ಚಾಲುಕ್ಯರ ಇತಿಹಾಸ ಸಾರುವ `ಬಸವೇಶ್ವರ'

7

ಚಾಲುಕ್ಯರ ಇತಿಹಾಸ ಸಾರುವ `ಬಸವೇಶ್ವರ'

Published:
Updated:

ಉತ್ತರ ಕರ್ನಾಟಕ ಭಾಗದ ಮನೆ-ಮನಗಳಲ್ಲಿ ಭಕ್ತಿಯ ದೀಪವನ್ನು ಬೆಳಗುವಂತೆ ಮಾಡಿದ ಸಂತ-ಶರಣ ಪರಂಪರೆಯ ದೇವಾಲಯವೇ ಧಾರವಾಡ ಜಿಲ್ಲೆಯ  ನರಗುಂದದ ಬಯಲು ಬಸವೇಶ್ವರ ತಪೋವನ ಹಾಗೂ ದೇವಸ್ಥಾನ. ಕಲ್ಯಾಣ ಚಾಲುಕ್ಯರ ಕಾಲದ ವಾಸ್ತು ಶಿಲ್ಪದ ಸೌಂದರ್ಯದ ಗಣಿಯನ್ನೇ ಈ ತಪೋವನ ಹೊದ್ದು ನಿಂತಿದೆ.ಹುಬ್ಬಳ್ಳಿಯಿಂದ 55 ಕಿ.ಮೀ. ಅಂತರದಲ್ಲಿ, ನರಗುಂದ ಬಸ್ ನಿಲ್ದಾಣದ ಹತ್ತಿರ ವಿಶಾಲವಾದ ಬಯಲಿನಲ್ಲಿದೆ ಈ ತಪೋವನ. ಗರ್ಭಗೃಹ, ಅಂತರಾಳ ಹಾಗೂ ಮುಖಮಂಟಪ ಹೊಂದಿರುವ ಈ ದೇವಾಲಯದ ಕೋಷ್ಠಗಳಲ್ಲಿ ಭಕ್ತರ ಸಕಲ ಕಾಮನೆಗಳನ್ನು ಪೂರೈಸುವ ಕಲ್ಪವೃಕ್ಷ ಮಾರುತಿಯ ವಿಗ್ರಹವಿದೆ.

ಜೀವಕಳೆಯಿಂದ ಕೂಡಿದ ನಾಗರಶಿಲ್ಪಗಳು ಇವೆ. ಬಡಬಗ್ಗರಿಗಾಗಿ ನಿರ್ಮಿಸಿದ ವಿಶ್ರಾಂತಿ ತಂಗುದಾಣ, ತೇರಿನ ಮನೆ ಇವುಗಳಿಂದ ಇದು ದೈವೀ ವಾತಾವರಣವನ್ನು ಉಂಟುಮಾಡಿದೆಯಲ್ಲದೆ ನಿಬ್ಬೆರಗಾಗುವಂತೆ ಮಾಡಿದೆ.ಹಿಂದೊಮ್ಮೆ ಭೀಕರ ಬರಗಾಲ, ಕಾಲರಾ ಬೇನೆ, ಮಾರಕ ರೋಗಗಳು ಆವರಿಸಿದಾಗ, ನೈಸರ್ಗಿಕ ವಿಪತ್ತುಗಳು ತಲೆದೋರಿದಾಗ ಇಲ್ಲಿಯ ಜನರು ಬಯಲು ಬಸವೇಶ್ವರನಿಗೆ ಮೊರೆ ಹೋಗಿದ್ದಾರೆ. ಆತನನ್ನು ಪೂಜಿಸುವ, ಭಜಿಸುವ, ಆರಾಧಿಸುವ ಮೂಲಕ ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಂಡಿದ್ದಾರೆ.

ಬಯಲು ಬಸವೇಶ್ವರನಲ್ಲಿ ಅನನ್ಯ ಭಕ್ತಿ, ನಿಷ್ಠೆ ಹೊಂದಿದ್ದ ಅವರು ಅವನಲ್ಲಿ ಮಂತ್ರಶಕ್ತಿ ಇರುವುದನ್ನು ಕಂಡಿದ್ದಾರೆ. ತಮ್ಮ ಬದುಕನ್ನು ಬಯಲು ಬಸವೇಶ್ವರನ ಕೃಪೆಯಿಂದ ಕೊನರಿಸಿಕೊಂಡ ಅವರು ತಮ್ಮ ಮನದ, ಮನೆಯ, ಕುಲದ ದೇವರನ್ನಾಗಿಯೂ ಆರಾಧಿಸುತ್ತ ಬಂದಿದ್ದಾರೆ.ಧಾರವಾಡ ಜಿಲ್ಲೆಯ ನರಗುಂದದ ಬಯಲು ಬಸವೇಶ್ವರ ತಪೋಭೂಮಿಯು ಬಯಲು ಮತ್ತು ಬಸವೇಶ್ವರ ಹೆಸರಿನಿಂದ ಗುರುತಿಸಿಕೊಂಡಿರುವ ದೇವಾಲಯವು ನರಗುಂದದ ಭಕ್ತರ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿದೆ. ಒಂದು ಕಾಲದಲ್ಲಿ ನಿರಾಶ್ರಿತರಾಗಿ ಈ ಸ್ಥಳಕ್ಕೆ ಬಂದವರು, ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಕಲ್ಯಾಣವನ್ನು ತೊರೆದು ಬಂದಿದ್ದವರಿಗೆ ಆಶ್ರಯ ನೀಡಿತ್ತು ಈ ತಪೋವನ.ಶಂಕರಲಿಂಗ ದೇಗುಲ

ಕಲ್ಯಾಣ ಚಾಲುಕ್ಯರ ಕಾಲದ ವಾಸ್ತುವಿಗೆ ಹೆಸರಾದ ಇನ್ನೊಂದು ದೇಗುಲ ನರಗುಂದದ ಶಂಕರಲಿಂಗ ದೇವಾಲಯ. ಕ್ರಿ.ಶ. 10-11ನೆಯ ಶತಮಾನದಲ್ಲಿ ಕಟ್ಟಿರುವ ದೇವಾಲಯ ಇದು. ಇಲ್ಲಿಯ ಗರ್ಭಗೃಹವು ಚೌಕಾಕಾರವಾಗಿದ್ದು ದ್ವಾರಶಾಖೆಯು ಅಲಂಕರಣೆಗಳಿಲ್ಲದೆ ಸರಳವಾಗಿದೆ.

ಅಂತರಾಳದಲ್ಲಿ ಪಾರ್ವತಿ, ದತ್ತಾತ್ರೇಯ, ಹನುಮಂತನ ಮೂರ್ತಿಗಳಿವೆ. ನವರಂಗದಲ್ಲಿ ನಾಲ್ಕು ಆಕರ್ಷಕ ಕಂಬಗಳಿದ್ದು ಇವುಗಳು ಚೌಕ ವೃತ್ತಾಕಾರವಾಗಿದೆ. ಚಾಲುಕ್ಯ ಕಾಲದ ಶಿಲ್ಪ ಕಲೆಯ ಪ್ರತಿಭೆಯನ್ನು ಅನಾವರಣಗೊಳಿಸುವ ಇವು ನೋಡುವುದೇ ಹಬ್ಬ.ಹುಬ್ಬಳ್ಳಿಯಿಂದ 55 ಕಿ.ಮೀ. ಗದಗ ಜಿಲ್ಲಾ ಸ್ಥಳದಿಂದ 68 ಕಿ.ಮೀ. ಅಂತರದಲ್ಲಿದೆ ಈ ದೇವಾಲಯ. ನರಗುಂದ ಬಸ್ ನಿಲ್ದಾಣದಿಂದ ಕೇವಲ ಒಂದು ಕಿ.ಮೀ. ಅಂತರದಲ್ಲಿದೆ ಇದು. ದೇವಾಲಯದ ರಂಗಮಂಟಪದಲ್ಲಿ ಎರಡು ಶಾಸನಗಳಿವೆ.ಇವು ಕ್ರಿ.ಶ. 1139ರ ಶಾಸನಗಳಾಗಿದ್ದು ಕಲ್ಯಾಣ ಚಾಲುಕ್ಯರ ಅರಸ ನಾಲ್ಕನೇ ಸೋಮೇಶ್ವರನ ಕಾಲಕ್ಕೆ ಸೇರಿದೆ. ಇಲ್ಲಿರುವ ಕಲಾಕೃತಿಗಳು ದಂಡನಾಯಕ ರುದ್ರದೇವರಸನಿಂದ ನರಗುಂದ ಅಗ್ರಹಾರದ ಧವಳಶಂಕರ ದೇವಾಲಯಕ್ಕೆ ದಾನ ನೀಡಿರುವುದನ್ನು ಉಲ್ಲೇಖಿಸುತ್ತಿದೆ.ಬೆಣ್ಣೆದಡಿ ಪ್ರದೇಶದ ಬಿಳಿಯ ಆಕಳೊಂದು ದಿನನಿತ್ಯವೂ ಬಂದು ಧವಳಶಂಕರ ದೇವರಿಗೆ ಹಾಲು ಕರೆದು ಹೋಗುತ್ತಿತ್ತು. ಘಟಸರ್ಪವೊಂದು ಧವಳಶಂಕರಲಿಂಗ ದೇವರಿಗೆ ಹೆಡೆಯೆತ್ತಿ ನೆರಳು ನೀಡುತ್ತಿತ್ತು ಎನ್ನುವುದು ಇಲ್ಲಿಯ ಜನರ ನಂಬಿಕೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry