ಚಾಲಕನಿಗೆ ಬಿತ್ತು ಗೂಸಾ!

7

ಚಾಲಕನಿಗೆ ಬಿತ್ತು ಗೂಸಾ!

Published:
Updated:

ಬೆಂಗಳೂರು: ವಿದ್ಯಾರ್ಥಿನಿಯರ ಮೊಬೈಲ್‌ಗಳಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಮತ್ತು ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಶಾಲಾ ವಾಹನ ಚಾಲಕನೊಬ್ಬನಿಗೆ ಪೋಷಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಗಂಗಮ್ಮನಗುಡಿಯ ಅಬ್ಬಿಗೆರೆ ಸಮೀಪದ ಲಕ್ಷ್ಮಿಪುರ ಕ್ರಾಸ್‌ನಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.ಲಕ್ಷ್ಮಿಪುರ ಕ್ರಾಸ್‌ನಲ್ಲಿರುವ ಆರ್.ವಿ.ಕಾನ್ವೆಂಟ್ ಎಂಬ ಶಾಲೆಯ ವಾಹನ ಚಾಲಕ ಪ್ರಶಾಂತ್ (25) ಎಂಬಾತನೇ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿ ಸಿಕ್ಕಿ ಬಿದ್ದ ಆರೋಪಿ. ವಿವಾಹಿತನಾದ ಆತನಿಗೆ ಮಗು ಸಹ ಇದೆ.ಆತ ವಿದ್ಯಾರ್ಥಿಗಳನ್ನು ಮನೆ ಮತ್ತು ಶಾಲೆಯಿಂದ ಕರೆದೊಯ್ಯುವ ಕೆಲಸ ಮಾಡುತ್ತಿದ್ದ.ಆತ ವಿದ್ಯಾರ್ಥಿನಿಯರ ಮೊಬೈಲ್ ಸಂಖ್ಯೆಗಳನ್ನು ಪಡೆದುಕೊಂಡು ಅವರಿಗೆ ಹಲವು ತಿಂಗಳುಗಳಿಂದ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಅಲ್ಲದೇ ವಿದ್ಯಾರ್ಥಿನಿಯರೊಂದಿಗೆ ಮತ್ತು ಶಾಲೆಯ ಕೆಲ ಶಿಕ್ಷಕಿಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ.ವಿದ್ಯಾರ್ಥಿನಿಯರ ತಾಯಂದಿರ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಿದ್ದ.ಅಂತೆಯೇ ಆತ ಕೆಲ ದಿನಗಳ ಹಿಂದೆ ವಿದ್ಯಾರ್ಥಿನಿಯೊಬ್ಬಳ ಜತೆ ಅಸಭ್ಯವಾಗಿ ವರ್ತಿಸಿ ಆಕೆಯ ಮೊಬೈಲ್‌ಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಇದರಿಂದ ಬೇಸರಗೊಂಡ ಆ ವಿದ್ಯಾರ್ಥಿನಿ ಪ್ರಶಾಂತ್‌ನ ವರ್ತನೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಳು.ಆ ವಿದ್ಯಾರ್ಥಿನಿಯ ಪೋಷಕರು ಇತರೆ ವಿದ್ಯಾರ್ಥಿನಿಯರ ಪೋಷಕರೊಂದಿಗೆ ಗುರುವಾರ ಬೆಳಿಗ್ಗೆ ಶಾಲೆಯ ಬಳಿ ಬಂದು ಆತನಿಗೆ ಥಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಪೋಷಕರೊಂದಿಗೆ ಮಾತನಾಡಿದ ಶಾಲೆಯ ಆಡಳಿತ ಮಂಡಳಿ ಸದಸ್ಯರು ಪ್ರಶಾಂತ್‌ನನ್ನು ಕೆಲಸದಿಂದ ವಜಾಗೊಳಿಸುವುದಾಗಿ ಹೇಳಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುವುದಾಗಿಯೂ ಭರವಸೆ   ನೀಡಿದರು. ಪ್ರಶಾಂತ್ ವಿರುದ್ಧ ಹಲವು ವಿದ್ಯಾರ್ಥಿನಿಯರ ಪೋಷಕರು ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ ಎಂದು ಗಂಗಮ್ಮನಗುಡಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry