ಚಾರ್ಲಿಯ ಮನೋವೈದ್ಯ

7

ಚಾರ್ಲಿಯ ಮನೋವೈದ್ಯ

Published:
Updated:

ಇಂದಿರಾನಗರದ ಸಪ್ನ ಬುಕ್ ಹೌಸ್ ಶಾಖೆಯಿಂದ ಹತ್ತು ಹೆಜ್ಜೆ ದೂರದಲ್ಲಿರುವ ‘ಕಾರಾ4 ಕಿಡ್ಸ್’ ಎಂಬ ಮಾಂಟೆಸರಿಯಲ್ಲಿ ಪ್ರತಿ ಶುಕ್ರವಾರ ಬೆಳಿಗ್ಗೆ ಒಂದು ಅಚ್ಚರಿ ನಡೆಯುತ್ತದೆ. ತಿಳಿ ಹಸಿರು ಬಣ್ಣದ ಮಾರುತಿ ಓಮ್ನಿಯಲ್ಲಿ ಅಲ್ಲಿಗೆ ಒಬ್ಬ ‘ಬಾಲ’ಕ ಹೋಗುತ್ತಾನೆ. ಅವನು ಚಾರ್ಲಿ. ಆಟಿಸಂ ಸಮಸ್ಯೆಯಿರುವ ಮಕ್ಕಳ ಲಾಲನೆ ಪಾಲನೆಗಾಗಿ ಆರಂಭವಾದ ಮಾಂಟೆಸರಿ ಅದು (ಸಾಮಾನ್ಯ ಮಕ್ಕಳ ವಿಭಾಗವೂ ಇದೆ).ಚಾರ್ಲಿ ಎಂದಿನಂತೆ ಮೊನ್ನೆ ಶುಕ್ರವಾರವೂ ‘ಕಾರಾ4 ಕಿಡ್ಸ್’ಗೆ ಕರ್ತವ್ಯ ನಿಮಿತ್ತ ಹೋಗಿದ್ದ. ಅವನು ಒಳಪ್ರವೇಶಿಸುತ್ತಿದ್ದಂತೆ ತಮ್ಮ ತಮ್ಮ ವಿಭಾಗಗಳಲ್ಲಿ ಚಟುವಟಿಕೆ ನಿರತರಾಗಿದ್ದ ಮಕ್ಕಳಿಗೆ ಅಲ್ಲಿನ ಶಿಕ್ಷಕಿ ‘ಚಾರ್ಲಿ ಬಂದ’ ಎಂದು ಹೇಳಿದ್ದಷ್ಟೇ ಗೊತ್ತು.

