ಸೋಮವಾರ, ಮೇ 17, 2021
25 °C
ಭಕ್ತರ ಒತ್ತಾಯಕ್ಕೆ ಮಣಿದ ಆಡಳಿತ ಮಂಡಳಿ

ಚಾಮುಂಡೇಶ್ವರಿ ದೇವಿಗೆ ನಿತ್ಯ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಾಡಹಬ್ಬ ದಸರಾ ಉತ್ಸವದ ಜಂಬೂಸವಾರಿಯಲ್ಲಿ 750 ಕೆ.ಜಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುತ್ತಿದ್ದ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ನಿತ್ಯವೂ ಪೂಜೆ ಸಲ್ಲಿಸಲು ಅರಮನೆ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ.ಪ್ರತಿ ವರ್ಷ ಜಂಬೂಸವಾರಿ ದಿನ ಉತ್ಸವ ಮೂರ್ತಿಯನ್ನು ಅಂಬಾರಿಯಲ್ಲಿಟ್ಟು ಮೆರವಣಿಗೆ ಮೂಲಕ ಬನ್ನಿಮಂಟಪದವರೆಗೆ ತೆರಳಿ, ಸಹಸ್ರಾರು ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಆ ಬಳಿಕ ದೇವಿಯ ಮೂರ್ತಿಯನ್ನು ಅರಮನೆಯ ಕತ್ತಲೆ ಕೋಣೆಯಲ್ಲಿ ಇರಿಸಲಾಗುತ್ತಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್, ಶಕ್ತಿದೇವತೆ ಚಾಮುಂಡೇಶ್ವರಿಯನ್ನು ಅರಮನೆಯ ಕತ್ತಲೆ ಕೋಣೆಯಲ್ಲಿ ಇರಿಸುವುದು ಸರಿಯಲ್ಲ. ವರ್ಷವಿಡೀ ಸಾರ್ವಜನಿಕರು, ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ, ಚಾಮುಂಡೇಶ್ವರಿ ಭಕ್ತರೂ ದನಿಗೂಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಅರಮನೆ ಆಡಳಿತ ಮಂಡಳಿ, ಚಾಮುಂಡೇಶ್ವರಿಗೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.`ಭಕ್ತರ ಒತ್ತಾಯದ ಮೇರೆಗೆ ಚಾಮುಂಡೇಶ್ವರಿ ಮೂರ್ತಿಯನ್ನು ಅರಮನೆಯ ಗೊಂಬೆ ತೊಟ್ಟಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಅರಮನೆ ಆವರಣದಲ್ಲಿರುವ ಗಣಪತಿ ದೇವಸ್ಥಾನದ ಅರ್ಚಕ ನಾಗರಾಜ್ ಅವರು ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ಪೂಜೆ ಸಲ್ಲಿಸುತ್ತಿದ್ದಾರೆ. ಅರಮನೆಗೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರು ದೇವಿಗೆ ನಮನ ಸಲ್ಲಿಸುತ್ತಿದ್ದಾರೆ. ಮಂಗಳವಾರ ಮತ್ತು ಶುಕ್ರವಾರ ದೇವಿಗೆ ನೈವೇದ್ಯ ಅರ್ಪಿಸಲಾಗುತ್ತಿದೆ. ನಾಡ ಅಧಿದೇವತೆಯ ದರ್ಶನವನ್ನು ಎಲ್ಲ ಭಕ್ತಾದಿಗಳಿಗೂ ಕಲ್ಪಿಸಬೇಕು ಎಂಬ ಕೂಗು ಬಲವಾಗಿ ಕೇಳಿ ಬಂದಿತ್ತು.ಹೀಗಾಗಿ, ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ' ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.