಗೆ ಆಯ್ಕೆ ಮಾಡಲಾಗಿದೆ. ಅವರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿದ್ದಾರೆ~ ಎಂದರು.ಜಿಲ್ಲೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವವರ ಕೃತ್ಯಕ್ಕೆ ಕಡಿವಾಣ ಹಾಕಲು ಇಂತಹ ಪಡೆಯ ಅವಶ್ಯ ಇತ್ತು. ಈ ಹಿನ್ನೆಲೆಯಲ್ಲಿ ನೂತನ ಪಡೆಯನ್ನು ಸಜ್ಜುಗೊಳಿಸಲಾಗಿದೆ. ಕಾನೂನು- ಸುವ್ಯವಸ್ಥೆ ಕಾಪಾಡಲು ಈ ಪಡೆ ಕಾರ್ಯ ನಿರ್ವಹಿಸಲಿದೆ. ಪ್ರತಿನಿತ್ಯ ಪಡೆಯಲ್ಲಿರುವ ಸಿಬ್ಬಂದಿಗೆ ಯೋಗ, ವ್ಯಾಯಾಮ, ಕರಾಟೆ ತರಬೇತಿ ನೀಡಲಾಗುತ್ತಿದೆ.

 

ನಂತರ ದಿನಗಳಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ ಹಾಗೂ ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯಲ್ಲಿ ಈಜು, ಶಸ್ತ್ರರಹಿತ ಹೋರಾಟ, ಬಂದೂಕು ಗುರಿ ಅಭ್ಯಾಸ, ಆಯುಧ ಬಳಕೆಯ ತಂತ್ರಗಾರಿಕೆ ಬಗ್ಗೆಯೂ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.ಪ್ರಸ್ತುತ ಮೂರು ಬಗೆಯ ಸುಧಾರಿತ ಶಸ್ತ್ರಾಸ್ತ್ರ ನೀಡಲಾಗಿದೆ. ಐವರಿಗೆ ಎಕೆ-47, ಐವರಿಗೆ ಕಾರ್ಬೈನ್ ಮಷಿನ್‌ಗನ್ ಹಾಗೂ ಇಬ್ಬರಿಗೆ ಇನ್ಸಾಸ್ ಗನ್ ನೀಡಲಾಗಿದೆ. ಇನ್ಸಾಸ್ ಗನ್‌ನ ವಿಶೇಷತೆ ಎಂದರೆ ಒಮ್ಮೆಗೆ ಮೂರು ಗುಂಡು ಹಾರುತ್ತವೆ. ಗುಂಡು ನಿರೋಧಕ ಹೆಲ್ಮೆಟ್, ಜಾಕೆಟ್ ಹಾಗೂ ವಿಶೇಷ ಸಮವಸ್ತ್ರ ನೀಡಲಾಗಿದೆ. ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸ್ಥಿತಿ ವೇಳೆ ನಡೆಯುವ ಕಾನೂನು ವಿರೋಧಿ ಚಟುವಟಿಕೆಗಳ ನಿಯಂತ್ರಣಕ್ಕೆ ಈ ತಂಡ ಶ್ರಮಿಸಲಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.