ಮಕ್ಕಳ ಚೀರಾಟ, ಕೇಕೆ, ಹಾಯ್ ಚಾರ್ಲಿ,ಐ ಲವ್ ಯೂ ಚಾರ್ಲಿ ಎಂಬ ಕೂಗಾಟ ಕೇಳಲಾರಂಭಿಸಿತು. ಶಿಕ್ಷಕಿಯರು ಒಬ್ಬೊಬ್ಬರನ್ನೇ ಕರೆತಂದು ಹೊರಾವರಣದ ಹಸಿರುಹಾಸಿನ ಮೇಲೆ ಕೂರಿಸಿದರು. ಪ್ರತಿಯೊಬ್ಬರಿಗೂ ಚಾರ್ಲಿ ಬಳಿ ಕುಳಿತು ಚಿನ್ನಾಟವಾಡುವ, ಕೀಟಲೆ ಮಾಡುವಾಸೆ. ಐದು ವರ್ಷದ ಮುದ್ದು ಹುಡುಗಿ ಪ್ರಾರ್ಥನಾಗಂತೂ ಚಾರ್ಲಿ ತನಗಷ್ಟೇ ಮೀಸಲು, ಬೇರೆ ಯಾರೊಂದಿಗೂ ಆಟವಾಡಬಾರದು, ಯಾರನ್ನೂ ನೋಡಬಾರದು ಎಂಬ ಹಟ. ‘ಚಾರ್ಲಿ ಲುಕ್ ಅಟ್ ಮಿ... ವೈ ಯೂ ಆರ್ ನಾಟ್ ಟಾಕಿಂಗ್ ಟು ಮಿ... ನೋ ಮೂಡ್? ವಾಟ್ ಹ್ಯಾಪೆನ್ಡ್ ಮೈ ಡಿಯರ್’ ಎಂದೆಲ್ಲ ತೊದಲುತ್ತಾ ಅವನು ಬೇರೆ ಯಾವ ಮಕ್ಕಳೊಂದಿಗೂ ಬೆರೆಯದಂತೆ, ಇನ್ಯಾರೂ ಮಾತನಾಡಿಸದಂತೆ ಅವನ ಗಮನ ಸೆಳೆಯುತ್ತಿದ್ದಳು.ಸ್ಮರಣ್‌ಗೆ ಕೈಕಾಲುಗಳು, ದೃಷ್ಟಿ ಸ್ವಾಧೀನವಿಲ್ಲ. ಪ್ರಾರ್ಥನಾ ಹಾಗೆ ಹಟ ಮಾಡುತ್ತಿದ್ದರೆ ಅವಳ ಪಕ್ಕದಲ್ಲೇ ಕುಳಿತಿದ್ದ ಸ್ಮರಣ್ ಕಿಲಕಿಲ ಅಂತ, ಹೇ ಅಂತ ನಗತೊಡಗಿದ. ಚಾಚಿಕೊಂಡಿದ್ದ ಅವನ ಕಾಲುಗಳನ್ನು ಕಷ್ಟಪಟ್ಟು ಮಡಚಿದ ಶಿಕ್ಷಕಿ ಚಾರ್ಲಿ ಬಳಿ ಬಿಟ್ಟರು. ಚಾರ್ಲಿಯನ್ನು ಬಾಚಿ ತಬ್ಬಿಕೊಳ್ಳಬೇಕು ಎಂದು ಅಸೆ ವ್ಯಕ್ತಪಡಿಸಿದರೂ ಅದು ಅವನ ಸಾಮರ್ಥ್ಯ ಮೀರಿದ್ದು. ಹಾಗಾಗಿ ಅವನ ಬೆರಳುಗಳನ್ನು ಬಿಡಿಸಿ ಚಾರ್ಲಿಯ ಬೆನ್ನು ನೇವರಿಸಲು ನೆರವಾದರು ಆಕೆ. ಚಾರ್ಲಿ ಮತ್ತು ಸ್ಮರಣ್‌ಗಷ್ಟೇ ಅರ್ಥವಾಗಬಹುದಾದ ಒಂದು ಮುಖಸ್ಪರ್ಶ ಚಾರ್ಲಿಯಿಂದ ಸ್ಮರಣ್‌ಗೆ ಸಿಕ್ಕಿತು. ಹೇಹೇ ಎಂದು ಮತ್ತೆ ನಕ್ಕ ಅವನು!

ಚಿಕಿತ್ಸಕ ಚಾರ್ಲಿ

ಚಾರ್ಲಿ ಮನುಷ್ಯ ಅಂದುಕೊಂಡಿರಾ? ಅಲ್ಲ. ಅವನೊಬ್ಬ ಶ್ವಾನ. ಬರಿಯ ಶ್ವಾನವೆಂದರೆ ಅವನೊಳಗಿನ ಚಿಕಿತ್ಸಕನಿಗೆ ನೋವಾದೀತು. ಆಟಿಸಂ, ಡೌನ್ ಸಿಂಡ್ರೋಮ್‌ನಂತಹ ಸಮಸ್ಯೆಯುಳ್ಳ ವಿಶೇಷ ಮಕ್ಕಳಿಗೆ ಸಾಕುಪ್ರಾಣಿಗಳಿಂದ ಕೊಡಿಸುವ ‘ಕೆನೈನ್ ಥೆರಪಿಸ್ಟ್’ ಅವನು! ಅದಕ್ಕಿಂತಲೂ ಹೆಚ್ಚಾಗಿ, ಬೆಂಗಳೂರಿನಲ್ಲಿರುವ ಏಕೈಕ ಕೆನೈನ್ ಥೆರಪಿಸ್ಟ್ ಈತ ಎನ್ನುವುದು ಅವನ ಸಾಕುತಾಯಿ ಸುಧಾ ನಾರಾಯಣ್ (ಮೊಬೈಲ್: 98455 38270) ಅವರ ಹೇಳಿಕೆ.ಅಚ್ಚರಿಯ ಸಂಗತಿಯೆಂದರೆ, ಈ ‘ಬಾಲ’ಕ ಸ್ವತಃ ಅಂಗವಿಕಲ. ಒಂದೂವರೆ ತಿಂಗಳ ಕೂಸು ಇರುವಾಗಲೇ ರಸ್ತೆ ಅಪಘಾತದಲ್ಲಿ ಬಲಗಾಲು ಬುಡದಿಂದಲೇ ಕತ್ತರಿಸಿಹಾಕುವಷ್ಟು ನಜ್ಜುಗುಜ್ಜಾಗಿತ್ತು. ಪ್ರಾಣಿ ದಯಾಳುಗಳು ಸಕಾಲಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿದ್ದರಿಂದ ಬೇಗನೆ ಗುಣಮುಖನಾದ. ಈಗ ಅವನಿಗೆ 10 ವರ್ಷ. ಚಾರ್ಲಿ ಈ ಹಿಂದೆ ಆಶಾ ಮಿಲಿಟರಿ ಶಾಲೆ ಹಾಗೂ ಸೃಷ್ಟಿ ಸ್ಪೆಷಲ್ ಅಕಾಡೆಮಿಯಲ್ಲಿಯೂ ‘ಕೆಲಸ’ ಮಾಡಿ ನೂರಾರು ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾನೆ.‘ಕಳೆದ ಮೂರು ವರ್ಷಗಳಿಂದ ಚಾರ್ಲಿ ಬರಲು ಶುರು ಮಾಡಿದಾಗಿನಿಂದ ನಮ್ಮಲ್ಲಿನ ಮಕ್ಕಳಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತಿದ್ದೇನೆ. ಈ ವಿಶೇಷ ಮಕ್ಕಳು ನಮ್ಮೆಲ್ಲರಿಗಿಂತ ಚಾರ್ಲಿ ಜೊತೆ ಖುಷಿಯಾಗಿ ಕಾಲಕಳೆಯುತ್ತಾರೆ’ ಎಂದು ‘ಕಾರಾ 4 ಕಿಡ್ಸ್’ ಮಾಲೀಕರಾದ ಸರಿತಾ ಹೆಮ್ಮೆಯಿಂದ ಹೇಳುತ್ತಾರೆ.ವರ್ತನೆಯೇ ತಳಹದಿ

‘ಸಾಕುನಾಯಿಗಳನ್ನು ಮನೆಯಲ್ಲಿ ಹೇಗೆ ನೋಡಿಕೊಳ್ಳಲಾಗುತ್ತದೋ ಅದರಂತೆ ಅವು ವರ್ತಿಸುತ್ತವೆ. ಕೆನೈನ್ ಥೆರಪಿಸ್ಟ್ ನಾಯಿಗಳ ವರ್ತನೆ ಮತ್ತು ಚಿಕಿತ್ಸಕ ಗುಣ/ಸಾಮರ್ಥ್ಯಕ್ಕೂ ಅದರ ಲಾಲನೆಗೂ ನೇರ ಸಂಬಂಧವಿದೆ’ ಎನ್ನುತ್ತಾರೆ ಚಾರ್ಲಿಯ ಕಾಲಿಗೆ ದಶಕದ ಹಿಂದೆ ಶಸ್ತ್ರಚಿಕಿತ್ಸೆ ಮಾಡಿದ್ದ ಡಾ.ಲೋಹಿತ್.‘ಚಾರ್ಲಿ ಈವರೆಗೂ ನೂರಕ್ಕೂ ಹೆಚ್ಚು ಥೆರಪಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾನೆ. ವಿಶೇಷ ಮಕ್ಕಳಿಗಂತೂ ಬುದ್ಧಿ ಮತ್ತು ಅಂಗಾಂಗಗಳು ಸ್ವಾಧೀನವಿಲ್ಲದಿರುವ ಕಾರಣ ಅವರು ಮುಟ್ಟಿದರೆ, ತಟ್ಟಿದರೆ, ಕಿವಿ ಎಳೆದರೆ, ಕಚಗುಳಿ ಇಟ್ಟರೆ, ಕೈಕಾಲು ಎಳೆದರೆ ನೋವಾದರೂ ಅವನು ತಡೆದುಕೊಳ್ಳುತ್ತಾನೆ, ಗುರುಗುಟ್ಟುವುದಿಲ್ಲ. ಅಂತಹ ಅಪರೂಪದ ನಾಯಿ ಅವನು. ಅವನ ಮಾಲೀಕರಾದ ಸುಧಾ ಅವನನ್ನು ಬೆಳೆಸಿರುವ ರೀತಿಯೇ ಇದಕ್ಕೆ ಕಾರಣ’ ಎಂದು ಬಣ್ಣಿಸುತ್ತಾರೆ ಅವರು.ನಗರದಲ್ಲಿ ಕೆನೈನ್ ಥೆರಪಿಯಲ್ಲಿ ಇತರ ನಾಯಿಗಳನ್ನು ಬಳಸಿಕೊಳ್ಳುವ ಪ್ರಯತ್ನಗಳು ನಡೆದಿದ್ದರೂ ಮಾಲೀಕರಲ್ಲಿ ಸೇವಾ ಮನೋಭಾವದ ಕೊರತೆ ಹಾಗೂ ನಾಯಿಗಳಲ್ಲಿನ ವರ್ತನೆ ಸಮಸ್ಯೆ ಕಂಡುಬಂದಿದ್ದರಿಂದ ಅದು ಯಶಸ್ವಿಯಾಗಲಿಲ್ಲ ಎನ್ನುತ್ತಾರೆ ಡಾ.ಲೋಹಿತ್

(ಮೊಬೈಲ್: 98453 58602). 

ನಾಯಿಯಿಂದ ಚಿಕಿತ್ಸೆ ಹೀಗೆ...

ಡೌನ್ ಸಿಂಡ್ರೋಮ್, ಆಟಿಸಂ, ಮಾನಸಿಕ ಅಸ್ವಸ್ಥತೆ ಇರುವ ಮಕ್ಕಳಿಗೆ ಸಾಕುಪ್ರಾಣಿಗಳ ಮೂಲಕ ಕೊಡುವ ಚಿಕಿತ್ಸೆ ಕೆನೈನ್ ಥೆರಪಿ. ಯಾರೊಂದಿಗೂ ಬೆರೆಯದ, ನಾಲಿಗೆ ಹೊರಳಿಸಲೂ ಆಗದ ಮಕ್ಕಳನ್ನು ಸಾಕುನಾಯಿಯೊಂದಿಗೆ ಹೆಚ್ಚು ಇರಲು ಬಿಡುವುದುಂಟು. ಎರಡು ‘ಮೂಕ’ ಜೀವಗಳ ನಡುವಿನ ಸಾಂಗತ್ಯ ಮತ್ತು ಮೌನವೇ ಚಿಕಿತ್ಸೆಯಾಗುತ್ತದೆ.ಡಾ.ಲೋಹಿತ್ ಹೇಳುವಂತೆ ಕೆನೈನ್ ಥೆರಪಿ ವಿದೇಶಗಳಲ್ಲಿ ಜನಜನಿತ. ವಿಶೇಷ ಮಕ್ಕಳ ಚಿಕಿತ್ಸೆಯಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಅರಿತ ಕ್ಯೂಪಾ ಸಂಘಟನೆ 2005–-06ರಲ್ಲಿ ಹಾಂಕಾಂಗ್‌ನ ‘ಅನಿಮಲ್ ಏಷ್ಯಾ’ ಎಂಬ ಕೆನೈನ್ ಥೆರಪಿಸ್ಟ್ ತಂಡದ ಸದಸ್ಯರನ್ನು ಇಲ್ಲಿಗೆ ಕರೆಸಿಕೊಂಡು ಇಲ್ಲಿನ ಒಂದಷ್ಟು ಸಾಕುನಾಯಿಗಳನ್ನು ಬೌದ್ಧಿಕ, ನಡವಳಿಕೆ ಪರೀಕ್ಷೆಗೊಳಪಡಿಸಿತು. ಆಗ ಎಲ್ಲಾ ಹಂತಗಳಲ್ಲೂ ಉತ್ತಮ ಅಂಕ ಗಳಿಸಿದವನು ಚಾರ್ಲಿ.ಇಷ್ಟೇ ಅಲ್ಲ, ಕೆನೈನ್ ಥೆರಪಿ ಬಗ್ಗೆ ವೈದ್ಯಕೀಯ ಸಂಶೋಧನಾ ಕಾರ್ಯವೂ ಸಾಕಷ್ಟು ನಡೆದಿದೆ. ಮುಂಬೈಯ ಮನಃಶಾಸ್ತ್ರ ವಿದ್ಯಾರ್ಥಿನಿ ಮನಾಲಿ ರಣದಿವೆ 2006ರಲ್ಲಿ ಮಂಡಿಸಿದ ‘ಅಪ್ಲಿಕೇಶನ್ ಆಫ್ ಅನಿಮಲ್ ಅಸಿಸ್ಟೆಡ್ ಥೆರಪಿ ಇನ್ ಕೌನ್ಸೆಲಿಂಗ್-ಕೇಸ್ ಸ್ಟಡೀಸ್’ ಎಂಬ ಸಂಶೋಧನಾ ಪ್ರಬಂಧ ಬಾಂಬೆ ಸೈಕಲಾಜಿಕಲ್ ಅಸೋಸಿಯೇಶನ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ವಿಶೇಷವಾಗಿ ಆಟಿಸಂ ಮಕ್ಕಳಿಗೆ ಕೆನೈನ್ ಥೆರಪಿ ಎಷ್ಟು ಪರಿಣಾಮಕಾರಿ ಎಂಬುದು ಪ್ರಬಂಧದ ಮುಖ್ಯಾಂಶ.ಮುಖಭಾವ, ಉಚ್ಚಾರ, ಮಾತು, ಸಂಜ್ಞೆ ಮೂಲಕ ಸ್ಪಂದನ, ದೃಷ್ಟಿ ಸಂಧಿಸುವುದು ಮತ್ತು ಇತರರೊಂದಿಗೆ ಸಂವಹನ ಅಥವಾ ಮೇಲಿನ ಯಾವುದೇ ಪ್ರಯತ್ನಗಳನ್ನು ಮಾಡುವಲ್ಲಿಯೇ ನ್ಯೂನತೆಯಿದ್ದ ಮಕ್ಕಳು ಈ ಚಿಕಿತ್ಸೆಯ ನಂತರ ಗಣನೀಯ ಪ್ರಗತಿ ಕಂಡುಬಂದಿರುವುದನ್ನೂ ಅವರು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಪ್ರಸ್ತಾಪಿಸಿದ್ದಾರೆ.

ನಿಮ್ಹಾನ್ಸ್‌ನಲ್ಲಿ 2007ರಲ್ಲಿ ನಡೆದ ‘ಎಎಟಿ ಅಂಡ್ ಆಟಿಸಮ್’ ಎಂಬ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಪುಣೆಯ ಶ್ರೀಮತಿ ಕವೀಶ್ವರ್ ಎಂಬವರು ಅಧ್ಯಯನ ಪ್ರಬಂಧ ಮಂಡಿಸಿದ್ದರು.

ಇತಿಹಾಸದ ಪುಟಗಳಲ್ಲಿ...

* ಮನೋದೌರ್ಬಲ್ಯವುಳ್ಳವರ ಚಿಕಿತ್ಸೆಯಲ್ಲಿ ಸಾಕುಪ್ರಾಣಿಗಳ ಬಳಕೆ ಶುರವಾದದ್ದು 18ನೇ ಶತಮಾನದಲ್ಲಿ. ಗ್ರೀಕರು ಆ ಕಾಲದಲ್ಲೇ ಈ ಡಾ.ಡಾಗ್ ಚಿಕಿತ್ಸೆಯಲ್ಲಿ ಪರಿಣತರಾಗಿದ್ದರು.

* 1953ರಲ್ಲಿ ಮೊದಲ ಬಾರಿಗೆ ಡಾ.ಡಾಗ್ ಚಿಕಿತ್ಸೆ ದಾಖಲಾಯಿತು.

*ಎರಡನೇ ಜಾಗತಿಕ ಯುದ್ಧದಲ್ಲಿ ಕಾರ್ಪೊರಲ್ ವಿಲಿಯಮ್ ವಿನ್ನಿ ಎಂಬ ಸೈನಿಕನಿಗೆ ಒಂದು ಯಾಕ್‌ಶೈರ್ ಟೆರೈರ್ ಜಾತಿಯ ಹೆಣ್ಣು ನಾಯಿ ಯುದ್ಧಭೂಮಿಯಲ್ಲಿ ಸಿಕ್ಕಿತ್ತು. ಅದಕ್ಕೆ ‘ಸ್ಮೋಕಿ’ ಎಂದು ಮರುನಾಮಕರಣ ಮಾಡಿ ಪ್ರೀತಿಯಿಂದ ಸಲಹುತ್ತಾನೆ. ಸ್ಮೋಕಿ, ವಿಲಿಯಮ್ ವಿನ್ನಿ ಜತೆ ಹಲವಾರು ಹೋರಾಟಗಳಲ್ಲಿ ಜತೆಯಾದದ್ದಷ್ಟೇ ಅಲ್ಲ ಅವನ ಜೀವದ ಗೆಳೆಯನಂತಾಗುತ್ತದೆ.

*ಸ್ಮೋಕಿಯೊಳಗಿದ್ದ ಚಿಕಿತ್ಸಕಿ ಪರಿಚಯವಾದದ್ದು ವಿಲಿಯಮ್ ವಿನ್ನಿ ಕಾಯಿಲೆ ಬಿದ್ದು ಆಸ್ಪತ್ರೆ ಸೇರಿದಾಗ. ಅವನು ಗುಣಮುಖನಾಗಬೇಕಾದರೆ ಸ್ಮೋಕಿಯ ನೆರವು ಪಡೆದುಕೊಂಡರು, ವೈದ್ಯ ಡಾ. ಚಾರ್ಲ್ಸ್ ಮೆಯೊ! ಅಲ್ಲಿಂದೀಚೆ ಸತತ 12 ವರ್ಷ ಸ್ಮೋಕಿ ಚಿಕಿತ್ಸಕಿಯಾಗಿ ಕೆಲಸ ಮಾಡಿದ್ದಳು!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry