ಚಾಲಕ ರಹಿತ ಭವಿಷ್ಯದ ಕಾರು

7

ಚಾಲಕ ರಹಿತ ಭವಿಷ್ಯದ ಕಾರು

Published:
Updated:
ಚಾಲಕ ರಹಿತ ಭವಿಷ್ಯದ ಕಾರು

ಇಂದಿಗೆ 40 ವರ್ಷಗಳ ಹಿಂದೆ ಕಂಪ್ಯೂಟರ್‌ಗಳು ಎಲ್ಲಿದ್ದವು? ಕೇವಲ ಸಂಶೋಧನಾ ಪ್ರಯೋಗಾಲಯಗಳಲ್ಲಿ ಮಾತ್ರ. ಆದರೆ ಈಗ ನೋಡಿ, ಪ್ರತಿಯೊಬ್ಬರೂ ಕೂಡ ತಮ್ಮ ಜೇಬಿನಲ್ಲಿ ಕಂಪ್ಯೂಟರ್ ಇಟ್ಟುಕೊಂಡು ಓಡಾಡುತ್ತಿದ್ದಾರೆ!ಚಾಲಕ ರಹಿತ ಕಾರುಗಳ ವಿಚಾರದಲ್ಲೂ ಹೀಗೆ ಆಗಬಹುದು. ಈಗ ಪ್ರಯೋಗಾಲಯದಲ್ಲಿ ಪ್ರಯೋಗಕ್ಕೆ ಮಾತ್ರ ಸೀಮಿತವಾಗಿರುವ ಇವು ಇನ್ನೆರಡು ದಶಕ ಕಳೆದರೆ, ಪ್ರಪಂಚದ ರಸ್ತೆಗಳ ತುಂಬೆಲ್ಲಾ ಓಡಾಡಬಹುದು~-ಇದು ಯೂರೋಪಿನ ಪ್ರಮುಖ ಸಂಶೋಧನಾ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬರ್ಲಿನ್ ಫ್ರೀ ವಿಶ್ವವಿದ್ಯಾಲಯದ `ಕೃತಕ ಬುದ್ಧಿಸೂಕ್ಷ್ಮತೆ  (artificial intellige­nce)ಸಂಶೋಧಕರ ತಂಡ~ದ ಮುಖ್ಯಸ್ಥ ರೌಲ್ ರೋಜಸ್ ಅವರ ವಿಶ್ವಾಸದ ಮಾತು.ನಾಲ್ಕು ವರ್ಷಗಳಿಂದ ಚಾಲಕ ರಹಿತ ಕಾರಿನ ಅಭಿವೃದ್ಧಿಯಲ್ಲಿ ನಿರತವಾಗಿರುವ ರೋಜಸ್ ನೇತೃತ್ವದ ತಂಡ, ಕಳೆದ ವಾರ ಜರ್ಮನಿ ರಾಜಧಾನಿ ಬರ್ಲಿನ್ ರಸ್ತೆಗಳಲ್ಲಿ ಚಾಲಕ ರಹಿತ/ ಸ್ವನಿಯಂತ್ರಿತ ಕಾರಿನ ಪ್ರಯೋಗಾರ್ಥ ಪರೀಕ್ಷೆ ನಡೆಸಿ ಯಶಸ್ವಿಯಾಯಿತು.ವಿವಿ ಸಂಶೋಧಕರು ಚಾಲಕ ರಹಿತ ಕಾರಿನ ಅಭಿವೃದ್ಧಿಗಾಗಿ 5,51,800 ಡಾಲರ್ ವ್ಯಯಿಸಿದ್ದಾರೆ. ಹಲವು ವಿಶೇಷ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದ ಫೋಕ್ಸ್‌ವ್ಯಾಗನ್ ಕಂಪೆನಿಯ ಪ್ಯಾಸೆಟ್ ಕಾರನ್ನು ಇದಕ್ಕಾಗಿ ಬಳಸಲಾಗಿದೆ.ಒಂದು ಕಂಪ್ಯೂಟರ್, ಡಿಕ್ಕಿಯಲ್ಲಿ ಉಪಗ್ರಹ ಆಧಾರಿತ ಚಾಲನಾ ವ್ಯವಸ್ಥೆ, ಮುಂಭಾಗದಲ್ಲಿ ಕ್ಯಾಮೆರಾ, ಮೇಲ್ಛಾವಣಿಯಲ್ಲಿ, ಎದುರಿನ ಮತ್ತು ಹಿಂದಿನ  ಬಂಪರ್‌ಗಳಲ್ಲಿ ಲೇಸರ್ ಸ್ಕ್ಯಾನರ್‌ಗಳು ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದ್ದ ಕಾರು ಅಕ್ಷರಶಃ ಮಾತನಾಡುತ್ತಿತ್ತು! ನೋಡುತ್ತಿತ್ತು!  ಯಾವುದೇ ವ್ಯಕ್ತಿ ಅದನ್ನು ರಿಮೋಟ್ ಮೂಲಕ ನಿಯಂತ್ರಿಸಬೇಕಾಗಿರಲಿಲ್ಲ. ಭವಿಷ್ಯದ ಕಾರು ಎಂದೇ ಬಣ್ಣಿಸಲಾಗುತ್ತಿರುವ ಕಂಪ್ಯೂಟರ್ ನಿಯಂತ್ರಿತ ಕಾರು ಬರ್ಲಿನ್ ರಸ್ತೆಗಳಲ್ಲಿ ಉಳಿದ ಎಲ್ಲಾ ವಾಹನಗಳಂತೆ ಸಾಗುತ್ತಲೇ ಇತ್ತು.ರಸ್ತೆ, ಪಾದಚಾರಿ, ಕಟ್ಟಡ, ಮರಗಳನ್ನು 70 ಮೀಟರ್ ದೂರದಿಂದಲೇ ಗುರುತಿಸುವ ಸಾಮರ್ಥ್ಯ ಹೊಂದಿದ್ದ ಈ ಕಾರು, ಟ್ರಾಫಿಕ್ ಸಿಗ್ನಲ್‌ನಲ್ಲಿ ಕೆಂಪು ಅಥವಾ ಹಸಿರು ದೀಪ ಉರಿಯುತ್ತಿದೆಯೇ ಎಂದು ಗಮನಿಸಿ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿ ಸೈ ಎನಿಸಿಕೊಂಡಿತು.ಚಾಲಕ ಗ್ರಹಿಸಿ, ಪ್ರತಿಕ್ರಿಯಿಸುವುದಿಕ್ಕಿಂತಲೂ ವೇಗವಾಗಿ ಈ ಸ್ವನಿಯಂತ್ರಿತ ಕಾರು ಪ್ರತಿಕ್ರಿಯಿಸಬಲ್ಲದು ಎಂಬುದು ರೋಜಸ್ ಅಭಿಪ್ರಾಯ.ಇತ್ತೀಚೆಗೆ ಗೂಗಲ್ ಕಂಪೆನಿ ಕೂಡ ಸ್ವಯಂಚಾಲಿತ ಕಾರಿನ ಪ್ರಯೋಗದಲ್ಲಿ ತೊಡಗಿತ್ತು. 2010ರ ಅಕ್ಟೋಬರ್‌ನಲ್ಲಿ ಗೂಗಲ್ ಪ್ರಾಯೋಜಿತ ರೊಬೋಟ್ ನಿಯಂತ್ರಿತ ಟೊಯೊಟಾ ಕಂಪೆನಿಯ ಪ್ರಿಯುಸ್ ಕಾರು ಅಮೆರಿಕದ ನೆವಾಡಾ ರಾಜ್ಯದಲ್ಲಿ  ಪ್ರಯೋಗಾರ್ಥವಾಗಿ ಚಲಿಸಿತ್ತು.ಹಲವು ವಾಹನ ತಯಾರಿಕಾ ಕಂಪೆನಿಗಳು ಕೂಡ ಇಂತಹ ಕಾರುಗಳ ತಯಾರಿಸುವ ಯೋಚನೆಯಲ್ಲಿವೆ. ವಿಶ್ವದ ಪ್ರಮುಖ ಕಾರು ತಯಾರಿಕಾ ಕಂಪೆನಿಗಳಾದ ಜನರಲ್ ಮೋಟಾರ್ಸ್‌, ಫೋಕ್ಸ್‌ವ್ಯಾಗನ್, ಆಡಿ, ಬಿಎಂಡಬ್ಲ್ಯು, ವೋಲ್ವೊ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. 2015ರ ವೇಳೆಗೆ ಚಾಲಕ ರಹಿತ ಕಾರಿನ ಪರೀಕ್ಷೆಯಲ್ಲಿ ತೊಡಗುವುದಾಗಿ ಹೇಳಿರುವ ಜನರಲ್ ಮೋಟಾರ್ಸ್‌, 2018 ವೇಳೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.ವೋಲ್ವೊ ಕಂಪೆನಿಯೂ ಸಹ ಭವಿಷ್ಯದ ಕಾರಿನ ನಿರ್ಮಾಣ ಆರಂಭಿಸಿದ್ದು 2020ರ ವೇಳೆಗೆ ಚಾಲಕ ರಹಿತ ಕಾರನ್ನು ರಸ್ತೆಗೆ ಇಳಿಸುವ ಯೋಚನೆಯಲ್ಲಿದೆ.

`ವಿವಿಧ ರಾಷ್ಟ್ರಗಳ ಕಂಪೆನಿಗಳು ಮತ್ತು ಸಂಶೋಧನಾ ಕೇಂದ್ರಗಳು ಸಂಪೂರ್ಣ ಕಂಪ್ಯೂಟರ್ ನಿಯಂತ್ರಿತ ಕಾರುಗಳ ತಯಾರಿಕೆಯತ್ತ ಆಸಕ್ತಿ ತೋರಿಸುತ್ತಿವೆ.  ಯಾವ ಕಂಪೆನಿ ಅಥವಾ ಸಂಸ್ಥೆ ಅತ್ಯಾಧುನಿಕ ಭವಿಷ್ಯದ ಕಾರನ್ನು ತಯಾರಿಸಲಿವೆ ಎಂದು ಈಗಲೇ ಹೇಳುವುದೇ ಕಷ್ಟ~ ಎಂದು ಡ್ಯುಸ್‌ಬರ್ಗ್- ಎಸ್ಸೆನ್ ವಿಶ್ವವಿದ್ಯಾಲಯದ ಆಟೊಮೋಟಿವ್ ಎಕನಾಮಿಕ್ಸ್ ವಿಭಾಗದ ಪ್ರೊಫೆಸರ್ ಫೆರ್ಡಿನಂಡ್ ಡ್ಯುಡೆನ್‌ಹೊಫರ್ ಹೇಳುತ್ತಾರೆ.ಅತ್ಯಾಧುನಿಕ ತಂತ್ರಜ್ಞಾನದ ಬೆಳವಣಿಗೆಯನ್ನು ಗಮನಿಸಿದರೆ ಇನ್ನು ಒಂದು ದಶಕದಲ್ಲಿ ಸಂಪೂರ್ಣವಾಗಿ ಚಾಲಕರ ಅವಶ್ಯಕತೆ ಇಲ್ಲದ ಸ್ವನಿಯಂತ್ರಿತ ಕಾರುಗಳು ಗ್ರಾಹಕರಿಗೆ ದೊರೆಯಲಿವೆ ಎಂದು ಅವರು ಭವಿಷ್ಯ  ನುಡಿದಿದ್ದಾರೆ. ತಂತ್ರಜ್ಞಾನದ ವಿಚಾರ ಹೊರತಾಗಿ ಹಲವು ಕಾನೂನಿನ ಸಮಸ್ಯೆಗಳೂ ಇವೆ.ಈ ಕಾರುಗಳ ಓಡಾಟಕ್ಕಾಗಿ ಪ್ರತ್ಯೇಕ ಕಾನೂನು, ಸಂಚಾರಿ ನಿಯಮಗಳನ್ನು ಜಾರಿಗೆ ತರಬೇಕಾಗುತ್ತದೆ. ಗೂಗಲ್‌ನ ಚಾಲಕರಹಿತ ಕಾರಿನ ಓಡಾಟಕ್ಕಾಗಿ ನವಾಡಾ ರಾಜ್ಯವು ಹೊಸ ಕಾನೂನನ್ನೇ ಜಾರಿಗೆ ತಂದಿತ್ತು.ಒಂದು ವೇಳೆ ಅಪಘಾತ ಸಂಭವಿಸಿದರೆ ಅದಕ್ಕೆ ಯಾರು ಹೊಣೆಯಾಗುತ್ತಾರೆ? ಕಾರಿನ ಮಾಲೀಕನೋ ಅಥವಾ ಕಾರನ್ನು ತಯಾರಿಸಿದ ಕಂಪೆನಿಯೋ? ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ ಎಂದು  ಡ್ಯುಡೆನ್ ಹೊಫರ್ ಹೇಳಿದ್ದಾರೆ.ಬರ್ಲಿನ್ ವಿಶ್ವವಿದ್ಯಾಲಯದ ಸಂಶೋಧಕರು ಚಾಲಕ ರಹಿತ ಕಾರಿನ  ಪ್ರಯೋಗಾತ್ಮಕ ಪರೀಕ್ಷೆ ನಡೆಸಲು  ನಗರದ ಭದ್ರತೆ ಮತ್ತು ಸುರಕ್ಷತಾ ನಿಯಂತ್ರಕರಿಂದ ವಿಶೇಷ ಅನುಮತಿ ಪತ್ರ ಪಡೆದಿದ್ದರು. ಕಾರು ಸ್ವಯಂ ಆಗಿ ಚಲಿಸಿದರೂ ಮುನ್ನಚ್ಚೆರಿಕೆಗಾಗಿ ಹಿಂದಿನ ಸೀಟಿನಲ್ಲಿ ಚಾಲಕನೊಬ್ಬ ಕುಳಿತಿರಬೇಕು ಎಂಬ ಷರತ್ತನ್ನು ವಿಧಿಸಲಾಗಿತ್ತು.

 

ಸುರಕ್ಷತೆಯ ವಿಷಯಕ್ಕೆ ಬಂದರೆ ಚಾಲಕ ರಹಿತ ಅಥವಾ ಸ್ವನಿಯಂತ್ರಿತ ಕಾರುಗಳು ಹೆಚ್ಚು ಸುರಕ್ಷಿತ ಎಂಬುದು ಡ್ಯುಡೆನ್‌ಹೊಫರ್ ವಾದ.  ಈಗ ಸಂಭವಿಸುತ್ತಿರುವ ಹೆಚ್ಚಿನ ಅಪಘಾತಗಳು ಚಾಲಕರ ತಪ್ಪಿನಿಂದಾಗಿ ಆಗುವಂತವು. ಸ್ವನಿಯಂತ್ರಿತ ಕಾರುಗಳಲ್ಲಿ ಈ ಸಾಧ್ಯತೆ ಕಡಿಮೆ ಎಂದು ಅವರು ಪ್ರತಿಪಾದಿಸಿದ್ದಾರೆ.

             

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry