ಬುಧವಾರ, ಜೂನ್ 3, 2020
27 °C

ಚಾರಣರಿಗೆ ಸ್ವರ್ಗ ಕಳವಾರಬೆಟ್ಟ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಹಚ್ಚಹಸುರಿನ ಕಣಿವೆಗಳು, ಸವರಿಕೊಂಡು ಹೋಗುವ ಮೇಘಮಾಲೆ, ದೂರದ ಬೆಟ್ಟಗಳ ಹಿಂಬದಿಯಿಂದ ಉದಯಿಸುವ ಸೂರ್ಯ ಹಾಗೂ ರಾತ್ರಿಯಲ್ಲಿ ದೂರದ ಊರಿನ ನಕ್ಷತ್ರದಂತಹ ದೀಪಮಾಲೆ. ಇಂತಹ ದೃಶ್ಯವೈಭವವನ್ನು ಸವಿಯಲು ಪಶ್ಚಿಮಘಟ್ಟಕ್ಕೆ ಹೋಗಬೇಕಿಲ್ಲ. ನಗರಕ್ಕೆ ತೀರ ಹತ್ತಿರದಲ್ಲಿರುವ ಕಳವಾರಬೆಟ್ಟವನ್ನು ಏರಿದರೆ ಸಾಕು.ಕಳವಾರಬೆಟ್ಟವನ್ನು ಸ್ಕಂದಗಿರಿ ಎಂದೂ ಕರೆಯುತ್ತಾರೆ. ನಗರದ ಪಶ್ಚಿಮ ದಿಕ್ಕಿನಲ್ಲಿರುವ ಪಾಪಾಗ್ನಿ ಮಠದಿಂದ ಕಣ್ಣಳತೆಯ ದೂರದಲ್ಲಿದೆ ಈ ಬೆಟ್ಟ. ಇದನ್ನು ಏರಲು ಹಾದಿಯಿಲ್ಲ. ಚಾರಣದ ಅನುಭವವಿರುವವರು ಸಾಹಸ ಮನೋಭಾವದಿಂದ ಏರಬಹುದು. ಬೆಟ್ಟದ ಮೇಲೆ ತಂಗಲು ಯಾವುದೇ ವ್ಯವಸ್ಥೆಯಿಲ್ಲ. ಕಲ್ಲು ಚಪ್ಪಡಿಗಳಲ್ಲಿ ನಿರ್ಮಾಣವಾದ ಹಳೆಯದಾದ ಪುಟ್ಟ ದೇವಾಲಯವಿದೆ. ಅಲ್ಲಿನ ಕೊರೆಯುವ ಚಳಿ, ಗಾಳಿ ಹಾಗೂ ಮಳೆಯನ್ನು ಎದುರಿಸಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿರಬೇಕು.ಬೆಟ್ಟವನ್ನೇರುತ್ತಿದ್ದಂತೆಯೇ ಕಾಣುವ ಕಣಿವೆಯ ಭೂದೃಶ್ಯಗಳು ಏರುವಾಗಿನ ದಣಿವನ್ನು ಮರೆಸುತ್ತದೆ. ತಳ್ಳಿಕೊಂಡು ಹೋಗುವ ಮೋಡಗಳು, ನಂದಿಬೆಟ್ಟ ಮುಂತಾದ ಗಿರಿಶ್ರೀಣಿಗಳ ಸಾಲುಗಳು ಕಣ್ಮನ ತಣಿಸುತ್ತವೆ. ಬೆಟ್ಟದ ಮೇಲಿರುವ ಪುರಾತನ ಕೋಟೆ, ನೀರಿನ ದೊಣೆ ಹಾಗೂ ಹಚ್ಚಹಸಿರಿನ ವಾತಾವರಣ ಆರೋಗ್ಯವನ್ನು ಶ್ವಾಸಕೋಶದಲ್ಲಿ ತುಂಬುತ್ತದೆ.‘ಪರಿಸರ ಮಾಲಿನ್ಯ’

‘ಬೆಂಗಳೂರಿನಿಂದ ನೂರಾರು ಚಾರಣಿಗರು ಶನಿವಾರ ಬಂದು ಭಾನುವಾರ ಹೋಗುತ್ತಾರೆ. ಕೆಲವರು ಬಂದು ಗದ್ದಲವೆಬ್ಬಿಸುವುದೂ ಉಂಟು. ಪ್ಲಾಸ್ಟಿಕ್, ಖಾಲಿ ಬಾಟಲಿ ಮೊದಲಾದ ತ್ಯಾಜ್ಯಗಳಿಂದ ಬೆಟ್ಟದ ಪರಿಸರ ಮಲಿನವಾಗುತ್ತಿದೆ. ಗ್ರಾಮದ ಕೆಲ ಯುವಕರು ಅವರಿಗೆ ಮಾರ್ಗದರ್ಶಕರಾಗಿ ಹಣ ಸಂಪಾದಿಸಿದರೆ ಇನ್ನು ಕೆಲವರು ಶನಿವಾರ ಮತ್ತು ಭಾನುವಾರ ಅಲ್ಲಿ ಹೋಟೆಲ್ ಇಟ್ಟು ಹಣ ಸಂಪಾದಿಸುವರು. ಇಲ್ಲಿ ಪ್ರವಾಸೋದ್ಯಮ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಸ್ಥಳೀಯರಿಗೆ ಕೆಲಸವು ಸಿಗುತ್ತದೆ. ಪರಿಸರವೂ ಸಂರಕ್ಷಿಸಲ್ಪಡುತ್ತದೆ’ ಎನ್ನುತ್ತಾರೆ ಈ ಪ್ರದೇಶದ ಬಳಿ ವಾಯು ವಿಹಾರಕ್ಕೆ ಹೋಗುವ ಹಿರಿಯರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.