ಶುಕ್ರವಾರ, ನವೆಂಬರ್ 15, 2019
22 °C

ಚಾಲಕ ಕಂ ನಿರ್ವಾಹಕ ವ್ಯವಸ್ಥೆ ರದ್ದುಪಡಿಸಿ

Published:
Updated:

ಬೊಮ್ಮನಹಳ್ಳಿಯಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ವಾಹನ ಸಂಖ್ಯೆ 1824ರಲ್ಲಿ ಮಾರ್ಚ್ 31ರಂದು ಬೆಳಿಗ್ಗೆ 6.15ಕ್ಕೆ ಪ್ರಯಾಣಿಸಿದೆ. ಈ ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕ ಒಬ್ಬರೇ ಆಗಿದ್ದರು. ನಾಲ್ಕೈದು ಪ್ರಯಾಣಿಕರು ಬೊಮ್ಮನಹಳ್ಳಿಯಲ್ಲಿ ಹತ್ತಿದರು. ಕೈಚೀಲ ಹಿಡಿದ ಕೆಲವರಿಗೆ ಹಿಡಿಯಲು ಅಥವಾ ಒರಗಿಕೊಳ್ಳಲು ಸೂಕ್ತ ಆಧಾರಗಳಿಲ್ಲದೆ  ಓಲಾಡುತ್ತಿದ್ದರು. ಇಂಥ ಪರಿಸ್ಥಿತಿಯಲ್ಲಿ ಟಿಕೆಟ್ ಪಡೆಯುವುದು ಸವಾಲೆನಿಸಿತ್ತು. ಹಿಂದಿನಿಂದ ವಾಹನಗಳ ಹಾರನ್, ಒಳಗೆ ಪ್ರಯಾಣಿಕರ ಗಡಿಬಿಡಿ. ಚಾಲಕರಿಗೆ ಬಸ್ ಚಲಾಯಿಸುತ್ತಲೇ ಟಿಕೆಟ್ ನೀಡಬೇಕಾದ ಅನಿವಾರ್ಯತೆ. ದಯವಿಟ್ಟು ಮುಂದಿನ ಘಟನೆ ಗಮನಿಸಿ. ರೂಪೇನ ಅಗ್ರಹಾರದಲ್ಲಿ ನಾಲ್ಕೈದು ಜನ ಹತ್ತಿದರು. ಅವರಲ್ಲಿ ಒಬ್ಬ ಮಹಿಳೆ. ಆಕೆ ಉತ್ತರ ಕರ್ನಾಟಕದ, ಕೂಲಿ ಕಾರ್ಮಿಕರೆಂಬುದು ಅವರ ವೇಷ ಭೂಷಣ ಗಮನಿಸಿದರೆ ತಿಳಿಯುತ್ತಿತ್ತು. ಚಿಕ್ಕ ತಲೆಹೊರೆಯನ್ನು ತಂದಿದ್ದ ಅವರಿಗೆ ಅದನ್ನು ಹಿಡಿದು ಟಿಕೆಟ್ ಪಡೆಯುವುದು ಅಸಾಧ್ಯ. ಆಕೆ ಅನಿವಾರ್ಯವಾಗಿ ಟಿಕೆಟ್ ಕೊಳ್ಳುವ ಮುನ್ನ ಸೀಟಿಗೆ ತೆರಳಿ ಅಲ್ಲಿ ತಲೆಹೊರೆ ಇಟ್ಟು ಸ್ವಲ್ಪ ಸಮಯದ ಬಳಿಕ ಟಿಕೆಟ್ ಪಡೆಯಲು ಚಾಲಕರ ಬಳಿಗೆ ಹೋದರು. ಇಷ್ಟು ಹೊತ್ತಿಗೆ ಮಡಿವಾಳ ನಿಲ್ದಾಣ ಬಂದಿತ್ತು. ಬಸ್ಸಿನಿಂದ ಇಳಿಯುವವರು ಈ ಹೆಂಗಸಿನ ಜೊತೆಗೂಡಿ ಹೊರಟರು.ಇದೇ ಸಮಯಕ್ಕೆ ಟಿಕೆಟ್ ತಪಾಸಣೆ ಮಾಡುವ ಅಧಿಕಾರಿಗಳೂ ಬಂದರು. ಈಕೆಯ ಬಳಿ ಟಿಕೆಟ್ ಇಲ್ಲದಿರುವುದನ್ನು ಗಮನಿಸಿ ದಂಡ ಕಟ್ಟಲು ತಿಳಿಸಿದರು. ಮುಂದೆ ಮಾಮೂಲಿ ಪ್ರಶ್ನೋತ್ತರ ಗಲಾಟೆ ಗೌಜು.ಅಧಿಕಾರಿಗೆ ಟಿಕೆಟ್ ತೋರಿಸಿದ ನಾನು ಈ ಹೆಂಗಸು ನೀವು ಬರುವ ಮುಂಚೆ ಟಿಕೆಟ್ ತೆಗೆದುಕೊಳ್ಳಲಿಕ್ಕೆ ಹೋದರು. ಅವರಿಗೆ ಟಿಕೆಟ್ ತೆಗೆದುಕೊಳ್ಳಬಾರದು ಎಂಬ ಉದ್ದೇಶ ಇದ್ದ ಹಾಗೆ ಇಲ್ಲ ಎಂದು ತಿಳಿಸಿದೆ. ಅದಕ್ಕೇ `ಆಕೆಗೆ ದಂಡ ಹಾಕಿದ್ದೇವೆ' ಎಂಬ ಉತ್ತರ ಅವರಿಂದ. ನಾನು ಮಾತು ಮುಂದುವರೆಸಲಿಲ್ಲ.ತರುವಾಯ ದಂಡ ಕಟ್ಟಿದ ರಸೀತಿಯೊಂದಿಗೆ ಆ ಹೆಂಗಸು ತನ್ನ ಸೀಟಿಗೆ ಬಂದು ಕೂತರು. ನಾನು ಗಮನಿಸಿದ್ದು ಅವರಲ್ಲಿನ ಅಸಹಾಯಕತೆ, ಏರು ಧ್ವನಿಯಿಂದ ಮಾತನಾಡಲಾರದ ದಿಗಿಲು. ಯಾವ ಕೆಲಸಕ್ಕೊ ಹೊಂದಿಸಿಕೊಂಡ 150 ರೂಪಾಯಿ ಬೆಳಿಗ್ಗೆಯೇ ಕಳೆದುಕೊಂಡ ನೋವು, ಅವಮಾನ. ಇದರ ಜೊತೆಗೆ ಸುತ್ತಲಿನವರಿಗೆ ತನಗೇನು ಆಗಿಲ್ಲ ಎಂದು ತೋರಿಸಿಕೊಡಲು ಪ್ರಯತ್ನಿಸುವ ಕಾತರ. ಕಾನೂನನ್ನು ಗೌರವಿಸುವ ಒಬ್ಬ ಸಾಮಾನ್ಯ ನಾಗರಿಕರಿಗೆ ಇಂತಹ ಅವಸ್ಥೆ ಬೇಡ ಎನ್ನುವುದು ನನ್ನ ಅಭಿಪ್ರಾಯ.ಅಧಿಕಾರಿಗಳ ಕೆಲಸದಲ್ಲಿ ನನಗೆ ದೋಷ ಕಾಣಿಸದು. ಅವರ ಕೆಲಸ ಅವರು ಮಾಡಿರುತ್ತಾರೆ, ಆದರೆ ಇದರಿಂದ ಆದ ಪರಿಣಾಮವನ್ನು ಮಾನವೀಯ ನೆಲೆಯಿಂದ ಗಮನಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ನನ್ನ ಆಗ್ರಹ ಮತ್ತು ಸಲಹೆ.ದಯವಿಟ್ಟು ಚಾಲಕ/ನಿರ್ವಾಹಕ ಇರುವ ವ್ಯವಸ್ಥೆಯನ್ನು ಕೂಡಲೇ ರದ್ದುಮಾಡಿ. ಇಂತಹ ಬಸ್ಸುಗಳಲ್ಲಿ ಟಿಕೆಟ್ ಪಡೆಯುವುದು, ಪ್ರಯಾಣಿಸುವುದು ತ್ರಾಸದಾಯಕ. ಬಸ್ಸಿನಲ್ಲಿ ಕಂಡಕ್ಟರ್ ಇದ್ದಿದ್ದರೆ ಆ ಮಹಿಳೆ ದಂಡ ತೆರಬೇಕಾದ ಪ್ರಮೇಯವೇ ಬರುತ್ತಿರಲಿಲ್ಲ. ಅಂತಹ ವ್ಯವಸ್ಥೆ ಅಗತ್ಯವೇ ಆದಲ್ಲಿ ಗಮ್ಯಸ್ಥಾನ ಒಂದೇ ಇರಲಿ. (ನಿರ್ವಾಹಕ ರಹಿತ ದೂರ ಸಾರಿಗೆ ವ್ಯವಸ್ಥೆಯಲ್ಲಿರುವಂತೆ).

ಪ್ರತಿಕ್ರಿಯಿಸಿ (+)