ಚಾಮುಂಡಿ ಬೆಟ್ಟದ ನಂದಿಗೆ ಮಹಾಭಿಷೇಕ

7

ಚಾಮುಂಡಿ ಬೆಟ್ಟದ ನಂದಿಗೆ ಮಹಾಭಿಷೇಕ

Published:
Updated:

ಮೈಸೂರು: ಭಾನುವಾರ ಬೆಳಿಗ್ಗೆ ಹತ್ತು ಗಂಟೆಯಾದರೂ ಚಾಮುಂಡಿಬೆಟ್ಟಕ್ಕೆ ಮುಸುಕು ಹಾಕಿದ್ದ ಮಂಜು ಕರಗಿರಲಿಲ್ಲ. ಮಂಜಿನ ಪ್ರತಿ ಹನಿಯಲ್ಲೂ ಭಕ್ತಿಯ ಭಾವವಿತ್ತು. ಈ ಭಾವದ ನಡುವೆ ಬೃಹತ್ ನಂದಿ ವಿಗ್ರಹಕ್ಕೆ ಮಹಾಭಿಷೇಕ ನೆರವೇರಿತು.

ಚಾಮುಂಡಿ ಬೆಟ್ಟದ ಶ್ರೀ ನಂದಿಯ ಪೂಜಾ ಮಹೋತ್ಸವ ಸಮಿತಿ ಬೆಟ್ಟದ ಬಳಗವು ಆಯೋಜಿಸಿದ್ದ ನಂದಿ ವಿಗ್ರಹದ ಏಳನೇ ಮಹಾಭಿಷೇಕದ ಸಂಭ್ರಮದಲ್ಲಿ ಭಕ್ತರು ಮಿಂದೆದ್ದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬೆಳಿಗ್ಗೆ 10.30 ಕ್ಕೆ ಕುಂಭ ಕಳಶಗಳಿಗೆ ಪೂಜೆ ಸಲ್ಲಿಸಿದರು. 51 ಬಗೆಯ ಸುಗಂಧ ದ್ರವ್ಯಗಳನ್ನು ನಂದಿ ವಿಗ್ರಹಕ್ಕೆ ಪ್ರೋಕ್ಷಣೆ ಮಾಡಿ ಅಭಿಷೇಕಕ್ಕೆ ಚಾಲನೆ ನೀಡಿದರು.25 ಅಡಿ ಉದ್ದ 16 ಅಡಿ ಎತ್ತರವಿರುವ ಪುರಾತನ ನಂದಿ ವಿಗ್ರಹಕ್ಕೆ 28 ಮಂದಿ ಪುರೋಹಿತರು ಗಂಗಾಜಲ, ಅರಿಸಿನ, ಕುಂಕುಮ, ಚಂದನ, ಎಳನೀರು, ಅಷ್ಟಗಂಧ ಹಾಗೂ ಹಾಲಿನ ಅಭಿಷೇಕ ನೆರವೇರಿಸಿದರು. ಪಂಚಾಭಿಷೇಕದ ನಂತರ ಮೊಸರು, ಮಜ್ಜಿಗೆ, ಬೆಣ್ಣೆ, ಜೇನುತುಪ್ಪ, ಅರ್ಘ್ಯ, ಕಬ್ಬಿನ ಹಾಲು, ನಾಣ್ಯ, ಪಂಚ ಕರ್ಪೂರ, ಪುಷ್ಪಗಳು ಹಾಗೂ ದ್ರಾಕ್ಷಿ, ಗೋಡಂಬಿ, ಅಕ್ಕಿ, ರಾಗಿ ಸೇರಿದಂತೆ ನವಧಾನ್ಯ ಮತ್ತು ವಿವಿಧ ಬಗೆಯ ಪತ್ರೆಗಳಿಂದ ಅಭಿಷೇಕ ಮಾಡಲಾಯಿತು. ಬಳಿಕ ನಂದಿ ವಿಗ್ರಹವನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು.

ಅಭಿಷೇಕದಲ್ಲಿ ಮಿಂದ ನಂದಿ ವಿಗ್ರಹವನ್ನು ದರ್ಶನ ಮಾಡಿದ ನೂರಾರು ಭಕ್ತರು, ವಿದೇಶಿ ಪ್ರವಾಸಿಗರು ಮೂಕವಿಸ್ಮಿತರಾದರು. ಅಭಿಷೇಕದ ವೈಭವ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪರಕಾಲ ಮಠದ ವಾಗೀಶ ಬ್ರಹ್ಮತಂತ್ರ ಸ್ವಾಮೀಜಿ, ಆದಿ ಚುಂಚನಗಿರಿ ಶಾಖಾ ಮಠದ ಸೋಮನಾಥ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ಕನಕಗುರು ಪೀಠದ ಶಿವಾನಂದಪುರಿ ಸ್ವಾಮೀಜಿ ಮಹಾಭಿಷೇಕದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry