ಮಂಗಳವಾರ, ಜೂನ್ 15, 2021
27 °C

ಚಾಯ್‌ ಚಾಯ್‌ ಎಂಜಾಯ್‌...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಿನಿಮಾ, ಸಂಗೀತ, ಕಲೆಗೆ ಭಾಷೆಯ ಗಡಿಯಿಲ್ಲ. ತಮಿಳು, ತೆಲುಗು ಇತರ ಭಾಷೆ ಚಿತ್ರಗಳಲ್ಲಿ ಹಾಡಿರುವ ನಾನು ಕನ್ನಡದಲ್ಲಿ ಇಷ್ಟಪಟ್ಟು ಹಾಡಿದ್ದೇನೆ. ಕನ್ನಡಿಗರಿಗೆಂದು ಸಿನಿಮಾ ಮಾಡುವ ಆಸೆಯೂ ಇದೆ’ ಎಂದ ತಮಿಳು ಚಿತ್ರರಂಗದ ನಿರ್ದೇಶಕ ಟಿ. ರಾಜೇಂದ್ರ, ಕರ್ನಾಟಕದೆಡೆಗೆ ಇರುವ ತಮ್ಮ ಪ್ರೀತಿಯನ್ನು ಮತ್ತೆ ಮತ್ತೆ ಹೇಳಿಕೊಂಡರು.ದಿಲ್‌ ಸತ್ಯ ಹಾಗೂ ನಂದಕುಮಾರ್‌ ನಿರ್ಮಾಣದ ‘ರಾಜ್‌ ಬಹದ್ದೂರ್‌’ ಚಿತ್ರದ ಆಡಿಯೊ ಸೀಡಿ ಬಿಡುಗಡೆ ಸಮಾರಂಭ ಹಾಸ್ಯಸಂಜೆ, ನೃತ್ಯ, ಚಿತ್ರರಂಗದ ದಿಗ್ಗಜರಿಗೆ ಸನ್ಮಾನವನ್ನೂ ಒಳಗೊಂಡಿತ್ತು. ಈ ಚಿತ್ರದಲ್ಲಿ ‘ಚಾಯ್‌ ಚಾಯ್‌’ ಎಂಬ ಹಾಡನ್ನು ಹಾಡಿರುವ ರಾಜೇಂದ್ರ, ನೃತ್ಯತಂಡದೊಡನೆ ಹೆಜ್ಜೆ ಹಾಕಿದರು.ರಾಜ್‌ ಬಹದ್ದೂರ್‌ಗೆ ಇಬ್ಬರು ಸಂಗೀತ ನಿರ್ದೇಶಕರು. ಸೋಮೇಶ, ಸ್ನೇಹಪ್ರಿಯ ನಾಗರಾಜ್‌ ಹಾಗೂ ಸಿ.ಪಿ. ಪ್ರವೀಣ್‌ ಬರೆದಿರುವ ನಾಲ್ಕು ಹಾಡುಗಳಿಗೆ ಜೀವನ್ ಕೃಪಾ ಹಾಗೂ ಗುರುಚರಣ್ ರಾಗ ಸಂಯೋಜನೆ ಮಾಡಿದ್ದಾರೆ. ಅಂದ ಹಾಗೆ ಕೃಪಾಕರ ಈ ಚಿತ್ರದ ಮೂಲಕ ‘ಜೀವಿತ್ ಕೃಪ’ ಎಂಬ ಹೊಸ ನಾಮಕರಣ ಮಾಡಿಕೊಂಡಿದ್ದಾರೆ. ‘ಆಶಿಕಿ–೨’ ಚಿತ್ರದ ಹಾಡುಗಳ ಮೂಲಕ ಖ್ಯಾತಿ ಗಳಿಸಿರುವ ಅಂಕಿತ್‌ ತಿವಾರಿ ಅವರು ಮೊದಲ ಬಾರಿಗೆ ಕನ್ನಡದಲ್ಲಿ ಈ ಚಿತ್ರದ ಹಾಡಿಗೆ ದನಿ ನೀಡಿದ್ದಾರೆ. ನಾಯಕ– ನಾಯಕಿಯರಾಗಿ ಪುನೀತ್‌ ಹಾಗೂ ಶ್ರೀಶ್ರುತಿ ಬಣ್ಣ ಹಚ್ಚಿದ್ದಾರೆ. ಆಲ್ವಿನ್‌ ಆಕ್ಷನ್‌– ಕಟ್‌ ಹೇಳಿದ್ದಾರೆ.ಸೀಡಿ ಬಿಡುಗಡೆ ಬಳಿಕ ಈ ಸಿನಿಮಾದ ಹಾಡುಗಳಿಗೆ ನೃತ್ಯ ತಂಡವೊಂದು ಹೆಜ್ಜೆ ಹಾಕಿತು. ನಟರಾದ ರಾಜೇಶ್, ಶ್ರೀನಿವಾಸಮೂರ್ತಿ, ನಟಿ ಶ್ರುತಿ ಹಾಗೂ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರನ್ನು ಸನ್ಮಾನಿಸಲಾಯಿತು. ಲಹರಿ ವೇಲು, ನಟಿ ರಾಗಿಣಿ, ಕವಿ ದೊಡ್ಡರಂಗೇಗೌಡ, ವಿಧಾನಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.